ಯುಪಿಐನಲ್ಲಿ ₹2,000ಕ್ಕಿಂತ ಹೆಚ್ಚಿನ ಹಣ ಪಾವತಿಗೆ ಶೇ. 0.4ರಷ್ಟು ಶುಲ್ಕ ; ಇದು ಯಾರಿಗೆ ಅನ್ವಯ, ಯಾರಿಗೆ ಎಂದಿನಂತೆ ಫ್ರೀ?

ನವದೆಹಲಿ: ಯುಪಿಐ ಮೂಲಕ ಅಂಗಡಿ, ವ್ಯಾಪಾರಿ ಅಥವಾ ಇತರೆ ಸಂಸ್ಥೆಗಳಿಗೆ ₹2,000ಕ್ಕಿಂತ ಹೆಚ್ಚಿನ ಮೊತ್ತವನ್ನು  ಪಾವತಿಸಿದರೆ ಶೇ.0.4ರಷ್ಟು ಶುಲ್ಕ (Merchant Discount Rate-MDR) ವಿಧಿಸಲಾಗುತ್ತದೆ. ಆದರೆ ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಗೆ ಹಣ ಕಳುಹಿಸಿದರೆ ಯಾವುದೇ ಶುಲ್ಕ ಇರುವುದಿಲ್ಲ. ಕಳುಹಿಸುವ ಹಣದ ಮೊತ್ತ ಎಷ್ಟೇ ಇದ್ದರೂ ಈ ಪಾವತಿ ಉಚಿತವಾಗಿರಲಿದೆ.   ಇದು ಆಯ್ದ ವ್ಯಾಪಾರಿಗಳಿಗೆ ಮಾತ್ರ ಅನ್ವಯಿಸುತ್ತದೆ. ಕೇಂದ್ರ ಸರ್ಕಾರ ಮಂಗಳವಾರ ಪ್ರಕಟಿಸಿರುವ ಈ ಹೊಸ ಹಣ ಪಾವತಿ ನಿಯಮಗಳು ಅಕ್ಟೋಬರ್ 15ರಿಂದ ಜಾರಿಗೆ ಬರಲಿವೆ.
ವ್ಯಕ್ತಿಯಿಂದ ವ್ಯಕ್ತಿಗೆ ನಡೆಯುವ ಯುಪಿಐ ಹಣ ಪಾವತಿಸುವುದಕ್ಕೆ ಯಾವುದೇ ಶುಲ್ಕ ಇರುವುದಿಲ್ಲ. ಪ್ರಸ್ತುತ ಯುಪಿಐನಲ್ಲಿ ನಡೆಯುವ ಒಟ್ಟು ವಹಿವಾಟುಗಳ ಸಂಖ್ಯೆಯಲ್ಲಿ ಇಂತಹ ಹಣ ಪಾವತಿಗಳ ಪಾಲು ಶೇ.37ರಷ್ಟಿದೆ. ಹಣದ ಒಟ್ಟು ಮೌಲ್ಯವನ್ನು ನೋಡಿದರೆ ಶೇ.70ರಷ್ಟು ವಹಿವಾಟು ವ್ಯಕ್ತಿಗಳ ನಡುವಿನ ಹಣ ವರ್ಗಾವಣೆಯಾಗಿದೆ.
ಆದರೆ ವ್ಯಕ್ತಿಯಿಂದ ವ್ಯಾಪಾರಿಗೆ ನಡೆಯುವ ಪಾವತಿಯಲ್ಲಿ ₹2,000 ಮೀರಿದರೆ ಶೇ.0.4ರಷ್ಟು ಎಂಡಿಆರ್ ವಿಧಿಸಲಾಗುತ್ತದೆ. ಈ ಶುಲ್ಕವನ್ನು ಬ್ಯಾಂಕ್‌ಗಳು ಮತ್ತು ಯುಪಿಐ ಆ್ಯಪ್‌ಗಳನ್ನು ಒದಗಿಸುವ ಸಂಸ್ಥೆಗಳು ಸೇರಿದಂತೆ ಪಾವತಿ ವ್ಯವಸ್ಥೆಯ ವಿವಿಧ ಭಾಗೀದಾರರು ಹಂಚಿಕೊಳ್ಳಲಿದ್ದಾರೆ.
ಅಂದರೆ ಗ್ರಾಹಕರಿಗೆ ಯುಪಿಐ ಪಾವತಿ ಉಚಿತವಾಗಿಯೇ ಮುಂದುವರಿಯಲಿದೆ. ಮರ್ಚೆಂಟ್ ಡಿಸ್ಕೌಂಟ್ ರೇಟ್ (ಎಂಡಿಆರ್) ವ್ಯಾಪಾರಿಗಳ ಪಾವತಿ ವ್ಯವಸ್ಥೆಯೊಳಗೆ ಮಾತ್ರ ಅನ್ವಯವಾಗುತ್ತದೆ. ಯುಪಿಐ ಮೂಲಕ ಹಣ ಪಾವತಿಸುವ ಗ್ರಾಹಕರ ಮೇಲೆ ಯಾವುದೇ ವಹಿವಾಟು ಶುಲ್ಕವನ್ನು ಇದು ವಿಧಿಸುವುದಿಲ್ಲ.
“ಎಂಡಿಆರ್ ಎಂಬುದು ವ್ಯಾಪಾರಿಗಳ ಪಾವತಿ ವ್ಯವಸ್ಥೆಯೊಳಗಿನ ಶುಲ್ಕವಾಗಿದೆ. ಯುಪಿಐ ಮೂಲಕ ಪಾವತಿ ಮಾಡುವ ಗ್ರಾಹಕರಿಗೆ ಇದು ಯಾವುದೇ ಶುಲ್ಕವಲ್ಲ. ವ್ಯಾಪಾರಿಗಳು ಎಂಡಿಆರ್ ಶುಲ್ಕವನ್ನು ಗ್ರಾಹಕರಿಂದ ವಸೂಲಿ ಮಾಡದಂತೆ ನೋಡಿಕೊಳ್ಳುವಂತೆ ಬ್ಯಾಂಕ್‌ಗಳಿಗೆ ಸೂಚಿಸಲಾಗಿದೆ. ಯುಪಿಐ ಆ್ಯಪ್‌ಗಳನ್ನು ಒದಗಿಸುವ ಸಂಸ್ಥೆಗಳು ಯಾವುದೇ ಪ್ಲಾಟ್‌ಫಾರ್ಮ್ ಶುಲ್ಕ ಅಥವಾ ಗುಪ್ತ ಶುಲ್ಕ ವಿಧಿಸುವುದನ್ನು ಸ್ಪಷ್ಟವಾಗಿ ನಿಷೇಧಿಸಲಾಗಿದೆ” ಎಂದು ಹಣಕಾಸು ಸಚಿವಾಲಯ ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದೆ.
₹75,000 ಅಥವಾ ಅದಕ್ಕಿಂತ ಹೆಚ್ಚಿನ ಪಾವತಿಗೆ ಶೇ.0.4ರ ಲೆಕ್ಕದಲ್ಲಿ ಶುಲ್ಕ ಹೆಚ್ಚಾದರೂ, ಪ್ರತಿ ವಹಿವಾಟಿಗೆ ಹೆಚ್ಚೆಂದರೆ ₹300 ಮಾತ್ರ ಶುಲ್ಕ ವಿಧಿಸಲಾಗುತ್ತದೆ.
ಹೊಸ ನಿಯಮದಂತೆ 2,000 ರೂ.ಗಳಿಗಿಂತ ಕಡಿಮೆ ಹಣ ಪಾವತಿ ಪಡೆಯುವ ವ್ಯಾಪಾರಿಗಳಿಗೆ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಎಂದು ಹೇಳುತ್ತದೆ.  ಒಟ್ಟು ಮೊತ್ತದ 95%ರಷ್ಟು ವ್ಯವಹಾರಗಳು ಈ ಮಿತಿಯಲ್ಲಿಯೇ ನಡೆಯುತ್ತದೆ.
ರೈಲ್ವೆ, ದೂರಸಂಪರ್ಕ, ವಿಮೆ, ಇಂಧನ ಮತ್ತು ಕೃಷಿಗೆ ಬೇಕಾದ ಸಾಮಗ್ರಿಗಳಂತಹ ಅಗತ್ಯ ಸೇವೆಗಳಿಗೆ ವಿಶೇಷ ನಿಯಮವಿದೆ. ಈ ಕ್ಷೇತ್ರಗಳಲ್ಲಿ ₹2,000ಕ್ಕಿಂತ ಹೆಚ್ಚಿನ ಯುಪಿಐ ಪಾವತಿಗೆ ಶೇ.0.4ರ ಬದಲು ಪ್ರತಿ ವಹಿವಾಟಿಗೆ ನಿಗದಿತ ₹5 ಶುಲ್ಕ ಮಾತ್ರ ಇರುತ್ತದೆ. ಯುಪಿಐ ಮೂಲಕ ವ್ಯಾಪಾರಿಗಳಿಗೆ ಮಾಡುವ ಒಟ್ಟು ಪಾವತಿಗಳ ಸಂಖ್ಯೆಯಲ್ಲಿ ಈ ಕ್ಷೇತ್ರಗಳ ಪಾಲು ಶೇ.17ರಷ್ಟಿದೆ. ಆದರೆ ಹಣದ ಮೌಲ್ಯವನ್ನು ನೋಡಿದರೆ ಶೇ.46ರಷ್ಟು ವಹಿವಾಟು ಈ ಕ್ಷೇತ್ರಗಳಿಗೆ ಸೇರಿದೆ.
ಮ್ಯೂಚುವಲ್ ಫಂಡ್‌ಗಳು, ಷೇರುಗಳು, ಷೇರು ದಲ್ಲಾಳಿಗಳು ಮತ್ತು ಡೀಲರ್‌ಗಳಿಗೆ ಮಾಡುವ ಪಾವತಿಗಳಿಗೂ ಶುಲ್ಕ ನಿಗದಿಪಡಿಸಲಾಗಿದೆ. ಇಂತಹ ವಹಿವಾಟುಗಳಿಗೆ ಶೇ.0.02ರಷ್ಟು ಎಂಡಿಆರ್ ವಿಧಿಸಲಾಗುತ್ತದೆ. ಇಲ್ಲಿಯೂ ಪ್ರತಿ ವಹಿವಾಟಿಗೆ ಗರಿಷ್ಠ ₹300 ಮಾತ್ರ ಶುಲ್ಕ ಇರಲಿದೆ.
ಸಣ್ಣ ವ್ಯಾಪಾರಿಗಳಿಗೆ ಯಾವುದೇ ಹೆಚ್ಚುವರಿ ಹೊರೆ ಇರುವುದಿಲ್ಲ. ಯುಪಿಐ ಕ್ಯೂಆರ್ ಕೋಡ್ ಮೂಲಕ ತಿಂಗಳಿಗೆ ₹1 ಲಕ್ಷದವರೆಗೆ ಹಣ ಸ್ವೀಕರಿಸುವ ಸಣ್ಣ ವ್ಯಾಪಾರಿಗಳಿಗೆ ಎಲ್ಲಾ ವಹಿವಾಟುಗಳ ಮೇಲೂ ಶೂನ್ಯ ಎಂಡಿಆರ್ ಮುಂದುವರಿಯಲಿದೆ. ಅಂದರೆ, ಅವರು ಯುಪಿಐ ಮೂಲಕ ಹಣ ಸ್ವೀಕರಿಸುವುದಕ್ಕೆ ಈ ಶುಲ್ಕ ಪಾವತಿಸಬೇಕಾಗಿಲ್ಲ.
ಯುಪಿಐ ಆ್ಯಪ್‌ಗಳು ತಮ್ಮ ಬಳಕೆದಾರರಿಗೆ ಯಾವುದೇ ಪ್ರತ್ಯೇಕ ಪ್ಲಾಟ್‌ಫಾರ್ಮ್ ಶುಲ್ಕ ಅಥವಾ ಗುಪ್ತ ಶುಲ್ಕವನ್ನು ವಿಧಿಸುವಂತಿಲ್ಲ. ಅಲ್ಲದೆ, ವ್ಯಾಪಾರಿಗಳು ಎಂಡಿಆರ್ ಶುಲ್ಕವನ್ನು ಗ್ರಾಹಕರಿಂದ ವಸೂಲಿ ಮಾಡದಂತೆ ನೋಡಿಕೊಳ್ಳುವಂತೆ ಬ್ಯಾಂಕ್‌ಗಳಿಗೆ ಸೂಚಿಸಲಾಗಿದೆ.
ಉಚಿತ ಯುಪಿಐ ಹಣ ಪಾವತಿಗಳಿಗೆ ತಿಂಗಳ ಮಿತಿ ಕೂಡ ಇರುವುದಿಲ್ಲ. ಎಷ್ಟು ಬಾರಿ ವಹಿವಾಟು ನಡೆಸಬಹುದು ಎಂಬ ಸಂಖ್ಯೆಯ ಮಿತಿಯೂ ಇರುವುದಿಲ್ಲ. ಉಚಿತ ಪಾವತಿಗಳಿಗೆ ಯಾವುದೇ ಹಂತವಾರು ಮಿತಿಯನ್ನು ವಿಧಿಸಲಾಗುವುದಿಲ್ಲ.
ಆದರೆ ಬ್ಯಾಂಕ್‌ಗಳು ಮತ್ತು ಎನ್‌ಪಿಸಿಐ ನಿಗದಿಪಡಿಸುವ ದೈನಂದಿನ ವಹಿವಾಟು ಮಿತಿಗಳು ಮಾತ್ರ ಮುಂದುವರಿಯುತ್ತವೆ. ಸಾಮಾನ್ಯವಾಗಿ ವಹಿವಾಟಿನ ಸ್ವರೂಪವನ್ನು ಅವಲಂಬಿಸಿ ದಿನಕ್ಕೆ ₹1 ಲಕ್ಷದಿಂದ ₹5 ಲಕ್ಷದವರೆಗೆ ಈ ಮಿತಿ ಇರಬಹುದು. ಈ ಮಿತಿಗಳು ಶುಲ್ಕವಲ್ಲ. ಯುಪಿಐ ಬಳಕೆಯ ಸುರಕ್ಷತೆ ಮತ್ತು ವಂಚನೆ ಅಥವಾ ಹಣಕಾಸಿನ ಅಪಾಯವನ್ನು ನಿಯಂತ್ರಿಸುವ ಉದ್ದೇಶದಿಂದ ಇವುಗಳನ್ನು ನಿಗದಿಪಡಿಸಲಾಗುತ್ತದೆ.
ಹೀಗಾಗಿ, ಸಾಮಾನ್ಯವಾಗಿ ಒಬ್ಬರಿಂದ ಮತ್ತೊಬ್ಬರಿಗೆ ಹಣ ಕಳುಹಿಸುವವರಿಗೆ ಯಾವುದೇ ಬದಲಾವಣೆ ಇರುವುದಿಲ್ಲ. ಬದಲಾಗಿ, ₹2,000ಕ್ಕಿಂತ ಹೆಚ್ಚಿನ ಮೊತ್ತವನ್ನು ವ್ಯಾಪಾರಿಗಳಿಗೆ ಯುಪಿಐ ಮೂಲಕ ಪಾವತಿಸುವ ಸಂದರ್ಭದಲ್ಲಿ ಮಾತ್ರ ಹೊಸ ಶುಲ್ಕ ನಿಯಮ ಅನ್ವಯವಾಗಲಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement