ಡೆಹ್ರಾಡೂನ್ : ಉತ್ತರಾಖಂಡದ ಪಿಥೋರಾಗಢ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದ ಹೃದಯವಿದ್ರಾವಕ ಘಟನೆ ಇಡೀ ಪ್ರದೇಶವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. 14 ವರ್ಷದ ಪುತ್ರನ ಹಠಾತ್ ಸಾವಿನ ಆಘಾತವನ್ನು ತಡೆಯಲಾರದೆ, ಕೆಲವೇ ಗಂಟೆಗಳಲ್ಲಿ ತಾಯಿಯೂ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ.
ಪಿಥೋರಾಗಢ ಜಿಲ್ಲಾ ಕೇಂದ್ರದ ಸಮೀಪದ ಮಾಡೆ (Made) ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಧಿಕಾರಿಗಳ ಮಾಹಿತಿ ಪ್ರಕಾರ, 14 ವರ್ಷದ ಜತಿನ್ ಜೋಶಿ ಶನಿವಾರ ಬೆಳಿಗ್ಗೆ ಸುಮಾರು 6 ಗಂಟೆಗೆ ತನ್ನ ದಿನನಿತ್ಯದ ರನ್ನಿಂಗ್(ಓಟ)ಗಾಗಿ ಝೌಲ್ಖೇತ್ ಕ್ರೀಡಾಂಗಣಕ್ಕೆ ತೆರಳಿದ್ದ. ಓಟ ಮುಗಿಸಿದ ಕೆಲವೇ ಕ್ಷಣಗಳಲ್ಲಿ ಆತ ಮೈದಾನದಲ್ಲೇ ಏಕಾಏಕಿ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದಾನೆ.
ಮಗನ ಸ್ಥಿತಿ ಗಂಭೀರವಾಗಿರುವುದನ್ನು ತಿಳಿದ ತಾಯಿ ಪೂನಂ ಜೋಶಿ ತಕ್ಷಣವೇ ಆತನನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರು. ಆದರೆ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಜತಿನ್ ಮೃತಪಟ್ಟಿದ್ದಾನೆ ಎಂದು ವೈದ್ಯರು ಪ್ರಕಟಿಸಿದರು. ಪ್ರಾಥಮಿಕ ವರದಿಗಳ ಪ್ರಕಾರ, ಜತಿನ್ಗೆ ಹೃದಯಾಘಾತ (ಕಾರ್ಡಿಯಾಕ್ ಅರೆಸ್ಟ್) ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.
ಏಕೈಕ ಪುತ್ರನ ಸಾವಿನಿಂದ ತೀವ್ರ ಆಘಾತಕ್ಕೊಳಗಾದ ಪೂನಂ ಜೋಶಿ ಮಾನಸಿಕವಾಗಿ ಕುಗ್ಗಿಹೋಗಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಆಸ್ಪತ್ರೆಯಿಂದ ಮನೆಗೆ ಮರಳುವ ಬದಲು ಅವರು ಗಂಗೋಲಿಹಾಟ್ ಕಡೆಗೆ ತೆರಳುತ್ತಿದ್ದ ಟ್ಯಾಕ್ಸಿಯೊಂದರಲ್ಲಿ ಪ್ರಯಾಣ ಬೆಳೆಸಿದ್ದರು. ಸುಮಾರು 30 ಕಿಲೋಮೀಟರ್ ದೂರದ ಘಾಟ್ ಪ್ರದೇಶದ ಬಳಿ ತಲುಪಿದಾಗ, ಟ್ಯಾಕ್ಸಿ ನಿಲ್ಲಿಸುವಂತೆ ಚಾಲಕನಿಗೆ ಹೇಳಿದ ಅವರು, ಏಕಾಏಕಿ ಸರಯು ನದಿಗೆ ಹಾರಿದ್ದಾರೆ. ತಕ್ಷಣವೇ ಟ್ಯಾಕ್ಸಿ ಚಾಲಕ ಹಾಗೂ ಸ್ಥಳೀಯರು ಅವರನ್ನು ರಕ್ಷಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (SDRF) ಸಿಬ್ಬಂದಿ ಶೋಧ ಕಾರ್ಯಾಚರಣೆ ಆರಂಭಿಸಿದರು. ಬಳಿಕ ನದಿಯಿಂದ ಪೂನಂ ಜೋಶಿ ಅವರ ಮೃತದೇಹವನ್ನು ಹೊರತೆಗೆದರು.
ಕುಟುಂಬದವರ ಪ್ರಕಾರ, ಪೂನಂ ಜೋಶಿ ಎರಡು ವರ್ಷಗಳ ಹಿಂದೆ ಮತ್ತೊಂದು ವೈಯಕ್ತಿಕ ದುರಂತವನ್ನು ಎದುರಿಸಿದ್ದರು. ಅವರ ಪುತ್ರಿ ಆಗಲೇ ಮೃತಪಟ್ಟಿದ್ದಳು. ಪುತ್ರಿಯ ಸಾವಿನ ನೋವಿನಿಂದ ಚೇತರಿಸಿಕೊಳ್ಳುವ ಮುನ್ನವೇ ಏಕೈಕ ಪುತ್ರನನ್ನೂ ಕಳೆದುಕೊಂಡ ಆಘಾತವನ್ನು ಅವರು ಸಹಿಸಲಾಗಲಿಲ್ಲ ಎನ್ನಲಾಗಿದೆ.
ಒಂದೇ ದಿನದಲ್ಲಿ ತಾಯಿ ಮತ್ತು ಮಗ ಇಬ್ಬರೂ ಮೃತಪಟ್ಟ ಘಟನೆ ಮಾಡೆ ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ನಿವಾಸಿಗಳನ್ನು ಬೆಚ್ಚಿಬೀಳಿಸಿದೆ. ಈ ದುರಂತದಿಂದ ಕುಟುಂಬ ಸಂಪೂರ್ಣವಾಗಿ ನಲುಗಿದ್ದು, ಗ್ರಾಮದಲ್ಲಿ ಶೋಕದ ವಾತಾವರಣ ಮನೆಮಾಡಿದೆ.
ಪೊಲೀಸರು ಜತಿನ್ ಹಾಗೂ ಪೂನಂ ಜೋಶಿ ಅವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ