ಬೆಂಗಳೂರು: ಹೆಸರಾಂತ ಚಿತ್ರ ಕಲಾವಿದ ಕೆ.ಟಿ. ಶಿವಪ್ರಸಾದ (KT Shivaprasad) ಅವರು ನಿಧನರಾಗಿದ್ದಾರೆ. ಅವರಿಗೆ 78 ವರ್ಷ ವರ್ಷ ವಯಸ್ಸಾಗಿತ್ತು.
ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. 1947ರಲ್ಲಿ ಕೊಡಗಿನ ಮಡಿಕೇರಿ ತಾಲೂಕಿನ ಕೃಷಿ ಕುಟುಂಬದಲ್ಲಿ ಜನಿಸಿದ ಶಿವಪ್ರಸಾದ ಅವರಿಗೆ ಬಾಲ್ಯದಿಂದಲೇ ಚಿತ್ರಕಲೆಯತ್ತ ಆಸಕ್ತಿ ಇತ್ತು. ಆದರೆ ಆ ಕಾಲದಲ್ಲಿ ಚಿತ್ರಕಲೆಗೆ ಅಷ್ಟಾಗಿ ಮನ್ನಣೆ ಇರದ ಕಾರಣ, ಕುಟುಂಬದ ಇಚ್ಛೆಯಂತೆ ಅವರು ಇಂಜಿನಿಯರಿಂಗ್ ಕಾಲೇಜು ಸೇರಿದ್ದರು. ಆದರೆ ಚಿತ್ರಕಲೆಯ ಮೇಲಿನ ಅಪಾರ ಪ್ರೀತಿಯಿಂದ ಇಂಜಿನಿಯರಿಂಗ್ ಅಧ್ಯಯನವನ್ನು ಅರ್ಧದಲ್ಲೇ ತೊರೆದು ನಂತರ ಇಂಜಿನಿಯರಿಂಗ್ ಅಧ್ಯಯನವನ್ನು ಅರ್ಧಕ್ಕೇ ಬಿಟ್ಟು, ಮುಂಬೈನ ಪ್ರತಿಷ್ಠಿತ ‘ಸರ್ ಜೆ.ಜೆ. ಸ್ಕೂಲ್ ಆಫ್ ಆರ್ಟ್’ ಸೇರಿದರು. ಅಲ್ಲಿ 1973ರಲ್ಲಿ ಚಿತ್ರಕಲೆಯಲ್ಲಿ ಡಿಪ್ಲೊಮಾ ಪದವಿ ಪಡೆದರು. ನಂತರದ ದಿನಗಳಲ್ಲಿ ಜಾಗತಿಕವಾಗಿ ಮನ್ನಣೆ ಗಳಿಸಿದರು.
ಶಿವಪ್ರಸಾದ ಅವರ ಕಲಾಕೃತಿಗಳು ದೇಶ-ವಿದೇಶಗಳಲ್ಲಿ ಅಪಾರ ಮೆಚ್ಚುಗೆ ಗಳಿಸಿವೆ. ಶಿವಪ್ರಸಾದ ಅವರ ವಿಶಿಷ್ಟ ಕಲಾ ಶೈಲಿಯನ್ನ ಬಿಟ್ರನ್ನ ಖ್ಯಾತ ಮಾಡರ್ನಿಸ್ಟ್ ಕಲಾಕಾರ ಲುಸಿಯನ್ ಫ್ರಾಯ್ಡ್ ಅವರ ಶೈಲಿಗೆ ಹೋಲಿಸಲಾಗುತ್ತಿತ್ತು. 1976 ರಿಂದ ಬೆಂಗಳೂರು, ಮೈಸೂರು, ಮುಂಬೈ ಮತ್ತು ನವದೆಹಲಿಗಳಲ್ಲಿ ಇವರ ಹಲವು ಏಕವ್ಯಕ್ತಿ ಪ್ರದರ್ಶನಗಳು ನಡೆದಿವೆ. ಮುಂಬೈನ ಜಹಾಂಗೀರ್ ಆರ್ಟ್ ಗ್ಯಾಲರಿ, ಚೆನ್ನೈನ ಸಾಕ್ಷಿ ಗ್ಯಾಲರಿ ಹಾಗೂ ನವದೆಹಲಿಯ ಆರ್ಟ್ ಟುಡೇಗಳಲ್ಲಿ ಇವರ ಕಲಾ ಪ್ರದರ್ಶನಗಳು ಅಪಾರ ಮೆಚ್ಚುಗೆ ಗಳಿಸಿವೆ. ಅಲ್ಲದೆ, ಭೋಪಾಲ್ ಬಿನ್ನಾಲೆ (1988), ಬಾಂಬೆ ಆರ್ಟ್ ಸೊಸೈಟಿ ಶತಮಾನೋತ್ಸವ ಪ್ರದರ್ಶನ (1989) ಹಾಗೂ ಹಾಂಗ್ಕಾಂಗ್ ಗ್ಯಾಲರಿಗಳಲ್ಲೂ (1996) ಇವರ ಕಲಾಕೃತಿಗಳು ಪ್ರದರ್ಶನಗೊಂಡಿದ್ದವು.
ಕಲಾ ಜಗತ್ತಿಗೆ ಇವರ ಕೊಡುಗೆಯನ್ನು ಗೌರವಿಸಿ ಕರ್ನಾಟಕ ಸರ್ಕಾರವು 2001ರಲ್ಲಿ ಇವರಿಗೆ ಪ್ರತಿಷ್ಠಿತ ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ ನೀಡಿ ಗೌರವಿಸಿತ್ತು.


ನಿಮ್ಮ ಕಾಮೆಂಟ್ ಬರೆಯಿರಿ