ಬೆಂಗಳೂರು | ತರಗತಿಯಲ್ಲೇ ಕುಸಿದು ಬಿದ್ದು 12 ವರ್ಷದ ವಿದ್ಯಾರ್ಥಿ ಸಾವು : ಶಾಲಾ ಸಿಬ್ಬಂದಿ ನಿರ್ಲಕ್ಷ್ಯ ಕಾರಣ ಎಂದು ಕುಟುಂಬದ ಆರೋಪ

ಬೆಂಗಳೂರು: ನಗರದ ಬನ್ನೇರಘಟ್ಟ ರಸ್ತೆಯ ವೀವರ್ಸ್ ಕಾಲೋನಿಯ ಖಾಸಗಿ ಶಾಲೆಯೊಂದರಲ್ಲಿ 12 ವರ್ಷದ ವಿದ್ಯಾರ್ಥಿಯೊಬ್ಬ ತರಗತಿ ಕೊಠಡಿಯಲ್ಲೇ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಶಾಲಾ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಅಮೂಲ್ಯ ಸಮಯ ವ್ಯರ್ಥವಾಗಿದ್ದು, ತಕ್ಷಣ ಆಸ್ಪತ್ರೆಗೆ ಕರೆದೊಯ್ಯದೆ ವಿಳಂಬ ಮಾಡಿದ ಕಾರಣ ಮಗನ ಜೀವ ಉಳಿಯಲಿಲ್ಲ ಎಂದು ಮೃತ ಬಾಲಕನ ಕುಟುಂಬ ಆರೋಪ ಮಾಡಿದೆ.
ಮೃತನನ್ನು 5ನೇ ತರಗತಿ ವಿದ್ಯಾರ್ಥಿ ಅರ್ಹಾನ್ ಪಾಷಾ ಎಂದು ಗುರುತಿಸಲಾಗಿದೆ. ಕುಟುಂಬದವರ ಮಾಹಿತಿ ಪ್ರಕಾರ, ಅರ್ಹಾನ್ ತರಗತಿ ಕೊಠಡಿಗೆ ಪ್ರವೇಶಿಸುವ ಮುನ್ನ ತನ್ನ ಶಿಕ್ಷಕರಿಗೆ ತಾನು ತುಂಬಾ ಆಯಾಸಗೊಂಡಿದ್ದೇನೆ ಎಂದು ತಿಳಿಸಿದ್ದ. ಬಳಿಕ ತರಗತಿಯಲ್ಲಿ ತನ್ನ ಆಸನದಲ್ಲಿ ಕುಳಿತ ಕೆಲವೇ ಕ್ಷಣಗಳಲ್ಲಿ ಮಧ್ಯಾಹ್ನ ಸುಮಾರು 1 ಗಂಟೆ ವೇಳೆಗೆ ಬೆಂಚಿನ ಮೇಲೆಯೇ ಕುಸಿದು ಬಿದ್ದಿದ್ದಾನೆ.
ಈ ಘಟನೆ ಜೂನ್ 10ರಂದು ನಡೆದಿದ್ದರೂ, ಇತ್ತೀಚೆಗಷ್ಟೇ ಇದು ಸಾರ್ವಜನಿಕ ಗಮನಕ್ಕೆ ಬಂದಿದೆ. ಶಾಲೆಯ ಸಿಸಿಟಿವಿ ದೃಶ್ಯಾವಳಿಗಳನ್ನು ತಾವು ವೀಕ್ಷಿಸಿದ ನಂತರ ಹಲವು ಈ ಸಂಗತಿಗಳು ಬೆಳಕಿಗೆ ಬಂದಿವೆ ಎಂದು ಕುಟುಂಬದವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಟಿಎಂಸಿಗೆ ಮತ್ತೊಂದು ಆಘಾತ : ರಾಜ್ಯಸಭೆ ಸ್ಥಾನಕ್ಕೆ ನಟಿ ಕೋಯೆಲ್ ಮಲ್ಲಿಕ್ ರಾಜೀನಾಮೆ ; ಬಿಜೆಪಿ ಸೇರ್ಪಡೆ ವದಂತಿಗೆ ಬಲ

ಆರಂಭದಲ್ಲಿ ಮಗನು ಸಹಜ ಕಾರಣಗಳಿಂದ ಮೃತಪಟ್ಟಿದ್ದಾನೆ ಎಂದು ಕುಟುಂಬ ಭಾವಿಸಿದ್ದೆವು.  ಆದರೆ ಎರಡು ದಿನಗಳ ಹಿಂದೆ ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿದ ಬಳಿಕ ಶಾಲೆಯ ಪ್ರತಿಕ್ರಿಯೆಯಲ್ಲಿ ಹಲವು ಲೋಪಗಳು ಕಂಡುಬಂದಿವೆ ಎಂದು ಕುಟುಂಬ ಆರೋಪಿಸಿದೆ.
ಕುಟುಂಬದವರ ಆರೋಪದಂತೆ, ಅರ್ಹಾನ್ ಕುಸಿದು ಬಿದ್ದ ತಕ್ಷಣ ಆತನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯುವ ಬದಲು ಶಾಲಾ ಸಿಬ್ಬಂದಿ ಸುಮಾರು 45 ನಿಮಿಷಗಳ ಕಾಲ ಶಾಲೆಯೊಳಗೇ ಇರಿಸಿಕೊಂಡಿದ್ದರು. ಈ ಅವಧಿಯಲ್ಲಿ ಬಾಲಕನನ್ನು ಒಂದು ಕೊಠಡಿಯಿಂದ ಮತ್ತೊಂದು ಕೊಠಡಿಗೆ ಸ್ಥಳಾಂತರಿಸಲಾಗಿದ್ದು, ಇತರ ವಿದ್ಯಾರ್ಥಿಗಳಿಗೆ ಮೌನವಾಗಿರಲು ಸೂಚಿಸಲಾಗಿತ್ತು. ಆದರೆ ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುವ ಯಾವುದೇ ತಕ್ಷಣದ ಕ್ರಮ ಕೈಗೊಳ್ಳಲಿಲ್ಲ ಎಂದು ಕುಟುಂಬ ದೂರಿದೆ.

ಇದಲ್ಲದೆ, ಘಟನೆ ನಡೆದ ಸುಮಾರು 45 ನಿಮಿಷಗಳ ಬಳಿಕವೇ ಪೋಷಕರಿಗೆ ಮಾಹಿತಿ ನೀಡಲಾಗಿದೆ ಎಂದು ಕುಟುಂಬ ಆರೋಪಿಸಿದೆ. ಕುಟುಂಬದವರ ಮತ್ತೊಂದು ಆರೋಪದಂತೆ, ಶಾಲಾ ಆವರಣದಲ್ಲಿ ಶಾಲೆಯ ವಾಹನ ನಿಂತಿದ್ದರೂ ಅದನ್ನು ಬಳಸಲು ಸಿಬ್ಬಂದಿ ಅವಕಾಶ ನೀಡಲಿಲ್ಲ. ಪರಿಣಾಮವಾಗಿ, ಪೋಷಕರು ತಮ್ಮ ಮಗನನ್ನು ದ್ವಿಚಕ್ರ ವಾಹನದಲ್ಲೇ ಆಸ್ಪತ್ರೆಗೆ ಕರೆದೊಯ್ಯಬೇಕಾಯಿತು. ಆಸ್ಪತ್ರೆಗೆ ತಲುಪಿದ ಬಳಿಕ ವೈದ್ಯರು ಅರ್ಹಾನ್ ಮೃತಪಟ್ಟಿರುವುದಾಗಿ ಘೋಷಿಸಿದರು.
ಮಗ ಕುಸಿದು ಬಿದ್ದ ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರೆ ಆತನ ಜೀವ ಉಳಿಯಬಹುದಾಗಿತ್ತು ಎಂದು ಕುಟುಂಬ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಪ್ರಮುಖ ಸುದ್ದಿ :-   ಇಸ್ರೋ ತೊರೆದ 100ಕ್ಕೂ ಹೆಚ್ಚು ವಿಜ್ಞಾನಿಗಳು ; ಭಾರತದ ಬಾಹ್ಯಾಕಾಶ ಯೋಜನೆಗಳಿಗೆ ಸಂಕಷ್ಟ : ಕೇಂದ್ರದಿಂದ ಹೊಸ ಆದೇಶ

ತುರ್ತು ವೈದ್ಯಕೀಯ ನೆರವು ಒದಗಿಸುವಲ್ಲಿ ವಿಳಂಬ ಮಾಡಿರುವುದು ಹಾಗೂ ಶಾಲಾ ಆಡಳಿತದ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ ಎಂದು ಆರೋಪಿಸಿ, ಈ ಕುರಿತು ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿದೆ.
ಈ ಸಂಬಂಧ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ (Unnatural Death Report) ದಾಖಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಹಾಗೂ ಶಾಲೆಯ ಸಿಸಿಟಿವಿ ದೃಶ್ಯಾವಳಿಗಳಲ್ಲಿ ದಾಖಲಾಗಿರುವ ಘಟನೆಗಳ ಕ್ರಮವನ್ನು ಪರಿಶೀಲಿಸಿದ ಬಳಿಕ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement