ನವದೆಹಲಿ : ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (Special Intensive Revision – SIR) ಗಡುವನ್ನು ಶುಕ್ರವಾರ ಮತ್ತೆ ವಿಸ್ತರಿಸಿದೆ.
ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ಜೂನ್ 30ರಿಂದ ಆರಂಭಗೊಂಡಿರುವ ಬೂತ್ ಮಟ್ಟದ ಅಧಿಕಾರಿಗಳ (BLO) ಮನೆ-ಮನೆ ಭೇಟಿ ಕಾರ್ಯವು ಆಗಸ್ಟ್ 17ರವರೆಗೆ ಮುಂದುವರಿಯಲಿದೆ. ಇದೇ ಅವಧಿಯೊಳಗೆ ಮತಗಟ್ಟೆಗಳ ಮರುಸಂರಚನೆ (ರೇಷನಲೈಸೇಷನ್) ಕಾರ್ಯವನ್ನೂ ಪೂರ್ಣಗೊಳಿಸಲಾಗುತ್ತದೆ.
ಹೊಸ ವೇಳಾಪಟ್ಟಿಯಂತೆ ಕರಡು ಮತದಾರರ ಪಟ್ಟಿಯನ್ನು ಆಗಸ್ಟ್ 24ರಂದು ಪ್ರಕಟಿಸಲಾಗುತ್ತದೆ. ಇದೇ ದಿನದಿಂದ ದಾವೆಗಳು (Claims) ಹಾಗೂ ಆಕ್ಷೇಪಣೆಗಳು (Objections) ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿ, ಸೆಪ್ಟೆಂಬರ್ 23ರವರೆಗೆ ಅವಕಾಶ ಕಲ್ಪಿಸಲಾಗಿದೆ.
ಇದೇ ವೇಳೆ, ಸಲ್ಲಿಕೆಯಾಗುವ ದಾವೆಗಳು ಮತ್ತು ಆಕ್ಷೇಪಣೆಗಳ ವಿಚಾರಣೆ ಹಾಗೂ ವಿಲೇವಾರಿ ಪ್ರಕ್ರಿಯೆಯು ಆಗಸ್ಟ್ 24ರಿಂದ ಆರಂಭವಾಗಿ ಅಕ್ಟೋಬರ್ 22ರವರೆಗೆ ನಡೆಯಲಿದೆ. ಬಳಿಕ ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 27ರಂದು ಪ್ರಕಟಿಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ.
ಕರ್ನಾಟಕದಲ್ಲಿ ನಡೆಯುತ್ತಿರುವ ವಿಶೇಷ ಸಮಗ್ರ ಪರಿಷ್ಕರಣೆ (SIR) ಕಾರ್ಯದ ವೇಳಾಪಟ್ಟಿಯನ್ನು ಪರಿಷ್ಕರಿಸುವಂತೆ ರಾಜ್ಯದ ಮುಖ್ಯ ಚುನಾವಣಾಧಿಕಾರಿ (CEO) ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಈ ನಿರ್ಧಾರ ಕೈಗೊಂಡಿದೆ.
ಈ ಸಂಬಂಧ ಶುಕ್ರವಾರ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆದಿರುವ ಚುನಾವಣಾ ಆಯೋಗ, ಪರಿಷ್ಕೃತ ವೇಳಾಪಟ್ಟಿಯನ್ನು ಅಧಿಕೃತವಾಗಿ ತಿಳಿಸಿದೆ.
ಮತದಾರರ ಪಟ್ಟಿಯನ್ನು ಮತ್ತಷ್ಟು ನಿಖರ ಹಾಗೂ ಶುದ್ಧೀಕರಿಸುವ ಉದ್ದೇಶದಿಂದ ಈ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ.
ಇದಲ್ಲದೆ, ಪರಿಷ್ಕೃತ ವೇಳಾಪಟ್ಟಿಯ ಕುರಿತು ಸಂಬಂಧಪಟ್ಟ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ತಕ್ಷಣ ಮಾಹಿತಿ ನೀಡುವಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ನಿರ್ದೇಶನ ನೀಡಲಾಗಿದೆ. ಅಲ್ಲದೆ, ಲಭ್ಯವಿರುವ ಎಲ್ಲ ಮಾಧ್ಯಮಗಳ ಮೂಲಕ ಪರಿಷ್ಕೃತ ವೇಳಾಪಟ್ಟಿಯ ಬಗ್ಗೆ ವ್ಯಾಪಕ ಪ್ರಚಾರ ನಡೆಸುವಂತೆ ಸೂಚಿಸಲಾಗಿದೆ.
ಅದೇ ರೀತಿ, ಎಲ್ಲ ರಾಜಕೀಯ ಪಕ್ಷಗಳಿಗೂ ಪರಿಷ್ಕೃತ ವೇಳಾಪಟ್ಟಿಯನ್ನು ಲಿಖಿತ ರೂಪದಲ್ಲಿ ಅಧಿಕೃತವಾಗಿ ತಿಳಿಸಬೇಕು ಎಂದು ಚುನಾವಣಾ ಆಯೋಗ ನಿರ್ದೇಶನ ನೀಡಿದೆ.


ನಿಮ್ಮ ಕಾಮೆಂಟ್ ಬರೆಯಿರಿ