ರೇಷನ್ ಕಾರ್ಡುದಾರರಿಗೆ ಗುಡ್ ನ್ಯೂಸ್: ರೇಷನ್‌ ಕಾರ್ಡ್‌ ಇ ಕೆವೈಸಿ ಗಡುವು ವಿಸ್ತರಿಸಿದ ಸರ್ಕಾರ

ಬೆಂಗಳೂರು: ರೇಷನ್‌ ಕಾರ್ಡ್‌ ಇ ಕೆವೈಸಿಗೆ ಸಂಬಂಧಿಸಿದಂತೆ ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ಮಹತ್ವದ ಮಾಹಿತಿ ಹಂಚಿಕೊಂಡಿದ್ದು, ಇ ಕೆವೈಸಿಗೆ ನಿಗದಿಪಡಿಸಿದ್ದ ಗಡುವನ್ನು ಅಕ್ಟೋಬರ್ 20ವರೆಗೂ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಇದರಿಂದ ಇ ಕೆವೈಸಿ ಆಗದೇ ಇದ್ದ ಲಕ್ಷಾಂತರ ಜನರಿಗೆ ಅನುಕೂಲವಾಗಲಿದೆ.
ಇದುವರೆಗೆ ರೇಷನ್‌ ಕಾರ್ಡ್‌ ಇ ಕೆವೈಸಿ ಮಾಡಿಸಲು ಸೆಪ್ಟೆಂಬರ್‌ 30 ಕೊನೆಯ ದಿನವಾಗಿತ್ತು. ಈಗ ಕೊನೆ ದಿನಾಂಕವನ್ನು ಅಕ್ಟೋಬರ್ 20ರವರೆಗೆ ವಿಸ್ತರಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹೇಳಿದೆ.
ಅಲ್ಲದೆ, ಫಲಾನುಭವಿಗಳ ಅನುಕೂಲಕ್ಕಾಗಿ ನ್ಯಾಯಬೆಲೆ ಅಂಗಡಿ ಸಮಯವನ್ನು ಬೆಳಿಗ್ಗೆ 7 ರಿಂದ 12ವರೆಗೆ ಹಾಗೂ ಸಂಜೆ 4 ರಿಂದ 8 ಗಂಟೆಯವರೆಗೆ ವಿಸ್ತರಣೆ ಮಾಡಿದೆ. ಪ್ರತಿ ದಿನ 8 ತಾಸು ಪಡಿತರ ವಿತರಣೆ ಮಾಡಲೇಬೇಕು ಎಂದು ಸೂಚನೆ ನೀಡಲಾಗಿದೆ.

ಸರ್ವರ್‌ ತೊಂದರೆ…
ನ್ಯಾಯಬೆಲೆ ಅಂಗಡಿಗಳಲ್ಲಿ ಎದುರಾಗುತ್ತಿರುವ ತೀವ್ರ ಸರ್ವರ್ ಸಮಸ್ಯೆಯಿಂದಾಗಿ ಇ-ಕೆವೈಸಿ ಮಾಡಿಸಲು ತೀವ್ರ ತೊಂದರೆ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಅವಧಿ ವಿಸ್ತರಿಸಲಾಗಿದೆ ಎನ್ನಲಾಗಿದೆ. ಇದರ ಜತೆಗೆ ನ್ಯಾಯಬೆಲೆ ಅಂಗಡಿಗಳ ಸಮಯದಲ್ಲೂ ಬದಲಾವಣೆ ಮಾಡಲಾಗಿದೆ.
ಇತ್ತೀಚೆಗೆ ರಾಜ್ಯ ಸರ್ಕಾರವು ಅತ್ಯಂತ ಮಹತ್ವದ ಪ್ರಕಟಣೆಯೊಂದನ್ನು ಹೊರಡಿಸಿ, ರಾಜ್ಯದ ಬಿಪಿಎಲ್, ಎಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿಯಲ್ಲಿ ಹೆಸರಿರುವ ಪ್ರತಿಯೊಬ್ಬ ಸದಸ್ಯರೂ ತಮ್ಮ ಆಧಾರ್ ಇ-ಕೆವೈಸಿ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕು ಎಂದು ಸೂಚಿಸಿತ್ತು. ಆದರೆ ಸರ್ವರ್, ತಾಂತ್ರಿಕ ಸಮಸ್ಯೆಯಿಂದ ಹಲವೆಡೆ ಇ-ಕೆವೈಸಿ ಪೂರ್ಣಗೊಂಡಿರಲಿಲ್ಲ. ಇದರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ಪ್ರಮುಖ ಸುದ್ದಿ :-   ವೀಸಾ ಅವಧಿ ಮುಗಿದರೂ ವಾಸ: ಇಸ್ರೇಲ್ ಪ್ರಜೆ ವಶಕ್ಕೆ

ಸರ್ವರ್‌ ಸಮಸ್ಯೆ ಬಗ್ಗೆ ನ್ಯಾಯಬೆಲೆ ಅಂಗಡಿಯವರು ಸರ್ಕಾರದ ಗಮನ ತಂದಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪಡಿತರ ಚೀಟಿದಾರರಿಗೆ ಇ-ಕೆವೈಸಿ ಪೂರ್ಣಗೊಳಿಸಲು ಅಕ್ಟೋಬರ್ 20ರವರೆಗೆ ಕಾಲಾವಕಾಶ ನೀಡಿ ಡೆಡ್​​ಲೈನ್​ ವಿಸ್ತರಿಸಿದೆ.
ಸರ್ವರ್ ಸಮಸ್ಯೆಯಿಂದ ಯಾರೂ ಆತಂಕಪಡಬೇಕಿಲ್ಲ. ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಇ-ಕೆವೈಸಿ ಗಡುವನ್ನು ಅಕ್ಟೋಬರ್ 20ರವರೆಗೆ ವಿಸ್ತರಿಸಲಾಗಿದೆ. ಯಾವುದೇ ಅರ್ಹ ಕುಟುಂಬವೂ ತನ್ನ ಹಕ್ಕಿನ ಆಹಾರಧಾನ್ಯದಿಂದ ವಂಚಿತರಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಸರ್ವರ್ ಸಮಸ್ಯೆ ಶೀಘ್ರ ಪರಿಹಾರಕ್ಕೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಆತುರ ಬೇಡ, ಆತಂಕ ಬೇಡ, ನಿಮ್ಮ ಆಹಾರಧಾನ್ಯದ ಹಕ್ಕು ಸುರಕ್ಷಿತ ಎಂದು ಸಚಿವ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ನಿಯಮದಂತೆ ಪ್ರತಿ 5 ವರ್ಷಕ್ಕೊಮ್ಮೆ ಪಡಿತರ ಚೀಟಿದಾರರು ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ. ಹಾಗಾಗಿ, ಇ-ಕೆವೈಸಿ ಮಾಡಿಸದಿದ್ದರೆ ಕಾರ್ಡ್ ರದ್ದಾಗುವ ಸಾಧ್ಯತೆಯಿದೆ.

ಪ್ರಮುಖ ಸುದ್ದಿ :-   ಅಡಿಕೆ ಬೇಯಿಸುವಾಗ ಹಂಡೆಗೆ ಬಿದ್ದಿದ್ದ ವ್ಯಕ್ತಿ ಸಾವು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement