ಎಸ್‌ಐಆರ್‌ : ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರಿಗೆ ನೋಟಿಸ್‌ ನೀಡಿ ನಂತರ ಹಿಂಪಡೆದ ಅಧಿಕಾರಿಗಳು !

ಮಂಗಳೂರು: ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರಿಗೂ ಚುನಾವಣಾ ಆಯೋಗದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಗೆ ಸಂಬಂಧಿಸಿದಂತೆ ನೋಟಿಸ್ ಜಾರಿಯಾಗಿದ್ದು, ಬಳಿಕ ತಪ್ಪಿನ ಅರಿವಾಗಿ ನೋಟಿಸ್ ವಾಪಸ್ ಪಡೆದಿರುವ ಘಟನೆ ನಡೆದಿದೆ.
2002ರ ಹಳೆಯ ಮತದಾರರ ಪಟ್ಟಿಯಲ್ಲಿ ಹರೇಕಳ ಹಾಜಬ್ಬ ಅವರ ಹೆಸರು ಕೇವಲ ‘ಹಾಜಬ್ಬ’ ಎಂದು ದಾಖಲಾಗಿತ್ತು. ಆದರೆ ನಂತರದ ದಾಖಲೆಗಳಲ್ಲಿ ಅವರ ಹೆಸರು ‘ಹರೇಕಳ ಹಾಜಬ್ಬ’ ಎಂದು ನಮೂದಾಗಿದ್ದ ಹಿನ್ನೆಲೆಯಲ್ಲಿ ಹೆಸರು ಹೊಂದಾಣಿಕೆ ಪರಿಶೀಲನೆಯ ಸಂದರ್ಭದಲ್ಲಿ ವ್ಯತ್ಯಾಸ ಕಂಡುಬಂದಿತ್ತು.
ಈ ಹಿನ್ನೆಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯ ಭಾಗವಾಗಿ ಚುನಾವಣಾ ಅಧಿಕಾರಿಗಳು ಹಾಜಬ್ಬ ಅವರಿಗೆ ನೋಟಿಸ್ ನೀಡಿದ್ದರು. ಸೆಪ್ಟೆಂಬರ್ 11ರಂದು ಗ್ರಾಮ ಪಂಚಾಯಿತಿಗೆ ಅಗತ್ಯದ ಎಲ್ಲ ಮೂಲ ದಾಖಲೆಗಳೊಂದಿಗೆ ಹಾಜರಾಗುವಂತೆ ಸೂಚಿಸಲಾಗಿತ್ತು.

ಆದರೆ, ನೋಟಿಸ್ ನೀಡಿದ ಬಳಿಕ ಎಚ್ಚೆತ್ತುಕೊಂಡ ಅಧಿಕಾರಿಗಳು ಉಳ್ಳಾಲ ತಾಲೂಕಿನ ಹರೇಕಳದಲ್ಲಿರುವ ಹಾಜಬ್ಬರ ಮನೆಗೆ ಹೋಗಿ ಅಗತ್ಯ ದಾಖಲೆಗಳನ್ನು ಅಲ್ಲಿಯೇ ಪಡೆದುಕೊಂಡಿದ್ದಾರೆ. ಹಾಗೂ ಆಗಿರುವ ಅನಾನುಕೂಲತೆ ಮತ್ತು ತೊಂದರೆಗೆ ಹಾಜಬ್ಬರ ಬಳಿ ಕ್ಷಮೆಯಾಚಿಸಿದ್ದಾರೆ ಎಂದು ತಿಳಿದುಬಂದಿದೆ.
ಬೀದಿ ಬದಿಯಲ್ಲಿ ಕಿತ್ತಳೆ ಹಣ್ಣು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಹರೇಕಳ ಹಾಜಬ್ಬ ಅವರು ತಮ್ಮ ದುಡಿಮೆಯ ಹಣವನ್ನು ಸಮಾಜದ ಮಕ್ಕಳ ಶಿಕ್ಷಣಕ್ಕಾಗಿ ಮೀಸಲಿಟ್ಟು, ಸ್ವಗ್ರಾಮದಲ್ಲಿ ಶಾಲೆ ನಿರ್ಮಿಸುವ ಮೂಲಕ ದೇಶಾದ್ಯಂತ ಸುದ್ದಿಯಾಗಿದ್ದರು. ಅವರ ಅಪೂರ್ವ ಸಮಾಜಸೇವೆ ಮತ್ತು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.

ಪ್ರಮುಖ ಸುದ್ದಿ :-   ಬೇಲೂರು: ಎರಡು ಮದಗಜಗಳ ಭೀಕರ ಕಾದಾಟ ; ಮನೆ ಮೇಲೆ ಬಿದ್ದ ಮರ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement