ಸಿಜೆಪಿ ‘ಚಲೋ ಸಂಸತ್’ ಮೆರವಣಿಗೆಗೆ ತಡೆ: ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಪ್ರಯೋಗ, ಲಾಠಿ ಚಾರ್ಜ್‌

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನವಾದ ಸೋಮವಾರ, ಪೊಲೀಸ್ ಅನುಮತಿ ನಿರಾಕರಿಸಿದ್ದರೂ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಬೆಂಬಲಿಗರು ‘ಚಲೋ ಸಂಸತ್’ ಪ್ರತಿಭಟನೆಗಾಗಿ ದೆಹಲಿಯಲ್ಲಿ ಸೇರಿದ್ದರಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಪ್ರತಿಭಟನಾಕಾರರನ್ನು ಚದುರಿಸಲು ಭದ್ರತಾ ಪಡೆಗಳು ಟಿಯರ್‌ ಗ್ಯಾಸ್‌ ಶೆಲ್‌ಗಳನ್ನು ಸಿಡಿಸಿದ್ದು, ಲಾಠಿ ಪ್ರಹಾರವನ್ನೂ ನಡೆಸಿದರು.
ಮುಖ್ಯವಾಗಿ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿ ಜಂತರ್ ಮಂತರ್ ಪ್ರತಿಭಟನಾ ಸ್ಥಳದಲ್ಲಿ ಸೇರಿದ್ದರು. ನೀಟ್‌ (NEET) ಪರೀಕ್ಷೆಯಲ್ಲಿ ನಡೆದಿತ್ತೆಂದು ಆರೋಪಿಸಲಾದ ಅಕ್ರಮಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಅವರು ಸಂಸತ್ತಿನತ್ತ ಮೆರವಣಿಗೆ ನಡೆಸಲು ಮುಂದಾಗಿದ್ದರು.
ಪ್ರತಿಭಟನಾಕಾರರು ಬ್ಯಾರಿಕೇಡ್‌ಗಳನ್ನು ದಾಟಲು ಯತ್ನಿಸಿದ ವೇಳೆ ಪ್ರತಿಭಟನಾಕಾರರು ಹಾಗೂ ಪೊಲೀಸ್ ಸಿಬ್ಬಂದಿ ನಡುವೆ ನೂಕಾಟ-ತಳ್ಳಾಟ ನಡೆದಿದ್ದು, ಎರಡೂ ಕಡೆಯ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಮಧ್ಯ ದೆಹಲಿಯ ಕೆಲವು ಪ್ರದೇಶಗಳಲ್ಲಿ ಮೊಬೈಲ್ ಇಂಟರ್‌ನೆಟ್ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.

ಈ ಮಧ್ಯೆ, ಸಿಜೆಪಿ ತನ್ನ ಬೆಂಬಲಿಗರಿಗೆ ಶಾಂತಿ ಕಾಪಾಡುವಂತೆ ಮನವಿ ಮಾಡಿತು. “ನಿಮ್ಮನ್ನು ಕೆಲವು ಸ್ಥಳಗಳಲ್ಲಿ ತಡೆದಿದ್ದರೂ ಶಾಂತವಾಗಿರಿ. ಶಾಂತಿ ಮತ್ತು ಪ್ರೀತಿಯ ಮೂಲಕವೇ ನಾವು ಗೆಲ್ಲುತ್ತೇವೆ,” ಎಂದು ಪಕ್ಷವು ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿತು.
ದೆಹಲಿ ಪೊಲೀಸರು ಈ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ್ದರು. ಜೊತೆಗೆ ದೊಡ್ಡ ಪ್ರಮಾಣದ ಸಭೆ, ಮೆರವಣಿಗೆ ಮತ್ತು ಪ್ರತಿಭಟನೆಗಳಿಗೆ ನಿಷೇಧ ಹೇರಲಾಗಿತ್ತು. “ಪೂರ್ವಾನುಮತಿ ಪಡೆದು ಜಂತರ್ ಮಂತರ್‌ನಲ್ಲಿ ನಡೆಯುವ ನಿಗದಿತ ಪ್ರತಿಭಟನೆಗಳನ್ನು ಹೊರತುಪಡಿಸಿ, ಪ್ರತಿಭಟನಾ ಮೆರವಣಿಗೆಗಳು, ಸಭೆಗಳು, ಐದು ಅಥವಾ ಅದಕ್ಕಿಂತ ಹೆಚ್ಚು ಜನರ ಗುಂಪುಗೂಡುವಿಕೆ ಸಂಪೂರ್ಣ ನಿಷೇಧಿಸಲಾಗಿದೆ,” ಎಂದು ದೆಹಲಿ ಪೊಲೀಸರು ಎಕ್ಸ್ (X)ನಲ್ಲಿ ಪ್ರಕಟಿಸಿದ್ದರು.
“ಕಾನೂನನ್ನು ಗೌರವಿಸಿ, ಅನುಮತಿಯಿಲ್ಲದ ಯಾವುದೇ ಪ್ರತಿಭಟನೆ ಅಥವಾ ಮೆರವಣಿಗೆಯಲ್ಲಿ ಭಾಗವಹಿಸಬೇಡಿ ಹಾಗೂ ಸಾರ್ವಜನಿಕ ಶಾಂತಿ, ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕರಿಸಿ” ಎಂದು ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದರು.

ಪ್ರಮುಖ ಸುದ್ದಿ :-   ಸಿಜೆಪಿ ನಾಯಕರ ಜೊತೆ ಸೌಹಾರ್ದಯುತ ಮಾತುಕತೆ ಬಳಿಕ ಧರಣಿ ಅಂತ್ಯಗೊಳಿಸುವಂತೆ ಕೇಂದ್ರ ಸರ್ಕಾರದ ಮನವಿ

ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರ ಪರದಾಟ
ಭದ್ರತಾ ಕಾರಣಗಳಿಂದ ರಾಜೀವ ಚೌಕ್, ಜನಪಥ, ಪಟೇಲ್ ಚೌಕ್, ಸೆಂಟ್ರಲ್ ಸೆಕ್ರೆಟೇರಿಯಟ್ ಮತ್ತು ಸೇವಾ ತೀರ್ಥ ಸೇರಿ ಐದು ಮೆಟ್ರೋ ನಿಲ್ದಾಣಗಳನ್ನು ಮುಂದಿನ ಆದೇಶದವರೆಗೆ ಮುಚ್ಚಲಾಗಿದ್ದರಿಂದ ರಾಜಧಾನಿಯ ಹಲವು ಭಾಗಗಳಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತು. ನೂರಾರು ಪ್ರಯಾಣಿಕರು ಮೆಟ್ರೋ ಸೇವೆ ಸ್ಥಗಿತಗೊಂಡ ಪರಿಣಾಮ ಸಿಲುಕಿಕೊಂಡಿದ್ದು, ಹಲವರು ತಮ್ಮ ಗಮ್ಯಸ್ಥಾನ ತಲುಪಲು ಪರ್ಯಾಯ ಹಾಗೂ ದೀರ್ಘ ಮಾರ್ಗಗಳನ್ನು ಬಳಸಬೇಕಾಯಿತು. ದೆಹಲಿ ನಗರದ ಅತ್ಯಂತ ಜನನಿಬಿಡ ಇಂಟರ್‌ಚೇಂಜ್ ನಿಲ್ದಾಣಗಳಲ್ಲಿ ಒಂದಾದ ರಾಜೀವ ಚೌಕ್ ಮೆಟ್ರೋ ನಿಲ್ದಾಣದಲ್ಲಿ ಪ್ರವೇಶ ಮತ್ತು ನಿರ್ಗಮನ ದ್ವಾರಗಳು ಮುಚ್ಚಲ್ಪಟ್ಟಿದ್ದರಿಂದ ಪ್ರಯಾಣಿಕರು ದಟ್ಟವಾಗಿ ಗುಂಪುಗೂಡಿರುವ ದೃಶ್ಯ ಕಂಡುಬಂತು.

ಸಿಜೆಪಿ ಪ್ರತಿಭಟನೆಗೆ ಕಾರಣ
ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿಯನ್ನು ಅಭಿಜೀತ್ ದೀಪ್ಕೆ ಅವರು ಮೇ ತಿಂಗಳಲ್ಲಿ ವ್ಯಂಗ್ಯಾತ್ಮಕ ಡಿಜಿಟಲ್ ಸಂಘಟನೆಯಾಗಿ ಆರಂಭಿಸಿದ್ದರು. ಸ್ಥಾಪನೆಯಾದ ಕೆಲವೇ ದಿನಗಳಲ್ಲಿ ಸಿಜೆಪಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಜನಪ್ರಿಯತೆ ಗಳಿಸಿ, ಲಕ್ಷಾಂತರ ಅನುಯಾಯಿಗಳನ್ನು ಸೆಳೆದಿತ್ತು. ವಿವಿಧ ವಿಪಕ್ಷಗಳ ರಾಜಕಾರಣಿಗಳು, ಸಾಮಾಜಿಕ ಹೋರಾಟಗಾರರು, ಕಲಾವಿದರು ಹಾಗೂ ಕ್ರೀಡಾಪಟುಗಳೂ ಈ ಸಂಘಟನೆಗೆ ಬೆಂಬಲ ಸೂಚಿಸಿದ್ದರು.
30 ವರ್ಷದ ಅಭಿಜೀತ ದೀಪ್ಕೆ ಕಳೆದ ಎರಡು ವರ್ಷಗಳಿಂದ ಅಮೆರಿಕದಲ್ಲಿ ವಾಸವಾಗಿದ್ದು, ಜೂನ್ ತಿಂಗಳಲ್ಲಿ ಭಾರತಕ್ಕೆ ಮರಳಿದ್ದರು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ನಡೆದಿತ್ತೆಂದು ಆರೋಪಿಸಲಾದ ಅಕ್ರಮಗಳ ವಿರುದ್ಧ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆಗಳನ್ನು ಆಗ್ರಹಿಸಿ ದೆಹಲಿಯಲ್ಲಿ ಪ್ರತಿಭಟನೆಗೆ ಅವರು ನೇತೃತ್ವ ವಹಿಸಿದ್ದರು.

ಪ್ರಮುಖ ಸುದ್ದಿ :-   ʼಆಪರೇಷನ್ ಸಿಂಧೂರʼದಲ್ಲಿ ಭಾರತಕ್ಕೆ ಭಾರಿ ಯಶಸ್ಸು; ತನ್ನ ಸೋಲು ಮುಚ್ಚಿಕೊಳ್ಳಲು ಸುಳ್ಳು ಕಥೆ ಕಟ್ಟಿದ ಪಾಕ್‌ ಸೇನೆ : ನೂರೀನ್ ನಿಯಾಝಿ

ಜೂನ್ 28ರಂದು ಸಮಾಜ ಸೇವಕ ಸೋನಂ ವಾಂಗ್ಚುಕ್ ಜಂತರ್ ಮಂತರ್‌ನಲ್ಲಿ ಅನಿರ್ದಿಷ್ಟಾವಧಿಯ ಉಪವಾಸ ಸತ್ಯಾಗ್ರಹ ಆರಂಭಿಸಿ ಈ ಹೋರಾಟಕ್ಕೆ ಕೈಜೋಡಿಸಿದ್ದರು. ಆದರೆ, ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಕಳೆದ ಶನಿವಾರ ಅವರನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದರು.
ಆಸ್ಪತ್ರೆಯಿಂದ ಸೋಮವಾರ ಬಿಡುಗಡೆ ಮಾಡಿದ ಕೈಬರಹದ ಹೇಳಿಕೆಯಲ್ಲಿ ವಾಂಗ್ಚುಕ್, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಶಿಕ್ಷಣ ವ್ಯವಸ್ಥೆಯ ವೈಫಲ್ಯಗಳ ಹೊಣೆಯನ್ನು ಸರ್ಕಾರ ಅಧಿಕೃತವಾಗಿ ಒಪ್ಪಿಕೊಳ್ಳುವವರೆಗೆ ಅಥವಾ ವಿವಿಧ ರಾಜಕೀಯ ಪಕ್ಷಗಳ ಸಂಸದರು ಈ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸುವುದಾಗಿ ಭರವಸೆ ನೀಡುವವರೆಗೆ ತಮ್ಮ ಉಪವಾಸವನ್ನು ಅಂತ್ಯಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement