ಬೆಂಗಳೂರು: ರಾಜ್ಯ ಸರ್ಕಾರಿ ಉದ್ಯೋಗಾಕ್ಷಾಂಕ್ಷಿಗಳಿಗೆ ಸರ್ಕಾರ ಕಹಿ ಸುದ್ದಿ ನೀಡಿದೆ. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಸಹಾಯಕ ((FDA) ಮತ್ತು ದ್ವಿತೀಯ ದರ್ಜೆ ಸಹಾಯಕ (SDA) ಹುದ್ದೆಗಳ ನೇಮಕಾತಿ ಪರೀಕ್ಷಾ ನಿಯಮಗಳಲ್ಲಿ (Exam Rules) ಮಹತ್ವದ ಬದಲಾವಣೆ ತರಲಾಗಿದ್ದು, ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ಕರಡು ಅಧಿಸೂಚನೆ ಹೊರಡಿಸಿದೆ.
ಕರ್ನಾಟಕ ನಾಗರಿಕ ಸೇವೆಗಳ ತಿದ್ದುಪಡಿ ನಿಯಮಗಳು 2026 ರೂಪಿಸಿ ಕರಡು ಅಧಿಸೂಚನೆ ಪ್ರಕಟಿಸಲಾಗಿದ್ದು, ನೇಮಕಾತಿ ಪರೀಕ್ಷೆಯಲ್ಲಿ ವಿಶೇಷವಾಗಿ ಪ್ರಥಮ ದರ್ಜೆ ಸಹಾಯಕ ಮತ್ತು ದ್ವಿತೀಯ ದರ್ಜೆ ಸಹಾಯಕ ಅಥವಾ ಸಮಾನ ಸಮಾನ ಹುದ್ದೆಗಳ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಋಣಾತ್ಮಕ ಅಂಕ (negative marking)ಗಳನ್ನು ಅನ್ವಯಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಹೊಸ ಕರಡು ನಿಯಮದ ಪ್ರಕಾರ, ಇನ್ನು ಮುಂದೆ ಎಫ್ಡಿಎ ಮತ್ತು ಎಸ್ಡಿಎ ಸ್ಪರ್ಧಾತ್ಮಕ ಪರೀಕ್ಷೆಯ ಎರಡೂ ಪತ್ರಿಕೆಗಳಲ್ಲೂ ನೆಗೆಟಿವ್ ಅಂಕಗಳು ಅನ್ವಯವಾಗಲಿವೆ. ಅಭ್ಯರ್ಥಿಗಳು ನೀಡುವ ಪ್ರತಿಯೊಂದು ತಪ್ಪು ಉತ್ತರಕ್ಕೂ, ಆ ಪ್ರಶ್ನೆಗೆ ನಿಗದಿಪಡಿಸಲಾದ ಅಂಕಗಳ ನಾಲ್ಕನೇ ಒಂದು ಭಾಗದಷ್ಟು (1/4) ಅಂಕ ಕಡಿತಗೊಳಿಸಲಾಗುತ್ತದೆ. ಜೊತೆಗೆ, ಮೆರಿಟ್ ಪಟ್ಟಿಯಲ್ಲಿ ಸ್ಥಾನ ಪಡೆಯಲು ಅಭ್ಯರ್ಥಿಗಳು ಕನಿಷ್ಠ ಶೇ. 35ರಷ್ಟು ಅಂಕಗಳನ್ನು ಕಡ್ಡಾಯವಾಗಿ ಪಡೆಯಬೇಕು ಎಂದು ಸ್ಪಷ್ಟಪಡಿಸಲಾಗಿದೆ.
ಈ ಹಿಂದಿನ ಎಫ್ಡಿಎ, ಎಸ್ಡಿಎ ನೇಮಕಾತಿ ಪರೀಕ್ಷೆಗಳಲ್ಲಿ ಇಂತಹ ಯಾವುದೇ ನೆಗೆಟಿವ್ ಅಂಕಗಳ ವ್ಯವಸ್ಥೆ ಇರಲಿಲ್ಲ.
ಶೈಕ್ಷಣಿಕ ಅರ್ಹತೆ
ಸಹಾಯಕರು ಅಥವಾ ಎಫ್ಡಿಎ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕಡ್ಡಾಯವಾಗಿ ಪದವಿ ಮುಗಿಸಿರಬೇಕು. ಅದೇ ರೀತಿ ಕಿರಿಯ ಸಹಾಯಕರು ಅಥವಾ ಎಸ್ಡಿಎ ಸಮಾನಾಂತರ ಹುದ್ದೆಗಳಿಗೆ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಶೈಕ್ಷಣಿಕ ಅರ್ಹತೆಯನ್ನ ಕನಿಷ್ಠ ಮಾನದಂಡವಾಗಿ ನಿಗದಿಪಡಿಸಲಾಗಿದೆ.
ಪತ್ರಿಕೆ 1ರ ಪಠ್ಯಕ್ರಮವನ್ನು ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆಗೆ ಅನುಗುಣವಾಗಿ ರೂಪಿಸಲಾಗುತ್ತದೆ. ಆದರೆ, ಪತ್ರಿಕೆ 2ರ ಪಠ್ಯಕ್ರಮವನ್ನು ಆಯಾ ಹುದ್ದೆಯ ಸ್ವರೂಪವನ್ನ ಆಧರಿಸಿ, ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರು ಹಾಗೂ ನೇಮಕಾತಿ ಪ್ರಾಧಿಕಾರದ ಜೊತೆ ಸಮಾಲೋಚನೆ ನಡೆಸಿದ ನಂತರ ಅಂತಿಮಗೊಳಿಸಲಾಗುತ್ತದೆ.
ಪರೀಕ್ಷಾ ಅವಧಿ ವಿಸ್ತರಣೆ
ಅಲ್ಲದೆ, ಪರೀಕ್ಷಾ ಅವಧಿಯನ್ನೂ ವಿಸ್ತರಿಸಲಾಗಿದೆ. ಈ ಹಿಂದಿನ ನೇಮಕಾತಿ ಪರೀಕ್ಷೆಗಳಲ್ಲಿ ಪ್ರತಿ ಪತ್ರಿಕೆಗೆ ಕೇವಲ 90 ನಿಮಿಷಗಳ ಕಾಲಾವಕಾಶ ನೀಡಲಾಗುತ್ತಿತ್ತು. ಆದರೆ, ಈಗ ತಂದಿರುವ ಕರ್ನಾಟಕ ನಾಗರಿಕ ಸೇವಾ ನಿಯಮ ತಿದ್ದುಪಡಿ ಅನ್ವಯ ಪರೀಕ್ಷಾ ಅವಧಿಯನ್ನು ಎರಡು ತಾಸುಗಳಿಗೆ ವಿಸ್ತರಿಸಲಾಗಿದೆ. ಇದರಿಂದ ಅಭ್ಯರ್ಥಿಗಳಿಗೆ ಪ್ರಶ್ನೆಗಳನ್ನು ಅರ್ಥಮಾಡಿಕೊಂಡು ಉತ್ತರಿಸಲು ಹೆಚ್ಚಿನ ಸಮಯ ಸಿಗಲಿದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಿದ ಬಳಿಕ, ನಿಗದಿತ ಕಾಲಮಿತಿಯೊಳಗೆ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದಿದ್ದರೆ, ಅವರ ಬದಲಿಗೆ ಹೆಚ್ಚುವರಿ ಪಟ್ಟಿಯಲ್ಲಿರುವ ಇತರ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗುತ್ತದೆ. ಅಲ್ಲದೆ, ಆಯ್ಕೆಯಾದ ಅಭ್ಯರ್ಥಿಗಳು ರಾಜ್ಯದ ಯಾವುದೇ ಮೂಲೆಯಲ್ಲಿ ಸೇವೆ ಸಲ್ಲಿಸಲು ಮಾನಸಿಕವಾಗಿ ಸಿದ್ಧರಿರಬೇಕು ಎಂದು ಅಧಿಸೂಚನೆಯಲ್ಲಿ ಕಟ್ಟುನಿಟ್ಟಾಗಿ ತಿಳಿಸಲಾಗಿದೆ.
ಸದ್ಯ ಪ್ರಕಟವಾಗಿರುವ ಈ ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು ಸಾರ್ವಜನಿಕರಿಗೆ 15 ದಿನಗಳ ಕಾಲಾವಕಾಶ ನೀಡಲಾಗಿದ್ದು, ಆ ಬಳಿಕವಷ್ಟೇ ಅಂತಿಮ ಅಧಿಸೂಚನೆ ಹೊರಬೀಳಲಿದೆ.


ನಿಮ್ಮ ಕಾಮೆಂಟ್ ಬರೆಯಿರಿ