ಬೆಂಗಳೂರು: ನಗರದ ಎಫ್ಟಿಐ ಸರ್ಕಲ್ ಸಮೀಪ ಮಂಗಳವಾರ ಬೆಳಗ್ಗೆ ಅಂಡರ್ಪಾಸ್ ನಿರ್ಮಾಣ ಕಾಮಗಾರಿ ವೇಳೆ ಮಣ್ಣು ತಡೆಗೋಡೆ ಕುಸಿದು ಇಬ್ಬರು ಕಾರ್ಮಿಕರು ಮೃತಪಟ್ಟು, ಮೂವರು ಗಾಯಗೊಂಡ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಮಂಗಳವಾರ ಬೆಳಗ್ಗೆ ಸುಮಾರು 11 ಗಂಟೆಗೆ ಈ ಘಟನೆ ನಡೆದಿದ್ದು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಕೈಗೊಂಡಿರುವ ಅಂಡರ್ಪಾಸ್ ಯೋಜನೆಯ ಭಾಗವಾಗಿ ಸ್ಥಳದಲ್ಲಿ ಆರ್ಸಿಸಿ ಕಾಮಗಾರಿ ನಡೆಯುತ್ತಿತ್ತು. ಕಾಮಗಾರಿಗಾಗಿ ತೋಡಲಾಗಿದ್ದ ಗುಂಡಿಯಲ್ಲಿದ್ದ ನೀರನ್ನು ಹೊರಹಾಕುವ ಕಾರ್ಯ ನಡೆಯುತ್ತಿದ್ದ ವೇಳೆ ಏಕಾಏಕಿ ಮಣ್ಣು ಕುಸಿದಿದೆ. ಆಗ ಗುಂಡಿಯೊಳಗೆ ಒಟ್ಟು ಐವರು ಕಾರ್ಮಿಕರು ಇದ್ದರು ಎನ್ನಲಾಗಿದೆ. ಮಣ್ಣು ಕುಸಿಯುತ್ತಿದ್ದಂತೆ ಮೂವರು ಕಾರ್ಮಿಕರು ಹೊರಗೆ ಬರಲು ಯಶಸ್ವಿಯಾದರೆ, ಇಬ್ಬರು ಮಣ್ಣಿನಡಿ ಸಿಲುಕಿಕೊಂಡರು.
ಅಂಡರ್ಪಾಸ್ ನಿರ್ಮಾಣಕ್ಕಾಗಿ ರಸ್ತೆಯನ್ನು ಸುಮಾರು 20 ಅಡಿ ಆಳದ ವರೆಗೆ ಗುಂಡಿ ಅಗೆಯಲಾಗಿತ್ತು. ಇದೇ ಗುಂಡಿಯಲ್ಲಿ ಕಾರ್ಮಿಕರು ನಿರ್ಮಾಣ ಕಾಮಗಾರಿ ನಡೆಸುತ್ತಿದ್ದಾಗ ಮಣ್ಣು ಏಕಾಏಕಿ ಕುಸಿದಿದೆ.
ಮಾಹಿತಿ ತಿಳಿಯುತ್ತಿದ್ದಂತೆ ರಕ್ಷಣಾ ತಂಡಗಳು ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಮಣ್ಣಿನಡಿ ಸಿಲುಕಿದ್ದವರನ್ನು ಪತ್ತೆಹಚ್ಚಿ ರಕ್ಷಿಸಲು ತಕ್ಷಣವೇ ಕಾರ್ಯಾಚರಣೆ ಆರಂಭಿಸಲಾಯಿತು. ಮಣ್ಣು ಕುಸಿತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಮೃತರನ್ನು ಒಡಿಶಾ ಮೂಲದ 26 ವರ್ಷದ ಸೋನಾರಾಮ ಮತ್ತು 31 ವರ್ಷದ ಪರಿಮಳ ಎಂದು ಗುರುತಿಸಲಾಗಿದೆ. ಮಣ್ಣಿನಡಿ ಸಿಲುಕಿದ್ದ ಸೋನಾರಾಮ ಅವರನ್ನು ರಕ್ಷಿಸಿ ಕಣ್ವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಮತ್ತೊಂದೆಡೆ, ಮಣ್ಣಿನಡಿ ಸಿಲುಕಿದ್ದ ಪರಿಮಳ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ಘಟನೆಯಲ್ಲಿ ಸಮೂವರು ಗಾಯಗೊಂಡಿದ್ದು, ಇವರು ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳ ಮೂಲದವರು ಎಂದು ತಿಳಿದುಬಂದಿದೆ.


ನಿಮ್ಮ ಕಾಮೆಂಟ್ ಬರೆಯಿರಿ