ಸುಳ್ಳು ಆದಾಯ ಪ್ರಮಾಣಪತ್ರ ಪ್ರಕರಣ : ಸುಮಾ ಸಾಹುಕಾರಗೆ ಹೈಕೋರ್ಟ್ ತರಾಟೆ

ಬೆಂಗಳೂರು : ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗೆ ಅಕ್ರಮವಾಗಿ ನೇಮಕವಾಗಲು ಸುಳ್ಳು ಆದಾಯ ಪ್ರಮಾಣಪತ್ರ ಸಲ್ಲಿಸಿದ ಆರೋಪ ಸಂಬಂಧ ತಮ್ಮ ವಿರುದ್ಧ ದಾಖಲಾದ ಎಫ್ಐಆರ್ ರದ್ದು ಕೋರಿ ಅರ್ಜಿ ಸಲ್ಲಿಸಿದ್ದ ಕೆಪಿಎಸ್‌ಸಿ ಅಧ್ಯಕ್ಷರಾಗಿದ್ದ ಶಿವಶಂಕರಪ್ಪ ಸಾಹುಕಾರ ಅವರ ಪುತ್ರಿಯ ವಿರುದ್ಧ ಕರ್ನಾಟಕ ಹೈಕೋರ್ಟ್ ಸೋಮವಾರ ಕಿಡಿಕಾರಿತು.
ಹಿಂದುಳಿದ ವರ್ಗಗಳ 3ಬಿ ಕೆಟಗರಿ ಕೋಟಾದಡಿ ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗೆ ನೇಮಕಾತಿ ಬಯಸಿ ತಮ್ಮ ಕುಟುಂಬದ ವಾರ್ಷಿಕ ಆದಾಯ ₹40,000 ಎಂಬುದಾಗಿ ಆದಾಯ ಪ್ರಮಾಣ ಪತ್ರ‌ ಸಲ್ಲಿಸಿದ್ದ ಕೆಪಿಎಸ್‌ಸಿ ಅಧ್ಯಕ್ಷರಾಗಿದ್ದ ಶಿವಶಂಕರಪ್ಪ ಅವರ ಪುತ್ರಿ ಸುಮಾ ಸಾಹುಕಾರ ಅವರ ನಡೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಪೀಠ ಕಟುವಾಗಿ ಖಂಡಿಸಿತು ಎಂದು ಬಾರ್‌ & ಬೆಂಚ್‌ ವರದಿ ಮಾಡಿದೆ.
ಪ್ರಕರಣ ಸಂಬಂಧ ತಮ್ಮ ವಿರುದ್ಧ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದುಗೊಳಿಸಬೇಕು ಎಂದು ಕೋರಿ ಕೆಪಿಎಸ್‌ಸಿಯಿಂದ ಅಮಾನತುಗೊಂಡಿರುವ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರ ಪುತ್ರಿ ಸುಮಾ ಎಸ್‌.ಸಾಹುಕಾರ ಸಲ್ಲಿಸಿರುವ ಕ್ರಿಮಿನಲ್‌ ಅರ್ಜಿ ವಿಚಾರಣೆ ನಡೆಸಿದ ಪೀಠವು ಅರ್ಜಿದಾರರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿತು.
“ಕೆಪಿಎಸ್‌‌ಸಿ ಅಧ್ಯಕ್ಷರ ವಾರ್ಷಿಕ ಆದಾಯ ಕೇವಲ ₹40 ಸಾವಿರವೇ? ಅವರ ಸಂಬಳವೇ ತಿಂಗಳಿಗೆ ₹2.17 ಲಕ್ಷ ಇದೆ. ಅಂದರೆ ವಾರ್ಷಿಕ ಆದಾಯ ಸುಮಾರು ₹30 ಲಕ್ಷ ಇರುತ್ತದೆ. ಎಲ್ಲರ ಕಣ್ಣಿಗೆ ರಾಚುವಂತಹ ಈ ಸತ್ಯವನ್ನು ಮರೆಮಾಚಿ ಹೇಗೆ ಸುಳ್ಳು ಪ್ರಮಾಣ ಪತ್ರ ಸಲ್ಲಿಸಿದ್ದೀರಿ? ಮೇಲ್ನೋಟಕ್ಕೇ ಇದು ವಂಚನೆ ಎಂಬುದು ಕಂಡುಬಂದಿದೆ. ಸುಳ್ಳು ಆದಾಯ ಪ್ರಮಾಣ ಪತ್ರ ಸಲ್ಲಿಸಿ ಮತ್ತೊಬ್ಬ‌ ಬಡ ಹಾಗೂ ಅರ್ಹ ಅಭ್ಯರ್ಥಿಗೆ ಸರ್ಕಾರಿ ಉದ್ಯೋಗ‌ ಪಡೆಯುವ ಅವಕಾಶ ಕಿತ್ತುಕೊಂಡಿದ್ದೀರಿ” ಎಂದು ತರಾಟೆಗೆ ತೆಗೆದುಕೊಂಡಿತು. “ಪ್ರತಿಬಾರಿಯೂ ಕೆಪಿಎಸ್‌ಸಿ ನೇಮಕಾತಿಯಲ್ಲಿ ಯಾವುದಾದರೂ ಅಕ್ರಮ ನಡೆದೇ ಇರುತ್ತದೆ” ಎಂದು ಪೀಠ ಕಿಡಿಕಾರಿತು.
“ಅರ್ಜಿದಾರರು ಸುಳ್ಳು ಆದಾಯ ಮತ್ತು ಜಾತಿ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಅರ್ಜಿಯ ಘೋಷಣಾ ಕಾಲಂನಲ್ಲಿ ತಪ್ಪು ಮತ್ತು ಸುಳ್ಳು ಹೇಳಿಕೆ ನೀಡಿ ವಾಸ್ತವಿಕ ಮಾಹಿತಿ ಮರೆಮಾಚಿರುವುದನ್ನು ಹೇಗೆ ಸಮರ್ಥಿಸಿಕೊಳ್ಳುತ್ತಿದ್ದೀರಿ. ಹೀಗಿದ್ದರೂ ಎಫ್ಐಆರ್ ದಾಖಲೆಯಲ್ಲಿ ಕಾನೂನು ಲೋಪವಾಗಿದೆ ಎಂದು ಹೇಳಿ, ಅದರ ರದ್ದತಿಗೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದೀರಿ. ತಪ್ಪು ಮಾಡಿಲ್ಲವಾದರೆ ತನಿಖೆ ನಡೆಯಲಿ ಬಿಡಿ. ತನಿಖೆ ನಂತರ ಖುಲಾಸೆಯಾಗಿ ಬನ್ನಿ” ಎಂದು ಸುಮಾ ಅವರಿಗೆ ಪೀಠ ತಾಕೀತು ಮಾಡಿತು. ಪೀಠದ ಕಟು ನುಡಿಗಳನ್ನು ಆಲಿಸಿದ ಸುಮಾ ಅವರ ಪರ ಹಿರಿಯ ವಕೀಲ ಎಂ ಅರುಣ ಶ್ಯಾಮ ಅವರು ಅರ್ಜಿಯನ್ನು ಹಿಂಪಡೆದರು.
ಇದಕ್ಕೂ ಮುನ್ನ, ಅರುಣಶ್ಯಾಮ ಅವರು “ಅರ್ಜಿದಾರರ ವಿರುದ್ಧ ಎಫ್‌ಐಆರ್ ದಾಖಲಿಸುವ ಮುನ್ನ ಕಾನೂನು ಪ್ರಕ್ರಿಯೆ ಪಾಲನೆಯಲ್ಲಿ ಮೂಲಭೂತ ಲೋಪಗಳಿವೆ. ಸುಳ್ಳು ಆದಾಯ ಪ್ರಮಾಣ ಪತ್ರ ಸಲ್ಲಿಕೆಯಾಗಿದ್ದರೆ, ಮೊದಲು ಆ ಕುರಿತು ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ಪರಿಶೀಲನಾ ಸಮಿತಿಯಿಂದ ವಿಚಾರಣೆ ನಡೆಸಬೇಕಿತ್ತು. ಆ ನಿಯಮವನ್ನು ಅತಿಕ್ರಮಿಸಿ ಯಾವುದೇ ವಿಚಾರಣೆ ನಡೆಸದೇ ನೇರವಾಗಿ ಎಫ್ಐಆರ್ ದಾಖಲಿಸಲಾಗಿದೆ. ಹೀಗಾಗಿ, ಎಫ್ಐಆರ್ ಊರ್ಜಿತವಾಗುವುದಿಲ್ಲ” ಎಂದು ವಾದಿಸಿದರು.
“ಪರೀಕ್ಷೆ ಬರೆದ ನಂತರ ದಾಖಲಾತಿಗಳ ಪರಿಶೀಲನೆ ವೇಳೆ ಆದಾಯ ಮತ್ತು ಜಾತಿ ಪ್ರಮಾಣ ಪತ್ರದ ತಕರಾರು ಗಮನಕ್ಕೆ ಬಂದಿದೆ. ಕುಟುಂಬದ ಆದಾಯ ಎಂದರೆ ವೈಯಕ್ತಿಕ ಆದಾಯ ಎಂಬ ತಿಳಿವಳಿಕೆಯಿಂದ ವಾರ್ಷಿಕ ಆದಾಯ ₹40,000 ಎಂದು ಅರ್ಜಿದಾರರು ತಿಳಿಸಿದ್ದರು. ನಂತರ  ಅರ್ಜಿದಾರರು ನೇಮಕಾತಿ ಪ್ರಕ್ರಿಯೆಯಿಂದ ಹಿಂದೆ ಸರಿದಿದ್ದಾರೆ. ಇದರಿಂದ ನೇಮಕಾತಿ  ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗಿಲ್ಲ” ಎಂದರು.
ಅದಕ್ಕೆ ಪೀಠವು “ಅರ್ಜಿದಾರ ಆಯ್ಕೆಪಟ್ಟಿಯಲ್ಲಿ ಇದ್ದವರಲ್ಲವೇ? ಅಭ್ಯರ್ಥಿ ಹಿಂದೆ ಸರಿದ ತಕ್ಷಣ ಎಲ್ಲ ಸರಿ ಹೋಗಿ ಬಿಡುತ್ತದೆಯೇ? ಮತ್ತೊಮ್ಮೆ ಪರೀಕ್ಷೆ ನಡೆಸಲಾಗುತ್ತದೆಯೇ? ಅರ್ಜಿದಾರರು 3ಬಿ ಮೀಸಲಾತಿ ಕೆಟಗರಿಯಲ್ಲಿ ಕುಟುಂಬದ ಒಟ್ಟು ವಾರ್ಷಿಕ ಆದಾಯ ತೋರಿಸುವ ಮೂಲಕ ಅರ್ಹ ಬಡ ಅಭ್ಯರ್ಥಿಯೊಬ್ಬರ ಭವಿಷ್ಯವನ್ನೇ ಕಿತ್ತುಕೊಂಡಿದ್ದಾರೆ” ಎಂದು ತರಾಟೆಗೆ ತೆಗೆದುಕೊಂಡಿತು.
ಸುಮಾ ಎಸ್. ಸಾಹುಕಾರ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯಲ್ಲಿನ ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗಳ ನೇಮಕಾತಿ ವೇಳೆ ಸುಳ್ಳು ಆದಾಯ ಮತ್ತು ಜಾತಿ ಪ್ರಮಾಣಪತ್ರ ಸಲ್ಲಿಸಿದ್ದಾರೆ ಎಂದು ಆರೋಪಿಸಿ ಕೆಪಿಎಸ್‌ಸಿ ಸಹಾಯಕ ಕಾರ್ಯದರ್ಶಿ ಬಿ ಎನ್‌ ಶೋಭಾ ಅವರು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು‌.  ಪೊಲೀಸರು ಸುಮಾ ವಿರುದ್ಧ ನಕಲಿ ದಾಖಲೆ ಸೃಷ್ಟಿ ಆರೋಪದ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement