ಭೂಸ್ವಾಧೀನಾಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ ; ₹12.95 ಕೋಟಿ ಅಕ್ರಮ ಆಸ್ತಿ, 100 ಎಕರೆ ಕೃಷಿ ಭೂಮಿ ಪತ್ತೆ

ಬೆಂಗಳೂರು: ಆದಾಯದಕ್ಕಿಂತ ಹೆಚ್ಚು ಆಸ್ತಿ ಗಳಿಸಿದ ಆರೋಪ ಎದುರಿಸುತ್ತಿರುವ ಬೆಂಗಳೂರಿನ ವಿಶೇಷ ಭೂಸ್ವಾಧೀನ ಅಧಿಕಾರಿ ಮಲ್ಲಿಕಾರ್ಜುನ ಬಿ. ಅವರಿಗೆ ಸೇರಿದ್ದ 11 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಗುರುವಾರ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ. ಅಲ್ಲದೇ ಅಧಿಕಾರಿಯು 100 ಎಕರೆ ಕೃಷಿ ಭೂಮಿ ಹೊಂದಿರುವುದು ಪತ್ತೆಯಾಗಿದೆ.
ಬೆಂಗಳೂರಿನ ಸುಬ್ರಹ್ಮಣ್ಯ ನಗರ, ಗುಡ್ಡದಹಳ್ಳಿ, ಹೆಬ್ಬಾಳ ಸೇರಿದಂತೆ ಹಲವು ಕಡೆ ಮಲ್ಲಿಕಾರ್ಜುನ ಅವರಿಗೆ ಸೇರಿದ ಕಚೇರಿ ಮತ್ತು ನಿವಾಸಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅವರ ನಿವಾಸ ಮತ್ತು ಕಚೇರಿ ಹಾಗೂ ಅವರ ಸಂಬಂಧಿಕರಿಗೆ ಸಂಬಂಧಿಸಿದ ಆಸ್ತಿಗಳು ಮತ್ತು ಮನೆಗಳ ಮೇಲೆ ದಾಳಿ ನಡೆಸಲಾಯಿತು. ಕಾರ್ಯಾಚರಣೆಯ ಸಮಯದಲ್ಲಿ, ಲೋಕಾಯುಕ್ತ ಅಧಿಕಾರಿಗಳು ಅಪಾರ ಪ್ರಮಾಣದ ನಗದು, ಚಿನ್ನಾಭರಣ, ಆಸ್ತಿಗಳು ಮತ್ತು ಇತರ ಆಸ್ತಿಗಳನ್ನು ಪತ್ತೆಹಚ್ಚಿದ್ದಾರೆ ಎಂದು ವರದಿಯಾಗಿದೆ. ಶೋಧದ ಸಮಯದಲ್ಲಿ ಗುರುತಿಸಲಾದ ಅಕ್ರಮ ಆಸ್ತಿಗಳ ಒಟ್ಟು ಮೌಲ್ಯ ₹12.95 ಕೋಟಿ ಎಂದು ಅಂದಾಜಿಸಲಾಗಿದೆ.

11 ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ದಾಳಿ ವೇಳೆ ತಮ್ಮ ಕಾನೂನುಬದ್ಧ ಆದಾಯಕ್ಕಿಂತ ಹಲವು ಪಟ್ಟು ಅಧಿಕ ಆಸ್ತಿಯನ್ನು ಹೊಂದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಹೇಳಲಾಗಿದೆ. ಭೂಸ್ವಾಧೀನಾಧಿಕಾರಿಯು ಎರಡು ಐಷಾರಾಮಿ ಮನೆಗಳು, ಬರೋಬ್ಬರಿ 100 ಎಕರೆ 5 ಗುಂಟೆಯಷ್ಟು ಕೃಷಿ ಜಮೀನನ್ನು ಹೊಂದಿದ್ದಾರೆ. ಈ ಸ್ಥಿರಾಸ್ತಿಯ ಒಟ್ಟು ಮೌಲ್ಯವೇ ಸುಮಾರು 14.28 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ಅಲ್ಲದೆ, ಚರಾಸ್ತಿಯಲ್ಲೂ ಅವರು ಅಪಾರ ಸಂಪತ್ತು ಗಳಿಸಿದ್ದಾರೆ. ಹುಡುಕಾಟದಲ್ಲಿ ₹500 ನೋಟುಗಳ ಬಂಡಲ್‌ಗಳು ಸೇರಿದಂತೆ ₹2.53 ಕೋಟಿ ನಗದು ಪತ್ತೆಯಾಗಿದೆ. ಸುಮಾರು ₹3.10 ಲಕ್ಷ ಮೌಲ್ಯದ ಚಿನ್ನಾಭರಣಗಳು ಸಹ ಪತ್ತೆಯಾಗಿವೆ. 15 ಲಕ್ಷ ರೂ. ಮೌಲ್ಯದ ಐಷಾರಾಮಿ ವಾಹನಗಳು, ಬ್ಯಾಂಕ್ ಬ್ಯಾಲೆನ್ಸ್ ರೂಪದಲ್ಲಿ 1 ಕೋಟಿ ರೂ. ಮತ್ತು 33.40 ಲಕ್ಷ ರು. ಮೌಲ್ಯದ ಮನೆಯ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿದ್ದು, ಚರಾಸ್ತಿಯ ಒಟ್ಟು ಮೌಲ್ಯ 4.4 ಕೋಟಿ ರು. ಆಗಿದೆ ಎನ್ನಲಾಗಿದೆ.

ಪ್ರಮುಖ ಸುದ್ದಿ :-   ಕಾರವಾರದಲ್ಲಿ ಕಡಲತೀರದಲ್ಲಿ ಕಡಲಾಮೆ ಮೃತದೇಹ ಪತ್ತೆ

ಒಟ್ಟಾರೆಯಾಗಿ ಈ ಅಧಿಕಾರಿಯು ಗಳಿಸಿರುವ ಅಕ್ರಮ ಆಸ್ತಿಯ ಮೌಲ್ಯವು 18.33 ಕೋಟಿ ರು.ಆಗಿದ್ದು, ಇದರಲ್ಲಿ ಸುಮಾರು 12.95 ಕೋಟಿ ರು. ಅಕ್ರಮ ಆಸ್ತಿ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂಬಂಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಅಡಿಯಲ್ಲಿ ಬೆಂಗಳೂರು ನಗರ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಷ್ಟು ದೊಡ್ಡ ಪ್ರಮಾಣದ ಭೂಮಿಯನ್ನು ಮತ್ತು ನಗದು ಹಣವನ್ನು ಸರ್ಕಾರಿ ಸೇವೆಯಲ್ಲಿದ್ದ ವ್ಯಕ್ತಿ ಹೇಗೆ ಸಂಗ್ರಹಿಸಿದನು ಎಂಬ ಬಗ್ಗೆ ತೀವ್ರ ತನಿಖೆ ನಡೆಯುತ್ತಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement