ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣ: ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಸುಪ್ರೀಂ ಕೋರ್ಟ್ ನೋಟಿಸ್

ನವದೆಹಲಿ : ಅಯೋಧ್ಯೆಯ ರಾಮಮಂದಿರದಲ್ಲಿ ಭಕ್ತರು ನೀಡಿದ ದೇಣಿಗೆ ಹಣದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಸಮ್ಮತ ಹಾಗೂ ನಿಗದಿತ ಅವಧಿಯೊಳಗೆ ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಸೋಮವಾರ (ಜುಲೈ 13) ನೋಟಿಸ್ ಜಾರಿಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ ನೇತೃತ್ವದ ಪೀಠದಲ್ಲಿ ನ್ಯಾಯಮೂರ್ತಿಗಳಾದ ಜಾಯ್‌ಮಲ್ಯ ಬಾಗ್ಚಿ ಹಾಗೂ ವಿ. ಮೋಹನಾ ಅವರು ವಿಚಾರಣೆ ನಡೆಸಿದರು. ಇದೇ ವೇಳೆ, ಪ್ರಕರಣದ ತನಿಖೆ ನಡೆಸುತ್ತಿರುವ ಉತ್ತರ ಪ್ರದೇಶ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ತನಿಖೆಯ ಪ್ರಗತಿ ಕುರಿತು ಸ್ಥಿತಿಗತಿ ವರದಿ ಸಲ್ಲಿಸುವಂತೆ ನ್ಯಾಯಾಲಯ ನಿರ್ದೇಶನ ನೀಡಿದೆ.
ಕೇಂದ್ರ ಸರ್ಕಾರ ಹಾಗೂ ಉತ್ತರ ಪ್ರದೇಶ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಎಸ್‌ಐಟಿ ತನ್ನ ಸ್ಥಿತಿಗತಿ ವರದಿಯನ್ನು ಸೀಲ್ ಮಾಡಿದ ಲಕೋಟೆಯಲ್ಲಿ (Sealed Cover) ನ್ಯಾಯಾಲಯಕ್ಕೆ ಸಲ್ಲಿಸಲಿದೆ ಎಂದು ತಿಳಿಸಿದರು.
ಜುಲೈ 20ಕ್ಕೆ ಮುಂದಿನ ವಿಚಾರಣೆ
ಪ್ರಕರಣದ ಮುಂದಿನ ವಿಚಾರಣೆಯನ್ನು ಜುಲೈ 20ಕ್ಕೆ ನಿಗದಿಪಡಿಸಿರುವ ಸುಪ್ರೀಂ ಕೋರ್ಟ್, ಆ ದಿನ ಅರ್ಜಿಗಳ ವಿಚಾರಣೆ ನಡೆಸುವುದರ ಜೊತೆಗೆ ಎಸ್‌ಐಟಿ ಸಲ್ಲಿಸುವ ತನಿಖಾ ವರದಿಯನ್ನೂ ಪರಿಶೀಲಿಸಲಿದೆ.
ಸಿಬಿಐ ತನಿಖೆ ಹಾಗೂ ಸಿಎಜಿ ಲೆಕ್ಕಪರಿಶೋಧನೆಗೆ ಮನವಿ
ಪ್ರಕರಣದ ಮೂವರು ಅರ್ಜಿದಾರರಲ್ಲಿ ಒಬ್ಬರಾದ ನರೇಂದ್ರಕುಮಾರ ಗೋಸ್ವಾಮಿ, ದೇಣಿಗೆ ಹಣದ ಕಳ್ಳತನ ಪ್ರಕರಣದ ಕುರಿತು ಕೇಂದ್ರೀಯ ತನಿಖಾ ದಳ (ಸಿಬಿಐ) ಮೂಲಕ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ. ಜೊತೆಗೆ, ರಾಮಮಂದಿರದ ಆಡಳಿತವನ್ನು ನೋಡಿಕೊಳ್ಳುತ್ತಿರುವ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಹಣಕಾಸು ವ್ಯವಹಾರಗಳ ಬಗ್ಗೆ ಭಾರತದ ಮಹಾಲೆಕ್ಕಪರಿಶೋಧಕ (ಸಿಎಜಿ) ಮೂಲಕ ಲೆಕ್ಕಪರಿಶೋಧನೆ ನಡೆಸುವಂತೆ ಕೋರಿದ್ದಾರೆ.
ಇನ್ನಿಬ್ಬರು ಅರ್ಜಿದಾರರಾದ ಅಜಯಕುಮಾರ ರೈ ಮತ್ತು ದಿನೇಶಕುಮಾರ ಯಾದವ್ ಕೂಡ ಇದೇ ರೀತಿಯ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.
ಇದಲ್ಲದೆ, ಆರ್‌ಜೆಡಿ ಸಂಸದ ಸುಧಾಕರ ಸಿಂಗ್ ಸಲ್ಲಿಸಿರುವ ಮೂರನೇ ಅರ್ಜಿಯಲ್ಲಿ, ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಸಿಬಿಐ ತನಿಖೆ ನಡೆಸುವಂತೆ ಹಾಗೂ ದೇವಾಲಯ ಟ್ರಸ್ಟ್‌ನ ಸಂಪೂರ್ಣ ಹಣಕಾಸು ವ್ಯವಹಾರಗಳ ಫೊರೆನ್ಸಿಕ್ ಆಡಿಟ್ ನಡೆಸುವಂತೆ ಮನವಿ ಮಾಡಲಾಗಿದೆ.
ದೇಣಿಗೆ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ರಾಮಮಂದಿರದ ದೇಣಿಗೆ ಹಣ ದುರುಪಯೋಗವಾಗಿದೆ ಎಂಬ ಆರೋಪವು ಜೂನ್ ಮೊದಲ ವಾರದಲ್ಲಿ, ದೇವಾಲಯದಲ್ಲಿ ಭಕ್ತರು ಸಲ್ಲಿಸಿದ ಕಾಣಿಕೆಗಳ ಎಣಿಕೆ ವೇಳೆ ಅಕ್ರಮಗಳು ಪತ್ತೆಯಾದ ನಂತರ ಬೆಳಕಿಗೆ ಬಂದಿತ್ತು.
ಈ ಹಿನ್ನೆಲೆಯಲ್ಲಿ ದೇವಾಲಯ ಟ್ರಸ್ಟ್ ನೀಡಿದ ಶಿಫಾರಸಿನ ಮೇರೆಗೆ ಉತ್ತರ ಪ್ರದೇಶ ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿತು.
ಎಸ್‌ಐಟಿಯಲ್ಲಿ ಲಕ್ನೋ ವಿಭಾಗೀಯ ಆಯುಕ್ತ ವಿಜಯ ವಿಶ್ವಾಸ ಪಂತ್, ಪೊಲೀಸ್ ಮಹಾನಿರೀಕ್ಷಕಿ (ಐಜಿ) ಕಿರಣ ಎಸ್., ಹಾಗೂ ಹಣಕಾಸು ಇಲಾಖೆಯ ವಿಶೇಷ ಕಾರ್ಯದರ್ಶಿ ನೀಲ್ ರತನ್ ಸದಸ್ಯರಾಗಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಅಕ್ರಮದ ಸುಳಿವು
ಎಸ್‌ಐಟಿ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ದೇಣಿಗೆ ಹಣದ ದುರುಪಯೋಗ ಮತ್ತು ಹಣದ ಅಕ್ರಮ ವರ್ಗಾವಣೆಗೆ ಸಂಬಂಧಿಸಿದ ಪ್ರಾಥಮಿಕ ಸಾಕ್ಷ್ಯಗಳು (Prima Facie Evidence) ಪತ್ತೆಯಾಗಿದ್ದು, ಅದರ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಇದುವರೆಗೆ ದೇಣಿಗೆ ಹಣ ಎಣಿಕೆ ಪ್ರಕ್ರಿಯೆಗೆ ಸಂಬಂಧಿಸಿದ್ದ ಎಂಟು ಮಂದಿಯನ್ನು ಬಂಧಿಸಲಾಗಿದೆ ಎಂದು ಎಸ್‌ಐಟಿ ತಿಳಿಸಿದೆ.
45 ದಿನಗಳ ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ
ಎಸ್‌ಐಟಿ ಪ್ರಕಾರ, 45 ದಿನಗಳ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದಾಗ, ದೇಣಿಗೆ ಹಣ ಎಣಿಕೆ ಪ್ರಕ್ರಿಯೆಯಲ್ಲಿ ನಿಗದಿಪಡಿಸಿದ್ದ ನಿಯಮಗಳನ್ನು ಪದೇಪದೇ ಉಲ್ಲಂಘಿಸಿರುವುದು ಕಂಡುಬಂದಿದೆ.
ತನಿಖಾಧಿಕಾರಿಗಳ ಪ್ರಕಾರ, ನಗದು ಹಣ ಎಣಿಕೆ ನಡೆಯುತ್ತಿದ್ದ ಕೊಠಡಿಯಲ್ಲಿ ಮೇಲ್ವಿಚಾರಣೆಯ ಕೊರತೆ ಹಾಗೂ ನಗದು ಸಾಗಣೆಯ ಮೇಲಿನ ಸಮರ್ಪಕ ನಿಯಂತ್ರಣದ ಅಭಾವವನ್ನು ದುರುಪಯೋಗಪಡಿಸಿಕೊಂಡು ಆರೋಪಿಗಳು ಹಣ ಕಳವು ಮಾಡಿದ್ದಾರೆ. ಎಸ್‌ಐಟಿ ವರದಿ ಪ್ರಕಾರ, 45 ದಿನಗಳ ಅವಧಿಯಲ್ಲಿ ಕನಿಷ್ಠ 70 ಬಾರಿ ಕಳ್ಳತನ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಇದಲ್ಲದೆ, ತನಿಖೆ ಆರಂಭವಾಗುವ ಮುನ್ನವೇ ಕೆಲವು ಸಿಬ್ಬಂದಿಯಿಂದ ಸುಮಾರು ₹78.94 ಲಕ್ಷ ವಶಪಡಿಸಿಕೊಳ್ಳಲಾಗಿದ್ದು, ನಂತರ ಹಣ ಎಣಿಕೆ ಕೊಠಡಿಗೆ ಹೊಂದಿಕೊಂಡಿದ್ದ ಶೌಚಾಲಯದಿಂದ ₹2.25 ಲಕ್ಷ ನಗದು ಪತ್ತೆಯಾಗಿ ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement