ಬೆಂಗಳೂರು: ಆರ್.ಜಿ. ಕರ್ ವೈದ್ಯೆಯ ಅತ್ಯಾಚಾರ-ಹತ್ಯೆ ಪ್ರಕರಣದಲ್ಲಿ ಶವಸಂಸ್ಕಾರದ ವೇಳೆ ಪುರಾವೆ ನಾಶಪಡಿಸಿದ ಆರೋಪಕ್ಕೆ ಸಂಬಂಧಿಸಿದಂತೆ, ಕೋಲ್ಕತ್ತಾದ ಪಾಣಿಹಟಿ ಪುರಸಭೆಯ ಮಾಜಿ ಅಧ್ಯಕ್ಷ ಸೋಮನಾಥ ಡೇ ಅವರನ್ನು ಬ್ಯಾರಕ್ಪೋರ್ ಕಮಿಷನರೇಟ್ ಪೊಲೀಸರು ಗುರುವಾರ ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಕೊಲೆಯಾದ 31 ವರ್ಷದ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿನಿಯ ಕುಟುಂಬಸ್ಥರು ನೀಡಿದ ದೂರಿನ ಆಧಾರದ ಮೇಲೆ ಬ್ಯಾರಕ್ಪೋರ್ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಸೋಮನಾಥ ಡೇ ಹೊರತಾಗಿ, ಪಾಣಿಹಟಿ ತೃಣಮೂಲ ಕಾಂಗ್ರೆಸ್ (TMC) ಮಾಜಿ ಶಾಸಕ ನಿರ್ಮಲ ಘೋಷ್ ಹಾಗೂ ಮಾಜಿ ಕೌನ್ಸಿಲರ್ ಸಂಜೀವ ಮುಖರ್ಜಿ ವಿರುದ್ಧವೂ ಎಫ್ಐಆರ್ (FIR) ದಾಖಲಾಗಿದೆ.
2024 ರಲ್ಲಿ ನಡೆದ ಆರ್ಜಿ ಕರ್ ವೈದ್ಯಕೀಯ ಕಾಲೇಜು ವೈದ್ಯೆಯ ಭೀಕರ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಂತರ, ಮೃತದೇಹದ ಎರಡನೇ ಮರಣೋತ್ತರ ಪರೀಕ್ಷೆಗೆ ಅವಕಾಶ ಸಿಗಬಾರದು ಎಂಬ ಉದ್ದೇಶದಿಂದ ತರಾತುರಿಯಲ್ಲಿ ಸಾಕ್ಷ್ಯ ನಾಶಪಡಿಸಲು ಹಾಗೂ ನಿಯಮಗಳನ್ನು ಮೀರಿ ತರಾತುರಿಯಲ್ಲಿ ಅಂತಿಮ ಸಂಸ್ಕಾರ ನೆರವೇರಿಸಿದ ಸಂಚಿನಲ್ಲಿ ಸೋಮನಾಥ ಡೇ ಭಾಗಿಯಾಗಿದ್ದರು ಎಂದು ಆರೋಪಿಸಲಾಗಿದೆ.
ಮೃತರ ಕುಟುಂಬದವರ ದೂರಿನ ಮೇರೆಗೆ ಇವರ ವಿರುದ್ಧ ಹೊಸ ಎಫ್ಐಆರ್ ದಾಖಲಾಗಿತ್ತು. ಆದರೆ, ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಇವರು ಮೊದಲು ಹೈದರಾಬಾದ್ಗೆ ಪರಾರಿಯಾಗಿದ್ದರು. ಪೊಲೀಸರು ಬೆನ್ನಟ್ಟುತ್ತಿದ್ದಂತೆ ಅಲ್ಲಿಂದ ಬೆಂಗಳೂರಿಗೆ ಬಂದು ತಲೆಮರೆಸಿಕೊಂಡಿದ್ದರು. ಖಚಿತ ಮಾಹಿತಿ ಮೇರೆಗೆ ಪಶ್ಚಿಮ ಬಂಗಾಳದ ಖಾರ್ಡಾ ಪೊಲೀಸ್ ತಂಡ ಬೆಂಗಳೂರಿಗೆ ಆಗಮಿಸಿ ಇವರನ್ನು ಬುಧವಾರ ತಡರಾತ್ರಿ ವಶಕ್ಕೆ ಪಡೆದಿದೆ.
ಆರೋಪಿಗಳ ವಿರುದ್ಧ ಅಕ್ರಮ ಪ್ರವೇಶ, ಕಾನೂನುಬಾಹಿರ ತಡೆ, ಬೆದರಿಕೆ, ಪುರಾವೆ ನಾಶ, ಸ್ಮಶಾನಕ್ಕೆ ಅಕ್ರಮ ಪ್ರವೇಶ, ಸರ್ಕಾರಿ ನೌಕರರ ಕಾನೂನು ಉಲ್ಲಂಘನೆ, ನಕಲಿ ದಾಖಲೆ ಸೃಷ್ಟಿ, ಕ್ರಿಮಿನಲ್ ಸಂಚು ಹಾಗೂ ಸಮಾನ ಉದ್ದೇಶದಂತಹ ಹಲವು ಕಠಿಣ ಕಾಯ್ದೆಗಳಡಿ ಪ್ರಕರಣ ದಾಖಲಿಸಲಾಗಿದೆ.
ಕುಟುಂಬದ ಗಂಭೀರ ಆರೋಪಗಳು:
ಆರೋಪಿಗಳು ವೈದ್ಯೆಯ ಮನೆಗೆ ಬಲವಂತವಾಗಿ ನುಗ್ಗಿ, ಆಕೆಯ ತಂದೆ ಮತ್ತು ಕುಟುಂಬದವರ ಮೇಲೆ ಒತ್ತಡ ಹೇರಿ ಶವವನ್ನು ತಕ್ಷಣವೇ ಸ್ಮಶಾನಕ್ಕೆ ಕೊಂಡೊಯ್ಯುವಂತೆ ಬೆದರಿಕೆ ಹಾಕಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದರು.
ಕುಟುಂಬದವರ ಇಚ್ಛೆಗೆ ವಿರುದ್ಧವಾಗಿ ಮತ್ತು ಅಂತಿಮ ನಮನ ಸಲ್ಲಿಸಲು ಸೂಕ್ತ ಸಮಯವನ್ನೂ ನೀಡದೆ, ಮೃತದೇಹವನ್ನು ಪಾಣಿಹಟಿ ಸ್ಮಶಾನಕ್ಕೆ ಕೊಂಡೊಯ್ಯಲಾಗಿತ್ತು. ಎರಡನೇ ಬಾರಿಗೆ ಮರಣೋತ್ತರ ಪರೀಕ್ಷೆ (Post-mortem) ನಡೆಸುವುದನ್ನು ತಡೆಯಲು ಮತ್ತು ಪ್ರಕರಣದ ಸಾಕ್ಷ್ಯಗಳನ್ನು ಮುಚ್ಚಿಹಾಕಲು ರಾಜಕೀಯ ಪ್ರಭಾವ ಬಳಸಿ ಅತ್ಯಂತ ಅವಸರದಲ್ಲಿ ಶವಸಂಸ್ಕಾರ ನೆರವೇರಿಸಲಾಗಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ:
ಆಗಸ್ಟ್ 9, 2024 ರಂದು ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಎಮರ್ಜೆನ್ಸಿ ಕಟ್ಟಡದ ಸೆಮಿನಾರ್ ಹಾಲ್ನಲ್ಲಿ ಯುವ ವೈದ್ಯೆಯ ಮೇಲೆ ದಾರುಣ ಅತ್ಯಾಚಾರ ಮತ್ತು ಕೊಲೆ ನಡೆದಿತ್ತು. ಪ್ರಕರಣವನ್ನು ಮೊದಲು ಕೋಲ್ಕತ್ತಾ ಪೊಲೀಸರು ತನಿಖೆ ನಡೆಸಿ, ನಾಗರಿಕ ಸ್ವಯಂಸೇವಕ ಸಂಜಯ ರಾಯ್ ಎಂಬಾತನನ್ನು ಬಂಧಿಸಿದ್ದರು. ಬಳಿಕ ಈ ತನಿಖೆಯನ್ನು ಕೇಂದ್ರೀಯ ತನಿಖಾ ಸಂಸ್ಥೆಗೆ (CBI) ವಹಿಸಲಾಯಿತು.
ಸಿಬಿಐ ಈ ಪ್ರಕರಣದಲ್ಲಿ ಬೇರೆ ಯಾವುದೇ ಶಂಕಿತರ ಹೆಸರು ಸೇರಿಸಿರಲಿಲ್ಲ. ಸಿಬಿಐ ನೀಡಿದ ವರದಿ ಆಧಾರದ ಮೇಲೆ ಸ್ಥಳೀಯ ನ್ಯಾಯಾಲಯವು ಸಂಜಯ ರಾಯ್ನನ್ನು ದೋಷಿ ಎಂದು ತೀರ್ಪು ನೀಡಿ ಶಿಕ್ಷೆ ವಿಧಿಸಿತ್ತು. ಆದರೆ, ಈ ತನಿಖೆಯ ಫಲಿತಾಂಶದಿಂದ ಅಸಮಾಧಾನಗೊಂಡ ಕುಟುಂಬಸ್ಥರು ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ನಡೆಸಿದ ಹೈಕೋರ್ಟ್, ಘಟನೆ ನಡೆದ ರಾತ್ರಿ ವೈದ್ಯೆ ರಾತ್ರಿ ಊಟ ಮಾಡಿದ ಸಮಯದಿಂದ ಹಿಡಿದು ಮರುದಿನ ಸಾಯಂಕಾಲ ಶವಸಂಸ್ಕಾರ ನಡೆಯುವವರೆಗಿನ ಸಂಪೂರ್ಣ ಘಟನಾವಳಿಗಳನ್ನು ಮರುಪರಿಶೀಲಿಸುವಂತೆ ಸಿಬಿಐಗೆ ಆದೇಶಿಸಿತ್ತು. ಪ್ರಸ್ತುತ ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ಈ ತನಿಖೆ ಮುಂದುವರಿದಿದೆ.
ಇತ್ತೀಚೆಗೆ ನಡೆದ ವೈದ್ಯೆಯ ಎರಡನೇ ಪುಣ್ಯಸ್ಮರಣೆಯ ಸಂದರ್ಭದಲ್ಲಿ, ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಶವಸಂಸ್ಕಾರದ ಪ್ರಕ್ರಿಯೆಯಲ್ಲಿ ನಡೆದ ಲೋಪದೋಷಗಳ ಕುರಿತು ಪ್ರತ್ಯೇಕ ತನಿಖೆ ನಡೆಸಲು ಅವಕಾಶವಿದೆ ಎಂದು ಹೇಳಿದ್ದರು. ಅದರ ಬೆನ್ನಲ್ಲೇ ಬ್ಯಾರಕ್ಪೋರ್ ಪೊಲೀಸರು ಹೊಸ ಪ್ರಕರಣ ದಾಖಲಿಸಿಕೊಂಡು, ಬೆಂಗಳೂರಿನಲ್ಲಿದ್ದ ಪ್ರಮುಖ ಆರೋಪಿ ಸೋಮನಾಥ ಡೇ ಅವರನ್ನು ಬಂಧಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ