ಜಂತರ್ ಮಂತರ್ ಪ್ರತಿಭಟನೆ ವೇಳೆ ಹಿಂಸಾಚಾರ: 2,873 ಅಪರಾಧ ಹಿನ್ನೆಲೆಯವರ ಗುರುತು ಪತ್ತೆ; 989 ಮಂದಿ ವಿರುದ್ಧ ಗಂಭೀರ ಪ್ರಕರಣಗಳು

ನವದೆಹಲಿ: ಕಳೆದ ವಾರ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆ ವೇಳೆ ಸಂಭವಿಸಿದ ಹಿಂಸಾಚಾರದ ಘಟನೆಗಳಿಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ನೂರಾರು ಗಿಗಾಬೈಟ್‌ಗಳಷ್ಟು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ವ್ಯಂಗ್ಯಾತ್ಮಕ ರಾಜಕೀಯ ಸಂಘಟನೆಯಾದ ಕಾಕ್ರೋಚ್‌ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ಈ ಪ್ರತಿಭಟನೆ ನಡೆದಿತ್ತು.
ಜುಲೈ 20 ಮತ್ತು 22ರಂದು ಭದ್ರತೆ ಬಿಗಿಗೊಳಿಸಲಾಗಿದ್ದ ಕೇಂದ್ರ ದೆಹಲಿಯ ಜಂತರ್ ಮಂತರ್ ಪ್ರದೇಶದಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ತೀವ್ರ ಘರ್ಷಣೆ ನಡೆದಿತ್ತು. ಪ್ರತಿಭಟನಾಕಾರರು ಭದ್ರತಾ ತಡೆಗೋಡೆಗಳನ್ನು ಭೇದಿಸಿ ಒಳನುಗ್ಗುವುದು, ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸುವುದು, ಕಲ್ಲು ತೂರಾಟ, ವಾಹನಗಳು ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಉಂಟುಮಾಡಿರುವ ದೃಶ್ಯಗಳು ಕನಿಷ್ಠ 100ಕ್ಕೂ ಹೆಚ್ಚು ಸಿಸಿಟಿವಿ ವಿಡಿಯೊಗಳಲ್ಲಿ ದಾಖಲಾಗಿವೆ.
ಪೊಲೀಸ್ ಮೂಲಗಳ ಪ್ರಕಾರ, ಸಿಸಿಟಿವಿ ದೃಶ್ಯಾವಳಿಗಳಲ್ಲಿ ಈಗಾಗಲೇ ಪೊಲೀಸ್ ದಾಖಲೆಗಳಲ್ಲಿ ಹೆಸರು ಇರುವ ಹಲವು ಅಪರಾಧ ಹಿನ್ನೆಲೆಯ ವ್ಯಕ್ತಿಗಳು ಕಾಣಿಸಿಕೊಂಡಿದ್ದಾರೆ. ಮುಖ ಗುರುತಿಸುವ (ಫೇಷಿಯಲ್ ರೆಕಗ್ನಿಷನ್) ತಂತ್ರಜ್ಞಾನದ ನೆರವಿನಿಂದ ಇದುವರೆಗೆ 2,873 ಅಪರಾಧ ಹಿನ್ನೆಲೆಯವರನ್ನು ಗುರುತಿಸಲಾಗಿದೆ.
ಇವರಲ್ಲಿ 989 ಮಂದಿಯ ವಿರುದ್ಧ ಕೊಲೆ, ಕೊಲೆ ಯತ್ನ, ಅತ್ಯಾಚಾರ, ಅಪಹರಣ, ದರೋಡೆ, ಪೋಕ್ಸೋ ಕಾಯ್ದೆ, ಶಸ್ತ್ರಾಸ್ತ್ರ ಕಾಯ್ದೆ ಸೇರಿದಂತೆ ಹಲವು ಗಂಭೀರ ಪ್ರಕರಣಗಳು ದಾಖಲಾಗಿವೆ ಎಂದು ಮೂಲಗಳು ತಿಳಿಸಿವೆ. ಇವರಲ್ಲಿ ಹಲವರು ಈಗಾಗಲೇ ಪೊಲೀಸ್ ದಾಖಲೆಗಳಲ್ಲಿ ಅಭ್ಯಾಸಿ ಅಪರಾಧಿಗಳು (Habitual Offenders) ಎಂದು ಗುರುತಿಸಲ್ಪಟ್ಟಿದ್ದು, ಗಮನಾರ್ಹ ಸಂಖ್ಯೆಯವರ ವಿರುದ್ಧ ಒಂದಕ್ಕಿಂತ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.

ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ, ಗುರುತಿಸಲಾದ ಅಪರಾಧ ಹಿನ್ನೆಲೆಯವರಲ್ಲಿ 101 ಮಂದಿ ಕೊಲೆ, 62 ಮಂದಿ ಕೊಲೆ ಯತ್ನ, 284 ಮಂದಿ ದರೋಡೆ, 61 ಮಂದಿ ಅತ್ಯಾಚಾರ, 6 ಮಂದಿ ಪೋಕ್ಸೋ ಕಾಯ್ದೆ, 25 ಮಂದಿ ಲೈಂಗಿಕ ದೌರ್ಜನ್ಯ, 229 ಮಂದಿ ಶಸ್ತ್ರಾಸ್ತ್ರ ಕಾಯ್ದೆ ಹಾಗೂ 19 ಮಂದಿ ಅಪಹರಣ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ.
ಕೊಲೆ ಪ್ರಕರಣದ 101 ಆರೋಪಿಗಳಲ್ಲಿ 42 ಮಂದಿಯ ವಿರುದ್ಧ ಎರಡು ಅಥವಾ ಅದಕ್ಕಿಂತ ಹೆಚ್ಚು ಪ್ರಕರಣಗಳಿದ್ದು, 12 ಮಂದಿಯ ವಿರುದ್ಧ 10ಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಅತ್ಯಾಚಾರ ಪ್ರಕರಣದ 61 ಆರೋಪಿಗಳಲ್ಲಿ ಎಂಟು ಮಂದಿಯ ವಿರುದ್ಧ ಎರಡು ಅಥವಾ ಅದಕ್ಕಿಂತ ಹೆಚ್ಚು ಪ್ರಕರಣಗಳಿವೆ ಎಂದು ಮೂಲಗಳು ತಿಳಿಸಿವೆ.
ನಗರದ ವಿವಿಧ ಸ್ಥಳಗಳಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳು ಪ್ರತಿಭಟನಾಕಾರರು ಪೊಲೀಸ್ ಹಾಗೂ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸುವುದು, ಬ್ಯಾರಿಕೇಡ್‌ಗಳನ್ನು ಒಡೆದು ಒಳನುಗ್ಗುವುದು, ಕಲ್ಲು ತೂರಾಟ ನಡೆಸುವುದು, ಪೆಪ್ಪರ್ ಸ್ಪ್ರೇ ಬಳಸುವುದು, ವಾಹನಗಳನ್ನು ಧ್ವಂಸಗೊಳಿಸುವುದು, ವಾಹನಗಳೊಳಗಿದ್ದ ಪೊಲೀಸರ ಮೇಲೆಯೇ ಹಲ್ಲೆ ನಡೆಸುವುದು, ಸಾರ್ವಜನಿಕ ಆಸ್ತಿ ಹಾಗೂ ಪ್ರತಿಭಟನಾ ಮಾರ್ಗದಲ್ಲಿದ್ದ ಅಂಗಡಿಗಳಿಗೆ ಹಾನಿ ಮಾಡುವುದು ಮತ್ತು ದೊಡ್ಡ ಪ್ರಮಾಣದ ಸಭೆ-ಸಮಾವೇಶಗಳ ಮೇಲಿನ ನಿಷೇಧಾಜ್ಞೆಯನ್ನು ಉಲ್ಲಂಘಿಸಿರುವ ದೃಶ್ಯಗಳನ್ನು ದಾಖಲಿಸಿವೆ.

ಪ್ರಮುಖ ಸುದ್ದಿ :-   ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ

ಜುಲೈ 20ರಂದು ಸಂಸದ್ ಮಾರ್ಗದಲ್ಲಿ ಪ್ರತಿಭಟನಾಕಾರರು ಬ್ಯಾರಿಕೇಡ್‌ಗಳನ್ನು ಮುರಿದು ಮುನ್ನಡೆಯುವುದು ಹಾಗೂ ವಿವಿಧ ಸ್ಥಳಗಳಲ್ಲಿ ಕಲ್ಲು ತೂರಾಟ ನಡೆಸಿರುವುದು ವಿಡಿಯೊಗಳಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. ಅದೇ ದಿನ ಜಂತರ್ ಮಂತರ್ ಸಮೀಪ ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ ವಾಹನಗಳನ್ನು ಧ್ವಂಸಗೊಳಿಸಿದ್ದಲ್ಲದೆ, ಒಳಗೆ ಪೊಲೀಸ್ ಸಿಬ್ಬಂದಿ ಕುಳಿತಿದ್ದರೂ ಪೊಲೀಸ್ ವಾಹನವನ್ನು ಉರುಳಿಸಲು ಯತ್ನಿಸಿರುವ ದೃಶ್ಯಗಳು ಸೆರೆಯಾಗಿವೆ. ಟಾಲ್‌ಸ್ಟಾಯ್ ಮಾರ್ಗದಲ್ಲಿ ಒಂದು ವಾಹನಕ್ಕೆ ಬೆಂಕಿ ಹಚ್ಚಿರುವುದು ಹಾಗೂ ಬಸ್‌ಗಳ ಟೈರ್‌ಗಳಿಗೆ ಹಾನಿ ಮಾಡಿರುವ ದೃಶ್ಯಗಳೂ ದಾಖಲಾಗಿವೆ.
ಹಲವು ವಿಡಿಯೊಗಳಲ್ಲಿ ಪೊಲೀಸ್ ಸಿಬ್ಬಂದಿಯ ಮೇಲಿನ ನೇರ ಹಲ್ಲೆಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ ಎಂದು ಮೂಲಗಳು ತಿಳಿಸಿವೆ. ಗಾಯಗೊಂಡಿದ್ದ ಮಹಿಳಾ ಪೊಲೀಸ್ ಅಧಿಕಾರಿಯನ್ನು ಸಹೋದ್ಯೋಗಿಗಳು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುತ್ತಿರುವ ದೃಶ್ಯವೂ ಸೆರೆಯಾಗಿದೆ. ಸಂಸದ್ ಮಾರ್ಗದಲ್ಲಿ ಪ್ರತಿಭಟನಾಕಾರರು ಒಬ್ಬ ಪೊಲೀಸ್ ಸಿಬ್ಬಂದಿಯನ್ನು ಸುತ್ತುವರಿದು ಹಲ್ಲೆ ನಡೆಸಿರುವ ದೃಶ್ಯಗಳೂ ಲಭ್ಯವಾಗಿವೆ. ಗಾಯಗೊಂಡ ಹಲವು ಪೊಲೀಸ್ ಸಿಬ್ಬಂದಿಯ ಸಮವಸ್ತ್ರಗಳ ಮೇಲೆ ರಕ್ತಸ್ರಾವವಾಗಿರುವ ದೃಶ್ಯಗಳೂ ದಾಖಲಾಗಿದ್ದು, ಈ ಹಿಂಸಾಚಾರದಲ್ಲಿ ಸುಮಾರು 200 ಮಂದಿ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ವಿಡಿಯೊ | ವಿದ್ಯಾರ್ಥಿಗಳ ಮೇಲೆ ಎಕೆ-47ನಿಂದ ಗುಂಡು ಹಾರಿಸಿದ ಆರೋಪ: ಪೊಲೀಸ್ ಸಿಬ್ಬಂದಿ ಅಮಾನತು

ಜುಲೈ 22ರಂದು ದಾಖಲಾಗಿರುವ ಸಿಸಿಟಿವಿ ದೃಶ್ಯಗಳಲ್ಲಿ ಪೊಲೀಸ್ ಅಧಿಕಾರಿಗಳಾದ ನಂದಕಿಶೋರ ಮತ್ತು ವಿವೇಕ ಭಗತ್ ಅವರ ಮೇಲಿನ ಹಲ್ಲೆಗಳೂ ದಾಖಲಾಗಿವೆ.
ಕೆಲವು ಪ್ರತಿಭಟನಾಕಾರರು ಕ್ಯಾಮೆರಾಗಳ ಎದುರೇ ಮಾಡಿರುವ ಅವಹೇಳನಕಾರಿ ಹಾಗೂ ಆಕ್ಷೇಪಾರ್ಹ ಹೇಳಿಕೆಗಳನ್ನು ಪ್ರತ್ಯೇಕವಾಗಿ ಸಂರಕ್ಷಿಸಿ ಮುಂದಿನ ಕಾನೂನು ಕ್ರಮಕ್ಕಾಗಿ ವಿಶ್ಲೇಷಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಕಾನಾಟ್ ಪ್ಲೇಸ್‌ನಲ್ಲಿ ಮಹಿಳೆಯೊಬ್ಬರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವುದು, ಸಂಸದ್ ಮಾರ್ಗದಲ್ಲಿ ವ್ಯಕ್ತಿಯೊಬ್ಬರು ಸಂಸತ್ತಿನ ಕುರಿತು ಪ್ರಚೋದನಕಾರಿ ಹೇಳಿಕೆ ನೀಡಿರುವುದು ಹಾಗೂ ಮತ್ತೊಬ್ಬ ಮಹಿಳೆ ಪೊಲೀಸರ ವಿರುದ್ಧ ಅಶ್ಲೀಲ ಪದಗಳನ್ನು ಬಳಸಿರುವ ದೃಶ್ಯಗಳೂ ದಾಖಲಾಗಿವೆ.
ಕಾಕ್ರೋಚ್‌ ಜನತಾ ಪಾರ್ಟಿ (ಸಿಜೆಪಿ) ಶನಿವಾರ ತನ್ನ ಪ್ರತಿಭಟನೆಯನ್ನು ಹಿಂತೆಗೆದುಕೊಂಡಿದೆ. ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂಬುದು ಪಕ್ಷದ ಪ್ರಮುಖ ಬೇಡಿಕೆಯಾಗಿತ್ತು. ಸಚಿವರ ರಾಜೀನಾಮೆಯ ಬಳಿಕ ಪ್ರತಿಭಟನೆಯನ್ನು ಸ್ಥಗಿತಗೊಳಿಸಲಾಗಿದೆ ಎಂದುಅದು ತಿಳಿಸಿದೆ.
ಜುಲೈ 20ರಂದು ನಡೆದ ‘ಚಲೋ ಸಂಸದ್’ ಮೆರವಣಿಗೆಯ ಬಳಿಕ ದೇಶದ ವಿವಿಧ ಭಾಗಗಳಲ್ಲಿ ಪ್ರತಿಭಟನಾಕಾರರ ವಿರುದ್ಧ ಹಲವು ಪ್ರಥಮ ಮಾಹಿತಿ ವರದಿಗಳು (ಎಫ್‌ಐಆರ್‌ಗಳು) ದಾಖಲಾಗಿವೆ. ಆದರೆ ಈ ಎಫ್‌ಐಆರ್‌ಗಳನ್ನು ಹಿಂತೆಗೆದುಕೊಳ್ಳಲು ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂದು ಸಿಜೆಪಿ ಹೇಳಿಕೊಂಡಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement