ಪ್ರಧಾನಿ ಮೋದಿ ಭೇಟಿಯಾದ ಶಾಲಾ ಸಹಪಾಠಿ ; ಭೂ ವಿವಾದ ಪ್ರಕರಣದ ತನಿಖೆ ಸಿಬಿಐಗೆ ವಹಿಸುವಂತೆ ಮನವಿ

ಮುಂಬೈ: ದಶಕಗಳ ಹಿಂದಿನ ಭೂ ವಿವಾದದಲ್ಲಿ ಮಧ್ಯಪ್ರವೇಶಿಸಿ ನ್ಯಾಯ ದೊರಕಿಸಿಕೊಡಬೇಕು ಎಂದು ಕೋರಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿರುವ 81 ವರ್ಷದ ಮುಂಬೈ ಮೀರಾ ರೋಡ್ ನಿವಾಸಿ ಹಾಗೂ ಅವರ ಶಾಲಾ ಸಹಪಾಠಿ ಅಸ್ಗರಲಿ ವೋಹ್ರಾ ಅವರು ಈ ಪ್ರಕರಣದ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಗುಜರಾತ್‌ನ ವಡನಗರದ ಬಿ.ಎನ್. ಶಾಲೆಯಲ್ಲಿ ಓದಿದ್ದ ಅಸ್ಗರಾಲಿ ವೋಹ್ರಾ ಅವರು ಸೆಪ್ಟೆಂಬರ್‌ 8ರಂದು ಪ್ರಧಾನಿಯನ್ನು ಭೇಟಿಯಾಗಿ ತಮ್ಮ ಭೂ ವಿವಾದದ ಕುರಿತು ನೆರವು ಕೋರಿದ್ದಾರೆ. ಹಾಗೂ ತಾವು ಈ ಭೂ ವಿವಾದಕ್ಕೆ ಸಂಬಂಧಿಸಿದಂತೆ ಹಲವು ವರ್ಷಗಳಿಂದ ವಿವಿಧ ಸರ್ಕಾರಿ ಸಂಸ್ಥೆಗಳು ಮತ್ತು ಪೊಲೀಸ್ ಇಲಾಖೆಯ ಮೂಲಕ ಸತತವಾಗಿ ಹೋರಾಟ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಪ್ರಧಾನಿ ಮೋದಿ ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದ್ದು, ನ್ಯಾಯ ಸಿಗುವ ವಿಶ್ವಾಸ ಮೂಡಿದೆ ಎಂದು ವೋಹ್ರಾ ಹೇಳಿದ್ದಾರೆ ಎಂದು ವರದಿಯಾಗಿದೆ.

1989ರಲ್ಲಿ ಖರೀದಿಸಿದ್ದ ಭೂಮಿ
ವೋಹ್ರಾ ಅವರು 1989ರಲ್ಲಿ ಭಯಂದರ್‌ ಪೂರ್ವದ ನವಘರ್‌ ಪ್ರದೇಶದಲ್ಲಿ ಸುಮಾರು 2,810 ಚದರ ಮೀಟರ್‌ ಜಾಗವನ್ನು ನೋಂದಾಯಿತ ಒಪ್ಪಂದದ ಮೂಲಕ ಖರೀದಿಸಿದ್ದರು. ಆದರೆ, 2011ರಲ್ಲಿ ಈ ಆಸ್ತಿಯನ್ನು ಸ್ವಯಂ ಬಿಲ್ಡರ್ಸ್‌ ಮತ್ತು ಸೆವೆನ್‌ ಎಲೆವೆನ್‌ ಕನ್‌ಸ್ಟ್ರಕ್ಷನ್ಸ್‌ ಅತಿಕ್ರಮಿಸಿಕೊಂಡಿವೆ ಎಂದು ಅವರು ಆರೋಪಿಸಿದ್ದಾರೆ.
ಆಸ್ತಿಗೆ ಸಂಬಂಧಿಸಿದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿದ್ದು, ಈ ಬೆಳವಣಿಗೆಗಳ ಬಗ್ಗೆ ಮೂಲ ಮಾಲೀಕರಿಗೆ ಮಾಹಿತಿ ನೀಡದೆ ಪ್ರಕ್ರಿಯೆ ನಡೆಸಲಾಗಿದೆ ಎಂದು ವೋಹ್ರಾ ಆರೋಪಿಸಿದ್ದಾರೆ.ನಂತರ ಈ ಭೂಮಿಯನ್ನು ಎರಡು ಭಾಗಗಳಾಗಿ ವಿಭಜಿಸಲಾಗಿದ್ದು, ಅದರ ಸ್ವಾಧೀನವನ್ನು ಸ್ವಯಂ ಬಿಲ್ಡರ್ಸ್‌ ಮತ್ತು ಸೆವೆನ್‌ ಎಲೆವೆನ್‌ ಕನ್‌ಸ್ಟ್ರಕ್ಷನ್ಸ್‌ ಹೆಸರಿನಲ್ಲಿ ದಾಖಲಿಸಲಾಗಿದೆ ಎಂದು ಅವರು ದೂರಿದ್ದಾರೆ.

ಪ್ರಮುಖ ಸುದ್ದಿ :-   ವಿಡಿಯೊ | ಜಂಕ್‌ಫುಡ್‌ ತಿಂದ್ರೆ ಹೊಟ್ಟೆಯಲ್ಲಿ ಹುಳು : ಶಿಕ್ಷಕರ ಪ್ರಾತ್ಯಕ್ಷಿಕೆಯ ಪಾಠದಿಂದ ಹೆದರಿ ಗಳಗಳನೆ ಅತ್ತ ಮಕ್ಕಳು !

2015ರಲ್ಲೇ ಎಫ್‌ಐಆರ್‌ ದಾಖಲು
ಈ ವಿವಾದಕ್ಕೆ ಸಂಬಂಧಿಸಿದಂತೆ 2015ರಲ್ಲೇ ಎಫ್‌ಐಆರ್‌ ದಾಖಲಾಗಿದ್ದು, ಪ್ರಕರಣ ಪ್ರಸ್ತುತ ನ್ಯಾಯಾಲಯದ ವಿಚಾರಣೆಯಲ್ಲಿದೆ ಎಂದು ಟೈಮ್ಸ್‌ ಆಫ್‌ ಇಂಡಿಯಾ ವರದಿ ತಿಳಿಸಿದೆ.
ವಿವಾದವನ್ನು ಬಗೆಹರಿಸಿಕೊಳ್ಳಲು ವೋಹ್ರಾ ಹಲವು ವರ್ಷಗಳಿಂದ ವಿವಿಧ ಸರ್ಕಾರಿ ಇಲಾಖೆಗಳ ಮೊರೆ ಹೋಗಿದ್ದಾರೆ. ಕಂದಾಯ ಇಲಾಖೆ, ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಪೊಲೀಸರನ್ನು ಸಂಪರ್ಕಿಸಿ ನ್ಯಾಯಕ್ಕಾಗಿ ಮನವಿ ಸಲ್ಲಿಸಿದ್ದರೂ ಸಮಸ್ಯೆ ಬಗೆಹರಿದಿಲ್ಲ ಎಂದು ಅವರು ಹೇಳಿದ್ದಾರೆ.
ಸೆಪ್ಟೆಂಬರ್‌ 8ರಂದು ಪ್ರಧಾನಿ ಮೋದಿ ಅವರನ್ನು ಭೇಟಿಯಾದ ಬಳಿಕ ಇದೀಗ ಮಹಾನಗರ ಪಾಲಿಕೆ ಆಡಳಿತವೂ ಈ ಪ್ರಕರಣವನ್ನು ಗಮನಕ್ಕೆ ತೆಗೆದುಕೊಂಡಿದೆ ಎಂದು ವರದಿ ತಿಳಿಸಿದೆ.

ಸೆಪ್ಟೆಂಬರ್‌ 16ರಂದು ಮಹಾನಗರ ಪಾಲಿಕೆ ವಿಚಾರಣೆ
ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಹಾನಗರ ಪಾಲಿಕೆ ಮಟ್ಟದಲ್ಲಿ ಮತ್ತೊಮ್ಮೆ ವಿಚಾರಣೆ ನಡೆಯಲಿದ್ದು, ಸೆಪ್ಟೆಂಬರ್‌ 16ರಂದು ವಿಚಾರಣೆ ನಿಗದಿಯಾಗಿದೆ. ಈ ವಿಚಾರಣೆಗೆ ಸೆವೆನ್‌ ಎಲೆವೆನ್‌ ಕನ್‌ಸ್ಟ್ರಕ್ಷನ್ಸ್‌ ಮತ್ತು ಸ್ವಯಂ ಬಿಲ್ಡರ್ಸ್‌ ಸಂಸ್ಥೆಗಳ ಪ್ರತಿನಿಧಿಗಳು ಕಡ್ಡಾಯವಾಗಿ ಹಾಜರಾಗುವಂತೆ ಸೂಚಿಸಲಾಗಿದೆ.
ದಶಕಗಳಿಂದ ಭೂ ವಿವಾದ ಬಗೆಹರಿಸಲು ಸರ್ಕಾರಿ ಇಲಾಖೆಗಳು ಹಾಗೂ ಪೊಲೀಸರನ್ನು ಸಂಪರ್ಕಿಸುತ್ತಿದ್ದ ವೋಹ್ರಾ, ಕೊನೆಗೆ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಪ್ರಕರಣದಲ್ಲಿ ಮಧ್ಯಪ್ರವೇಶಿಸುವಂತೆ ಹಾಗೂ ಸಿಬಿಐ ತನಿಖೆ ನಡೆಸುವಂತೆ ಮನವಿ ಮಾಡಿದ್ದರು.
ಪ್ರಧಾನಿ ಅವರನ್ನು ಭೇಟಿಯಾದ ಬೆನ್ನಲ್ಲೇ ಮಹಾನಗರ ಪಾಲಿಕೆ ಆಡಳಿತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಸೆಪ್ಟೆಂಬರ್‌ 16ರ ವಿಚಾರಣೆಯಲ್ಲಿ ಎರಡೂ ನಿರ್ಮಾಣ ಸಂಸ್ಥೆಗಳ ಪ್ರತಿನಿಧಿಗಳು ಅಧಿಕಾರಿಗಳ ಮುಂದೆ ಹಾಜರಾಗಬೇಕಾಗಿದೆ.
ಆಸ್ತಿ ಅತಿಕ್ರಮಣ ಹಾಗೂ ನಕಲಿ ದಾಖಲೆಗಳ ಸೃಷ್ಟಿಗೆ ಸಂಬಂಧಿಸಿದಂತೆ ವೋಹ್ರಾ ಮಾಡಿರುವ ಆರೋಪಗಳು ಸದ್ಯ ವಿವಾದದ ಭಾಗವಾಗಿದೆ.

ಪ್ರಮುಖ ಸುದ್ದಿ :-   ವಿಡಿಯೋ | ಬ್ರಿಕ್ಸ್‌ ಶೃಂಗಸಭೆಗೆ ಬಾಲಿವುಡ್‌ ಟಚ್‌ : ಕಿಶೋರಕುಮಾರ ಹಾಡು ಹಾಡಿ ಮನಗೆದ್ದ ಮಲೇಷ್ಯಾ ಪ್ರಧಾನಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement