‘ನೋಡದೆ, ಟೆಲಿಪ್ರಾಂಪ್ಟರ್ ಇಲ್ಲದೆ ಬಿಜೆಪಿ ನಾಯಕರು ವಂದೇ ಮಾತರಂನ 6 ಚರಣಗಳನ್ನು ಹಾಡಿದ್ರೆ ರಾಜೀನಾಮೆ’: ಸಚಿವ ಪ್ರಿಯಾಂಕ್ ಖರ್ಗೆ ಸವಾಲು

ಬೆಂಗಳೂರು : ರಾಜ್ಯ ಸರ್ಕಾರದ ಅಧಿಕೃತ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಹಾಡಿನ ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವಂತೆ ನೀಡಿರುವ ಆದೇಶವನ್ನು ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸಮರ್ಥಿಸಿಕೊಂಡಿದ್ದಾರೆ.
ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಖರ್ಗೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಪ್ರತಿಪಕ್ಷ ನಾಯಕ ಆರ್. ಅಶೋಕ ಅವರಿಗೆ ಸವಾಲು ಹಾಕಿದ್ದು, “ಟೆಲಿಪ್ರಾಂಪ್ಟರ್ ಬಳಸದೇ ಅಥವಾ ಕಾಗದ ನೋಡದೆ ವಂದೇ ಮಾತರಂನ ಎಲ್ಲಾ ಆರು ಚರಣಗಳನ್ನು ಹಾಡಿದರೆ ನಾನು ರಾಜೀನಾಮೆ ನೀಡುತ್ತೇನೆ” ಎಂದು ಹೇಳಿದ್ದಾರೆ.
ಈ ವೇಳೆ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಟೀಕಿಸಿದ ಖರ್ಗೆ “ನಮ್ಮ ಹಿಂದಿನವರು ವಂದೇ ಮಾತರಂನ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಬೇಕು ಎಂದು ನಿರ್ಧರಿಸಿದ್ದರು. ಈಗ ಬಿಜೆಪಿ ಮತ್ತು ಪ್ರಧಾನಿ ಮೋದಿ ಎಲ್ಲಾ ಚರಣಗಳನ್ನು ಹಾಡಬೇಕು ಎಂದು ಹೇಳುತ್ತಿದ್ದಾರೆ. ಹಾಗಾದರೆ ಅವರು ಜವಾಹರಲಾಲ ನೆಹರು, ಸುಭಾಷಚಂದ್ರ ಬೋಸ್ ಮತ್ತು ನೊಬೆಲ್ ಪುರಸ್ಕೃತ ರವೀಂದ್ರನಾಥ ಟ್ಯಾಗೋರ್‌ಗಿಂತ ದೊಡ್ಡವರೇ?” ಎಂದು ಪ್ರಶ್ನಿಸಿದರು.

ವಂದೇ ಮಾತರಂಗೆ 150 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ, ರಾಷ್ಟ್ರಗೀತೆ ಜನ ಗಣ ಮನ ಜೊತೆಗೆ ರಾಷ್ಟ್ರೀಯ ಗೀತೆಯಾದ ʼವಂದೇ ಮಾತರಂʼ ಹಾಡುವ ಸಂದರ್ಭದಲ್ಲಿ ಅದರ ಎಲ್ಲ ಆರು ಚರಣಗಳನ್ನು ಹಾಡುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಎರಡನ್ನೂ ಒಟ್ಟಿಗೆ ಹಾಡುವ ವೇಳೆ ಮೊದಲು ವಂದೇ ಮಾತರಂ ಮತ್ತು ಬಳಿಕ ಜನ ಗಣ ಮನ ಹಾಡಬೇಕು ಎಂಬ ಮಾರ್ಗಸೂಚಿಯನ್ನೂ ನೀಡಲಾಗಿತ್ತು.
ಆದರೆ ಆಗಸ್ಟ್ 19ರಂದು ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸಭೆಯಲ್ಲಿ, ವಂದೇ ಮಾತರಂನ ಎರಡು ಚರಣಗಳನ್ನು ಮಾತ್ರ ಹಾಡುವ 1937ರ ಕಾಂಗ್ರೆಸ್ ನಿರ್ಣಯವನ್ನು ಪಾಲಿಸಲು ತೀರ್ಮಾನಿಸಲಾಗಿತ್ತು.
ಇದೇ ವಿಚಾರವನ್ನು ಆಧಾರವಾಗಿಟ್ಟುಕೊಂಡು ಕರ್ನಾಟಕ ಸರ್ಕಾರವು ರಾಜ್ಯದ ಅಧಿಕೃತ ಕಾರ್ಯಕ್ರಮಗಳಲ್ಲಿ ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವಂತೆ ಆದೇಶ ಹೊರಡಿಸಿತ್ತು. ಈ ಕ್ರಮವನ್ನು ಬಿಜೆಪಿ ತೀವ್ರವಾಗಿ ವಿರೋಧಿಸಿದ್ದು, ಇದನ್ನು “ಓಲೈಕೆ ರಾಜಕೀಯ” ಎಂದು ಟೀಕಿಸಿದೆ.

ಪ್ರಮುಖ ಸುದ್ದಿ :-   ಶಿರಸಿ : ಕೆರೆಗೆ ಈಜಲು ಹೋದಾಗ ನೀರು ಪಾಲು

ಇದರ ಮಧ್ಯೆ, ರಾಜ್ಯ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಮಂಗಳವಾರ ಕರ್ನಾಟಕ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಕೆಯಾಗಿದೆ. ವಕೀಲ ಗಿರೀಶ ಭಾರದ್ವಾಜ ಸಲ್ಲಿಸಿರುವ ಅರ್ಜಿಯಲ್ಲಿ, ರಾಜ್ಯ ಸರ್ಕಾರದ ಆದೇಶವು ಕೇಂದ್ರ ಸರ್ಕಾರದ ನಿರ್ದೇಶನಗಳಿಗೆ ವಿರುದ್ಧವಾಗಿದೆ ಎಂದು ತಿಳಿಸಲಾಗಿದೆ.
ಅರ್ಜಿಯ ಪ್ರಕಾರ, ಕೇಂದ್ರ ಗೃಹ ಸಚಿವಾಲಯವು 2026ರ ಜುಲೈ 9ರಂದು ಎಲ್ಲಾ ರಾಜ್ಯಗಳಿಗೆ ಪತ್ರ ಬರೆದು ವಂದೇ ಮಾತರಂ ಕುರಿತ ಆದೇಶಗಳನ್ನು “ಕಟ್ಟುನಿಟ್ಟಾಗಿ ಪಾಲಿಸುವಂತೆ” ಸೂಚಿಸಿತ್ತು. ಕೇಂದ್ರದ ಮಾರ್ಗಸೂಚಿಗಳ ಪ್ರಕಾರ, ವಂದೇ ಮಾತರಂನ ಅಧಿಕೃತ ರೂಪವು ಆರು ಚರಣಗಳ ಸಂಪೂರ್ಣ ಸಂಯೋಜನೆಯಾಗಿದ್ದು, ಸಾಮೂಹಿಕ ಗಾಯನದ ಸಂದರ್ಭದಲ್ಲಿ ಅದನ್ನೇ ಹಾಡಬೇಕು ಎಂದು ಹೇಳಲಾಗಿದೆ.
ರಾಜ್ಯ ಸರ್ಕಾರವು ಮೊದಲ ಎರಡು ಚರಣಗಳಿಗೆ ಮಾತ್ರ ಸೀಮಿತಗೊಳಿಸಿರುವುದು ಕೇಂದ್ರ ಸರ್ಕಾರ ನಿಗದಿಪಡಿಸಿರುವ ಅಧಿಕೃತ ರೂಪಕ್ಕೆ ವಿರುದ್ಧವಾಗಿದೆ ಎಂದು ಅರ್ಜಿದಾರರು ವಾದಿಸಿದ್ದು, ರಾಜ್ಯ ಸರ್ಕಾರದ ಆದೇಶವನ್ನು ರದ್ದುಗೊಳಿಸುವಂತೆ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement