ಬೆಂಗಳೂರು: ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಪ್ರಧಾನ ಮಂತ್ರಿ ಮತ್ತು ರಾಜ್ಯಪಾಲರು ಭಾಗವಹಿಸುವ ಕಾರ್ಯಕ್ರಮ ಹೊರತುಪಡಿಸಿ ರಾಜ್ಯ ಸರ್ಕಾರದ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯ ಎರಡು ಚರಣಗಳನ್ನು ಮಾತ್ರ ಹಾಡಬೇಕು ಎಂದು ಕಡ್ಡಾಯಗೊಳಿಸಿ ಸೆಪ್ಟೆಂಬರ್ 8ರಂದು ರಾಜ್ಯ ಸರ್ಕಾರ ಸರ್ಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ವಕೀಲ ಗಿರೀಶ ಭಾರದ್ವಾಜ ಅವರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ವಕೀಲ ಅಂಗದ ಕಾಮತ್ ಮೂಲಕ ಅರ್ಜಿ ಸಲ್ಲಿಸಿಲಾಗಿದ್ದು, ರಾಜ್ಯ ಸರ್ಕಾರ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಕೇಂದ್ರ ಗೃಹ ಇಲಾಖೆಯನ್ನು ಪ್ರತಿವಾದಿಗಳನ್ನಾಗಿಸಲಾಗಿದೆ.
ವಕೀಲ ಗಿರೀಶ ಭಾರದ್ವಾಜ ಅವರು ಸಲ್ಲಿಸಿರುವ ಅರ್ಜಿಯಲ್ಲಿ, ‘ರಾಷ್ಟ್ರಗೀತೆ’ಯಂತಹ ರಾಷ್ಟ್ರೀಯ ಸಂಕೇತದ ಸ್ವರೂಪ ಮತ್ತು ವಿಷಯವನ್ನು ರಾಜ್ಯ ಸರ್ಕಾರವು ಕಾರ್ಯಾಂಗ ಆದೇಶದ ಮೂಲಕ ನಿಗದಿಪಡಿಸಬಹುದೇ ಎಂಬ ಕೇಳಲಾಗಿದೆ.
ಯಾವುದೇ ಕಾನೂನು ಸಲಹೆ ಅಥವಾ ಆಡಳಿತಾತ್ಮಕ ಇಲಾಖೆಯ ಸಂಪುಟದ ಪ್ರಸ್ತಾವ ಇಲ್ಲದೇ ಅನೌಪಚಾರಿಕ ಚರ್ಚೆಯ ಬಳಿಕ ಆದೇಶ ಮಾಡಲಾಗಿದೆ. ರಾಷ್ಟ್ರೀಯ ಲಾಂಛನಗಳಾದ ರಾಷ್ಟ್ರಗೀತೆಯನ್ನು ಸಂಸತ್ ಮಾತ್ರ ಕಾಯಿದೆಯ ಮೂಲಕ ರೂಪಿಸಬಹುದಾಗಿದೆ ಎಂದು ಹೇಳಲಾಗಿದೆ.
ಸಂವಿಧಾನದ 256ನೇ ವಿಧಿಯ ಪ್ರಕಾರ ಸಂಸತ್ತು ರೂಪಿಸಿದ ಕಾಯಿದೆಗಳನ್ನು ರಾಜ್ಯಗಳು ಪಾಲಿಸಬೇಕು. ಆದರೆ, ಸರ್ಕಾರದ ಆದೇಶವು ಅದಕ್ಕೆ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ