ರಾಮ ಜನ್ಮಭೂಮಿ ಟ್ರಸ್ಟ್ ಅಧ್ಯಕ್ಷ ಮಹಂತ ನೃತ್ಯ ಗೋಪಾಲ ದಾಸ್ ಆಸ್ಪತ್ರೆಗೆ ದಾಖಲು

ಲಕ್ನೋ : ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಅಧ್ಯಕ್ಷ ಮಹಂತ ನೃತ್ಯ ಗೋಪಾಲ ದಾಸ್ (89) ಅವರಿಗೆ ಮೂತ್ರನಾಳದ ಸೋಂಕು (ಯೂರಿನರಿ ಟ್ರ್ಯಾಕ್ಟ್ ಇನ್ಫೆಕ್ಷನ್–ಯುಟಿಐ) ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಲಕ್ನೋದ ಖಾಸಗಿ ಮೆದಾಂತ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ನೀಡಲಾಗುತ್ತಿದೆ.
ಬುಧವಾರ ಮೆದಾಂತ ಆಸ್ಪತ್ರೆ ಬಿಡುಗಡೆ ಮಾಡಿದ ವೈದ್ಯಕೀಯ ಪ್ರಕಟಣೆಯ ಪ್ರಕಾರ, ಜೂನ್ 29ರಂದು ಮಧ್ಯಾಹ್ನ ಸುಮಾರು 1:30ಕ್ಕೆ ಮಹಂತ ನೃತ್ಯ ಗೋಪಾಲ ದಾಸ್ ಅವರನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ಕರೆತರಲಾಗಿದೆ ಎಂದು ತಿಳಿಸಲಾಗಿದೆ. ಪ್ರಾಥಮಿಕ ವೈದ್ಯಕೀಯ ಪರೀಕ್ಷೆಯ ಬಳಿಕ ಅವರಿಗೆ ಮೂತ್ರನಾಳದ ಸೋಂಕು ಇರುವುದು ವೈದ್ಯರು ದೃಢಪಡಿಸಿದ್ದಾರೆ.

ಪ್ರಸ್ತುತ ಅವರನ್ನು ಐಸಿಯುನಲ್ಲಿ ದಾಖಲಿಸಿ, ತೀವ್ರ ನಿಗಾ ತಜ್ಞ ಡಾ. ದಿಲೀಪ ಹಾಗೂ ಅವರ ತಂಡದ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆ ತಿಳಿಸಿದೆ. ತಜ್ಞ ವೈದ್ಯರ ತಂಡವು ಅವರ ಆರೋಗ್ಯ ಸ್ಥಿತಿಯನ್ನು ನಿರಂತರವಾಗಿ ನಿಗಾ ವಹಿಸಿದ್ದು, ಅಗತ್ಯವಿರುವ ಎಲ್ಲ ರೀತಿಯ ಚಿಕಿತ್ಸೆಯನ್ನು ಒದಗಿಸಲಾಗುತ್ತಿದೆ ಎಂದು ವೈದ್ಯಕೀಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ಮೇಲ್ವಿಚಾರಣೆಗಾಗಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅನ್ನು ಸ್ಥಾಪಿಸಲಾಗಿದ್ದು, ಮಹಂತ ನೃತ್ಯ ಗೋಪಾಲ್ ದಾಸ್ ಅವರು ಟ್ರಸ್ಟ್‌ನ ಅಧ್ಯಕ್ಷರಾಗಿದ್ದಾರೆ.

ಪ್ರಮುಖ ಸುದ್ದಿ :-   ವಾಣಿಜ್ಯ ಎಲ್‌ಪಿಜಿ ಅಡುಗೆ ಅನಿಲ ಸಿಲಿಂಡರ್ ದರದಲ್ಲಿ ಭಾರೀ ಇಳಿಕೆ; ಇಂದಿನಿಂದಲೇ ಹೊಸ ದರ ಜಾರಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement