ಅನಂತಪುರ: ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಅಪರಿಚಿತ ವ್ಯಕ್ತಿಯ ಶವದ ಪ್ರಕರಣವನ್ನು ಆರಂಭದಲ್ಲಿ ‘ಬ್ಲೈಂಡ್ ಕೇಸ್’ ಎಂದು ಪರಿಗಣಿಸಿದ್ದ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ರಾಯದುರ್ಗಂ ಪೊಲೀಸರು, ವೈಜ್ಞಾನಿಕ ತನಿಖೆ ಹಾಗೂ ಘಟನೆ ಸ್ಥಳದಲ್ಲಿ ಸಿಕ್ಕಿದ್ದ ಒಂದು ಸಣ್ಣ ಸುಳಿವಿನ ನೆರವಿನಿಂದ ಅದನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣದ ಪ್ರಮುಖ ಸುಳಿವಾಗಿ ಸಿಕ್ಕಿದ್ದ ಹಪ್ಪಳ(ಪಾಪಡ್)ದ ಪ್ಯಾಕೆಟ್ ಕೊಲೆಯ ರಹಸ್ಯವನ್ನು ಬಯಲಿಗೆಳೆಯುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಬಳ್ಳಾರಿ ಜಿಲ್ಲೆಯ ಬಸವರಾಜು (31) ಮತ್ತು ಕೋಟ್ರೇಶ (36) ಎಂಬ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಹಣದ ಆಸೆಗಾಗಿ ವ್ಯಕ್ತಿಯನ್ನು ಕೊಲೆ ಮಾಡಿ, ಗುರುತು ಸಿಗದಂತೆ ಶವವನ್ನು ಸುಟ್ಟು ನಾಶಪಡಿಸಲು ಯತ್ನಿಸಿದ ಆರೋಪ ಇವರ ಮೇಲಿದೆ.
ಪ್ರಕರಣ ಜೂನ್ 23ರಂದು ಬೆಳಕಿಗೆ ಬಂದಿತ್ತು . ಅನಂತಪುರ ಜಿಲ್ಲೆಯ ಡಿ. ಹಿರೇಹಾಳ ಮಂಡಲದ ಪುಲಕುರ್ತಿ ಗ್ರಾಮದ ಸಮೀಪದ ಕೃಷಿ ಜಮೀನಿನಲ್ಲಿ ಸುಟ್ಟ ಸ್ಥಿತಿಯಲ್ಲಿದ್ದ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿತ್ತು.
ಪ್ರತ್ಯಕ್ಷ ಸಾಕ್ಷಿಗಳು ಇಲ್ಲದಿರುವುದು ಹಾಗೂ ಘಟನಾ ಸ್ಥಳದಲ್ಲಿ ಅತಿ ಕಡಿಮೆ ಸಾಕ್ಷ್ಯಗಳು ಲಭ್ಯವಾಗಿದ್ದರಿಂದ, ಪೊಲೀಸರು ಫೊರೆನ್ಸಿಕ್ ಮತ್ತು ತಾಂತ್ರಿಕ ವಿಧಾನಗಳನ್ನು ಬಳಸಿಕೊಂಡು ಸಮಗ್ರ ತನಿಖೆ ಆರಂಭಿಸಿದ್ದರು.
ಘಟನಾ ಸ್ಥಳದ ಪರಿಶೀಲನೆ ವೇಳೆ ಭಾಗಶಃ ಸುಟ್ಟಿದ್ದ ಕನ್ನಡ ಪತ್ರಿಕೆ, ಸುಟ್ಟ ಬಟ್ಟೆಗಳು, ಜನಿವಾರ ಹಾಗೂ ಒಂದು ಹಪ್ಪಳದ ಪ್ಯಾಕೆಟ್ ಪತ್ತೆಯಾಗಿತ್ತು. ಈ ಹಪ್ಪಳದ ಪ್ಯಾಕೆಟ್ ತನಿಖೆಯ ಪ್ರಮುಖ ಸುಳಿವಾಗಿ ಪರಿಣಮಿಸಿತು.
ಪೊಲೀಸರು ಹಪ್ಪಳದ ಪ್ಯಾಕೆಟ್‌ನ ತಯಾರಕರನ್ನು ಚೆನ್ನೈನಲ್ಲಿ ಪತ್ತೆಹಚ್ಚಿ, ಅಲ್ಲಿಂದ ಅದರ ಪೂರೈಕೆ ಸರಪಳಿಯ ಬಗ್ಗೆ ಮಾಹಿತಿ ಕಲೆಹಾಕಿ ಬಳ್ಳಾರಿಗೆ ತಲುಪಿದರು. ವಿಚಾರಣೆ ವೇಳೆ ಕಿವುಡ ಮತ್ತು ಮೂಕರಾಗಿದ್ದ ಹಪ್ಪಳ ಮಾರಾಟಗಾರರಾದ ಗುರುರಾಜು ರಾವ್ ಹಲವು ದಿನಗಳಿಂದ ನಾಪತ್ತೆಯಾಗಿರುವ ಮಾಹಿತಿ ದೊರೆಯಿತು. ಘಟನಾ ಸ್ಥಳದಲ್ಲಿ ದೊರೆತ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಶವವು ಗುರುರಾಜು ರಾವ್ ಅವರದ್ದೇ ಎಂಬುದನ್ನು ಪೊಲೀಸರು ಖಚಿತಪಡಿಸಿಕೊಂಡರು.
ಮುಂದಿನ ತನಿಖೆಯಲ್ಲಿ, ಗುರುರಾಜು ರಾವ್ ಅವರ ಮರಣದ ಬಳಿಕ ಅವರ ಎಟಿಎಂ ಕಾರ್ಡ್ ಬಳಸಿ ಹಣವನ್ನು ತೆಗೆದಿರುವುದು ಬೆಳಕಿಗೆ ಬಂದಿತು. ಎಟಿಎಂ ಕೇಂದ್ರಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು, ಓರ್ವ ಆರೋಪಿಯ ಚಲನವಲನಗಳು ಹಾಗೂ ಆತ ಬಳಸುತ್ತಿದ್ದ ಸಂಜ್ಞಾ ಭಾಷೆಯ ಆಧಾರದ ಮೇಲೆ ಆತನನ್ನು ಗುರುತಿಸಿದರು. ನಂತರ ತಾಂತ್ರಿಕ ಸಾಕ್ಷ್ಯಗಳು ಹಾಗೂ ಕರೆ ವಿವರಗಳ (ಕಾಲ್ ರೆಕಾರ್ಡ್‌ಗಳ) ವಿಶ್ಲೇಷಣೆಯಿಂದ ಎರಡನೇ ಆರೋಪಿಯನ್ನೂ ಪತ್ತೆಹಚ್ಚಲಾಯಿತು.
ಅನಂತಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಪಿ. ಜಗದೀಶ ಅವರ ಪ್ರಕಾರ, ಹಪ್ಪಳ ವ್ಯಾಪಾರ ಮತ್ತು ದೇವಸ್ಥಾನಕ್ಕೆ ಸಂಬಂಧಿಸಿದ ಕೆಲಸಗಳಿಂದ ಗುರುರಾಜು ರಾವ್ ಅಪಾರ ಹಣ ಸಂಗ್ರಹಿಸಿದ್ದಾರೆ ಎಂದು ಆರೋಪಿಗಳು ನಂಬಿದ್ದರು. ಇದೇ ಕಾರಣದಿಂದ ಅವರನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕೊಲೆ ಮಾಡಿ, ಗುರುತು ಸಿಗದಂತೆ ಶವಕ್ಕೆ ಬೆಂಕಿ ಹಚ್ಚಿ, ಬಳಿಕ ಅವರ ಟಿವಿಎಸ್ ಎಕ್ಸ್‌ಎಲ್ ದ್ವಿಚಕ್ರ ವಾಹನ, ಮೊಬೈಲ್ ಫೋನ್ ಹಾಗೂ ಎಟಿಎಂ ಕಾರ್ಡ್ ಕಳವು ಮಾಡಿಕೊಂಡು ಪರಾರಿಯಾಗಿದ್ದರು.
ಜುಲೈ 8ರಂದು ಡಿ. ಹಿರೇಹಾಳ ಮಂಡಲದ ಒಬುಳಾಪುರಂ ಕ್ರಾಸ್ ಸಮೀಪ ಆರೋಪಿಗಳನ್ನು ಪೊಲೀಸರು ಬಂಧಿಸಿದರು. ಬಂಧಿತ ಇಬ್ಬರೂ ಕಿವುಡ ಮತ್ತು ಮೂಕರಾಗಿರುವುದರಿಂದ, ಸಂಜ್ಞಾ ಭಾಷಾ ತಜ್ಞರ ಸಹಾಯದಿಂದ ಅವರನ್ನು ವಿಚಾರಣೆಗೆ ಒಳಪಡಿಸಲಾಯಿತು. ಆರೋಪಿಗಳಿಂದ ಮೃತ ಗುರುರಾಜು ರಾವ್ ಅವರ ಟಿವಿಎಸ್ ಎಕ್ಸ್‌ಎಲ್ ವಾಹನ, ಎಟಿಎಂ ಕಾರ್ಡ್, ಮೊಬೈಲ್ ಫೋನ್ ಹಾಗೂ ಹಪ್ಪಳದ ಬಂಡಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ