ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳು

ನಿತಿನ್ ನಬಿನ್ ಸಾರಥ್ಯದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ತಂಡದ ಪುನರ್ರಚನೆ : ಇದು ಮೋದಿ ಸಂಪುಟದ ಪುನರ್ರಚನೆಗೆ ಮುನ್ನುಡಿಯೇ ?

ನವದೆಹಲಿ: ಭಾರತೀಯ ಜನತಾ ಪಕ್ಷ(BJP)ದ ರಾಷ್ಟ್ರೀಯ ಪದಾಧಿಕಾರಿಗಳ ತಂಡಕ್ಕೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರನ್ನು ರಾಷ್ಟ್ರೀಯ ಖಜಾಂಚಿಯಾಗಿ ನೇಮಕ ಮಾಡಿರುವುದು ಇದೀಗ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರು ಸೋಮವಾರ ಪಕ್ಷದ ನೂತನ ರಾಷ್ಟ್ರೀಯ ಸಂಘಟನಾ ತಂಡವನ್ನು ಪ್ರಕಟಿಸಿದ್ದು, ಅದರಲ್ಲಿ ಕೇಂದ್ರ ಸಚಿವ ಪಿಯೂಷ್‌ ಗೋಯಲ್‌ ಅವರನ್ನು ಪ್ರಮುಖ ಸಂಘಟನಾ ಹುದ್ದೆಗೆ ನೇಮಿಸಿರುವುದು ವಿಶೇಷ ಗಮನ ಸೆಳೆದಿದೆ.
ಗೋಯಲ್ ಅವರ ನೇಮಕದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟದ ಪುನರ್ರಚನೆಯೂ ಶೀಘ್ರದಲ್ಲೇ ನಡೆಯಬಹುದೇ ಎಂಬ ಪ್ರಶ್ನೆಯೂ ಮುನ್ನೆಲೆಗೆ ಬಂದಿದೆ. ಈಗ ಬಿಜೆಪಿಯ ಸಂಘಟನಾ ಪುನರ್ರಚನೆ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟದತ್ತ ರಾಜಕೀಯ ವಲಯದ ಗಮನ ಹರಿದಿದೆ. ಮೋದಿ ಸರ್ಕಾರ ತನ್ನ ಮೂರನೇ ಅವಧಿಯಲ್ಲಿ ಎರಡು ವರ್ಷಗಳನ್ನು ಪೂರ್ಣಗೊಳಿಸಿರುವ ಸಂದರ್ಭದಲ್ಲಿ, ಶೀಘ್ರದಲ್ಲೇ ಕೇಂದ್ರ ಸಚಿವ ಸಂಪುಟ ಪುನರ್ರಚನೆ ನಡೆಯಬಹುದೇ ಎಂಬ ಚರ್ಚೆ ತೀವ್ರಗೊಂಡಿದೆ.

ಕಳೆದ ತಿಂಗಳು, ಧರ್ಮೇಂದ್ರ ಪ್ರಧಾನ್ ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು, ನಂತರ ಪ್ರಹ್ಲಾದ್ ಜೋಶಿ ಅವರಿಗೆ ಈ ಖಾತೆಯ ಹೆಚ್ಚುವರಿ ಹೊಣೆ ನೀಡಲಾಯಿತು. ರಾಜ್ಯಸಭೆಯ ಅವಧಿ ಮುಗಿದ ನಂತರ, ಜುಲೈ 24 ರಂದು ಪಂಜಾಬಿನ ರವನೀತ್ ಸಿಂಗ್ ಬಿಟ್ಟು ಅವರು ರೈಲ್ವೆ ಮತ್ತು ಆಹಾರ ಸಂಸ್ಕರಣಾ ಕೈಗಾರಿಕೆಗಳ ರಾಜ್ಯ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳು ಮತ್ತು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ರಾಜ್ಯ ಸಚಿವ ಜಾರ್ಜ್ ಕುರಿಯನ್ ಅವರು ಜೂನ್ ನಲ್ಲಿ ತಮ್ಮ ರಾಜ್ಯಸಭೆಯ ಅವಧಿ ಮುಗಿದ ನಂತರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಅಲ್ಲದೆ, ಬಿಜೆಪಿ ಇತ್ತೀಚೆಗೆ ಸಚಿವರಿಗೆ ಪಕ್ಷದ ಪ್ರಮುಖ ಸಾಂಸ್ಥಿಕ ಜವಾಬ್ದಾರಿಗಳನ್ನು ವಹಿಸಿದೆ. ಕೇಂದ್ರ ಸರ್ಕಾರದ ರಾಜ್ಯ ಸಚಿವ ಹರ್ಷ ಮಲ್ಹೋತ್ರಾ ಅವರನ್ನು ದೆಹಲಿ ಬಿಜೆಪಿ ಅಧ್ಯಕ್ಷರನ್ನಾಗಿ ನೇಮಿಸಿದರೆ, ರಾಜ್ಯ ಸಚಿವ ಪಂಕಜ ಚೌಧರಿ ಅವರನ್ನು ಪಕ್ಷದ ಉತ್ತರ ಪ್ರದೇಶ ಬಿಜೆಪಿ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರನ್ನು ಈಗ ಬಿಜೆಪಿಯ ರಾಷ್ಟ್ರೀಯ ಖಜಾಂಚಿಯಾಗಿ ನೇಮಿಸಲಾಗಿದೆ.
ತಮ್ಮ ಎರಡನೇ ಅವಧಿಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅಧಿಕಾರ ವಹಿಸಿಕೊಂಡ ಎರಡು ವರ್ಷಗಳಲ್ಲಿ ಪ್ರಮುಖ ಸಚಿವ ಸಂಪುಟ ಪುನರ್ರಚನೆ ಮಾಡಿದ್ದರು. ಹೀಗಾಗಿ ಈ ಬೆಳವಣಿಗೆಗಳು ಬಿಜೆಪಿಯ ಸಾಂಸ್ಥಿಕ ಪುನರ್ರಚನೆಯ ನಂತರ ಸರ್ಕಾರವು ಸಚಿವ ಸಂಪುಟದಲ್ಲಿ ಬದಲಾವಣೆಗಳನ್ನು ಮಾಡಬಹುದೇ ಎಂಬ ಊಹಾಪೋಹಗಳಿಗೆ ಕಾರಣವಾಗಿವೆ.

ಆದರೆ, ಗೋಯಲ್ ಅವರನ್ನು ಸಚಿವ ಸ್ಥಾನದಿಂದ ಕೈಬಿಡಲಾಗುತ್ತದೆ ಎಂಬುದಕ್ಕೆ ಸದ್ಯ ಯಾವುದೇ ಅಧಿಕೃತ ಸೂಚನೆ ಇಲ್ಲ. ಹೀಗಾಗಿ ಸಂಪುಟ ಪುನರ್ರಚನೆಯ ಸಾಧ್ಯತೆ ಕುರಿತು ನಡೆಯುತ್ತಿರುವ ಚರ್ಚೆ ಈ ಹಂತದಲ್ಲಿ ಊಹಾಪೋಹದ ಮಟ್ಟದಲ್ಲೇ ಉಳಿದಿದೆ.
ಗೋಯಲ್ ಅವರ ನೇಮಕಕ್ಕೆ ಹೆಚ್ಚಿನ ಮಹತ್ವ ಸಿಕ್ಕಿರುವುದಕ್ಕೆ ಪ್ರಮುಖ ಕಾರಣ ಬಿಜೆಪಿಯಲ್ಲಿರುವ ದೀರ್ಘಕಾಲದಿಂದ ಅಲಿಖಿತವಾಗಿ ನಡೆದುಕೊಂಡು ಬಂದಿರುವ ‘ಒಬ್ಬ ವ್ಯಕ್ತಿ–ಒಂದು ಹುದ್ದೆ’ ಎಂಬ ಸಂಪ್ರದಾಯ. ಸಾಮಾನ್ಯವಾಗಿ ಪಕ್ಷದ ಪ್ರಮುಖ ಸಂಘಟನಾ ಹುದ್ದೆ ಮತ್ತು ಸರ್ಕಾರದ ಪ್ರಮುಖ ಜವಾಬ್ದಾರಿಯನ್ನು ಒಂದೇ ಸಮಯದಲ್ಲಿ ನಿರ್ವಹಿಸುವುದನ್ನು ಬಿಜೆಪಿ ತಪ್ಪಿಸುತ್ತಾ ಬಂದಿದೆ.
ಆದರೆ ಈ ತತ್ವ ಸಂಪೂರ್ಣ ಕಟ್ಟುನಿಟ್ಟಿನ ನಿಯಮವೇನಲ್ಲ. ಇದಕ್ಕೆ ಇತ್ತೀಚಿನ ಪ್ರಮುಖ ಉದಾಹರಣೆ ಜೆ.ಪಿ. ನಡ್ಡಾ. 2024ರ ಜೂನ್‌ನಲ್ಲಿ ಮೋದಿ ಸಂಪುಟಕ್ಕೆ ಸೇರ್ಪಡೆಯಾದ ಬಳಿಕವೂ ನಡ್ಡಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿದಿದ್ದರು. ಆಗ ಅವರು ಕೇಂದ್ರ ಆರೋಗ್ಯ ಸಚಿವರ ಜೊತೆಗೆ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾಗಿಯೂ ಜವಾಬ್ದಾರಿ ನಿರ್ವಹಿಸಿದ್ದರು.
ನಂತರ 2026ರ ಜನವರಿಯಲ್ಲಿ ನಡ್ಡಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದರು. ಅವರ ಸ್ಥಾನಕ್ಕೆ ನಿತಿನ್ ನಬಿನ್ ಅಧಿಕಾರ ವಹಿಸಿಕೊಂಡರು. ಹೀಗಾಗಿ ಗೋಯಲ್ ಅವರ ಪ್ರಕರಣದಲ್ಲಿಯೂ ಪಕ್ಷವು ಇದೇ ಮಾದರಿಯನ್ನು ಅನುಸರಿಸಲಿದೆಯೇ ಎಂಬ ಕುತೂಹಲ ಮೂಡಿದೆ.

ಪ್ರಮುಖ ಸುದ್ದಿ :-   ದೇವಸ್ಥಾನದಲ್ಲಿ ಕಾಲ್ತುಳಿತ : 7 ಮಂದಿ ಸಾವು, ಹಲವರಿಗೆ ಗಾಯ

ವಾಣಿಜ್ಯ ಸಚಿವರಾಗಿ ಗೋಯಲ್‌  ಮಹತ್ವ
ಪಿಯೂಷ್ ಗೋಯಲ್ ಅವರು ಪ್ರಸ್ತುತ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾಗಿದ್ದು, ಮೋದಿ ಸರ್ಕಾರದ ಆರ್ಥಿಕ ನೀತಿ ಮತ್ತು ಅಂತಾರಾಷ್ಟ್ರೀಯ ವ್ಯಾಪಾರ ಕಾರ್ಯತಂತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ವ್ಯಾಪಾರ, ಹೂಡಿಕೆ ಹಾಗೂ ಜಾಗತಿಕ ಆರ್ಥಿಕ ಪಾಲುದಾರಿಕೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅವರು ಸರ್ಕಾರದ ಪ್ರಮುಖ ಮುಖವಾಗಿದ್ದಾರೆ.
ವಿಶೇಷವಾಗಿ ಭಾರತ ಮತ್ತು ಅಮೆರಿಕ ನಡುವೆ ನಡೆಯುತ್ತಿರುವ ಮುಕ್ತ ವ್ಯಾಪಾರ ಒಪ್ಪಂದ (FTA) ಮಾತುಕತೆಗಳಲ್ಲಿ ಗೋಯಲ್ ಅವರ ಪಾತ್ರ ಮಹತ್ವದ್ದಾಗಿದೆ. ಭಾರತದ ವ್ಯಾಪಾರ ಹಿತಾಸಕ್ತಿಗಳನ್ನು ಮುಂದಿಟ್ಟುಕೊಂಡು ನಡೆಯುತ್ತಿರುವ ಅಂತಾರಾಷ್ಟ್ರೀಯ ಮಾತುಕತೆಗಳಲ್ಲಿ ಅವರು ಪ್ರಮುಖವಾಗಿ ತೊಡಗಿಸಿಕೊಂಡಿದ್ದಾರೆ.
ಇದೇ ಕಾರಣಕ್ಕೆ ವಾಣಿಜ್ಯ ಸಚಿವಾಲಯದಂತಹ ಮಹತ್ವದ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವ ವ್ಯಕ್ತಿಗೆ ಪಕ್ಷದ ರಾಷ್ಟ್ರೀಯ ಖಜಾಂಚಿ ಹುದ್ದೆಯನ್ನೂ ನೀಡಿರುವುದು ಕೇವಲ ಸಂಘಟನಾ ನೇಮಕವೋ ಅಥವಾ ಮುಂದಿನ ರಾಜಕೀಯ ಬದಲಾವಣೆಯ ಸೂಚನೆಯೋ ಎಂಬ ಬಗ್ಗೆ
ಗೊಂದಲವನ್ನೂ ಉಂಟು ಮಾಡಿದೆ.

ಎರಡು ರೀತಿಯ ರಾಜಕೀಯ ವ್ಯಾಖ್ಯಾನ
ಗೋಯಲ್ ಅವರ ಹೊಸ ಜವಾಬ್ದಾರಿಯನ್ನು ಕನಿಷ್ಠ ಎರಡು ರೀತಿಯಲ್ಲಿ ವಿಶ್ಲೇಷಿಸಬಹುದು. ಮೊದಲನೆಯದಾಗಿ, ಬಿಜೆಪಿ ಅನುಭವಸಂಪನ್ನ ನಾಯಕನನ್ನು ಪಕ್ಷದ ಪ್ರಮುಖ ಸಂಘಟನಾ ವ್ಯವಸ್ಥೆಗೆ ಕರೆತರುವ ಉದ್ದೇಶ ಹೊಂದಿರಬಹುದು. ಗೋಯಲ್ ಅವರಿಗೆ ಆಡಳಿತದ ಅನುಭವದ ಜೊತೆಗೆ ಪಕ್ಷ ಸಂಘಟನೆ, ಚುನಾವಣಾ ನಿರ್ವಹಣೆ ಮತ್ತು ಹಣಕಾಸು ವಿಚಾರಗಳಲ್ಲಿ ಅಪಾರ ಅನುಭವವಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಖಜಾಂಚಿಯಂತಹ ಪ್ರಮುಖ ಹುದ್ದೆಗೆ ಅವರ ಆಯ್ಕೆ ಪಕ್ಷದ ಸಂಘಟನಾ ಸಾಮರ್ಥ್ಯವನ್ನು ಬಲಪಡಿಸುವ ಸಾಮಾನ್ಯ ಕ್ರಮವಾಗಿರಬಹುದು ಎಂದು ಊಹಿಸಬಹುದು.
ಎರಡನೆಯದಾಗಿ, ಬಿಜೆಪಿಯ “ಒಂದು ವ್ಯಕ್ತಿ-ಒಂದು ಹುದ್ದೆʼ ಅಲಿಖಿತ ಸಂಪ್ರದಾಯದಂತೆ ಸರ್ಕಾರ ಮತ್ತು ಪಕ್ಷದ ಜವಾಬ್ದಾರಿಗಳನ್ನು ಪ್ರತ್ಯೇಕಿಸುವ ಮುಂದಿನ ಹೆಜ್ಜೆಗೆ ಇದು ಮುನ್ನುಡಿಯೂ ಆಗಿರಬಹುದು. ಅಂದರೆ, ಪ್ರಸ್ತುತ ಸಚಿವರಾಗಿರುವ ಗೋಯಲ್ ಅವರಿಗೆ ಮೊದಲು ಪಕ್ಷದ ಜವಾಬ್ದಾರಿ ನೀಡಲಾಗಿದ್ದು, ಮುಂದಿನ ಹಂತದಲ್ಲಿ ಅವರು ಸಚಿವ ಸ್ಥಾನವನ್ನು ತ್ಯಜಿಸುವ ಸಾಧ್ಯತೆಯೂ ಇರಬಹುದು ಎಂದೂ ಊಹಿಸಬಹುದು. ಆದರೆ ಈ ಎರಡನೇ ವ್ಯಾಖ್ಯಾನಕ್ಕೆ ಸದ್ಯ ಯಾವುದೇ ಅಧಿಕೃತ ದೃಢೀಕರಣವಿಲ್ಲ. ಆದ್ದರಿಂದ ಗೋಯಲ್ ಅವರ ನೇಮಕವನ್ನು ತಕ್ಷಣವೇ ಸಂಪುಟದಿಂದ ಅವರ ನಿರ್ಗಮನದ ಸೂಚನೆ ಎಂದು ಈಗಲೇ ಪರಿಗಣಿಸಿದರೆ ಆತುರವಾಗಬಹುದು.

ಪ್ರಮುಖ ಸುದ್ದಿ :-   ಈ ಮೊದಲಿನ ರಾಜೀನಾಮೆ ಅಂಗೀಕರಿಸದ ಕಾರಣ ಬಿಜೆಪಿಗೆ ಮತ್ತೊಮ್ಮೆ ರಾಜೀನಾಮೆ ಸಲ್ಲಿಸಿದ ಶೆಹಜಾದ್ ಪೂನಾವಾಲಾ

ಗೋಯಲ್ ಕುಟುಂಬಕ್ಕೂ ಬಿಜೆಪಿಯ ಖಜಾಂಚಿ ಹುದ್ದೆಯ ನಂಟು
ಗೋಯಲ್ ಅವರ ನೇಮಕಕ್ಕೆ ಮತ್ತೊಂದು ವಿಶೇಷ ಹಿನ್ನೆಲೆಯೂ ಇದೆ. ಅವರ ತಂದೆ ವೇದಪ್ರಕಾಶ ಗೋಯಲ್ ಅವರು ಎರಡು ದಶಕಗಳಿಗಿಂತಲೂ ಹೆಚ್ಚು ಕಾಲ ಬಿಜೆಪಿಯ ರಾಷ್ಟ್ರೀಯ ಖಜಾಂಚಿಯಾಗಿ ಸೇವೆ ಸಲ್ಲಿಸಿದ್ದರು. ಪಿಯೂಷ್ ಗೋಯಲ್ ಅವರಿಗೂ ಈ ಹುದ್ದೆ ಹೊಸದಲ್ಲ. ಅವರು ಹಿಂದೆ ಕೂಡ ಬಿಜೆಪಿ ರಾಷ್ಟ್ರೀಯ ಖಜಾಂಚಿಯಾಗಿ ಕಾರ್ಯನಿರ್ವಹಿಸಿದ್ದರು.
ಹೀಗಾಗಿ ಗೋಯಲ್ ಅವರ ಹೊಸ ನೇಮಕದಲ್ಲಿ ಅವರ ವೈಯಕ್ತಿಕ ಸಂಘಟನಾ ಅನುಭವದ ಜೊತೆಗೆ ಕುಟುಂಬದ ರಾಜಕೀಯ ಹಿನ್ನೆಲೆಯ ನಂಟೂ ಕಾಣಿಸುತ್ತದೆ. ಪಕ್ಷದ ಹಣಕಾಸು ವ್ಯವಸ್ಥೆ ಮತ್ತು ಸಂಘಟನಾ ಕಾರ್ಯವೈಖರಿಯ ಬಗ್ಗೆ ಈಗಾಗಲೇ ಪರಿಚಯ ಹೊಂದಿರುವ ನಾಯಕರನ್ನೇ ಮತ್ತೊಮ್ಮೆ ಇದೇ ಜವಾಬ್ದಾರಿಗೆ ಆಯ್ಕೆ ಮಾಡಿರುವುದು ಗಮನಾರ್ಹವಾಗಿದೆ.

ಸಂಪುಟ ಪುನರಚ್ರನೆಗೆ ದಾರಿಯೇ..?
ಪಕ್ಷದ ಹೊಸ ರಾಷ್ಟ್ರೀಯ ಸಂಘಟನಾ ತಂಡ ರೂಪುಗೊಂಡಿರುವ ಸಂದರ್ಭದಲ್ಲಿ ಗೋಯಲ್ ಅವರಿಗೆ ಪ್ರಮುಖ ಜವಾಬ್ದಾರಿ ನೀಡಿರುವುದು ಮುಂದಿನ ರಾಜಕೀಯ ಬೆಳವಣಿಗೆಗಳ ಮೇಲೆ ಸಹಜವಾಗಿಯೇ ಗಮನ ಸೆಳೆದಿದೆ.
ಒಂದೆಡೆ, ಮೋದಿ ಸರ್ಕಾರದ ವ್ಯಾಪಾರ, ಹೂಡಿಕೆ ಮತ್ತು ಜಾಗತಿಕ ಆರ್ಥಿಕ ಸಂಬಂಧಗಳ ಕಾರ್ಯತಂತ್ರದಲ್ಲಿ ಗೋಯಲ್ ಅವರ ಪಾತ್ರ ಪ್ರಮುಖವಾಗಿದೆ. ಮತ್ತೊಂದೆಡೆ, ಪಕ್ಷದ ಸಂಘಟನೆ, ಚುನಾವಣಾ ನಿರ್ವಹಣೆ ಮತ್ತು ಹಣಕಾಸು ವ್ಯವಸ್ಥೆಯಲ್ಲಿಯೂ ಅವರ ಅನುಭವವನ್ನು ಬಿಜೆಪಿ ಬಳಸಿಕೊಳ್ಳಲು ಮುಂದಾಗಿದೆ.
ಹೀಗಾಗಿ ಈಗಿನ ಹಂತದಲ್ಲಿ ಗೋಯಲ್ ಅವರ ನೇಮಕವನ್ನು ಎರಡು ಸಂದೇಶಗಳನ್ನು ನೀಡುವ ಬೆಳವಣಿಗೆಯಾಗಿ ನೋಡಬಹುದು—ಒಂದೆಡೆ ಪಕ್ಷಕ್ಕೆ ಅನುಭವಸಂಪನ್ನ ಸಂಘಟಕನ ಸೇರ್ಪಡೆ; ಮತ್ತೊಂದೆಡೆ ಮುಂದಿನ ಸಚಿವ ಸಂಪುಟ ಪುನರ್‌ವ್ಯವಸ್ಥೆಯ ಸಾಧ್ಯತೆಯ ಕುರಿತು ಮೂಡಿರುವ ಕುತೂಹಲ.
ಬಿಜೆಪಿಯ ಹೊಸ ರಾಷ್ಟ್ರೀಯ ತಂಡ ಈಗ ರೂಪುಗೊಂಡಿರುವ ಹಿನ್ನೆಲೆಯಲ್ಲಿ ಮುಂದಿನ ಕೆಲವು ವಾರಗಳಲ್ಲಿ ಮೋದಿ ಸರ್ಕಾರದಲ್ಲಿ ಸಚಿವ ಸಂಪುಟ ಪುನರ್ರಚನೆ ನಡೆಯಬಹುದು ಎಂದು ಕೆಲವು ವಲಯಗಳಲ್ಲಿ ಊಹಿಸಲಾಗುತ್ತಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement