ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಓದಿದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣದಲ್ಲಿ ಹೆಚ್ಚಿನ ಅವಕಾಶ ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ವೃತ್ತಿಪರ ಕೋರ್ಸ್‌ಗಳಲ್ಲಿ ಶೇ. 7.5ರಷ್ಟು ಮೀಸಲಾತಿ ನೀಡಲು ನಿರ್ಧರಿಸಿದೆ. ಈ ಸಂಬಂಧ ಉನ್ನತ ಶಿಕ್ಷಣ ಇಲಾಖೆಯು ಸೋಮವಾರ (ಸೆಪ್ಟೆಂಬರ್ 7) ‘ಕರ್ನಾಟಕ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಪ್ರವೇಶ ನಿಯಮಗಳು (ತಿದ್ದುಪಡಿ)-2026’ರ ಕರಡು ನಿಯಮಗಳ ಅಧಿಸೂಚನೆ ಹೊರಡಿಸಿದೆ.
ಉನ್ನತ ಶಿಕ್ಷಣ ಇಲಾಖೆ ಹೊರಡಿಸಿರುವ ಈ ಕರಡು ನಿಯಮದ ಕುರಿತು ಆಕ್ಷೇಪಣೆ ಮತ್ತು ಸಲಹೆಗಳನ್ನು ಆಹ್ವಾನಿಸಲಾಗಿದೆ. ಕರಡು ನಿಯಮದ ಪ್ರಕಾರ, ಗ್ರಾಮೀಣ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದ ಅರ್ಹ ಗ್ರಾಮೀಣ ವಿದ್ಯಾರ್ಥಿಗಳಿಗೆ ಸರ್ಕಾರಿ ಸೀಟುಗಳಲ್ಲಿ ಶೇ. 7.5ರಷ್ಟು ಮೀಸಲಾತಿ ಹಾಗೂ ಗ್ರಾಮೀಣ ಪ್ರದೇಶದಲ್ಲಿರುವ ಯಾವುದೇ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಿದ ಅರ್ಹ ವಿದ್ಯಾರ್ಥಿಗಳಿಗೆ ಮತ್ತೊಂದು ಶೇ. 7.5ರಷ್ಟು ಮೀಸಲಾತಿ ನೀಡಲು ಸರ್ಕಾರ ಪ್ರಸ್ತಾಪಿಸಿದೆ.
ಉನ್ನತ ಶಿಕ್ಷಣ ಇಲಾಖೆಯು ಸೆಪ್ಟೆಂಬರ್ 5ರಂದು ಈ ಕರಡು ತಿದ್ದುಪಡಿಯನ್ನು ಅಧಿಸೂಚನೆ ಮೂಲಕ ಪ್ರಕಟಿಸಿದ್ದು, ಸೋಮವಾರ ಮಾಧ್ಯಮಗಳಿಗೆ ಇದರ ಮಾಹಿತಿ ನೀಡಿದೆ. ಪ್ರಸ್ತಾವಿತ ತಿದ್ದುಪಡಿಯ ಪ್ರಕಾರ, ಗ್ರಾಮIಣ ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿನ ಒಟ್ಟು ಶೇ. 15ರಷ್ಟು ಸರ್ಕಾರಿ ಸೀಟುಗಳ ನಿಗದಿ ಪೈಕಿ ಶೇ. 7.5ರಷ್ಟು ಸೀಟುಗಳನ್ನು ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿರುವ ಶಾಲಾ ಶಿಕ್ಷಣ ಇಲಾಖೆಯ ಅಧೀನದ ಸರ್ಕಾರಿ ಶಾಲೆಗಳು ಅಥವಾ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ 1ರಿಂದ 10ನೇ ತರಗತಿವರೆಗೆ ವ್ಯಾಸಂಗ ಮಾಡಿದ ಅಭ್ಯರ್ಥಿಗಳಿಗೆ ಮೀಸಲಿಡಲಾಗುತ್ತದೆ.
ಇನ್ನುಳಿದ ಶೇ. 7.5ರಷ್ಟು ಸೀಟುಗಳನ್ನು ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿರುವ ಯಾವುದೇ ಶಿಕ್ಷಣ ಸಂಸ್ಥೆ ಅಥವಾ ಶಾಲೆಯಲ್ಲಿ 1ರಿಂದ 10ನೇ ತರಗತಿವರೆಗೆ ವ್ಯಾಸಂಗ ಮಾಡಿದ ಅರ್ಹ ಗ್ರಾಮೀಣ ಅಭ್ಯರ್ಥಿಗಳಿಗೆ ಮೀಸಲಿಡಲು ಉದ್ದೇಶಿಸಲಾಗಿದೆ. ಈ ಮೀಸಲಾತಿಗೆ ಸರ್ಕಾರಿ ಶಿಕ್ಷಣ ಸಂಸ್ಥೆಯಲ್ಲೇ ಓದಿರಬೇಕು ಎಂಬ ನಿಯಮ ಇರುವುದಿಲ್ಲ. ಅಂದರೆ, ಗ್ರಾಮೀಣ ಪ್ರದೇಶದಲ್ಲಿರುವ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ ಅರ್ಹ ಅಭ್ಯರ್ಥಿಗಳು ಈ ಮೀಸಲಾತಿಯ ವ್ಯಾಪ್ತಿಗೆ ಬರಲಿದ್ದಾರೆ.
ಕರಡು ನಿಯಮಗಳನ್ನು ಪ್ರಕಟಿಸಿರುವ ಸರ್ಕಾರ, ಈ ಕುರಿತು ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ ನೀಡಿದೆ. ಅಧಿಕೃತ ರಾಜ್ಯಪತ್ರದಲ್ಲಿ (Official Gazette) ಕರಡು ನಿಯಮಗಳು ಪ್ರಕಟವಾದ ದಿನದಿಂದ 15 ದಿನಗಳೊಳಗೆ ಸಲ್ಲಿಕೆಯಾಗುವ ಆಕ್ಷೇಪಣೆ ಮತ್ತು ಸಲಹೆಗಳನ್ನು ಸರ್ಕಾರ ಪರಿಗಣಿಸಲಿದೆ.
ಈ ತಿದ್ದುಪಡಿಗಳು ಜಾರಿಗೆ ಬಂದ ಬಳಿಕ ಅವುಗಳನ್ನು ‘ಕರ್ನಾಟಕ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಪ್ರವೇಶ ನಿಯಮಗಳು (ತಿದ್ದುಪಡಿ)-2026 ಎಂದು ಕರೆಯಲಾಗುತ್ತದೆ. ಕರಡು ನಿಯಮಗಳು ಅಧಿಕೃತ ರಾಜ್ಯಪತ್ರದಲ್ಲಿ ಪ್ರಕಟವಾಗುವ ದಿನಾಂಕದಿಂದಲೇ ಜಾರಿಗೆ ಬರಲಿವೆ. ಕರ್ನಾಟಕ ಶೈಕ್ಷಣಿಕ ಸಂಸ್ಥೆಗಳಲ್ಲಿ ಕ್ಯಾಪಿಟೇಷನ್ ಶುಲ್ಕ ನಿಷೇಧ ಕಾಯ್ದೆ, 1984ರ ಸೆಕ್ಷನ್ 14ರ ಅಡಿಯಲ್ಲಿ ಈ ತಿದ್ದುಪಡಿಯನ್ನು ಪ್ರಸ್ತಾಪಿಸಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ