ಸಿಎಂ ಡಿಕೆ ಶಿವಕುಮಾರ ಸಚಿವ ಸಂಪುಟದಲ್ಲಿ 9 ಜಿಲ್ಲೆಗಳ ಶಾಸಕರಿಗೆ ಸಿಗದ ಸಚಿವ ಸ್ಥಾನ

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಸಂಪುಟದಲ್ಲಿ ೯ ಜಿಲ್ಲೆಗಳಿಗೆ ಪ್ರಾತಿನಿಧ್ಯವೇ ಸಿಕ್ಕಿಲ್ಲ. ಸೋಮವಾರ (ಆಗಸ್ಟ್‌ 3) ನಡೆದ ಸಚಿವ ಸಂಪುಟದ ವಿಸ್ತರಣೆ ವೇಳೆ 19 ಮಂದಿ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, 9 ಜಿಲ್ಲೆಗಳಿಗೆ ಪ್ರಾತಿನಿಧ್ಯ ಸಿಕ್ಕಿಲ್ಲ.
 ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಿಕ್ಕಮಗಳೂರು, ಕೊಡಗು, ಉತ್ತರ ಕನ್ನಡ, ಉಡುಪಿ, ಬೀದರ, ವಿಜಯನಗರ ಜಿಲ್ಲೆಗಳಿಗೆ ಮಂತ್ರಿ ಮಂಡಳದಲ್ಲಿ ಯಾವುದೇ ಪ್ರಾತಿನಿಧ್ಯ ಸಿಗಲಿಲ್ಲ.
19 ಮಂದಿಯಲ್ಲಿ 9 ಮಂದಿ ಮೊದಲ ಬಾರಿಗೆ ಸಚಿವರಾಗುತ್ತಿದ್ದು, ಉಳಿದ 10 ಶಾಸಕರಿಗೆ ಪುನಃ ಅವಕಾಶ ಕಲ್ಪಿಸಲಾಗಿದೆ.
ಸಚಿವ ಸಂಪುಟದಲ್ಲಿ  ಲಿಂಗಾಯತ ಸಮುದಾಯಕ್ಕೆ 7, ಒಕ್ಕಲಿಗ ಸಮುದಾಯಕ್ಕೆ 6 ಸಚಿವ ಸ್ಥಾನ ನೀಡಲಾಗಿದೆ.  ಪರಿಶಿಷ್ಟ ಜಾತಿಗೆ 7 ಸ್ಥಾನಗಳು, ಪರಿಶಿಷ್ಟ ಪಂಗಡ ಮತ್ತು ಮುಸ್ಲಿಂ ಸಮುದಾಯಕ್ಕೆ ತಲಾ ಮೂರು ಸ್ಥಾನಗಳು, ಹಿಂದುಳಿದ ವರ್ಗಗಳಿಗೆ 7, ಈ ಪೈಕಿ ಕುರುಬ ಸಮುದಾಯಕ್ಕೆ ಎರಡು, ಈಡಿಗ, ಉಪ್ಪಾರ, ಕ್ಷತ್ರಿಯ ಮತ್ತು ಮರಾಠ ಸಮುದಾಯಕ್ಕೆ ತಲಾ ಒಂದು ಸಚಿವ ಸ್ಥಾನಗಳನ್ನು ನೀಡಲಾಗಿದೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸೇರಿದಂತೆ ಒಕ್ಕಲಿಗ ಸಮುದಾಯದ  ಕೃಷ್ಣಭೈರೇಗೌಡ, ಚೆಲುವರಾಯಸ್ವಾಮಿ, ಕೆ.ಎಂ.ಶಿವಲಿಂಗೇಗೌಡ, ಎಚ್‌.ಸಿ.ಬಾಲಕೃಷ್ಣ ಮತ್ತು ರಾಮಲಿಂಗಾರೆಡ್ಡಿ ಸಚಿವರಾಗಿದ್ದಾರೆ.  ಲಿಂಗಾಯತ ಸಮುದಾಯದಿಂದ ಎಂ.ಬಿ.ಪಾಟೀಲ, ಈಶ್ವರ ಖಂಡ್ರೆ, ಶರಣಪ್ರಕಾಶ ಪಾಟೀಲ, ಲಕ್ಷ್ಮಣ ಸವದಿ, ವಿಜಯಾನಂದ ಕಾಶಪ್ಪನವರ, ಬಸವರಾಜ ರಾಯರೆಡ್ಡಿ ಹಾಗೂ ಎಸ್‌.ಎಸ್‌.ಮಲ್ಲಿಕಾರ್ಜುನ ಸಚಿವರಾಗಿದ್ದಾರೆ.
ಪರಿಶಿಷ್ಟ ಜಾತಿಯ ಪೈಕಿ ಬಲಗೈ ಸಮುದಾಯದ ಡಾ.ಜಿ.ಪರಮೇಶ್ವರ ಉಪ ಮುಖ್ಯಮಂತ್ರಿಯಾಗಿದ್ದು, ಪ್ರಿಯಾಂಕ್‌ ಖರ್ಗೆ, ಪಿ.ಎಂ.ನರೇಂದ್ರಸ್ವಾಮಿ ಸಚಿವರಾಗಿದ್ದಾರೆ. ಎಡಗೈ ಸಮುದಾಯದ ಕೆ.ಎಚ್‌.ಮುನಿಯಪ್ಪ,  ಕೆ.ಎಸ್‌.ಬಸಂತಪ್ಪ ಅವಕಾಶ ಪಡೆದಿದ್ದಾರೆ. ಶಿವರಾಜ ತಂಗಡಗಿ,  ರುದ್ರಪ್ಪ ಲಮಾಣಿ ಅವರೂ ಸಚಿವರಾಗಿದ್ದಾರೆ. ಪರಿಶಿಷ್ಟ ಪಂಗಡದಿಂದ ಸತೀಶ ಜಾರಕಿಹೊಳಿ, ಬಿ.ನಾಗೇಂದ್ರ  ಹಾಗೂ ಟಿ.ರಘುಮೂರ್ತಿ ಅವರು ಸಚಿವರಾಗಿದ್ದಾರೆ.
ಹಿಂದುಳಿದ ವರ್ಗಗಳಲ್ಲಿ  ಕುರುಬ ಸಮುದಾಯದಿಂದ ಬೈರತಿ ಸುರೇಶ, ಯತೀಂದ್ರ ಸಿದ್ದರಾಮಯ್ಯ, ಈಡಿಗ ಸಮುದಾಯದಿಂದ ಮಧು ಬಂಗಾರಪ್ಪ, ಉಪ್ಪಾರ ಸಮುದಾಯದಿಂದ ಪುಟ್ಟರಂಗಶೆಟ್ಟಿ, ಕ್ಷತ್ರಿಯ ಸಮುದಾಯದಿಂದ ಅಜಯ ಸಿಂಗ್‌, ಮರಾಠ ಸಮುದಾಯದಿಂದ ಸಂತೋಷ ಲಾಡ್‌ ಸಚಿವರಾಗಿದ್ದಾರೆ.    ಮುಸ್ಲಿಂ ಸಮುದಾಯದಿಂದ ಯು.ಟಿ.ಖಾದರ್‌, ಜಮೀರ್‌ ಅಹಮದ್‌ ಖಾನ್‌ ಹಾಗೂ ರಿಜ್ವಾನ್‌ ಅರ್ಷದ್‌ ಸಚಿವ ಸ್ಥಾನ ಪಡೆದಿದ್ದಾರೆ. ಕ್ರೈಸ್ತ ಸಮುದಾಯದಿಂದ ಕೆ.ಜೆ.ಜಾರ್ಜ್‌ ಸಂಪುಟದಲ್ಲಿದ್ದಾರೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement