ಬೆಂಗಳೂರು: ರಾಜ್ಯ ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುವ ಕರ್ನಾಟಕ ಲೋಕಸೇವಾ ಆಯೋಗ (KPSC)ದ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ರಾಜ್ಯಪಾಲ ಥಾವರಚಂದ ಗೆಹ್ಲೋಟ್ ಅವರು ಭಾನುವಾರ (ಜುಲೈ 13) ಆದೇಶ ಹೊರಡಿಸಿದ್ದಾರೆ.
ಅಧ್ಯಕ್ಷರ ವಿರುದ್ಧ ಗಂಭೀರ ಸ್ವರೂಪದ ಅಧಿಕಾರ ದುರುಪಯೋಗ ಮತ್ತು ಸ್ವಜನಪಕ್ಷಪಾತದ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಶಿವಶಂಕರಪ್ಪ ಸಾಹುಕಾರ ವಿರುದ್ಧ ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯ ಕೊರತೆ, ಕೆಲ ಅಭ್ಯರ್ಥಿಗಳಿಗೆ ಅನುಕೂಲ ಕಲ್ಪಿಸಿದ ಆರೋಪ, ಅಧಿಕಾರದ ದುರುಪಯೋಗ ಹಾಗೂ ಸ್ವಜನಪಕ್ಷಪಾತದಂತಹ ಗಂಭೀರ ಆರೋಪಗಳಿವೆ ಎನ್ನಲಾಗಿದೆ. ಈ ದೂರುಗಳ ಬಗ್ಗೆ ತನಿಖೆ ನಡೆಸುವ ಅಗತ್ಯವಿದೆ ಎಂಬ ಅಭಿಪ್ರಾಯದ ಮೇರೆಗೆ ರಾಜ್ಯಪಾಲರು ಅಮಾನತು ಆದೇಶ ಹೊರಡಿಸಿದ್ದಾರೆ.
ಶಿವಶಂಕರಪ್ಪ ಸಾಹುಕಾರ ವಿರುದ್ಧ ಮಾಡಲಾದ ಆರೋಪಗಳ ಬಗ್ಗೆ ಅಗತ್ಯ ತನಿಖೆಗಾಗಿ ಸಂವಿಧಾನದ 317(1)ನೇ ವಿಧಿಯ ಅಡಿಯಲ್ಲಿ ಸುಪ್ರೀಂ ಕೋರ್ಟ್ಗೆ ಉಲ್ಲೇಖಿಸುವಂತೆ ರಾಷ್ಟ್ರಪತಿಗಳಿಗೆ ಶಿಫಾರಸ್ಸು ಮಾಡಿದ್ದಾರೆ. ಜೊತೆಗೆ ತನಿಖೆ ಕುರಿತು ರಾಷ್ಟ್ರಪತಿಗಳಿಂದ ಮುಂದಿನ ಆದೇಶ ಬರುವವರೆಗೆ ಆಯೋಗದ ಅಧ್ಯಕ್ಷ ಹುದ್ದೆಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಶಿವಶಂಕರಪ್ಪ ಅವರನ್ನು ಅಮಾನತು ಮಾಡಿದ್ದಾರೆ.
ತಮ್ಮ ಪುತ್ರಿಗೆ ಸರ್ಕಾರಿ ಹುದ್ದೆ ಕೊಡುವ ಸಲುವಾಗಿ, ಕುಟುಂಬದ ವಾರ್ಷಿಕ ಆದಾಯ ಪ್ರಮಾಣಪತ್ರದಲ್ಲಿ ಸುಳ್ಳು ಮಾಹಿತಿ ಹಾಕಲು ಹಾಗೂ ತಮ್ಮ ಪುತ್ರಿ ‘ಕೈಗಾರಿಕಾ ವಿಸ್ತರಣಾ ಅಧಿಕಾರಿ’ ಹುದ್ದೆಗಳಿಗೆ ಕಾನೂನುಬಾಹಿರವಾಗಿ ಆಯ್ಕೆ ಮಾಡಲು ಅನುಕೂಲ ಮಾಡಿಕೊಟ್ಟಿದ್ದಾರೆ ಎಂಬ ಗಂಭೀರ ಆರೋಪ ಎದುರಿಸುತ್ತಿದ್ದಾರೆ.
ನಿಯಮಿತ ಮಿತಿಗಿಂತ ಹೆಚ್ಚಿನ ಆದಾಯವಿದ್ದರೂ, ಸಾಹುಕಾರ ಅವರ ಪುತ್ರಿ ತಮ್ಮ ಕುಟುಂಬದ ವಾರ್ಷಿಕ ಆದಾಯ ಕೇವಲ 40,000 ರೂ. ಎಂದು ಸುಳ್ಳು ಘೋಷಣೆ ನೀಡಿ ಆದಾಯ ಮತ್ತು ಜಾತಿ ಪ್ರಮಾಣಪತ್ರ ಪಡೆದಿದ್ದಾರೆ. ತಂದೆ ಕೆಪಿಎಸ್ಸಿ ಅಧ್ಯಕ್ಷರಾಗಿದ್ದಾರೆ ಎಂಬ ಸತ್ಯವನ್ನು ಮರೆಮಾಚಿ, ಸುಳ್ಳು ದಾಖಲೆಗಳ ಮೂಲಕ ಹಿಂದುಳಿದ ವರ್ಗಗಳ (OBC) ಮೀಸಲಾತಿ ಮತ್ತು ‘ಕ್ರೀಮಿ ಲೇಯರ್’ ವಿನಾಯಿತಿಯನ್ನು ಕಾನೂನುಬಾಹಿರವಾಗಿ ಪಡೆದುಕೊಂಡಿದ್ದಾರೆ. 30-03-2002ರ ಸರ್ಕಾರಿ ಆದೇಶದ (SWD 225 BCA 2000) ಪ್ರಕಾರ KPSC ಅಧ್ಯಕ್ಷರ ಮಕ್ಕಳು ಹಿಂದುಳಿದ ವರ್ಗಗಳ ಕೋಟಾದಡಿ ಮೀಸಲಾತಿ ಪಡೆಯಲು ಅರ್ಹರಲ್ಲದಿದ್ದರೂ, ಉದ್ದೇಶಪೂರ್ವಕವಾಗಿ ಮಾಹಿತಿ ಮರೆಮಾಚಿ ಲಾಭ ಪಡೆದುಕೊಂಡಿದ್ದಾರೆ ಎಂಬಿತ್ಯಾದಿ ಆರೋಪಗಳು ಅವರ ಮೇಲಿವೆ.


ನಿಮ್ಮ ಕಾಮೆಂಟ್ ಬರೆಯಿರಿ