ಬೆಂಗಳೂರು: ಭ್ರಷ್ಟಾಚಾರ ಮತ್ತು ದೊಡ್ಡ ಪ್ರಮಾಣದ ಅಕ್ರಮಗಳ ಆರೋಪಗಳ ಸಂಬಂಧ ರಾಜ್ಯ ಸಚಿವ ಸಂಪುಟ ಸಲಹೆಯ ಮೇರೆಗೆ ರಾಜ್ಯಪಾಲ ಥಾವರಚಂದ ಗೆಹ್ಲೋಟ್ ಅವರು, ಮಂಗಳವಾರ ಕರ್ನಾಟಕ ಸಾರ್ವಜನಿಕ ಸೇವಾ ಆಯೋಗ(KPSC)ದ ಅಧ್ಯಕ್ಷ ಶಿವಶಂಕರಪ್ಪ ಎಸ್ ಸಾಹುಕಾರ ಅವರನ್ನು ಮತ್ತೆ ಅಮಾನತುಗೊಳಿಸಿದ್ದಾರೆ.
ಜುಲೈ 13ರಂದು ರಾಜ್ಯಪಾಲರು ಶಿವಶಂಕರಪ್ಪ ಎಸ್ ಸಾಹುಕಾರ ಅವರನ್ನು ಅಮಾನತುಗೊಳಿಸಿದ್ದರು. ಬಳಿಕ ರಾಜ್ಯ ಸಚಿವ ಸಂಪುಟವು ಆ ಕ್ರಮಕ್ಕೆ ನಂತರ ಅನುಮೋದನೆ ನೀಡಿತ್ತು. ಇದನ್ನು ಪ್ರಶ್ನಿಸಿ ಶಿವಶಂಕರಪ್ಪ ಸಾಹುಕಾರ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಈ ಕ್ರಮದಲ್ಲಿ ‘ರಾಜ್ಯ ಸಚಿವ ಸಂಪುಟದ ಸಲಹೆ’ ಇಲ್ಲ ಎಂಬ ತಾಂತ್ರಿಕ ಕಾರಣಕ್ಕೆ ಆದೇಶವನ್ನು ರದ್ದುಗೊಳಿಸಿತ್ತು.
ಈ ಹಿನ್ನೆಲೆಯಲ್ಲಿ ಆಗಸ್ಟ್ 21ರಂದು ರಾಜ್ಯ ಸಚಿವ ಸಂಪುಟವು ಶಿವಶಂಕರಪ್ಪ ಅವರನ್ನು ಅಮಾನತುಗೊಳಿಸಲು ರಾಜ್ಯಪಾಲರಿಗೆ ಶಿಫಾರಸು ಮಾಡಿತ್ತು.
ಭಾರತದ ಸಂವಿಧಾನದ 317 (2)ನೇ ವಿಧಿಯ ಅಡಿಯಲ್ಲಿ ರಾಷ್ಟ್ರಪತಿಗಳ ಮುಂದಿನ ಆದೇಶದವರೆಗೂ ಕರ್ನಾಟಕ ಸಾರ್ವಜನಿಕ ಸೇವಾ ಆಯೋಗದ ಅಧ್ಯಕ್ಷ ಶಿವಶಂಕರಪ್ಪ ಎಸ್ ಸಾಹುಕಾರ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪ್ರಭುಶಂಕರ್ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಾಹುಕಾರ ತಮ್ಮ ಇಬ್ಬರು ಹೆಣ್ಣುಮಕ್ಕಳನ್ನು ಕೈಗಾರಿಕಾ ವಿಸ್ತರಣಾ ಅಧಿಕಾರಿಗಳಾಗಿ ಅಕ್ರಮವಾಗಿ ಆಯ್ಕೆ ಮಾಡಲು ಅನುಕೂಲ ಮಾಡಿಕೊಟ್ಟಿದ್ದಾರೆ ಎಂಬ ಆರೋಪದ ನಂತರ ರಾಜ್ಯಪಾಲರು ಅವರನ್ನು ಅಮಾನತುಗೊಳಿಸಿದ್ದಾರೆ. ಪಶುವೈದ್ಯಕೀಯ ವೈದ್ಯರ ನೇಮಕಾತಿಯಲ್ಲಿಯೂ ದೊಡ್ಡ ಪ್ರಮಾಣದ ಅಕ್ರಮಗಳು ನಡೆದಿವೆ ಎಂದು ಆರೋಪಿಸಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ