ನವದೆಹಲಿ: ದೆಹಲಿ ಹೈಕೋರ್ಟ್ನ ಮಾಜಿ ನ್ಯಾಯಮೂರ್ತಿ ಯಶವಂತ ವರ್ಮಾ ಅವರ ಅಧಿಕೃತ ನಿವಾಸದಲ್ಲಿ ಭಾರೀ ಪ್ರಮಾಣದ ನಗದು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ರಚಿಸಿದ್ದ ತನಿಖಾ ಸಮಿತಿಯು ನ್ಯಾಯಮೂರ್ತಿ ವರ್ಮಾ ವಿರುದ್ಧ ಹೊರಿಸಲಾದ ಮೂರೂ ಆರೋಪಗಳೂ ಸಾಬೀತಾಗಿವೆ ಎಂದು ತೀರ್ಮಾನಿಸಿದೆ. ನವದೆಹಲಿಯ 30, ತುಘಲಕ್ ಕ್ರೆಸೆಂಟ್ನಲ್ಲಿರುವ ಅವರ ಅಧಿಕೃತ ನಿವಾಸದ ಸ್ಟೋರ್ರೂಮ್ನಲ್ಲಿ ಪತ್ತೆಯಾದ ನಗದಿನ ಮೂಲ, ಮಾಲೀಕತ್ವ ಹಾಗೂ ಘಟನೆಯ ಬಳಿಕ ಸಾಕ್ಷ್ಯ ಸಂರಕ್ಷಣೆಗೆ ಸಂಬಂಧಿಸಿದಂತೆ ವರ್ಮಾ ಅವರು ತೃಪ್ತಿಕರ ವಿವರಣೆ ನೀಡಿಲ್ಲ ಎಂದು ಸಮಿತಿ ಹೇಳಿದೆ.
2025ರ ಮಾರ್ಚ್ 14-15ರ ಮಧ್ಯರಾತ್ರಿ ನ್ಯಾಯಮೂರ್ತಿ ವರ್ಮಾ ಅವರ ಅಧಿಕೃತ ನಿವಾಸದ ಸ್ಟೋರ್ರೂಂನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಸ್ಥಳಕ್ಕೆ ಆಗಮಿಸಿದ್ದ ದೆಹಲಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳು ಸ್ಟೋರ್ರೂಮ್ನಲ್ಲಿ ದೊಡ್ಡಪ್ರಮಾಣದಲ್ಲಿ ಸುಟ್ಟ, ಭಾಗಶಃ ಸುಟ್ಟ, ಒದ್ದೆಯಾದ ಹಾಗೂ ಚದುರಿದ್ದ 500 ರೂಪಾಯಿ ಮುಖಬೆಲೆಯ ನೋಟುಗಳನ್ನು ಕಂಡಿದ್ದರು. ಹಲವು ಅಧಿಕಾರಿಗಳ ಹೇಳಿಕೆಗಳು, ಛಾಯಾಚಿತ್ರಗಳು ಹಾಗೂ ವಿಡಿಯೊ ದಾಖಲೆಗಳು ಸ್ಥಳದಲ್ಲಿ ನಗದು ಇದ್ದುದನ್ನು ದೃಢಪಡಿಸಿವೆ ಎಂದು ಸಮಿತಿ ವರದಿಯಲ್ಲಿ ತಿಳಿಸಿದೆ
. ಆದರೆ ಸ್ಥಳದಲ್ಲಿ ಪತ್ತೆಯಾದ ನೋಟುಗಳನ್ನು ವಶಪಡಿಸಿಕೊಂಡಿರಲಿಲ್ಲ. ಅವುಗಳನ್ನು ಎಣಿಸಿಯೂ ಇರಲಿಲ್ಲ ಹಾಗೂ ಸಂಪೂರ್ಣ ದಾಸ್ತಾನು ಪಟ್ಟಿಯನ್ನೂ ಸಿದ್ಧಪಡಿಸಿರಲಿಲ್ಲ. ಹೀಗಾಗಿ ನಗದಿನ ನಿಖರ ಮೊತ್ತ ಎಷ್ಟು ಎಂಬುದನ್ನು ವರದಿಯಲ್ಲಿ ಹೇಳಲು ಸಾಧ್ಯವಿಲ್ಲ ಎಂದು ಸಮಿತಿ ಸ್ಪಷ್ಟಪಡಿಸಿದೆ. ಆದರೆ ಇದರಿಂದ ನೋಟುಗಳ ಸಂಖ್ಯೆ ಕಡಿಮೆಯಾಗಿತ್ತು ಎಂದು ಅರ್ಥವಲ್ಲ. ಸ್ಟೋರ್ರೂಮ್ನಲ್ಲಿ 500 ರೂಪಾಯಿ ಮುಖಬೆಲೆಯ ನೋಟುಗಳು ದೊಡ್ಡ ಪ್ರಮಾಣದಲ್ಲಿದ್ದವು ಎಂಬುದನ್ನು ಲಭ್ಯವಿರುವ ಸಾಕ್ಷ್ಯಗಳು ಸ್ಪಷ್ಟವಾಗಿ ತೋರಿಸುತ್ತವೆ ಎಂದು ಸಮಿತಿ ಹೇಳಿದೆ.
ನಗದಿನ ಮೂಲದ ಬಗ್ಗೆ ತೃಪ್ತಿಕರ ಉತ್ತರ ಇಲ್ಲ
ಮೊದಲ ಆರೋಪವೆಂದರೆ, ನ್ಯಾಯಮೂರ್ತಿ ವರ್ಮಾ ಅವರ ನಿಯಂತ್ರಣದಲ್ಲಿದ್ದ ಸರ್ಕಾರಿ ಆವರಣದಲ್ಲಿ ದೊಡ್ಡ ಪ್ರಮಾಣದ ನಗದು ಪತ್ತೆಯಾಗಿದ್ದು, ಅದರ ಮೂಲ ಅಥವಾ ಮಾಲೀಕತ್ವದ ಬಗ್ಗೆ ಸ್ಪಷ್ಟತೆ ಇರಲಿಲ್ಲ ಎಂಬುದು. ಈ ಆರೋಪ ಸಾಬೀತಾಗಿದೆ ಎಂದು ಸಮಿತಿ ಹೇಳಿದೆ. ನ್ಯಾಯಮೂರ್ತಿಗಳ ಅಧಿಕೃತ ನಿವಾಸದ ಸ್ಟೋರ್ರೂಮ್ನಲ್ಲಿ ವಿವರಿಸಲಾಗದಷ್ಟು ದೊಡ್ಡ ಪ್ರಮಾಣದ 500 ರೂಪಾಯಿ ನೋಟುಗಳು ಪತ್ತೆಯಾಗಿದ್ದು, ಅವುಗಳ ಉಪಸ್ಥಿತಿ, ಮೂಲ ಅಥವಾ ಮಾಲೀಕತ್ವದ ಬಗ್ಗೆ ನ್ಯಾಯಮೂರ್ತಿ ವರ್ಮಾ ಅವರು ತೃಪ್ತಿಕರ ವಿವರಣೆ ನೀಡಲು ವಿಫಲರಾಗಿದ್ದಾರೆ ಎಂದು ವರದಿ ಹೇಳಿದೆ. ಆದಾಗ್ಯೂ, ಪತ್ತೆಯಾದ ನೋಟುಗಳು ವೈಯಕ್ತಿಕವಾಗಿ ನ್ಯಾಯಮೂರ್ತಿ ವರ್ಮಾ ಅವರದ್ದೇ ಎಂದು ಸಮಿತಿ ನೇರವಾಗಿ ತೀರ್ಮಾನಿಸಿಲ್ಲ. ಆದರೆ ಅವರ ನಿಯಂತ್ರಣದಲ್ಲಿದ್ದ ಆವರಣದಲ್ಲಿ ಇಷ್ಟು ದೊಡ್ಡ ಪ್ರಮಾಣದ ನಗದು ಪತ್ತೆಯಾಗಿರುವುದು ಮತ್ತು ಅದರ ಬಗ್ಗೆ ತೃಪ್ತಿಕರ ವಿವರಣೆ ಇಲ್ಲದಿರುವುದು ಮೊದಲ ಆರೋಪವನ್ನು ಸಾಬೀತುಪಡಿಸಲು ಸಾಕಷ್ಟಾಗಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ. ತಾವು ಸ್ಥಳದಲ್ಲಿರಲಿಲ್ಲ, ಇತರರಿಗೆ ನಿವಾಸಕ್ಕೆ ಪ್ರವೇಶವಿತ್ತು ಹಾಗೂ ನಗದು ತಮ್ಮದಲ್ಲ ಎಂಬ ನ್ಯಾಯಮೂರ್ತಿ ವರ್ಮಾ ಅವರ ವಾದಗಳನ್ನು ಸಮಿತಿ ಅಂಗೀಕರಿಸಲಿಲ್ಲ. ಯಾರೋ ತಮ್ಮ ವಿರುದ್ಧದ ಸಂಚಿನ ಭಾಗವಾಗಿ ನೋಟುಗಳನ್ನು ಅಲ್ಲಿ ಇಟ್ಟಿರಬಹುದು ಎಂಬ ವಾದಕ್ಕೂ ದೃಢವಾದ ಸಾಕ್ಷ್ಯ ಸಿಕ್ಕಿಲ್ಲ ಎಂದು ಸಮಿತಿ ಹೇಳಿದೆ. ನಗದು ಇಟ್ಟ ವ್ಯಕ್ತಿ ಯಾರು ಎಂಬುದು ಪತ್ತೆಯಾಗಿಲ್ಲ. ಅವರು ಯಾವ ದಿನ ಬಂದಿದ್ದರು ಎಂಬುದಕ್ಕೆ ಯಾವುದೇ ದೃಢೀಕರಣವಿಲ್ಲ. ಇಷ್ಟು ದೊಡ್ಡ ಮೊತ್ತದ ನಗದನ್ನು ಯಾರ ಗಮನಕ್ಕೂ ಬಾರದಂತೆ ಹೇಗೆ ಅಲ್ಲಿಗೆ ಸಾಗಿಸಲಾಯಿತು ಎಂಬುದಕ್ಕೂ ವಿವರಣೆ ಇಲ್ಲ ಎಂದು ಸಮಿತಿ ತಿಳಿಸಿದೆ.
ಸಾಕ್ಷ್ಯ ಸಂರಕ್ಷಣೆಯಲ್ಲಿ ಗಂಭೀರ ಲೋಪ
ಎರಡನೇ ಆರೋಪವು ಬೆಂಕಿ ನಂದಿಸಿದ ಬಳಿಕ ಘಟನಾ ಸ್ಥಳ ಮತ್ತು ಅಲ್ಲಿದ್ದ ಸಾಕ್ಷ್ಯಗಳನ್ನು ಸಮರ್ಪಕವಾಗಿ ಸಂರಕ್ಷಿಸುವಲ್ಲಿ ವಿಫಲವಾದ ಬಗ್ಗೆ ಇತ್ತು. ಸರ್ಕಾರಿ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಆವರಣವನ್ನು ಪರಿಶೀಲಿಸಿ ಕಾನೂನುಬದ್ಧವಾಗಿ ಸೀಲ್ ಮಾಡುವ ಮೊದಲೇ ಸ್ಟೋರ್ರೂಮ್ನ ಸ್ಥಿತಿಯನ್ನು ಬದಲಾಯಿಸಲಾಗಿತ್ತು ಎಂದು ಸಮಿತಿ ಹೇಳಿದೆ. ಬಳಿಕ ಅಲ್ಲಿ ಪತ್ತೆಯಾಗಿದ್ದ ನಗದು ಲಭ್ಯವಿಲ್ಲದಂತಾಯಿತು. ಆದರೆ ನೋಟುಗಳನ್ನು ನ್ಯಾಯಮೂರ್ತಿ ವರ್ಮಾ ಅವರೇ ತೆಗೆದುಹಾಕಿದರು ಎಂದು ಸಮಿತಿ ನೇರವಾಗಿ ಹೇಳಿಲ್ಲ. ಬದಲಾಗಿ, ಪ್ರಮುಖ ಸಾಕ್ಷ್ಯಗಳನ್ನು ಸಂರಕ್ಷಿಸದಿರುವುದು ಮತ್ತು ಘಟನಾ ಸ್ಥಳದ ಸ್ಥಿತಿ ಬದಲಾಗಲು ಅವಕಾಶ ನೀಡಿರುವ ಆಧಾರದ ಮೇಲೆ ಎರಡನೇ ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿದೆ. ಸಾಕ್ಷ್ಯಗಳನ್ನು ಸುರಕ್ಷಿತವಾಗಿ ವಶಕ್ಕೆ ಪಡೆಯಲಾಗಲಿಲ್ಲ ಅಥವಾ ಸಂರಕ್ಷಿಸಲಾಗಲಿಲ್ಲ; ಕಾನೂನುಬದ್ಧವಾಗಿ ಸೀಲ್ ಮಾಡಿ ಪರಿಶೀಲಿಸುವ ಮೊದಲೇ ಸ್ಟೋರ್ರೂಮ್ನ ಸಾಕ್ಷ್ಯಾತ್ಮಕ ಸ್ಥಿತಿಗೆ ಧಕ್ಕೆಯಾಯಿತು; ನಂತರ ನೋಟುಗಳು ಲಭ್ಯವಿಲ್ಲದಿರುವುದಕ್ಕೆ ಯಾವುದೇ ವಿವರಣೆ ದೊರಕಿಲ್ಲ ಎಂದು ವರದಿ ಹೇಳಿದೆ. ಆವರಣಕ್ಕೆ ಸಂಬಂಧಿಸಿದ ವ್ಯವಸ್ಥೆಯ ಮೂಲಕ ನಡೆದ ಸ್ಥಿತಿಯ ಬದಲಾವಣೆಯನ್ನು ತಡೆಯಲು ವಿಫಲವಾಗಿರುವುದು ಮತ್ತು ಅದರ ಪರಿಣಾಮವಾಗಿ ಪ್ರಮುಖ ಸಾಕ್ಷ್ಯ ನಷ್ಟವಾಗಿರುವುದನ್ನೇ ಸಮಿತಿ ಆಧಾರವನ್ನಾಗಿ ಮಾಡಿಕೊಂಡಿದೆ; ನ್ಯಾಯಮೂರ್ತಿ ಸ್ವತಃ ನೋಟುಗಳನ್ನು ತೆಗೆದುಕೊಂಡಿದ್ದಾರೆ ಎಂಬ ನೇರ ಸಾಕ್ಷ್ಯದ ಮೇಲೆ ಈ ನಿರ್ಣಯ ಮಾಡಿಲ್ಲ ಎಂದು ಸಮಿತಿಯು ಸ್ಪಷ್ಟಪಡಿಸಿದೆ. ಬೆಂಕಿ ಘಟನೆ ಬಳಿಕ ತಾವು ಏನು ಕ್ರಮ ಕೈಗೊಂಡರು, ಸಿಬ್ಬಂದಿ ಅಥವಾ ಮನೆಯ ಸದಸ್ಯರಿಂದ ಏನು ವಿಚಾರಿಸಿದರು, ಅವರಿಗೆ ಯಾವ ಉತ್ತರಗಳು ದೊರೆತವು ಮತ್ತು ಘಟನಾ ಸ್ಥಳವನ್ನು ಸುರಕ್ಷಿತವಾಗಿರಿಸಲು ಯಾವ ಕ್ರಮಗಳನ್ನು ತೆಗೆದುಕೊಂಡರು ಎಂಬ ಪ್ರಮುಖ ಪ್ರಶ್ನೆಗಳಿಗೆ ನ್ಯಾಯಮೂರ್ತಿ ವರ್ಮಾ ಅವರಿಂದ ಸಮರ್ಪಕ ಉತ್ತರ ಇರಲಿಲ್ಲ ಎಂದು ಸಮಿತಿ ಹೇಳಿದೆ.
ವಿವರಣೆ ಅಪೂರ್ಣ…
ಮೂರನೇ ಆರೋಪವು ಘಟನೆಯ ಬಗ್ಗೆ ನ್ಯಾಯಮೂರ್ತಿ ವರ್ಮಾ ಅವರು ನೀಡಿದ ವಿಭಿನ್ನ ವಿವರಣೆಗಳಿಗೆ ಸಂಬಂಧಿಸಿದೆ. ಸಾಂವಿಧಾನಿಕ ಹುದ್ದೆಯಲ್ಲಿದ್ದ ವ್ಯಕ್ತಿಯಿಂದ ಇಂತಹ ಸಂದರ್ಭದಲ್ಲಿ ನಿರೀಕ್ಷಿಸುವಷ್ಟು ಸ್ಪಷ್ಟತೆ ಅವರ ಉತ್ತರಗಳಲ್ಲಿ ಇರಲಿಲ್ಲ ಎಂದು ಸಂಸದೀಯ ತನಿಖಾ ಸಮಿತಿ ಹೇಳಿದೆ. ಮೊದಲಿಗೆ ನ್ಯಾಯಮೂರ್ತಿ ವರ್ಮಾ ಅವರು ನಗದು ಬಗ್ಗೆ ತಮಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಹೇಳಿದ್ದರು. ಬಳಿಕ ನಗದನ್ನು ವಶಪಡಿಸಿಕೊಳ್ಳಲಾಗಿದೆಯೇ, ಎಣಿಕೆ ಮಾಡಲಾಗಿದೆಯೇ ಹಾಗೂ ಸ್ಥಳವನ್ನು ನಂತರ ಸ್ವಚ್ಛಗೊಳಿಸಿರುವ ಬಗ್ಗೆ ಪ್ರಶ್ನೆಗಳನ್ನು ಎತ್ತಿದರು. ಸಿಬ್ಬಂದಿಯ ಪಾತ್ರದ ಸಾಧ್ಯತೆಯನ್ನೂ ಅವರು ಪ್ರಸ್ತಾಪಿಸಿದ್ದರು. ನಗದನ್ನು ಸ್ಟೋರ್ರೂಮ್ನಲ್ಲಿ ಯಾರಾದರೂ ಇಟ್ಟಿರಬಹುದು ಅಥವಾ ಅಲ್ಲಿಂದ ತೆಗೆದುಕೊಂಡಿರಬಹುದು ಎಂದು ಸೂಚಿಸಿದ್ದರು. ಅಲ್ಲದೆ, ಇದರ ಹಿಂದೆ ಸಂಚು ಇರಬಹುದೆಂಬ ಸುಳಿವನ್ನೂ ನೀಡಿದ್ದರು. ಆದರೆ ಈ ಹೇಳಿಕೆಗಳನ್ನು ಸಮರ್ಥಿಸಲು ಯಾವುದೇ ದೃಢವಾದ ಸಾಕ್ಷ್ಯ ಅಥವಾ ಸಾಕ್ಷಿದಾರರನ್ನು ಹಾಜರುಪಡಿಸಲಾಗಿಲ್ಲ ಎಂದು ಸಮಿತಿ ತಿಳಿಸಿದೆ.
ಹೀಗಾಗಿ ನ್ಯಾಯಮೂರ್ತಿ ವರ್ಮಾ ಅವರ ವಿವರಣೆಗಳು ತಪ್ಪಿಸಿಕೊಳ್ಳುವ ರೀತಿಯವು, ಅಪೂರ್ಣವಾಗಿದ್ದು, ಅವುಗಳ ಪರಿಣಾಮವು ದಾರಿತಪ್ಪಿಸುವಂತಿತ್ತು ಎಂದು ಸಮಿತಿ ತೀರ್ಮಾನಿಸಿದೆ. ವಿಶೇಷವಾಗಿ 2025ರ ಮಾರ್ಚ್ 22ರಂದು ನೀಡಿದ ಅವರ ಉತ್ತರ ಹಾಗೂ ನಂತರದ ನಿಲುವುಗಳಲ್ಲಿ ಪರಿಸ್ಥಿತಿಗೆ ತಕ್ಕ ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ಸಾಂಸ್ಥಿಕ ಹೊಣೆಗಾರಿಕೆ ಕಾಣಿಸಲಿಲ್ಲ. ಸ್ವತಂತ್ರ ಸರ್ಕಾರಿ ಅಧಿಕಾರಿಗಳ ಹೇಳಿಕೆಗಳು ಹಾಗೂ ಇತರ ಪೂರಕ ಸಾಕ್ಷ್ಯಗಳೊಂದಿಗೆ ಹೋಲಿಸಿದಾಗ ಅವರ ವಿವರಣೆಗಳು ಅತೃಪ್ತಿಕರವಾಗಿದ್ದವು ಎಂದು ವರದಿ ಹೇಳಿದೆ.
ಅಗ್ನಿಶಾಮಕ, ಪೊಲೀಸ್ ಅಧಿಕಾರಿಗಳ ಕರ್ತವ್ಯದ ಮೇಲೂ ಪ್ರಶ್ನೆ ಘಟನಾ ಸ್ಥಳವನ್ನು ನಿರ್ವಹಿಸಿದ ಅಗ್ನಿಶಾಮಕ ದಳ ಹಾಗೂ ಪೊಲೀಸ್ ಅಧಿಕಾರಿಗಳ ಪಾತ್ರದ ಬಗ್ಗೆಯೂ ಸಮಿತಿ ಪ್ರಶ್ನೆಗಳನ್ನು ಎತ್ತಿದೆ. ಸ್ಥಳಕ್ಕೆ ಆಗಮಿಸಿದ್ದ ಅಧಿಕಾರಿಗಳು ಕಾನೂನಿನ ಪ್ರಕಾರ ತಮ್ಮ ಕರ್ತವ್ಯ ನಿರ್ವಹಿಸಬೇಕಿತ್ತು. ಆದರೆ ಅಲ್ಲಿ ಪತ್ತೆಯಾದ ನೋಟುಗಳನ್ನು ವಶಪಡಿಸಿಕೊಳ್ಳದಿರುವುದು ಹಾಗೂ ಸಾಕ್ಷ್ಯಗಳನ್ನು ಸಂರಕ್ಷಿಸದಿರುವುದು ಗಂಭೀರ ಲೋಪವಾಗಿದೆ ಎಂದು ಸಮಿತಿ ಹೇಳಿದೆ.
ಆರಂಭದಲ್ಲೇ ಘಟನಾ ಸ್ಥಳವನ್ನು ಸರಿಯಾಗಿ ನಿರ್ವಹಿಸದಿರುವುದು, ಅದರಲ್ಲೂ ಪ್ರಮುಖ ಸಾಕ್ಷ್ಯಗಳನ್ನು ಸಂರಕ್ಷಿಸುವಲ್ಲಿ ಉಂಟಾದ ಕೊರತೆಗಳು ತನಿಖೆಯ ಮೇಲೆ ಪರಿಣಾಮ ಬೀರಿವೆ ಎಂದು ಸಮಿತಿ ಗಮನಿಸಿದೆ. ವೈಯಕ್ತಿಕ ಮಾಲೀಕತ್ವದ ನೇರ ನಿರ್ಣಯವಿಲ್ಲ ತನಿಖಾ ಸಮಿತಿಯ ಪ್ರಮುಖ ತೀರ್ಮಾನವೆಂದರೆ, ನ್ಯಾಯಮೂರ್ತಿ ಯಶವಂತ ವರ್ಮಾ ವಿರುದ್ಧದ ಮೂರೂ ಆರೋಪಗಳು ಸಾಬೀತಾಗಿವೆ. ಆದರೆ ಪತ್ತೆಯಾದ ನಗದು ವೈಯಕ್ತಿಕವಾಗಿ ವರ್ಮಾ ಅವರದ್ದೇ ಎಂದು ಅಥವಾ ಅವರು ಸ್ವತಃ ನೋಟುಗಳನ್ನು ತೆಗೆದುಹಾಕಿದರು ಎಂಬುದನ್ನು ಸಮಿತಿ ನೇರವಾಗಿ ನಿರ್ಣಯಿಸಿಲ್ಲ. ಆದರೂ, ಅವರ ನಿಯಂತ್ರಣದಲ್ಲಿದ್ದ ಅಧಿಕೃತ ನಿವಾಸದಲ್ಲಿ ದೊಡ್ಡ ಪ್ರಮಾಣದ 500 ರೂಪಾಯಿ ನೋಟುಗಳು ಪತ್ತೆಯಾಗಿರುವುದು, ಅವುಗಳ ಮೂಲ ಮತ್ತು ಮಾಲೀಕತ್ವದ ಬಗ್ಗೆ ತೃಪ್ತಿಕರ ವಿವರಣೆ ನೀಡದಿರುವುದು, ಘಟನಾ ಸ್ಥಳದ ಸಾಕ್ಷ್ಯಗಳನ್ನು ಸಮರ್ಪಕವಾಗಿ ಸಂರಕ್ಷಿಸದಿರುವುದು ಹಾಗೂ ಘಟನೆಯ ಬಗ್ಗೆ ನೀಡಿದ ವಿವರಣೆಗಳಲ್ಲಿ ಸ್ಪಷ್ಟತೆ ಮತ್ತು ಪಾರದರ್ಶಕತೆಯ ಕೊರತೆ ಇವೆಲ್ಲವನ್ನೂ ಪರಿಗಣಿಸಿ ಮೂರೂ ಆರೋಪಗಳು ಸಾಬೀತಾಗಿವೆ ಎಂದು ಸಮಿತಿ ಅಂತಿಮವಾಗಿ ಹೇಳಿದೆ.


ನಿಮ್ಮ ಕಾಮೆಂಟ್ ಬರೆಯಿರಿ