ಅಭಿಜೀತ್ ದೀಪ್ಕೆಗೆ ಟೈಫಾಯ್ಡ್ ; ಆದ್ರೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ಹೋರಾಟ ನಿಲ್ಲಲ್ಲ ಎಂದ ಸಿಜೆಪಿ ಸಂಸ್ಥಾಪಕ

ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ತಮಗೆ ಟೈಫಾಯ್ಡ್ ಸೋಂಕು ತಗುಲಿರುವುದಾಗಿ ಶನಿವಾರ ಮಾಹಿತಿ ನೀಡಿದ್ದಾರೆ. ಆದರೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳು ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ (X) ನಲ್ಲಿ ಹಂಚಿಕೊಂಡಿರುವ ವಿಡಿಯೊ ಸಂದೇಶದಲ್ಲಿ ಮಾತನಾಡಿದ ಅವರು, ತಮ್ಮ ಆರೋಗ್ಯ ಸಮಸ್ಯೆಯಿಂದ ಹೋರಾಟಕ್ಕೆ ಯಾವುದೇ ಅಡ್ಡಿಯಾಗುವುದಿಲ್ಲ ಎಂದು ಹೇಳಿದ್ದಾರೆ.”ನನಗೆ ಟೈಫಾಯ್ಡ್ ದೃಢಪಟ್ಟಿದೆ. ಆದರೂ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ,” ಎಂದು ದೀಪ್ಕೆ ಹೇಳಿದ್ದಾರೆ.
ದೇಶದ ವಿವಿಧ ಭಾಗಗಳಲ್ಲಿ ನಡೆದ ಪ್ರತಿಭಟನೆಗಳ ಬಳಿಕ ಮತ್ತೊಂದು ವಿಡಿಯೊ ಸಂದೇಶ ಬಿಡುಗಡೆ ಮಾಡಿದ ದೀಪ್ಕೆ, ಶಾಂತಿಯುತವಾಗಿ ಪ್ರತಿಭಟನೆಯಲ್ಲಿ ಭಾಗವಹಿಸಿದ ಎಲ್ಲಾ ಕಾರ್ಯಕರ್ತರಿಗೆ ಧನ್ಯವಾದ ಸಲ್ಲಿಸಿದರು. “ದೇಶಾದ್ಯಂತ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ ಎಲ್ಲಾ ಕಾರ್ಯಕರ್ತರಿಗೆ ಹೃತ್ಪೂರ್ವಕ ಧನ್ಯವಾದಗಳು. ಈ ಚಳವಳಿಯನ್ನು ಯಶಸ್ವಿಗೊಳಿಸಿದ ಪ್ರತಿಯೊಬ್ಬರಿಗೂ ಅಭಿನಂದನೆಗಳು,” ಎಂದು ಅವರು ಹೇಳಿದರು.
ಇದಕ್ಕೂ ಮುನ್ನ ಶುಕ್ರವಾರ, ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್ ಅವರು 26 ದಿನಗಳ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ ನಂತರ ಪ್ರತಿಕ್ರಿಯಿಸಿದ ದೀಪ್ಕೆ, ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ಪಕ್ಷದ ಪ್ರತಿಭಟನೆ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಂಗ್ಚುಕ್ ಅವರ ಆರೋಗ್ಯ ಸುಧಾರಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದರೂ, ಪರೀಕ್ಷಾ ಅಕ್ರಮಗಳಿಗೆ ಸಂಬಂಧಿಸಿದಂತೆ ಹೊಣೆಗಾರಿಕೆ ನಿಗದಿಯಾಗಬೇಕು ಎಂಬ ತಮ್ಮ ಪ್ರಮುಖ ಬೇಡಿಕೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದರು.
ಇದೇ ವೇಳೆ, ವಾರಾಂತ್ಯದ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ಜಂತರ್ ಮಂತರ್ ಪ್ರತಿಭಟನೆ ಸ್ಥಳ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಹೆಚ್ಚುವರಿ ಬ್ಯಾರಿಕೇಡ್‌ಗಳನ್ನು ಅಳವಡಿಸಿರುವ ದೆಹಲಿ ಪೊಲೀಸರು, ಅವುಗಳನ್ನು ಭಾರೀ ಕಬ್ಬಿಣದ ಸರಪಳಿಗಳ ಮೂಲಕ ಬಿಗಿಯಾಗಿ ಜೋಡಿಸಿ ಭದ್ರತಾ ವಲಯವನ್ನು ಮತ್ತಷ್ಟು ಬಲಪಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement