ದೊಡ್ಡಬಳ್ಳಾಪುರ : ಹಳಿ ದಾಟುತ್ತಿದ್ದ ವೇಳೆ ರೈಲು ಡಿಕ್ಕಿಯಾಗಿ ಅಜ್ಜಿ, ಇಬ್ಬರು ಮೊಮ್ಮಕ್ಕಳು ಸಾವು

ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದಲ್ಲಿ ರೈಲು ಹಳಿ ದಾಟುತ್ತಿದ್ದ ವೇಳೆ ರೈಲು ಡಿಕ್ಕಿ ಹೊಡೆದ ಪರಿಣಾಮ ಅಜ್ಜಿ ಮತ್ತು ಆಕೆಯ ಇಬ್ಬರು ಮೊಮ್ಮಕ್ಕಳು ಸ್ಥಳದಲ್ಲೇ ಮೃತಪಟ್ಟ ಹೃದಯವಿದ್ರಾವಕ ಘಟನೆ ಸೋಮವಾರ ನಡೆದಿದೆ ಎಂದು ವರದಿಯಾಗಿದೆ.
ಮೃತರನ್ನು ಇರ್ಫಾನಾ (52), ರುಕಿಯಾ (13) ಹಾಗೂ ರಾಕಿಯಾ (8) ಎಂದು ಗುರುತಿಸಲಾಗಿದೆ. ಇವರು ಪಾಳನಜೋಗಹಳ್ಳಿ ನಿವಾಸಿಗಳಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾಹಿತಿಯ ಪ್ರಕಾರ, ಮಕ್ಕಳಾದ ರುಕಿಯಾ ಮತ್ತು ರಾಕಿಯಾ ರಜೆ ಕಳೆಯಲು ಆಂಧ್ರಪ್ರದೇಶದ ಹಿಂದೂಪುರದಿಂದ ತಮ್ಮ ಅಜ್ಜಿ ಮನೆಗೆ ಬಂದಿದ್ದರು. ರಜೆ ಮುಗಿದ ಹಿನ್ನೆಲೆಯಲ್ಲಿ ಶಾಲೆಗೆ ಹಾಜರಾಗಲು ಅಜ್ಜಿಯೊಂದಿಗೆ ಮರಳುತ್ತಿದ್ದ ವೇಳೆ ಸೋಮವಾರ ಬೆಳಿಗ್ಗೆ ಈ ದುರ್ಘಟನೆ ಸಂಭವಿಸಿದೆ.
ವರದಿಗಳ ಪ್ರಕಾರ, ರೈಲು ನಿಲ್ದಾಣದಲ್ಲಿ ಮೇಲ್ಸೇತುವೆ (ಸ್ಕೈವಾಕ್) ಇಲ್ಲದ ಕಾರಣ ಮೂವರು ರೈಲು ಹಳಿ ದಾಟಿ ರೈಲು ಹತ್ತಲು ಮುಂದಾಗಿದ್ದರು. ಇದೇ ವೇಳೆ ವೇಗವಾಗಿ ಬಂದ ಮತ್ತೊಂದು ರೈಲು ಡಿಕ್ಕಿ ಹೊಡೆದ ಪರಿಣಾಮ ಅಜ್ಜಿ ಹಾಗೂ ಇಬ್ಬರು ಬಾಲಕಿಯರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಘಟನೆ ಯಶವಂತಪುರ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದೆ. ಅಪಘಾತದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಪ್ರಮುಖ ಸುದ್ದಿ :-   ಮಂಗಳೂರು : ಮೊಬೈಲ್‌ ಫೋನ್‌ ವಿಚಾರಕ್ಕೆ ಜಗಳ ; ಅಣ್ಣನನ್ನೇ ಚಾಕುವಿನಿಂದ ಇರಿದು ಕೊಂದ ತಮ್ಮ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement