ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೇತೃತ್ವದ ಸಚಿವ ಸಂಪುಟವು ಸೋಮವಾರ ಸಂಜೆ ವಿಸ್ತರಣೆಯಾಯಿತು. ಆದರೆ ಕಾಂಗ್ರೆಸ್ ಹೈಕಮಾಂಡ್ 20 ನೂತನ ಸಚಿವರ ಹೆಸರನ್ನು ಅನುಮೋದಿಸಿದ್ದರೂ, ಕೊನೆಯ ಕ್ಷಣದಲ್ಲಿ 19 ಮಂದಿ ಮಾತ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ಸೋಮವಾರ ಸಂಜೆ 5 ಗಂಟೆಗೆ ಲೋಕಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು 19 ಸಚಿವರಿಗೆ ಪ್ರಮಾಣವಚನ ಬೋಧಿಸಿದರು. ಆದರೆ ಗಾಯತ್ರಿ ಶಾಂತೇಗೌಡ ಅವರಿಗೆ ಕೊನೆಯ ಕ್ಷಣದಲ್ಲಿ ಸಚಿವಸ್ಥಾನ ಕೈತಪ್ಪಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಪತ್ರ ಬರೆದು, ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲು 20 ಸಚಿವರ ಹೆಸರನ್ನು ಕಾಂಗ್ರೆಸ್ ಹೈಕಮಾಂಡ್ ಅನುಮೋದಿಸಿದೆ ಎಂದು ತಿಳಿಸಿದ್ದರು.
ಆದರೆ ಕೆ.ಸಿ.ವೇಣುಗೋಪಾಲ ಕಳುಹಿಸಿದ ಪಟ್ಟಿಯಲ್ಲಿ ಹೆಸರಿದ್ದರೂ ಗಾಯತ್ರಿ ಶಾಂತೇಗೌಡ ಅವರು ಸೋಮವಾರ ಪ್ರಮಾಣವಚನ ಸ್ವೀಕರಿಸಲಿಲ್ಲ. ಇದರಿಂದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನೇತೃತ್ವದ ಸಚಿವ ಸಂಪುಟದಲ್ಲಿ ಮಹಿಳಾ ಪ್ರಾತಿನಿಧ್ಯವೇ ಇಲ್ಲದಂತಾಯಿತು.
ಕೊನೆಯ ಕ್ಷಣದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳು ಕೊನೆ ಕ್ಷಣದಲ್ಲಿ ಗಾಯತ್ರಿ ಶಾಂತೇಗೌಡ ಅವರಿಗೆ ಸಚಿವ ಸ್ಥಾನ ಕೈತಪ್ಪಲು ಕಾರಣ ಎನ್ನಲಾಗಿದೆ. ಮಹಿಳಾ ಸಚಿವ ಸ್ಥಾನಕ್ಕಾಗಿ ನಡೆದ ತೀವ್ರ ಪೈಪೋಟಿಯಿಂದಾಗಿ ಇದಕ್ಕೆ ಪ್ರಮುಖ ಕಾರಣ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಗಾಯತ್ರಿ ಶಾಂತೇಗೌಡ ಅವರ ಹೆಸರು ಮೊದಲಿನ ಪಟ್ಟಿಯಲ್ಲಿ ಇದ್ದರೂ, ಪ್ರಮಾಣವಚನ ಸ್ವೀಕರಿಸಲು ಮುಖ್ಯಮಂತ್ರಿ ಕಚೇರಿಯಿಂದ ಅವರಿಗೆ ಯಾವುದೇ ಕರೆ ಬರಲಿಲ್ಲ. ಪರಿಷತ್ ಸದಸ್ಯೆಯಾಗಿ ಅವರು ಇನ್ನೂ ಪ್ರಮಾಣವಚನ ಸ್ವೀಕರಿಸದಿರುವುದು ಹಾಗೂ ಪಕ್ಷದೊಳಗೆ ಅವರಿಗೆ ಸಚಿವ ಸ್ಥಾನ ನೀಡುವುದರ ವಿರುದ್ಧ ಇರುವ ಅಸಮಾಧಾನ ಈ ಬೆಳವಣಿಗೆಗೆ ಕಾರಣ ಎನ್ನಲಾಗಿದೆ.
19 ಶಾಸಕರು ಸಚಿವರಾಗಿ ಪ್ರಮಾಣ ವಚನ
ಮೊದಲಿಗೆ ಮಾಜಿ ಮುಖ್ಯಮಂತ್ರಿ ದಿವಂಗತ ಧರ್ಮಸಿಂಗ್ ಅವರ ಪುತ್ರ ಡಾ. ಅಜಯ ಸಿಂಗ್ ಪ್ರಮಾಣವಚನ ಸ್ವೀಕರಿಸಿದರು. ನಂತರ ಕ್ರಮವಾಗಿ ಎಚ್.ಸಿ. ಬಾಲಕೃಷ್ಣ, ಕೆ.ಎಸ್. ಬಸವಂತಪ್ಪ, ಬಸವರಾಜ ರಾಯರೆಡ್ಡಿ, ಎನ್. ಚಲುವರಾಯಸ್ವಾಮಿ, ಲಕ್ಷ್ಮಣ ಸವದಿ, ಮಧು ಬಂಗಾರಪ್ಪ, ಎಸ್.ಎಸ್. ಮಲ್ಲಿಕಾರ್ಜುನ, ಬಿ. ನಾಗೇಂದ್ರ, ಪಿ.ಎಂ. ನರೇಂದ್ರಸ್ವಾಮಿ, ಸಿ. ಪುಟ್ಟರಂಗಶೆಟ್ಟಿ, ಟಿ. ರಘುಮೂರ್ತಿ, ರಿಜ್ವಾನ್ ಅರ್ಷದ್, ರುದ್ರಪ್ಪ ಲಮಾಣಿ, ಸಂತೋಷ ಲಾಡ್, ಶಿವಲಿಂಗೇಗೌಡ, ಶಿವರಾಜ ತಂಗಡಗಿ, ವಿಜಯಾನಂದ ಕಾಶಪ್ಪನವರ ಹಾಗೂ ಜಮೀರ್ ಅಹ್ಮದ್ ಖಾನ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
ಸಚಿವ ಸಂಪುಟದಲ್ಲಿ ಮಹಿಳಾ ಸಚಿವರೇ ಇಲ್ಲ…!
ಕೊನೆ ಕ್ಷಣದಲ್ಲಿ ಗಾಯತ್ರಿ ಶಾಂತೇಗೌಡ ಅವರ ಹೆಸರನ್ನು ಕೈಬಿಟ್ಟ ಕಾರಣಕ್ಕೆ ಈಗ ಮುಖ್ಯಮಂತ್ರಿ ಶಿವಕುಮಾರ ಅವರ ಸಚಿವ ಸಂಪುಟದಲ್ಲಿ ಮಹಿಳಾ ಪ್ರಾತಿನಿಧ್ಯವೇ ಇಲ್ಲದಂತಾಗಿದೆ. ಮಹಿಳಾ ಸಚಿವ ಸ್ಥಾನಕ್ಕೆ ತೀವ್ರ ಪೈಪೋಟಿ ಇತ್ತು. ಗಾಯತ್ರಿ ಶಾಂತೇಗೌಡ ಅವರ ಜೊತೆಗೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಉಮಾಶ್ರೀ ಅವರ ಹೆಸರೂ ಚರ್ಚೆಯಲ್ಲಿ ಇತ್ತು. ಈ ಬಗ್ಗೆ ನಡೆದ ಸಭೆಯ ನಂತರ ಕೊನೆಯ ಕ್ಷಣದಲ್ಲಿ ಗಾಯತ್ರಿ ಶಾಂತೇಗೌಡ ಅವರ ಹೆಸರನ್ನು ಕೈಬಿಡಬೇಕು ಎಂಬ ರಾಜ್ಯ ನಾಯಕರ ಒತ್ತಡ ಹಾಕಿದ ನಂತರ ಮಣಿದ ಕಾಂಗ್ರೆಸ್ ಹೈಕಮಾಂಡ್ ಅವರ ಹೆಸರನ್ನು ಕೈಬಿಟ್ಟಿದೆ ಎನ್ನಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ