ಕೊಪ್ಪಳ : ಕೋತಿ ತಳ್ಳಿದ್ದಕ್ಕೆ ನೆಲಕ್ಕೆ ಬಿದ್ದು ವೃದ್ಧೆ ಸಾವು; ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಕೊಪ್ಪಳ : ಮನೆ ಮುಂದೆ ನಿಂತಿದ್ದ 91 ವರ್ಷದ ವೃದ್ಧೆಯ ಮೇಲೆ ಮಂಗವೊಂದು ಹಠಾತ್ ಹಾರಿದ ಪರಿಣಾಮ, ಅವರು ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಮೃತರನ್ನು ನಜ್ಮುನ್ನಿಸಾ ಬೇಗಂ (91) ಎಂದು ಗುರುತಿಸಲಾಗಿದೆ. ಈ ಘಟನೆ ಕೊಪ್ಪಳದ (Koppal) ಬಿ.ಟಿ ಪಾಟೀಲ ನಗರದಲ್ಲಿ ನಡೆದಿದ್ದು, ಹೊರಗೆ ಶಬ್ದ ಆಗಿದ್ದನ್ನು ಕೇಳಿದ ನಜ್ಮುನ್ನಿಸಾ ಅವರು ಏನಾಗಿದೆ ಎಂದು ನೋಡಲು ಮನೆಯಿಂದ ಹೊರಗೆ ಬಂದಾಗ ಇದು ಸಂಭವಿಸಿದೆ.

ಏಕಾಏಕಿ ಮಂಗವೊಂದು ಅವರತ್ತ ಓಡಿ ಬಂದು ಅವರ ಮೇಲೆ ಹಾರಿದೆ. ಮಂಗವನ್ನು ಕಂಡು ಭಯಗೊಂಡಿದ್ದ ಅವರು ಮಂಗ ಅವರ ಮೇಲೆ ಹಾರಿದ ರಭಸಕ್ಕೆ ಕೆಳಗೆ ಬಿದ್ದಿದ್ದಾರೆ. ಈ ವೇಳೆ ತಲೆಗೆ ತೀವ್ರ ಗಾಯವಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಈ ಇಡೀ ಘಟನೆ ಮನೆಯ ಸಮೀಪ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಡಿಯೊದಲ್ಲಿ ನಜ್ಮುನ್ನಿಸಾ ಅವರು ಮನೆಯಿಂದ ಹೊರಗೆ ಬರುತ್ತಿದ್ದಂತೆ ಮಂಗವೊಂದು ಅವರತ್ತ ಧಾವಿಸಿ ಬಂದು ಕೆಳಗೆ ತಳ್ಳುವುದನ್ನು ಕಾಣಬಹುದು.

ನಜ್ಮುನ್ನಿಸಾ ಅವರು ಕೆಳಗೆ ಬಿದ್ದ ಶಬ್ದ ಕೇಳಿ ಮನೆಯೊಳಗಿದ್ದ ಮತ್ತೊಬ್ಬ ವೃದ್ಧೆ ಕೂಡಲೇ ಹೊರಗೆ ಓಡಿ ಬಂದಿದ್ದಾರೆ. ಮಂಗ ಅವರ ಮೇಲೆಯೂ ಹಾರಲು ಮುಂದಾಗಿದೆ. ಈ ವೇಳೆ ಸ್ಥಳೀಯರು ಅಲ್ಲಿಗೆ ಓಡಿ ಬಂದಿದ್ದು, ಜನರನ್ನು ಕಂಡ ಮಂಗ ಅಲ್ಲಿಂದ ಓಡಿ ಹೋಗಿದೆ.
ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಉಂಟಾಗಿದ್ದು, ಮಂಗನ ಹಾವಳಿಗೆ ಕಡಿವಾಣ ಹಾಕುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ವಿಡಿಯೋ | ‘ಭಾರತ ನನ್ನ ಜನ್ಮಭೂಮಿ-ಧರ್ಮಭೂಮಿ, ಕರ್ನಾಟಕ ನನ್ನ ಕರ್ಮಭೂಮಿ’: ಫಾಲ್ಕೆ ಪ್ರಶಸ್ತಿ ಸ್ವೀಕರಿಸಿ ಅನಂತ ನಾಗ್ ಮಾತು

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement