ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ; ನೂತನ ಮೇಯರ್‌ ಆಗಿ ದುರ್ಗಮ್ಮ ಬಿಜವಾಡ, ಉಪಮೇಯರ್ ಆಗಿ ರತ್ನಾಭಾಯಿ ಆಯ್ಕೆ

ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮೇಯರ್‌ ಆಗಿ ಬಿಜೆಪಿಯ ದುರ್ಗಮ್ಮ ಬಿಜವಾಡ ಹಾಗೂ ಉಪಮೇಯರ್ ಆಗಿ  ರತ್ನಾಬಾಯಿ ನಾಝರೆ ಆಯ್ಕೆಯಾಗಿದ್ದಾರೆ.
ಶನಿವಾರ ಪಾಲಿಕೆಯ ಸಭಾಭವನದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಕೈ ಎತ್ತುವ ಮೂಲಕ ಮತದಾನ ನಡೆದು ಇಬ್ಬರೂ ಆಯ್ಕೆಯಾದರು.  ಬಿಜೆಪಿ ಅಭ್ಯರ್ಥಿಗಳ ಪರವಾಗಿ ಸಂಸದರಾದ ಪ್ರಲ್ಹಾದ ಜೋಶಿ, ಎಂ. ನಾಗರಾಜ್, ಶಾಸಕರಾದ ಅರವಿಂದ್ ಬೆಲ್ಲದ್, ಮಹೇಶ್ ಟೆಂಗಿನಕಾಯಿ, ವಿಧಾನ ಪರಿಷತ್ ಸದಸ್ಯರಾದ ಪ್ರದೀಪ್ ಶೆಟ್ಟರ್, ಎಸ್. ವಿ‌. ಸಂಕನೂರ, ಲಿಂಗರಾಜ ಪಾಟೀಲ ಬೆಂಬಲ ವ್ಯಕ್ತಪಡಿಸಿದರೆ, ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಶಾಸಕರಾದ ಪ್ರಸಾದ್ ಅಬ್ಬಯ್ಯ ಹಾಗೂ ವಿಧಾನ ಪರಿಷತ್ ಸದಸ್ಯ ಹೆಚ್. ಎಫ್. ಜಕ್ಕಪ್ಪನವರ ಬೆಂಬಲ ವ್ಯಕ್ತಪಡಿಸಿದರು.
92ರ ಪಾಲಿಕೆ ಸಂಖ್ಯಾಬಲದಲ್ಲಿ 88 ಸದಸ್ಯರು ಹಾಜರಾಗಿದ್ದಾರೆ.  ಮೇಯರ್ ಆಗಿ ದುರ್ಗಮ್ಮ ಬಿಜವಾಡ ಅವರು 50 ಮತಗಳನ್ನು ಪಡೆದರೆ, ಪ್ರತಿಸ್ಪರ್ಧಿ ಕವಿತಾ ಕಬ್ಬೇರ್ 32 ಮತಗಳನ್ನು ಪಡೆದರು ಹಾಗೂ ಉಪಮೇಯರ್ ಆಗಿ ರತ್ನಾಭಾಯಿ ನಾಝರೆ ಅವರು 50 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ.
ಮೇಯರ್ ಸ್ಥಾನ ಈ ಬಾರಿ ಪರಿಶಿಷ್ಟ ಮಹಿಳೆಗೆ ಮೀಸಲಾದ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ಪೂರ್ವ ಕ್ಷೇತ್ರ ವ್ಯಾಪ್ತಿಯ 69ನೇ ವಾರ್ಡಿನಿಂದ ಗೆದ್ದ ದುರ್ಗಮ್ಮ ಬಿಜವಾಡ ಹಾಗೂ ಸೆಂಟ್ರಲ್ ವ್ಯಾಪ್ತಿಯ 56ನೇ ವಾರ್ಡಿನಿಂದ ಗೆದ್ದ ಚಂದ್ರಿಕಾ ಮೇಸ್ತ್ರಿ ಇಬ್ಬರ ನಡುವೆ ಪೈಪೋಟಿಯಿತ್ತು. ನಂತರ ದುರ್ಗಮ್ಮ ಬಿಜವಾಡ ಹೆಸರನ್ನು ಅಂತಿಮಗೊಳಿಸಲಾಯಿತು.  ಉಪಮೇಯರ್‌ ಸ್ಥಾನಕ್ಕೆ ಧಾರವಾಡ ಒಂಬತ್ತನೇ ವಾರ್ಡಿನ ಸದಸ್ಯೆ ರತ್ನಾಬಾಯಿ ನಾಝರೆ ಅವರ ಹೆಸರನ್ನು ಬಿಜೆಪಿ    ಅಂತಿಮಗೊಳಿಸಿತು.
ಕಾಂಗ್ರೆಸ್‌ನಿಂದ ಮೇಯರ್ ಸ್ಥಾನಕ್ಕೆ 20ನೇ ವಾರ್ಡ್ ಸದಸ್ಯೆ ಕವಿತಾ ಕಬ್ಬೇರ ಹಾಗೂ 6ನೇ ವಾರ್ಡ ಸದಸ್ಯೆ ದಿಲ್‌ಷಾದ ಬೇಗಂ ನದಾಫ್ ನಾಮಪತ್ರ ಸಲ್ಲಿಸಿದರು. ಎಂಐಎಂನಿಂದ  76ನೇ ವಾರ್ಡ ಸದಸ್ಯೆ ವಾಹಿದಾಖಾನಂ ಕಿತ್ತೂರ ಉಪಮೇಯರ್ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದರು.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement