ಪಕ್ಷ ಸೇರಿದ ಕೆಲವೇ ಗಂಟೆಗಳಲ್ಲಿ ಮೂವರು ಟಿಎಂಸಿ ಮಾಜಿ ಸಂಸದರಿಗೆ ರಾಜ್ಯಸಭೆ ಟಿಕೆಟ್ ನೀಡಿದ ಬಿಜೆಪಿ

ನವದೆಹಲಿ : ತೃಣಮೂಲ ಕಾಂಗ್ರೆಸ್ (ಟಿಎಂಸಿ) ತೊರೆದು ಗುರುವಾರ ಸಂಜೆ (ಜುಲೈ 9) ಬಿಜೆಪಿ ಸೇರ್ಪಡೆಯಾದ ಬೆನ್ನಿಗೇ ರಾಜ್ಯಸಭೆ ಮೂವರು ಮಾಜಿ ಸದಸ್ಯರಾದ ಸುಖೇಂದು ಶೇಖರ ರಾಯ್, ಸುಷ್ಮಿತಾ ದೇವ್ ಹಾಗೂ ಪ್ರಕಾಶ ಚಿಕ್ ಬರಾಯಿಕ್ ಅವರಿಗೆ ಜುಲೈ 24ರಂದು ನಡೆಯಲಿರುವ ರಾಜ್ಯಸಭೆ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿಯಿಂದ ಟಿಕೆಟ್‌ ನೀಡಲಾಗಿದೆ. ಪಕ್ಷಾಂತರಕ್ಕೂ ಮುನ್ನವೇ ಈ ಮೂವರು ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರಿಂದ ಉಪಚುನಾವಣೆ ಅನಿವಾರ್ಯವಾಗಿತ್ತು.
ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯು ಜುಲೈ 24ರ ರಾಜ್ಯಸಭೆ ಉಪಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದು, ತೃಣಮೂಲ ಕಾಂಗ್ರೆಸ್‌ನ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂಬ ತನ್ನ ಹಿಂದಿನ ನಿಲುವಿನಿಂದ ಇದು ಸಂಪೂರ್ಣ ಭಿನ್ನವಾದ ಬೆಳವಣಿಗೆಯಾಗಿದೆ.
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಮುನ್ನದಿಂದಲೇ ತೃಣಮೂಲ ಕಾಂಗ್ರೆಸ್ ನಾಯಕರ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಉಲ್ಲೇಖಿಸುತ್ತಿದ್ದ ಬಿಜೆಪಿ, ಆ ಪಕ್ಷದ ನಾಯಕರಿಗೆ ತನ್ನ ಬಾಗಿಲು ಮುಚ್ಚಿದೆ ಎಂದು ಸ್ಪಷ್ಟಪಡಿಸಿತ್ತು. ಆದರೆ, ಗುರುವಾರ ಸಂಜೆ (ಜುಲೈ 9) ಮೂವರು ನಾಯಕರು ಬಿಜೆಪಿ ಸೇರಿದ ಕೆಲವೇ ಗಂಟೆಗಳಲ್ಲಿ ಅವರನ್ನು ರಾಜ್ಯಸಭೆ ಅಭ್ಯರ್ಥಿಗಳನ್ನಾಗಿ ಘೋಷಿಸುವ ಮೂಲಕ ಕೇಂದ್ರ ನಾಯಕತ್ವ ಮಹತ್ವದ ನಿರ್ಧಾರ ಕೈಗೊಂಡಿದೆ.

ಪ್ರಮುಖ ಸುದ್ದಿ :-   38 ಬೇಡಿಕೆಗಳು, 48 ಗಂಟೆಗಳ ಗಡುವು: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಮತ್ತೊಂದು ಮಹಾಸಂಘರ್ಷದ ಮುನ್ಸೂಚನೆ

ಇದು ಸಾಮಾನ್ಯ ನಿಯಮವಲ್ಲ; ವಿಶೇಷ ಸಂದರ್ಭ
ಪಶ್ಚಿಮ ಬಂಗಾಳ ರಾಜ್ಯ ಬಿಜೆಪಿ ಅಧ್ಯಕ್ಷ ಸಮಿಕ್ ಬಿಸ್ವಾಸ್, ಪ್ರತಿಕ್ರಿಯಿಸಿ, “ತೃಣಮೂಲ ನಾಯಕರಿಗೆ ನಮ್ಮ ಪಕ್ಷದ ಬಾಗಿಲು ಮುಚ್ಚಿದೆ ಎಂದು ನಾವು ಹೇಳಿದ್ದೇವೆ ಮತ್ತು ಆ ನಿಲುವಿಗೆ ಈಗಲೂ ಬದ್ಧರಾಗಿದ್ದೇವೆ. ಆದರೆ ಭ್ರಷ್ಟಾಚಾರದಲ್ಲಿ ತೊಡಗದವರು, ಜನರ ಮೇಲೆ ದೌರ್ಜನ್ಯ ಎಸಗದವರು, ಉದ್ಯೋಗಗಳನ್ನು ಮಾರಾಟ ಮಾಡದವರು ಹಾಗೂ ಜನರ ಹಕ್ಕುಗಳನ್ನು ಕಸಿದುಕೊಳ್ಳದವರು ತೃಣಮೂಲ ವಿರುದ್ಧದ ಹೋರಾಟದಲ್ಲಿ ಹಾಗೂ ಬಂಗಾಳವನ್ನು ಪುನರ್‌ನಿರ್ಮಿಸುವ ಕಾರ್ಯದಲ್ಲಿ ನಮ್ಮೊಂದಿಗೆ ಸೇರುವುದಕ್ಕೆ ಸದಾ ಸ್ವಾಗತಾರ್ಹರು” ಎಂದು ತಿಳಿಸಿದ್ದಾರೆ.
2012ರಿಂದ ತೃಣಮೂಲ ಕಾಂಗ್ರೆಸ್ ಪರ ರಾಜ್ಯಸಭೆಯನ್ನು ಪ್ರತಿನಿಧಿಸುತ್ತಿದ್ದ ಸುಖೇಂದು ಶೇಖರ ರಾಯ್, ಆರ್‌ಜಿ ಕರ್ ಆಸ್ಪತ್ರೆ ವಿವಾದದ ಬಳಿಕ ಪಕ್ಷದ ವಿರುದ್ಧವೇ ಧ್ವನಿ ಎತ್ತಿದ್ದರು. ಪ್ರಕರಣದಲ್ಲಿ ಹೊಣೆಗಾರಿಕೆಯನ್ನು ನಿಗದಿಪಡಿಸುವಂತೆ ಆಗ್ರಹಿಸಿದ್ದ ಅವರು ಬಳಿಕ ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.

ಅಸ್ಸಾಂನಿಂದ ತೃಣಮೂಲ ಕಾಂಗ್ರೆಸ್‌ನ ಲೋಕಸಭಾ ಸದಸ್ಯೆಯಾಗಿದ್ದ ಸುಷ್ಮಿತಾ ದೇವ್ ಕೂಡ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಕಾಕೋಲಿ ಘೋಷ್ ದಸ್ತಿದಾರ್ ನೇತೃತ್ವದಲ್ಲಿ ಸಂಸದರ ಒಂದು ಗುಂಪು ಬಂಡಾಯ ಎದ್ದ ಬಳಿಕ ಅವರು ಪಕ್ಷದ ವಿರುದ್ಧ ಅಸಮಾಧಾನ ಹೊರಹಾಕಿದ್ದರು.
“ಟಿಎಂಸಿಗೆ ಸೇರಿದ ಬಳಿಕವೇ ಭ್ರಷ್ಟಾಚಾರದ ವ್ಯಾಪ್ತಿ ಎಷ್ಟರ ಮಟ್ಟಿಗೆ ನಂಬಲಸಾಧ್ಯವಾಗಿರಬಹುದು ಎಂಬುದು ನನಗೆ ಅರಿವಾಯಿತು. ನನ್ನ ವಿರೋಧಿಗಳು ನನ್ನಲ್ಲಿ ಹಲವು ಕೊರತೆಗಳಿವೆ ಎಂದು ಹೇಳಬಹುದು. ಆದರೆ ನಾನು ಭ್ರಷ್ಟಾಚಾರದೊಂದಿಗೆ ಸಂಬಂಧ ಹೊಂದಿದ್ದೆ ಎಂದು ಯಾರೂ ಹೇಳಲು ಸಾಧ್ಯವಿಲ್ಲ” ಎಂದು ಅವರು ಹೇಳಿದ್ದರು.
ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಜೊತೆ ಸಮಾಲೋಚನೆ ನಡೆಸಿದ ಬಳಿಕ ಸುಷ್ಮಿತಾ ದೇವ್ ತೃಣಮೂಲ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದರು. ತೃಣಮೂಲದ ಇತರ ಸಂಸದರಂತೆ ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ (ಎನ್‌ಸಿಪಿಐ) ಸೇರುವ ಬದಲು, ಅವರು ಗುರುವಾರ ಸಂಜೆ ಬಿಜೆಪಿ ಸೇರಿದ್ದಾರೆ.
2023ರಲ್ಲಿ ರಾಜ್ಯಸಭೆ ಪ್ರವೇಶಿಸಿದ್ದ ಪ್ರಕಾಶ್ ಚಿಕ್ ಬರಾಯಿಕ್ ಕೂಡ ಗುರವಾರ ಬಿಜೆಪಿ ಸೇರಿದ್ದಾರೆ. ಉತ್ತರ ಬಂಗಾಳದ ಚಹಾ ತೋಟ ಕಾರ್ಮಿಕರ ಸಂಘಟನೆಯ ಮೂಲಕ ಗುರುತಿಸಿಕೊಂಡಿರುವ ಅವರು ಕೂಡ ತೃಣಮೂಲ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಪ್ರಮುಖ ಸುದ್ದಿ :-   ಥಾಣೆ ಆಸ್ಪತ್ರೆಯಲ್ಲಿ ಶಿವಸೇನೆ ಕಾರ್ಪೊರೇಟರ್‌ನಿಂದ ವೈದ್ಯರ ಮೇಲೆ ಹಲ್ಲೆ : 'ಭಯದಿಂದ ರಾಜೀನಾಮೆ ನೀಡಿದ್ದೇನೆ' ಎಂದ ವೈದ್ಯ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement