ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ : ಕರ್ನಾಟಕದಲ್ಲಿ 84.31 ಲಕ್ಷ ʼಎಎಸ್‍ಡಿಡಿಒʼ ಮತದಾರರು

ಬೆಂಗಳೂರು : ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (Special Summary Revision) ಪ್ರಕ್ರಿಯೆಯಲ್ಲಿ 84,31,612 ಮತದಾರರ ದಾಖಲೆಗಳು ಎಎಸ್‌ಡಿಡಿಒ (Absent, Shifted, Dead, Duplicate, Others) ವಿಭಾಗದಡಿ ಗುರುತಿಸಲ್ಪಟ್ಟಿವೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ ತಿಳಿಸಿದ್ದಾರೆ.
ಬುಧವಾರ ನಗರದ ಮುಖ್ಯ ಚುನಾವಣಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆವರು, ಪರಿಷ್ಕರಣೆ ಕಾರ್ಯವು ಸುಗಮವಾಗಿ ಸಾಗುತ್ತಿದ್ದು, ರಾಜ್ಯಾದ್ಯಂತ ಸಂಗ್ರಹಿಸಲಾದ ಗಣತಿ (Enumeration) ನಮೂನೆಗಳಲ್ಲಿ ಸುಮಾರು 77%ರಷ್ಟು ನಮೂನೆಗಳ ಡಿಜಿಟೈಸೇಶನ್ ಪೂರ್ಣಗೊಂಡಿದೆ ಎಂದು ಮಾಹಿತಿ ನೀಡಿದರು.
ರಾಜ್ಯಾದ್ಯಂತ ಒಟ್ಟು 5,54,32,314 ಗಣತಿ ನಮೂನೆಗಳನ್ನು ವಿತರಿಸಲಾಗಿದ್ದು, ಇದುವರೆಗೆ 4,26,75,861 ನಮೂನೆಗಳನ್ನು ಡಿಜಿಟೈಸೇಶನ್ ಮಾಡಲಾಗಿದೆ. ಇದು ಒಟ್ಟು ಸಂಗ್ರಹಿಸಲಾದ ನಮೂನೆಗಳ 76.99%ರಷ್ಟು ಆಗಿದೆ ಎಂದು ಅವರು ತಿಳಿಸಿದರು.
ಡಿಜಿಟೈಸೇಶನ್ ಪ್ರಕ್ರಿಯೆಯು ಕರಡು ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ಮೊದಲು ನಡೆಯುವ ಅತ್ಯಂತ ಪ್ರಮುಖ ಹಂತವಾಗಿದೆ ಎಂದು ಅವರು ಹೇಳಿದರು.

ಎಎಸ್‌ಡಿಡಿ೦ (ASDDO) ವಿಭಾಗದಲ್ಲಿ 84.31 ಲಕ್ಷ ಮತದಾರರು
ಪರಿಶೀಲನೆ ವೇಳೆ ಎಎಸ್‌ಡಿಡಿಒ (ASDDO) ವಿಭಾಗದಡಿ ಗುರುತಿಸಲಾದ 84,31,612 ಮತದಾರರ ದಾಖಲೆಗಳ ವಿವರ ಹೀಗಿದೆ:
11,61,231 ಮತದಾರರು ಮನೆಯಲ್ಲಿ ಗೈರು (Absent) ಎಂದು ಗುರುತಿಸಲ್ಪಟ್ಟಿದ್ದಾರೆ.
51,74,968 ಮತದಾರರು ತಮ್ಮ ನೋಂದಾಯಿತ ವಿಳಾಸದಿಂದ ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ (Shifted).
14,99,799 ಮತದಾರರು ಮೃತಪಟ್ಟಿರುವುದು (Dead) ದೃಢಪಟ್ಟಿದೆ.
5,62,572 ಮತದಾರರ ಹೆಸರುಗಳು ಎರಡು ಕಡೆ ಮತದಾನದ ಹಕ್ಕು ಹೊಂದಿರುವುದು ದಾಖಲೆಗಳಾಗಿವೆ.
33,042 ದಾಖಲೆಗಳು ಇತರೆ (Others) ವಿಭಾಗದಲ್ಲಿ ವರ್ಗೀಕರಿಸಲಾಗಿದೆ.

ಪ್ರಮುಖ ಸುದ್ದಿ :-   ಗುರುಪೂರ್ಣಿಮೆ: ಗುರುವಿನ ಮಹತ್ವ ಸಾರುವ ಭಾರತೀಯ ಸಂಸ್ಕೃತಿಯ ಅಮೂಲ್ಯ ಪರಂಪರೆ

ಪರಿಶೀಲನಾ ಪ್ರಕ್ರಿಯೆ ಹೇಗೆ ನಡೆಯುತ್ತದೆ?
ಎಎಸ್‌ಡಿಡಿಒ (ASDDO) ವಿಭಾಗದ ಪರಿಶೀಲನಾ ವಿಧಾನವನ್ನು ವಿವರಿಸಿದ ಅನ್ಬುಕುಮಾರ, ಪ್ರತಿ ಪ್ರಕರಣಕ್ಕೂ ಅಧಿಕಾರಿಗಳು ಕ್ಷೇತ್ರ ಪರಿಶೀಲನಾ ವರದಿ (Field Verification Report) ಸಿದ್ಧಪಡಿಸುತ್ತಾರೆ ಎಂದು ಹೇಳಿದರು. ಮೃತಪಟ್ಟಿರುವ ಮತದಾರರ ಸಂಬಂಧ ಮರಣ ಪ್ರಮಾಣಪತ್ರಗಳನ್ನು ಸಂಗ್ರಹಿಸಿ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ ಎಂದರು.
ಅಲ್ಲದೆ, ‘ಗೈರು’ ಅಥವಾ ‘ಸ್ಥಳಾಂತರ’ ಎಂದು ಗುರುತಿಸಲ್ಪಟ್ಟಿರುವುದರಿಂದ ಮಾತ್ರ ಮತದಾರರ ಹೆಸರು ಅಳಿಸಲಾಗುತ್ತದೆ ಎಂಬುದಲ್ಲ. ಅಧಿಕಾರಿಗಳು ಭೇಟಿ ನೀಡಿದ ವೇಳೆ ಅವರು ನೋಂದಾಯಿತ ವಿಳಾಸದಲ್ಲಿ ಲಭ್ಯವಾಗಿರಲಿಲ್ಲ ಅಥವಾ ಬೇರೆ ಸ್ಥಳಕ್ಕೆ ಸ್ಥಳಾಂತರಗೊಂಡಿರಬಹುದು ಎಂಬ ಅರ್ಥ ಮಾತ್ರ ಇದಾಗಿದೆ ಎಂದು ಸ್ಪಷ್ಟಪಡಿಸಿದರು.
ಇಂತಹ ಮತದಾರರು ದೇಶದ ಬೇರೆ ಯಾವುದೇ ಸ್ಥಳದಲ್ಲಿ ಹೊಸದಾಗಿ ಮತದಾರರಾಗಿ ನೋಂದಾಯಿಸದಿದ್ದರೆ, ಆನ್‌ಲೈನ್ ಮೂಲಕ ಅಥವಾ ನಮೂನೆ-6 (Form-6) ಸಲ್ಲಿಸುವ ಮೂಲಕ ತಮ್ಮ ಹೆಸರು ಮರು ಸೇರ್ಪಡೆ ಮಾಡಿಸಿಕೊಳ್ಳಬಹುದು ಅಥವಾ ವಿಳಾಸವನ್ನು ನವೀಕರಿಸಿಕೊಳ್ಳಬಹುದು ಎಂದು ತಿಳಿಸಿದರು.

ಇನ್ನೂ 43.24 ಲಕ್ಷ ನಮೂನೆಗಳು ಬಾಕಿ
ರಾಜ್ಯದಲ್ಲಿ ಇನ್ನೂ 43,24,847 ಗಣತಿ ನಮೂನೆಗಳು ಸಲ್ಲಿಕೆಯಾಗದೇ ಬಾಕಿ ಉಳಿದಿವೆ ಎಂದು ಅನ್ಬುಕುಮಾರ ತಿಳಿಸಿದರು.
ಜನರು ತಮ್ಮ ಬಳಿಯೇ ನಮೂನೆಗಳನ್ನು ಇಟ್ಟುಕೊಳ್ಳದೆ, ಸಂಬಂಧಪಟ್ಟ ಬೂತ್ ಮಟ್ಟದ ಅಧಿಕಾರಿ (BLO) ಅವರಿಗೆ ತಕ್ಷಣವೇ ಸಲ್ಲಿಸುವಂತೆ ಅವರು ಮನವಿ ಮಾಡಿದರು. ಮತದಾರರು ಮನೆಯಲ್ಲಿ ಇಲ್ಲದಿದ್ದರೂ, ಅವರ ಪರವಾಗಿ ಕುಟುಂಬದ ಸದಸ್ಯರು ಸಹಿ ಮಾಡಿ ನಮೂನೆಯನ್ನು ಸಲ್ಲಿಸಬಹುದಾಗಿದೆ ಎಂದು ಹೇಳಿದರು.
ಗಣತಿ ನಮೂನೆ ಸಲ್ಲಿಸಲು ಆಗಸ್ಟ್ 8 ಕೊನೆಯ ದಿನಾಂಕವಾಗಿದ್ದು, 2026ರ ಅಕ್ಟೋಬರ್ 1ರಂದು 18 ವರ್ಷ ಪೂರ್ಣಗೊಳ್ಳುವ ಯುವಕರು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಿಕೊಳ್ಳಲು ನಮೂನೆ-6 (Form-6) ಸಲ್ಲಿಸಬಹುದು ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ಗುರುಪೂರ್ಣಿಮೆ: ಗುರುವಿನ ಮಹತ್ವ ಸಾರುವ ಭಾರತೀಯ ಸಂಸ್ಕೃತಿಯ ಅಮೂಲ್ಯ ಪರಂಪರೆ

ಬೆಂಗಳೂರಿನಲ್ಲಿ ಅತಿ ಹೆಚ್ಚು ಎಎಸ್‌ಡಿಡಿಒ (ASDDO) ದಾಖಲೆ
ಗ್ರೇಟರ್ ಬೆಂಗಳೂರು ಪ್ರಾಧಿಕಾರ (Greater Bengaluru Authority) ವ್ಯಾಪ್ತಿಯಲ್ಲಿ ಒಟ್ಟು 1,03,88,363 ನೋಂದಾಯಿತ ಮತದಾರರು ಇದ್ದಾರೆ. ಇವರಲ್ಲಿ 39,38,202 ಮತದಾರರ ದಾಖಲೆಗಳು ಎಎಸ್‌ಡಿಡಿಒ (ASDDO) ವಿಭಾಗದಡಿ ಗುರುತಿಸಲ್ಪಟ್ಟಿವೆ. ಇದಲ್ಲದೆ, ಬೆಂಗಳೂರಿನಲ್ಲಿ ಇನ್ನೂ 16,57,582 ಗಣತಿ ನಮೂನೆಗಳ ಡಿಜಿಟೈಸೇಶನ್ ಬಾಕಿ ಉಳಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜಕೀಯ ಪಕ್ಷಗಳಿಗೆ ಮಾಹಿತಿ ನೀಡಲು ಸೂಚನೆ
ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡುವ ಉದ್ದೇಶದಿಂದ, ಎಎಸ್‌ಡಿಡಿಒ (ASDDO) ಮತದಾರರ ಸಂಖ್ಯೆ ಹೆಚ್ಚಿರುವ ಪ್ರದೇಶಗಳ ಬಗ್ಗೆ ಸಂಬಂಧಿತ ರಾಜಕೀಯ ಪಕ್ಷಗಳಿಗೆ ಮಾಹಿತಿ ನೀಡುವಂತೆ ಚುನಾವಣಾ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್‌ಬುಕುಮಾರ್ ತಿಳಿಸಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement