ಪೊಲೀಸರಿಗೆ 3 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್‌

ಬೆಂಗಳೂರು: ವಿವಾದವಿದ್ದ  ಉಯಿಲು ಪತ್ರಕ್ಕೆ (ವಿಲ್‌) ಸಾಕ್ಷಿಯಾಗಿ ಸಹಿ ಹಾಕಿದ್ದ  ವ್ಯಕ್ತಿಯೊಬ್ಬರಿಗೆ ತನಿಖೆಗೆ ಹಾಜರಾಗುವಂತೆ ನೋಟಿಸ್‌ ನೀಡಿದ ದಿನವೇ ಅವರನ್ನು ಬಂಧಿಸಿದ ಬೆಂಗಳೂರಿನ ವೈಟ್‌ಫೀಲ್ಡ್‌ ಪೊಲೀಸರ ಕ್ರಮಕ್ಕೆ ಗುರುವಾರ ಕರ್ನಾಟಕ ಹೈಕೋರ್ಟ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಅಲ್ಲದೇ, ತನಿಖಾಧಿಕಾರಿ, ಅವರ ಮೇಲಧಿಕಾರಿಗಳಾದ ಉಪ ಪೊಲೀಸ್‌ ಆಯುಕ್ತರು (ಡಿಸಿಪಿ) ಮತ್ತು ಸಹಾಯಕ ಪೊಲೀಸ್‌ ಆಯುಕ್ತರಿಗೆ (ಎಸಿಪಿ) ತಲಾ ಹೊಣೆಗಾರಿಕೆ ನಿಗದಿಪಡಿಸಿ ಒಟ್ಟು ₹3 ಲಕ್ಷ ದಂಡ ವಿಧಿಸಿದೆ ಎಂದು ಬಾರ್‌ & ಬೆಂಚ್‌ ವರದಿ ಮಾಡಿದೆ.
ವರದಿಯ ಪ್ರಕಾರ, ಈ ಮೊತ್ತವನ್ನು ಅಧಿಕಾರಿಗಳು ತಮ್ಮ ವೈಯಕ್ತಿಕ ಹಣದಿಂದ ಅರ್ಜಿದಾರರಿಗೆ ಪಾವತಿಸಬೇಕು ಎಂದು ಪೀಠ ನಿರ್ದೇಶಿಸಿದೆ. ಬೆಂಗಳೂರಿನ ಕೆ.ಎನ್‌. ಮೋಹನ್‌ ರೆಡ್ಡಿ ಅವರು ತಮ್ಮ ಬಂಧನವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠವು, ಅರ್ಜಿದಾರರನ್ನು ಅಕ್ರಮವಾಗಿ ಬಂಧಿಸಿದ ಪೊಲೀಸ್‌ ಅಧಿಕಾರಿಗಳಿಗೆ ₹3 ಲಕ್ಷ ದಂಡ ವಿಧಿಸುವುದರ ಜೊತೆಗೆ ಇಲಾಖಾ ತನಿಖೆ ನಡೆಸುವಂತೆಯೂ ಆದೇಶಿಸಿದೆ.

ಈ ಪ್ರಕರಣದಲ್ಲಿ ಆಗಸ್ಟ್‌ 25ರಂದು ಮೋಹನ ರೆಡ್ಡಿ ಅವರಿಗೆ ನೋಟಿಸ್‌ ನೀಡಿದ್ದ ಪೊಲೀಸರು, ಆಗಸ್ಟ್‌ 27ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು, ಆದರೆ ಆಗಸ್ಟ್‌ 25ರಂದೇ ಅವರನ್ನು ಬಂಧಿಸಿದ್ದರು. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ವೇಳೆ, ಗುರುವಾರ ಹೈಕೋರ್ಟ್‌ ಅರ್ಜಿದಾರರ ವಿರುದ್ಧದ ಮುಂದಿನ ಕ್ರಮಗಳಿಗೆ ತಡೆ ನೀಡಿದೆ.
ಕಳೆದ ವಿಚಾರಣೆಯಲ್ಲಿ ನೀಡಿದ್ದ ನಿರ್ದೇಶನದಂತೆ ಪೀಠದ ಮುಂದೆ ಹಾಜರಾಗಿದ್ದ ವೈಟ್‌ಫೀಲ್ಡ್‌ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌  ಅವರನ್ನು ಪೀಠವು ತೀವ್ರ ತರಾಟೆಗೆ ತೆಗೆದುಕೊಂಡಿತು. “ಮೋಹನ್‌ ರೆಡ್ಡಿ ಅವರನ್ನು ಬಂಧಿಸಿದ್ದೇಕೆ? ಆರೋಪಿ ತನಿಖೆಗೆ ಸಹಕರಿಸದಿದ್ದರೆ ಬಂಧಿಸಬಹುದು. ಆದರೆ, ನೋಟಿಸ್‌ ನೀಡಿದ ದಿನವೇ ಅವರನ್ನು ಬಂಧಿಸಿದ್ದೇಕೆ? ಮೇಲಧಿಕಾರಿಗಳು ಬಂಧಿಸಲು ಸೂಚಿಸಿದ್ದರೇ? ಯಾರ ಒತ್ತಡಕ್ಕೆ ಮಣಿದು ಬಂಧಿಸಿದ್ದೀರಿ?” ಎಂದು ಪೀಠ ಪ್ರಶ್ನಿಸಿತು.

ಪ್ರಮುಖ ಸುದ್ದಿ :-   ಕರ್ನಾಟಕದ 101 ತಾಲೂಕುಗಳು ಬರಪೀಡಿತ ಎಂದು ಘೋಷಿಸಿದ ಸರ್ಕಾರ ; ಅವು ಯಾವುವು ? ಪಟ್ಟಿ ಇಲ್ಲಿದೆ

“ಅರ್ಜಿದಾರರನ್ನು ಬಂಧಿಸುವ ಮೂಲಕ ಅವರ ವೈಯಕ್ತಿಕ ಸ್ವಾತಂತ್ರ್ಯ ಕಸಿದುಕೊಂಡಿರುವ ಈ ಕೃತ್ಯಕ್ಕೆ ತನಿಖಾಧಿಕಾರಿ ಮಾತ್ರವಲ್ಲ, ಇಡೀ ಠಾಣೆಯೇ ಸಮಾನವಾಗಿ ಹೊಣೆಗಾರವಾಗಿದೆ. ಸಕಾರಣವಿಲ್ಲದೆ ವ್ಯಕ್ತಿಯೊಬ್ಬರನ್ನು ಬಂಧಿಸುವಾಗ ಡಿಸಿಪಿ ಮತ್ತು ಎಸಿಪಿ ಏನು ಮಾಡುತ್ತಿದ್ದರು? ವಿಧಿಸಲಾಗುವ ದಂಡವನ್ನು ಅವರೂ ಪಾವತಿಸಬೇಕು” ಎಂದು ಪೀಠ ಹೇಳಿತು.
ಈ ವೇಳೆ ಸರ್ಕಾರಿ ಅಭಿಯೋಜಕರು, “ಪ್ರಮಾದ ಆಗಿ ಹೋಗಿದೆ. ತನಿಖಾಧಿಕಾರಿ ಯುವ ಅಧಿಕಾರಿಯಾಗಿದ್ದು, ಒಂದು ಅವಕಾಶ ನೀಡಬೇಕು” ಎಂದು ಕೋರಿದರು. ಆದರೆ, ಪೀಠವು ಆ ಮನವಿಯನ್ನು ಪರಿಗಣಿಸಲಿಲ್ಲ. “ಸಿವಿಲ್‌ ಪ್ರಕರಣಗಳಲ್ಲಿ ಮೂಗು ತೂರಿಸಲು ಪೊಲೀಸರು ಯಾರು? ಜನರನ್ನು ಬಂಧಿಸುವುದು ಜೋಕ್‌ ಆಗಿದೆಯೇ?” ಎಂದು ಪ್ರಶ್ನಿಸಿದ ಪೀಠವು, ವಿಚಾರಣೆಯನ್ನು ಶನಿವಾರಕ್ಕೆ ಮುಂದೂಡಿತು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement