ಪಹಲ್ಗಾಮ್ ಭಯೋತ್ಪಾದಕ ದಾಳಿ ಪ್ರಕರಣ : ಎಲ್‌ಇಟಿ ಉಗ್ರ ಹಫೀಜ್ ಸಯೀದ್ ವಿರುದ್ಧ ಜಾಮೀನು ರಹಿತ ವಾರಂಟ್

ನವದೆಹಲಿ: ಜಮ್ಮುವಿನ ಎನ್‌ಐಎ ವಿಶೇಷ ನ್ಯಾಯಾಲಯವು ಪಹಲ್ಗಾಮ್ ಭಯೋತ್ಪಾದಕ ದಾಳಿ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಪಾಕಿಸ್ತಾನ ಮೂಲದ ಲಷ್ಕರ್-ಇ-ತೊಯ್ಬಾ (ಎಲ್‌ಇಟಿ) ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ವಿರುದ್ಧ ಜಾಮೀನು ರಹಿತ ವಾರಂಟ್ (ಎನ್‌ಬಿಡಬ್ಲ್ಯು) ಹೊರಡಿಸಿದೆ.
ಪಹಲ್ಗಾಮ್ ಉಗ್ರ ದಾಳಿಯ ತನಿಖೆಗೆ ಸಂಬಂಧಿಸಿದ ಪೂರಕ ಆರೋಪಪಟ್ಟಿಯಲ್ಲಿ (Supplementary Chargesheet) ಹಫೀಜ್ ಸಯೀದ್ ನನ್ನು ಎನ್‌ಐಎ ಹೆಸರಿಸಿದ್ದು, 26 ಮಂದಿಯ ಸಾವಿಗೆ ಕಾರಣವಾದ ಈ ದಾಳಿಯ ಸಂಚು ರೂಪಿಸುವುದು ಹಾಗೂ ಅದರ ನಿರ್ದೇಶನ ನೀಡುವಲ್ಲಿ ಆತ ಪಾತ್ರವಹಿಸಿದ್ದ ಎಂದು ಆರೋಪಿಸಿದೆ. ಈ ಘಟನೆಯಲ್ಲಿ ಮೃತಪಟ್ಟವರಲ್ಲಿ ಹೆಚ್ಚಿನವರು ಪ್ರವಾಸಿಗರಾಗಿದ್ದರು.
ಎನ್‌ಐಎ ಸಲ್ಲಿಸಿದ ಚಾರ್ಜ್‌ಶೀಟ್‌ ಪ್ರಕಾರ, ಹಫೀಜ್ ಸಯೀದ್ ನನ್ನು ವೈಯಕ್ತಿಕ ಸಾಮರ್ಥ್ಯದಲ್ಲಿಯೂ ಹಾಗೂ ನಿಷೇಧಿತ ಲಷ್ಕರ್-ಇ-ತೊಯ್ಬಾ (ಎಲ್‌ಇಟಿ) ಸಂಘಟನೆ ಮತ್ತು ಅದರ ಪ್ರಾಕ್ಸಿ ಸಂಘಟನೆಯಾದ ದ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಮುಖ್ಯಸ್ಥರಾಗಿಯೂ ಆರೋಪಪಟ್ಟಿಯಲ್ಲಿ ಸೇರಿಸಲಾಗಿದೆ.
ಹಫೀಜ್‌ ಸಯೀದ್ ಉದ್ದೇಶಪೂರ್ವಕವಾಗಿ ಬಂಧನದಿಂದ ತಪ್ಪಿಸಿಕೊಳ್ಳುತ್ತಿರುವುದಾಗಿ ಎನ್‌ಐಎ ನ್ಯಾಯಾಲಯಕ್ಕೆ ತಿಳಿಸಿದ್ದು, ಪ್ರಕರಣದ ನ್ಯಾಯಸಮ್ಮತ ಹಾಗೂ ಸಮಗ್ರ ತನಿಖೆಗಾಗಿ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವುದು ಅತ್ಯಗತ್ಯವಾಗಿದೆ ಎಂದು ಹೇಳಿದೆ. ಎನ್‌ಐಎ ಮನವಿಯನ್ನು ಪರಿಗಣಿಸಿದ ವಿಶೇಷ ನ್ಯಾಯಾಲಯವು ಮುಂದಿನ ಕಾನೂನು ಕ್ರಮಗಳಿಗೆ ಅನುಕೂಲವಾಗುವಂತೆ ಮುಕ್ತ ದಿನಾಂಕದ (Open-dated) ಜಾಮೀನು ರಹಿತ ವಾರಂಟ್ ಜಾರಿಗೊಳಿಸಿದೆ.
ಹಫೀಜ್ ಸಯೀದ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಹಾಗೂ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪಹಲ್ಗಾಮ್ ಉಗ್ರ ದಾಳಿಯ ತನಿಖೆಯನ್ನು ಮುಂದುವರಿಸಿ, ದಾಳಿಯ ಸಂಚು ರೂಪಿಸಿ ನಡೆಸಿದ ಆರೋಪಿಗಳ ಗುರುತು ಪತ್ತೆಹಚ್ಚುವ ಎನ್‌ಐಎಯ ನಿರಂತರ ಪ್ರಯತ್ನಗಳ ಭಾಗವಾಗಿಯೇ ಈ ನ್ಯಾಯಾಲಯದ ಆದೇಶ ಹೊರಬಿದ್ದಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement