ಕರ್ನಾಟಕ ಸೇರಿ 4 ರಾಜ್ಯಗಳ ಎಸ್‌ಐಆರ್‌ ಅವಧಿ ವಿಸ್ತರಣೆ ಮಾಡಿದ ಚುನಾವಣಾ ಆಯೋಗ

ನವದೆಹಲಿ : ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆಯ ಅವಧಿಯನ್ನು ಚುನಾವಣಾ ಆಯೋಗವು ಬುಧವಾರ ವಿಸ್ತರಿಸಿದೆ.
ಕರ್ನಾಟಕ, ಪಂಜಾಬ್, ತೆಲಂಗಾಣ ಹಾಗೂ ದೆಹಲಿಯಲ್ಲಿ ಮನೆ-ಮನೆಗೆ ಭೇಟಿ, ಕರಡು ಮತದಾರರ ಪಟ್ಟಿ ಪ್ರಕಟಣೆ ಹಾಗೂ ಅಂತಿಮ ಮತದಾರರ ಪಟ್ಟಿ ಪ್ರಕಟಣೆಯ ದಿನಾಂಕಗಳಲ್ಲಿ ಬದಲಾವಣೆ ಮಾಡಲಾಗಿದೆ.
ಕರ್ನಾಟಕ: ಚುನಾವಣಾ ಆಯೋಗದ ಪ್ರಕಟಣೆಯಂತೆ  ಕರ್ನಾಟಕದಲ್ಲಿ ಜುಲೈ 29ರಂದು ಮುಕ್ತಾಯಗೊಳ್ಳಬೇಕಿದ್ದ ಬೂತ್ ಮಟ್ಟದ ಅಧಿಕಾರಿಗಳ ಮನೆ-ಮನೆ ಭೇಟಿ ಕಾರ್ಯಕ್ರಮವನ್ನು ಆಗಸ್ಟ್ 8ರ ವರೆಗೆ ವಿಸ್ತರಿಸಲಾಗಿದೆ. ಕರಡು ಮತದಾರರ ಪಟ್ಟಿಯನ್ನು ಆಗಸ್ಟ್ 17ರಂದು ಪ್ರಕಟಿಸಲಾಗುವುದು. ನಂತರ ಸೆಪ್ಟೆಂಬರ್ 16 ರವರೆಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಇರುತ್ತದೆ. ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಆಗಸ್ಟ್ 17 ರಿಂದ ಅಕ್ಟೋಬರ್ 15ರ ನಡುವೆ ವಿಲೇವಾರಿ ಮಾಡಲಾಗುತ್ತದೆ. ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 19ರಂದು ಪ್ರಕಟಿಸಲಾಗುತ್ತದೆ.
ದೆಹಲಿ: ದೆಹಲಿಯಲ್ಲಿ ಆಗಸ್ಟ್ 5ರಂದು ಪ್ರಕಟವಾಗಬೇಕಿದ್ದ ಕರಡು ಮತದಾರರ ಪಟ್ಟಿಯನ್ನು ಇದೀಗ ಆಗಸ್ಟ್ 17ರಂದು ಪ್ರಕಟಿಸಲಾಗುವುದು. ಜುಲೈ 29ರವರೆಗೆ ನಿಗದಿಯಾಗಿದ್ದ ಬೂತ್ ಮಟ್ಟದ ಅಧಿಕಾರಿಗಳ (BLO) ಮನೆ-ಮನೆ ಭೇಟಿ ಕಾರ್ಯಕ್ರಮವನ್ನು ಆಗಸ್ಟ್ 8ರವರೆಗೆ ವಿಸ್ತರಿಸಲಾಗಿದೆ. ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 19ರಂದು ಪ್ರಕಟಿಸಲಾಗುತ್ತದೆ.
ಪಂಜಾಬ್: ಪಂಜಾಬ್‌ನಲ್ಲಿ ಬೂತ್ ಮಟ್ಟದ ಅಧಿಕಾರಿಗಳ ಮನೆ-ಮನೆ ಭೇಟಿ ಕಾರ್ಯಕ್ರಮವು ಜುಲೈ 24ರಂದು ಮುಕ್ತಾಯಗೊಳ್ಳಬೇಕಾಗಿತ್ತು. ಇದೀಗ ಅದನ್ನು ಆಗಸ್ಟ್ 3ರವರೆಗೆ ವಿಸ್ತರಿಸಲಾಗಿದೆ. ಜುಲೈ 31ರಂದು ಪ್ರಕಟವಾಗಬೇಕಿದ್ದ ಕರಡು ಮತದಾರರ ಪಟ್ಟಿಯನ್ನು ಆಗಸ್ಟ್ 13ರಂದು ಪ್ರಕಟಿಸಲಾಗುತ್ತದೆ. ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 12ರಂದು ಪ್ರಕಟಿಸಲಾಗುತ್ತದೆ.
ತೆಲಂಗಾಣ: ತೆಲಂಗಾಣದಲ್ಲಿ ಮನೆ-ಮನೆ ಭೇಟಿ ಕಾರ್ಯಕ್ರಮವು ಆಗಸ್ಟ್ 3ರವರೆಗೆ ಮುಂದುವರಿಯಲಿದೆ. ಕರಡು ಮತದಾರರ ಪಟ್ಟಿಯನ್ನು ಆಗಸ್ಟ್ 10ರಂದು ಹಾಗೂ ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 12ರಂದು ಪ್ರಕಟಿಸಲಾಗುತ್ತದೆ.
ಚುನಾವಣಾ ಆಯೋಗವು ಮಂಗಳವಾರ ಹರಿಯಾಣ ಹಾಗೂ ಆಂಧ್ರಪ್ರದೇಶದಲ್ಲಿಯೂ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯ ಅವಧಿಯನ್ನು ವಿಸ್ತರಿಸಿತ್ತು.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement