ನೀಟ್‌ ಪೇಪರ್ ಲೀಕ್ ವಿವಾದ ; ಶಿಕ್ಷಣ ಇಲಾಖೆ ಕಾರ್ಯದರ್ಶಿ ಹುದ್ದೆಯಿಂದ ವಿನೀತ್ ಜೋಶಿ ಎತ್ತಂಗಡಿ, ಇಬ್ಬರು ಕಾರ್ಯದರ್ಶಿಗಳ ನೇಮಕ

ನವದೆಹಲಿ: ದೇಶಾದ್ಯಂತ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ವಿರುದ್ಧ ಪ್ರತಿಭಟನೆಗಳು ಮುಂದುವರಿಯುತ್ತಿರುವ ನಡುವೆಯೇ ಕೇಂದ್ರ ಸರ್ಕಾರ ಶಿಕ್ಷಣ ಸಚಿವಾಲಯದ ಉನ್ನತ ಅಧಿಕಾರಿಯೊಬ್ಬರನ್ನು ಬದಲಾಯಿಸಿದೆ. ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿಯಾಗಿದ್ದ ವಿನೀತ್ ಜೋಶಿ ಅವರನ್ನು ಹುದ್ದೆಯಿಂದ ವರ್ಗಾಯಿಸಲಾಗಿದ್ದು, ಅವರ ಸ್ಥಾನಕ್ಕೆ ನರೇಶಪಾಲ ಗಂಗ್ವಾರ್ ಅವರನ್ನು ನೇಮಿಸಲಾಗಿದೆ ಎಂದು ಕೇಂದ್ರ ಸರ್ಕಾರ ಗುರುವಾರ ತಡರಾತ್ರಿ ಪ್ರಕಟಿಸಿದ  ಅಧಿಸೂಚನೆಯಲ್ಲಿ ತಿಳಿಸಿದೆ. ಅಲ್ಲದೆ, ಟಿ.ಕೆ. ಅನಿಲಕುಮಾರ ಅವರನ್ನು ನೂತನ ಶಾಲಾ ಶಿಕ್ಷಣ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
ಮಣಿಪುರ ಕೇಡರ್‌ನ 1992ರ ಬ್ಯಾಚ್‌ನ ಐಎಎಸ್ ಅಧಿಕಾರಿ ವಿನೀತ್ ಜೋಶಿ ಅವರನ್ನು ಇದೀಗ ಪಂಚಾಯತ್ ರಾಜ್ ಸಚಿವಾಲಯದ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಪಶ್ಚಿಮ ಬಂಗಾಳ ಕೇಡರ್‌ನ 1994ರ ಬ್ಯಾಚ್‌ನ ಐಎಎಸ್ ಅಧಿಕಾರಿ ನರೇಶಪಾಲ ಗಂಗ್ವಾರ್ ಅವರು ಈ ಹಿಂದೆ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯ ಕಾರ್ಯದರ್ಶಿಯಾಗಿದ್ದರು.

ಯಾರು ಈ ವಿನೀತ್ ಜೋಶಿ?
ವಿನೀತ್ ಜೋಶಿ ಅವರು ಐಐಟಿ ಕಾನ್ಪುರದಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್ ಪದವಿ ಹಾಗೂ ನವದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಫಾರೆನ್ ಟ್ರೇಡ್ (IIFT)ನಿಂದ ಎಂ.ಬಿ.ಎ ಪದವಿ ಪಡೆದಿದ್ದಾರೆ.
ಅವರು 2025ರ ಜನವರಿಯಲ್ಲಿ ಶಿಕ್ಷಣ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಬಳಿಕ 2025ರ ಏಪ್ರಿಲ್ 11ರಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗದ (UGC) ಅಧ್ಯಕ್ಷರ ಹೆಚ್ಚುವರಿ ಜವಾಬ್ದಾರಿಯನ್ನೂ ನೀಡಲಾಗಿತ್ತು.
ಇದಕ್ಕೂ ಮೊದಲು ಅವರು ಮಣಿಪುರದ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಜೊತೆಗೆ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA)ಯ ಮೊದಲ ಮಹಾನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. ನೀಟ್ ಹಾಗೂ ಜೆಇಇ ಸೇರಿದಂತೆ ದೇಶದ ಪ್ರಮುಖ ಪ್ರವೇಶ ಪರೀಕ್ಷೆಗಳನ್ನು ನಡೆಸುವ ಹೊಣೆಗಾರಿಕೆ ಎನ್‌ಟಿಎಗೆ ಸೇರಿದೆ.
ವಿನೀತ್ ಜೋಶಿ ಅವರು ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (CBSE) ಅಧ್ಯಕ್ಷರಾಗಿ ಎರಡು ಪ್ರತ್ಯೇಕ ಅವಧಿಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಮೊದಲ ಬಾರಿ 2010ರ ಫೆಬ್ರವರಿಯಿಂದ 2014ರ ನವೆಂಬರ್‌ವರೆಗೆ ಹಾಗೂ ಎರಡನೇ ಬಾರಿ 2022ರ ಫೆಬ್ರವರಿಯಿಂದ 2022ರ ಆಗಸ್ಟ್‌ವರೆಗೆ ಸಿಬಿಎಸ್‌ಇ ಅಧ್ಯಕ್ಷರಾಗಿದ್ದರು.
ಸಚಿವಾಲಯದಲ್ಲಿ ಮತ್ತಷ್ಟು ಬದಲಾವಣೆ
ಈ ಬದಲಾವಣೆ ದೊಡ್ಡ ಮಟ್ಟದ ಆಡಳಿತಾತ್ಮಕ ಪುನರ್‌ವಿನ್ಯಾಸದ ಭಾಗವಾಗಿದ್ದು, ಟಿ.ಕೆ. ಅನಿಲಕುಮಾರ ಅವರನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಹೊಸ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

ಪ್ರಮುಖ ಸುದ್ದಿ :-   ಮಳೆರಾಯನ ಆರ್ಭಟಕ್ಕೆ ತತ್ತರಿಸಿದ ಗುಜರಾತ್: ಹಲವು ನಗರಗಳು ಜಲಾವೃತ, ಗ್ರಾಮಗಳ ಸಂಪರ್ಕ ಕಡಿತ, ನೂರಾರು ಜನರ ಸ್ಥಳಾಂತರ

ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗೆ ಫಾಸ್ಟ್‌ಟ್ರಾಕ್ ನ್ಯಾಯಾಲಯ
ನೀಟ್ ಸೋರಿಕೆ ವಿರೋಧಿ ಪ್ರತಿಭಟನೆಗಳ ನಡುವೆ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಭರವಸೆ ನೀಡಿದ ಕೆಲವೇ ಗಂಟೆಗಳಲ್ಲಿ ದೆಹಲಿ ಹೈಕೋರ್ಟ್ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ವಿಚಾರಣೆಗೆ ವಿಶೇಷ ಫಾಸ್ಟ್‌ಟ್ರಾಕ್ ನ್ಯಾಯಾಲಯವನ್ನು ರಚಿಸಿದೆ.
ಇದೇ ವೇಳೆ, ದೆಹಲಿಯಲ್ಲಿ ವ್ಯಂಗ್ಯಾತ್ಮಕ ರಾಜಕೀಯ ಸಂಘಟನೆಯಾದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ನೇತೃತ್ವದಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದು, ಸಿಜೆಪಿ ನಿಯೋಗವು ಇಂದು, ಶುಕ್ರವಾರ ಮಧ್ಯಾಹ್ನ 12:30ಕ್ಕೆ ಕೇಂದ್ರ ಸಚಿವರನ್ನು ಭೇಟಿ ಮಾಡುವ ಸಾಧ್ಯತೆಯಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಹೊಸ ಫಾಸ್ಟ್‌ಟ್ರಾಕ್ ನ್ಯಾಯಾಲಯವು ಸಾರ್ವಜನಿಕ ಪರೀಕ್ಷೆಗಳು (ಅನ್ಯಾಯ ವಿಧಾನಗಳ ತಡೆ) ಕಾಯ್ದೆ-2024 ಹಾಗೂ ಅದಕ್ಕೆ ಸಂಬಂಧಿಸಿದ ಅಪರಾಧ ಪ್ರಕರಣಗಳ ವಿಚಾರಣೆ ನಡೆಸಲಿದೆ. ಈ ಕಾಯ್ದೆಯಡಿ ಈಗಾಗಲೇ ದಾಖಲಾಗಿರುವ ಎಲ್ಲ ಬಾಕಿ ಪ್ರಕರಣಗಳನ್ನು ತಕ್ಷಣವೇ ಹೊಸ ನ್ಯಾಯಾಲಯಕ್ಕೆ ವರ್ಗಾಯಿಸಲಾಗುತ್ತದೆ. ಪರೀಕ್ಷೆಗಳಲ್ಲಿ ಅಕ್ರಮ ಎಸಗಿದರೆ ಗರಿಷ್ಠ ಐದು ವರ್ಷಗಳ ಜೈಲು ಶಿಕ್ಷೆ ಮತ್ತು 10 ಲಕ್ಷ ರೂಪಾಯಿ ದಂಡ ವಿಧಿಸಲು ಈ ಕಾಯ್ದೆಯಲ್ಲಿ ಅವಕಾಶವಿದೆ.
ಗುರುವಾರ ರಾತ್ರಿ ವಿಡಿಯೊ ಸಂದೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, “ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಇನ್ನಷ್ಟು ಕಠಿಣ ಕ್ರಮಗಳನ್ನು ಸಚಿವ ಸಂಪುಟ ಸಭೆಯಲ್ಲಿ ಘೋಷಿಸಲಾಗುವುದು” ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   'ಪ್ರಬಲ ಎಲ್ ನಿನೋ' ನಡುವೆಯೂ ಭಾರತದ ಶೇ.95 ಭಾಗ ಮೋಡಗಳಿಂದ ಆವೃತ : ಮಳೆಗಾಲದ ಹಿಂದಿನ ವೈಜ್ಞಾನಿಕ ರಹಸ್ಯವೇನು?

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement