ಪಾಟ್ನಾ: ನೇಪಾಳದಲ್ಲಿ ಸಂಭವಿಸಿದ ಭೀಕರ ಹಠಾತ್ ಪ್ರವಾಹದ ಪರಿಣಾಮ ಇದೀಗ ಬಿಹಾರದಲ್ಲಿ ಹೊಸ ಆತಂಕಕ್ಕೆ ಕಾರಣವಾಗಿದೆ. ಪ್ರವಾಹದ ನೀರಿನೊಂದಿಗೆ ನೇಪಾಳದಿಂದ ಹರಿದು ಬಂದಿರುವ ಅಪರಿಚಿತ ಮೀನುಗಳನ್ನು ಹಿಡಿಯುವುದು, ಮಾರಾಟ ಮಾಡುವುದು ಅಥವಾ ತಿನ್ನುವುದು ಅಪಾಯಕಾರಿ ಎಂದು ಬಿಹಾರ ಸರ್ಕಾರ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳುವವರೆಗೆ ಇಂತಹ ಮೀನುಗಳಿಂದ ದೂರವಿರುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಇತ್ತೀಚೆಗೆ ನೇಪಾಳದ ತ್ರಿಶೂಲಿ ನದಿಯಲ್ಲಿ ಉಂಟಾದ ಪ್ರವಾಹದ ನೀರು ಗಂಡಕ್ ಮತ್ತು ಕೋಸಿ ನದಿಗಳ ಮೂಲಕ ಬಿಹಾರಕ್ಕೆ ಹರಿದು ಬರುತ್ತಿದೆ. ಉತ್ತರ ಬಿಹಾರದ ಪ್ರಮುಖ ನದಿಗಳಾದ ಈ ಎರಡರ ನೀರಿನ ಮಟ್ಟ ಏರಿಕೆಯಾಗುತ್ತಿದ್ದಂತೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಹಿಂದೆಂದೂ ಕಾಣದ ವಿಚಿತ್ರ ಜಾತಿಯ ಮೀನುಗಳು ಕಾಣಿಸಿಕೊಳ್ಳುತ್ತಿವೆ. ಇಂತಹ ಮೀನುಗಳನ್ನು ಸೇವಿಸಿದ ಕೆಲವರು ಅಸ್ವಸ್ಥಗೊಂಡಿರುವ ವರದಿಗಳೂ ಬೆಳಕಿಗೆ ಬಂದಿವೆ.
ಈ ಹಿನ್ನೆಲೆಯಲ್ಲಿ ಬಿಹಾರದ ಪಶುಸಂಗೋಪನೆ ಮತ್ತು ಮೀನುಗಾರಿಕಾ ಸಂಪನ್ಮೂಲ ಇಲಾಖೆ ವಿಶೇಷ ಸಲಹೆ-ಸೂಚನೆ (ಅಡ್ವೈಸರಿ) ಹೊರಡಿಸಿದೆ. ಪ್ರವಾಹದ ನೀರಿನಲ್ಲಿ ಸಿಕ್ಕುವ ಮೀನುಗಳಲ್ಲಿ ಒಳಚರಂಡಿ ನೀರು, ಬ್ಯಾಕ್ಟೀರಿಯಾ, ವೈರಸ್ಗಳು ಹಾಗೂ ಇತರೆ ರೋಗಕಾರಕ ಅಂಶಗಳು ಇರಬಹುದಾದ ಕಾರಣ ಅವುಗಳನ್ನು ಖರೀದಿಸುವುದು, ಮಾರಾಟ ಮಾಡುವುದು ಅಥವಾ ಸೇವಿಸುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಇಲಾಖೆ ಸೂಚಿಸಿದೆ. ನೇಪಾಳದ ಪೊಲೀಸರು ಸಹ ತಮ್ಮ ದೇಶದ ಜನರಿಗೆ ಇದೇ ರೀತಿಯ ಎಚ್ಚರಿಕೆ ನೀಡಿದ್ದಾರೆ.
ಪ್ರವಾಹದ ಮೀನುಗಳು ಏಕೆ ಅಪಾಯಕಾರಿ?
ಇಲಾಖೆಯ ಪ್ರಕಾರ, ಪ್ರವಾಹದ ಸಮಯದಲ್ಲಿ ಕೆರೆ, ನದಿ, ಸರೋವರ ಹಾಗೂ ಜಲಾಶಯಗಳಲ್ಲಿದ್ದ ಮೀನುಗಳು ನೀರಿನ ಹರಿವಿನ ಜೊತೆಗೆ ವ್ಯಾಪಕವಾಗಿ ಸಾಗುತ್ತವೆ. ಈ ಸಂದರ್ಭದಲ್ಲಿ ಅವು ಕಲುಷಿತ ಒಳಚರಂಡಿಗಳು, ಕೊಳೆತ ಪ್ರಾಣಿಗಳ ಶವಗಳು ಹಾಗೂ ಇತರ ಮಾಲಿನ್ಯಕಾರಿ ವಸ್ತುಗಳ ಸಂಪರ್ಕಕ್ಕೆ ನಿರಂತರವಾಗಿ ಒಳಗಾಗುತ್ತವೆ. ಇದು ರೋಗಕಾರಕವಾಗಬಹುದು. ಹೀಗಾಗಿ ಪರಿಸರದ ಸ್ಥಿತಿ ಸುಧಾರಿಸುವವರೆಗೆ ಪ್ರವಾಹದ ನೀರಿನಲ್ಲಿ ಸಿಕ್ಕ ಮೀನುಗಳನ್ನು ತಿನ್ನಬಾರದು ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಸಾರ್ವಜನಿಕರಿಗೆ ಸರ್ಕಾರದ ಪ್ರಮುಖ ಸೂಚನೆಗಳು
ಅಪರಿಚಿತ ಅಥವಾ ವಿಚಿತ್ರವಾಗಿ ಕಾಣುವ ಯಾವುದೇ ಮೀನುಗಳನ್ನು ಸೇವಿಸಬೇಡಿ.
ಪ್ರವಾಹದ ನೀರಿನಲ್ಲಿ ಸಿಕ್ಕ ಮೀನುಗಳನ್ನು ಖರೀದಿಸಬೇಡಿ, ಮಾರಾಟ ಮಾಡಬೇಡಿ ಹಾಗೂ ತಿನ್ನಬೇಡಿ.
ಸಂಬಂಧಿತ ಇಲಾಖೆಯ ಪರಿಶೀಲನೆ ಇಲ್ಲದೆ ಯಾವುದೇ ಅಪರಿಚಿತ ಮೀನು ಆಹಾರಕ್ಕೆ ಯೋಗ್ಯವೆಂದು ಪರಿಗಣಿಸಬೇಡಿ.
ಮೀನು ಸೇವಿಸಿದ ಬಳಿಕ ವಾಂತಿ, ಅತಿಸಾರ, ಹೊಟ್ಟೆನೋವು, ತಲೆಸುತ್ತು ಅಥವಾ ಉಸಿರಾಟದ ತೊಂದರೆ ಕಾಣಿಸಿಕೊಂಡರೆ ತಕ್ಷಣ ಸಮೀಪದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ.
ಅಪರೂಪದ ಅಥವಾ ವಿಚಿತ್ರ ಮೀನುಗಳು ಕಂಡುಬಂದರೆ ಸ್ಥಳೀಯ ಜಿಲ್ಲಾ ಮೀನುಗಾರಿಕಾ ಅಧಿಕಾರಿ ಅಥವಾ ಆಡಳಿತಕ್ಕೆ ಮಾಹಿತಿ ನೀಡಿ.
ವದಂತಿಗಳಿಗೆ ಕಿವಿಗೊಡಬೇಡಿ ಮತ್ತು ಸುರಕ್ಷತೆಗಾಗಿ ಅಪರಿಚಿತ ಮೀನುಗಳನ್ನು ಸೇವಿಸುವುದನ್ನು ಬಿಡಿ.
ಮೀನುಗಳಷ್ಟೇ ಅಲ್ಲ, ಇನ್ನೂ ಹಲವು ಅಪಾಯಗಳು
ನೇಪಾಳದ ಪ್ರವಾಹದಿಂದ ಉಕ್ಕಿ ಹರಿಯುತ್ತಿರುವ ಕೋಸಿ ಮತ್ತು ಗಂಡಕ್ ನದಿಗಳು ಕೇವಲ ಮೀನುಗಳನ್ನು ಮಾತ್ರವಲ್ಲದೆ ಅಪಾರ ಪ್ರಮಾಣದ ತ್ಯಾಜ್ಯ ಮತ್ತು ಅಪಾಯಕಾರಿ ವಸ್ತುಗಳನ್ನೂ ಬಿಹಾರದತ್ತ ತಂದುಕೊಂಡು ಬರುತ್ತಿವೆ. ನೇಪಾಳದ ಪರ್ವತ ಪ್ರದೇಶಗಳಲ್ಲಿ ಸಂಭವಿಸಿದ ಭೂಕುಸಿತಗಳು ಹಾಗೂ ಹಿಮನದಿಗಳ ಸ್ಫೋಟದ ಪರಿಣಾಮ ಮಣ್ಣು, ಮರಳು, ಕಲ್ಲುಗಳು, ಬೃಹತ್ ಮರದ ದಿಮ್ಮಿಗಳು ನದಿಗಳಲ್ಲಿ ಕೊಚ್ಚಿಕೊಂಡು ಬರುತ್ತಿವೆ.
ಇದರ ಜೊತೆಗೆ ಕುಸಿದ ಸೇತುವೆಗಳ ಅವಶೇಷಗಳು, ಹಾನಿಗೊಳಗಾದ ಜಲವಿದ್ಯುತ್ ಯೋಜನೆಗಳ ಭಾಗಗಳು, ವಾಹನಗಳು, ಮನೆ ಬಳಕೆಯ ವಸ್ತುಗಳು, ಎಲ್ಪಿಜಿ ಸಿಲಿಂಡರ್ಗಳು ಹಾಗೂ ಪ್ರವಾಹದಲ್ಲಿ ಕೊಚ್ಚಿಹೋದ ಗ್ರಾಮಗಳ ಸಾಮಗ್ರಿಗಳೂ ನದಿಯಲ್ಲಿ ತೇಲಿಬರುತ್ತಿರುವುದು ಕಂಡುಬಂದಿದೆ. ಅತ್ಯಂತ ಆತಂಕಕಾರಿ ಸಂಗತಿಯೆಂದರೆ ಮಾನವ ಮತ್ತು ಪ್ರಾಣಿಗಳ ಶವಗಳೂ ನೀರಿನಲ್ಲಿ ಹರಿದುಬರುತ್ತಿರುವುದರಿಂದ ಸೋಂಕಿನ ಅಪಾಯ ಮತ್ತಷ್ಟು ಹೆಚ್ಚಾಗಿದೆ.
ಕಾಲರಾ, ಟೈಫಾಯ್ಡ್, ಹೆಪಟೈಟಿಸ್ ಭೀತಿ
ಆರೋಗ್ಯ ತಜ್ಞರ ಪ್ರಕಾರ, ಕಲುಷಿತ ಪ್ರವಾಹದ ನೀರು ಹ್ಯಾಂಡ್ಪಂಪ್, ಬಾವಿ ಹಾಗೂ ಇತರೆ ಕುಡಿಯುವ ನೀರಿನ ಮೂಲಗಳ ಜೊತೆ ಬೆರೆತರೆ ಅತಿಸಾರ ಮತ್ತು ಕಾಲರಾದಂತಹ ರೋಗಗಳು ವೇಗವಾಗಿ ಹರಡುವ ಸಾಧ್ಯತೆ ಇದೆ. ಇದೇ ವೇಳೆ ಕಲುಷಿತ ನೀರು ಮತ್ತು ಆಹಾರ ಸೇವನೆಯಿಂದ ಟೈಫಾಯ್ಡ್ ಅಪಾಯವೂ ಹೆಚ್ಚಾಗುತ್ತದೆ. ಹೆಪಟೈಟಿಸ್–ಎ ಮತ್ತು ಹೆಪಟೈಟಿಸ್–ಇ ಸೋಂಕುಗಳು ಕೂಡ ಇದೇ ನೀರಿನ ಮೂಲಕ ಯಕೃತ್ತಿಗೆ ಹಾನಿ ಉಂಟುಮಾಡಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಸೊಳ್ಳೆಗಳ ಕಾಟದಿಂದ ಡೆಂಗ್ಯೂ, ಮಲೇರಿಯಾ ಆತಂಕ
ಪ್ರವಾಹದ ನಂತರ ಉಂಟಾಗುವ ನೀರು ನಿಂತಿರುವ ಪ್ರದೇಶಗಳು ಸೊಳ್ಳೆಗಳ ಸಂತಾನೋತ್ಪತ್ತಿಗೆ ಅನುಕೂಲಕರ ವಾತಾವರಣ ಸೃಷ್ಟಿಸಲಿವೆ. ಇದರಿಂದ ಡೆಂಗ್ಯೂ, ಮಲೇರಿಯಾ ಹಾಗೂ ಚಿಕೂನ್ಗುನ್ಯಾ ಪ್ರಕರಣಗಳು ಹೆಚ್ಚುವ ಸಾಧ್ಯತೆ ಇದೆ. ಜೊತೆಗೆ ಚರ್ಮ ಮತ್ತು ಕಣ್ಣಿನ ಸೋಂಕುಗಳೂ ವ್ಯಾಪಕವಾಗುವ ಭೀತಿ ಎದುರಾಗಿದೆ.
ಆರ್ಸೆನಿಕ್ ಮತ್ತು ಕಬ್ಬಿಣದ ಮಾಲಿನ್ಯವೂ ಹೆಚ್ಚುವ ಸಾಧ್ಯತೆ
ಬಿಹಾರ-ನೇಪಾಳ ಗಡಿ ಭಾಗದ ಪಶ್ಚಿಮ ಚಂಪಾರಣ್, ಪೂರ್ವ ಚಂಪಾರಣ್, ಸೀತಾಮಢಿ, ಕಿಶನ್ಗಂಜ್, ಪೂರ್ಣಿಯಾ ಹಾಗೂ ಅರಾರಿಯಾ ಜಿಲ್ಲೆಗಳ ಅಂತರ್ಜಲದಲ್ಲಿ ಈಗಾಗಲೇ ಸುರಕ್ಷಿತ ಮಿತಿಯಾದ 10 ಪಿಪಿಬಿಗಿಂತ ಹೆಚ್ಚು ಆರ್ಸೆನಿಕ್ ಅಂಶ ದಾಖಲಾಗಿದೆ. ಗಂಗಾ ನದಿಯ ದಡ ಪ್ರದೇಶಗಳಲ್ಲಿ ಇದರ ಪ್ರಮಾಣ ಹೆಚ್ಚು ಕಂಡುಬಂದಿದ್ದರೂ, ನೇಪಾಳ ಮೂಲದ ನದಿಗಳ ಪ್ರವಾಹ ಪ್ರದೇಶಗಳಲ್ಲಿಯೂ ಗಮನಾರ್ಹ ಪ್ರಮಾಣ ಕಂಡುಬಂದಿದೆ.
ಇದರ ಜೊತೆಗೆ ಗಡಿಭಾಗದ ಬಹುತೇಕ ಏಳು ಜಿಲ್ಲೆಗಳ ನೀರಿನಲ್ಲಿ ಅಧಿಕ ಪ್ರಮಾಣದ ಕಬ್ಬಿಣ ಅಂಶವೂ ಪತ್ತೆಯಾಗಿದೆ. ಇದರಿಂದ ನೀರಿಗೆ ಕಹಿ ರುಚಿ ಬರುವುದರ ಜೊತೆಗೆ ಪಾತ್ರೆಗಳು ಮತ್ತು ಬಟ್ಟೆಗಳ ಮೇಲೆ ಕೆಂಪು-ಹಳದಿ ಬಣ್ಣದ ಕಲೆಗಳು ಮೂಡುತ್ತವೆ. ಕಿಶನ್ಗಂಜ್ನಲ್ಲಿ ಈ ಪ್ರಮಾಣ ಸಾಮಾನ್ಯ ಮಟ್ಟಕ್ಕಿಂತ ಹಲವು ಪಟ್ಟು ಹೆಚ್ಚಿದೆ. ಪ್ರವಾಹದ ನೀರಿನೊಂದಿಗೆ ಬಂದಿರುವ ಹೆಚ್ಚುವರಿ ಕಬ್ಬಿಣ ಸ್ಥಳೀಯ ಜಲಮೂಲಗಳನ್ನು ಇನ್ನಷ್ಟು ಕಲುಷಿತಗೊಳಿಸುವ ಅಪಾಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೃಷಿಗೂ ದೊಡ್ಡ ಹೊಡೆತ
ಪ್ರವಾಹದ ನೀರು ಬಿಹಾರದ ಗಡಿ ಜಿಲ್ಲೆಗಳ ಕೃಷಿಭೂಮಿಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಇದರಿಂದ ಧಾನ್ಯ ಮತ್ತು ತರಕಾರಿ ಉತ್ಪಾದನೆ ಕುಸಿಯುವ ಭೀತಿ ಎದುರಾಗಿದ್ದು, ರಾಜ್ಯದಲ್ಲಿ ಆಹಾರ ಕೊರತೆಯ ಆತಂಕವೂ ವ್ಯಕ್ತವಾಗಿದೆ. ಈಗಾಗಲೇ ಸಂಕಷ್ಟದಲ್ಲಿರುವ ರೈತರಿಗೆ ಇದು ಮತ್ತೊಂದು ದೊಡ್ಡ ಸವಾಲಾಗಿ ಪರಿಣಮಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ