ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಗರಣದ ಬಳಿಕ ಎನ್‌ಟಿಎ ಪುನರ್ರಚನೆ: 47 ಅಧಿಕಾರಿಗಳಿಗೆ ಗೇಟ್‌ಪಾಸ್‌, ಇನ್ನಷ್ಟು ತಲೆದಂಡ ಸಾಧ್ಯತೆ

ನವದೆಹಲಿ: ನೀಟ್ (ಯುಜಿ) ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ನಂತರ ಶಿಕ್ಷಣ ವ್ಯವಸ್ಥೆಯಲ್ಲಿ ಪಾರದರ್ಶಕ ವ್ಯವಸ್ಥೆಗೆ ಒತ್ತಾಯಿಸಿ ದೆಹಲಿಯಲ್ಲಿ ನಡೆಸುತ್ತಿದ್ದ ತಮ್ಮ ಉಪವಾಸ ಸತ್ಯಾಗ್ರಹವನ್ನು ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್‌ ಅವರು ಅಂತ್ಯಗೊಳಿಸಿದ ಬೆನ್ನಲ್ಲೇ  ಹಾಗೂ ಸಿಜೆಪಿ ಪ್ರತಿಭಟನೆ ಮಧ್ಯೆ ಕೇಂದ್ರ ಸರ್ಕಾರವು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ತನ್ನ ಕಾರ್ಯವೈಖರಿಯಲ್ಲಿ ಮಹತ್ವದ ಬದಲಾವಣೆಗಳಿಗೆ ಮುಂದಾಗಿದೆ. ಶುಕ್ರವಾರ ಸಂಸ್ಥೆಯ 47 ಅಧಿಕಾರಿಗಳ ಸೇವೆಯನ್ನು ರದ್ದುಪಡಿಸಲಾಗಿದ್ದು, ಇನ್ನೂ ಹಲವರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಎನ್‌ಟಿಎಯಲ್ಲಿ ನಡೆಯುತ್ತಿರುವ ವ್ಯಾಪಕ ಪುನರ್ರಚನೆ ಮತ್ತು ಸುಧಾರಣಾ ಪ್ರಕ್ರಿಯೆಯ ಭಾಗವಾಗಿ, ಕೆಲ ಅಧಿಕಾರಿಗಳ ವಿರುದ್ಧ ಕಾನೂನು ಹಾಗೂ ಕ್ರಿಮಿನಲ್ ಪ್ರಕರಣಗಳನ್ನೂ ದಾಖಲಿಸಲು ಸಿದ್ಧತೆ ನಡೆದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸುಧಾರಣಾತ್ಮಕ ಕ್ರಮಗಳನ್ನು ಜಾರಿಗೆ ತರಲಾಗುವುದು ಎಂದು ಮೂಲಗಳು ತಿಳಿಸಿವೆ.
ಇದರ ಜೊತೆಗೆ, ಎನ್‌ಟಿಎಯಲ್ಲಿ ಹೊಸ ಹುದ್ದೆಗಳ ಭರ್ತಿಗಾಗಿ ಜಾಹೀರಾತನ್ನೂ ಪ್ರಕಟಿಸಲಾಗಿದೆ. ಸಂಸ್ಥೆಯ ಔಟ್‌ಸೋರ್ಸಿಂಗ್ ವ್ಯವಸ್ಥೆಯಲ್ಲಿಯೂ ಸಂಪೂರ್ಣ ಬದಲಾವಣೆ ತರಲು ಸರ್ಕಾರ ನಿರ್ಧರಿಸಿದೆ.

ಎನ್‌ಟಿಎ ದೇಶದ ವಿವಿಧ ವಿಶ್ವವಿದ್ಯಾಲಯಗಳು ಮತ್ತು ಸರ್ಕಾರಿ ಸಂಸ್ಥೆಗಳ ಪರವಾಗಿ ನೀಟ್ (ಯುಜಿ), ರಾಷ್ಟ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆ (NTET), ಜೆಇಇ (ಮೇನ್), ಸಿಯುಇಟಿ (ಯುಜಿ ಮತ್ತು ಪಿಜಿ), ಯುಜಿಸಿ-ನೆಟ್, ರಾಷ್ಟ್ರೀಯ ಸಾಮಾನ್ಯ ಪ್ರವೇಶ ಪರೀಕ್ಷೆ (NCET), ಐಸಿಎಆರ್ ಎಐಇಇಎ (ಪಿಜಿ) ಸೇರಿದಂತೆ ಅನೇಕ ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಗಳನ್ನು ನಡೆಸುವ ಜವಾಬ್ದಾರಿಯನ್ನು ಹೊಂದಿದೆ.
ಆದರೆ, ನೀಟ್ (ಯುಜಿ) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಬಳಿಕ ಎನ್‌ಟಿಎ ಕಾರ್ಯವೈಖರಿ ತೀವ್ರ ಟೀಕೆಗೆ ಗುರಿಯಾಗಿದೆ. ಸಂಸ್ಥೆಯನ್ನು ಸಂಪೂರ್ಣವಾಗಿ ಪುನರ್ರಚಿಸಬೇಕು ಎಂಬ ಬೇಡಿಕೆಗಳು ಕೇಳಿಬಂದಿದ್ದು, ಕೆಲವರು ಎನ್‌ಟಿಎಯನ್ನೇ ರದ್ದುಪಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಪರೀಕ್ಷೆಗಳನ್ನು ನ್ಯಾಯಸಮ್ಮತವಾಗಿ ನಡೆಸುವಲ್ಲಿ ಸಂಸ್ಥೆ ವಿಫಲವಾಗಿದೆ ಎಂದು ಟೀಕಿಸಲಾಗುತ್ತಿದೆ. ಆದರೆ, ಎನ್‌ಟಿಎ ರದ್ದುಪಡಿಸುವ ಯಾವುದೇ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದು ಕೇಂದ್ರ ಸರ್ಕಾರ ಮತ್ತೊಮ್ಮೆ ಸ್ಪಷ್ಟಪಡಿಸಿದೆ.

ಪ್ರಮುಖ ಸುದ್ದಿ :-   ಭೀಕರ ಭೂಕುಸಿತ: ಮಣ್ಣಿನಡಿ ಹೂತುಹೋದ ಕ್ಯಾಬ್‌, 13 ಮಂದಿ ದುರ್ಮರಣ

ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಕಠಿಣ ಕಾನೂನುಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ
ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಸಂಸತ್ ಭವನದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗೆ ಕಠಿಣ ಶಿಕ್ಷೆ ವಿಧಿಸುವ ಮಸೂದೆಗೆ ಅನುಮೋದನೆ ನೀಡಲಾಗಿದೆ. ಈ ಮಸೂದೆಯನ್ನು ಮುಂದಿನ ವಾರ ಸಂಸತ್ತಿನಲ್ಲಿ ಮಂಡನೆಯಾಗಲಿದೆ.
ಈ ಮಸೂದೆಯ ಮೂಲಕ ಸಾರ್ವಜನಿಕ ಪರೀಕ್ಷೆಗಳು (ಅನ್ಯಾಯ ಮಾರ್ಗಗಳ ತಡೆ) ಕಾಯ್ದೆ–2024ಕ್ಕೆ ತಿದ್ದುಪಡಿ ತರಲಾಗುತ್ತಿದೆ. ಸಂಘಟಿತ ರೀತಿಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ನಡೆಸಿದರೆ ಗರಿಷ್ಠ 10 ವರ್ಷಗಳ ಜೈಲು ಶಿಕ್ಷೆ ಹಾಗೂ ₹10 ಕೋಟಿ ವರೆಗೆ ದಂಡ ವಿಧಿಸುವ ಅವಕಾಶವನ್ನು ಮಸೂದೆ ಒಳಗೊಂಡಿದೆ.

‘ಪ್ರಶ್ನೆಪತ್ರಿಕೆ ಸೋರಿಕೆ ಅತ್ಯಂತ ನೋವಿನ ಸಂಗತಿ’ ಎಂದ ಪ್ರಧಾನಿ ಮೋದಿ
ಗುರುವಾರ ರಾತ್ರಿ ದೇಶವನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಪ್ರಶ್ನೆಪತ್ರಿಕೆ ಸೋರಿಕೆ ಘಟನೆಗಳು ಅತ್ಯಂತ ನೋವಿನ ಸಂಗತಿ ಎಂದು ಹೇಳಿದ್ದರು. ಈ ವಿಷಯ ಸಣ್ಣದಲ್ಲ ಎಂಬ ಅರಿವು ಸರ್ಕಾರಕ್ಕಿದೆ ಎಂದು ಅವರು ತಿಳಿಸಿದ್ದರು.
“ಶುಕ್ರವಾರ ಸಚಿವ ಸಂಪುಟ ಸಭೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ವಿಚಾರವನ್ನು ಚರ್ಚಿಸಲಾಗುವುದು. ಸಚಿವ ಸಂಪುಟದ ಸಹೋದ್ಯೋಗಿಗಳ ಸಲಹೆ ಪಡೆದು ಮುಂದಿನ ಕ್ರಮವನ್ನು ಅಂತಿಮಗೊಳಿಸಲಾಗುವುದು” ಎಂದು ಮೋದಿ ಹೇಳಿದ್ದರು.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಅವರು, “ಪ್ರಕರಣದ ಆರೋಪಿಗಳನ್ನು ಬಂಧಿಸಲಾಗಿದೆ. ಅವರು ಈಗ ಜೈಲಿನಲ್ಲಿದ್ದಾರೆ. ಆದರೆ ನಮ್ಮ ಅತ್ಯಂತ ದೊಡ್ಡ ಜವಾಬ್ದಾರಿ ವಿದ್ಯಾರ್ಥಿಗಳ ಒಂದು ವರ್ಷ ವ್ಯರ್ಥವಾಗದಂತೆ ನೋಡಿಕೊಳ್ಳುವುದಾಗಿತ್ತು. ಆದ್ದರಿಂದ ಮರುಪರೀಕ್ಷೆಯನ್ನು ತ್ವರಿತವಾಗಿ ನಡೆಸುವುದು ಅಗತ್ಯವಾಗಿತ್ತು. ಸರ್ಕಾರ ತನ್ನ ಎಲ್ಲಾ ಸಂಪನ್ಮೂಲಗಳನ್ನು ಬಳಸಿ 22 ಲಕ್ಷ ವಿದ್ಯಾರ್ಥಿಗಳು ಮರುಪರೀಕ್ಷೆಯಲ್ಲಿ ಭಾಗವಹಿಸುವಂತೆ ಯಶಸ್ವಿಯಾಗಿ ವ್ಯವಸ್ಥೆ ಮಾಡಿದೆ” ಎಂದು ಹೇಳಿದರು.

ಪ್ರಮುಖ ಸುದ್ದಿ :-   ಸಿಜೆಪಿ ಪ್ರತಿಭಟನೆ ವೇಳೆ ಸುಳ್ಳು ಸುದ್ದಿ ಹರಡುತ್ತಿದ್ದ 480ಕ್ಕೂ ಹೆಚ್ಚು ಪಾಕಿಸ್ತಾನದ ಸೋಷಿಯಲ್ ಮೀಡಿಯಾ ಖಾತೆಗಳು ಪತ್ತೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement