ಶಾರ್ಜಾದಲ್ಲಿ ಕುಂದಾಪುರ ಮೂಲದ ವ್ಯಕ್ತಿಯ ಭೀಕರ ಹತ್ಯೆ ; ಒಂಬತ್ತು ತುಂಡುಗಳಾಗಿ ಕತ್ತರಿಸಿದ ಮೃತದೇಹ ಪತ್ತೆ : ಪತ್ನಿ-ಪುತ್ರ ನಾಪತ್ತೆ

ಉಡುಪಿ/ಶಾರ್ಜಾ: ಕರ್ನಾಟಕದ ಉಡುಪಿ ಜಿಲ್ಲೆಯ ಕುಂದಾಪುರ ಮೂಲದ ಸುಮಾರು 50 ವರ್ಷದ ವ್ಯಕ್ತಿಯೊಬ್ಬರು ಯುಎಇಯ ಶಾರ್ಜಾದಲ್ಲಿ ಭೀಕರವಾಗಿ ಹತ್ಯೆಯಾಗಿರುವ ಘಟನೆ ಸುಮಾರು ಎರಡು ತಿಂಗಳ ಬಳಿಕ ಬೆಳಕಿಗೆ ಬಂದಿದೆ. ಜುಲೈ ತಿಂಗಳಲ್ಲಿ ನಡೆದಿರುವ ಈ ಹತ್ಯೆ ಪ್ರಕರಣವು, ಅವರ ನಾಪತ್ತೆ ಕುರಿತು ಕುಟುಂಬದವರು ಆತಂಕ ವ್ಯಕ್ತಪಡಿಸಿದ ಬಳಿಕ ನಡೆದ ತನಿಖೆಯ ವೇಳೆ ಬಹಿರಂಗವಾಗಿದೆ.
ಮೃತರನ್ನು ಅಲ್ವಿನ್ ಪ್ರಕಾಶ ಕುಂದರ ಎಂದು ಗುರುತಿಸಲಾಗಿದೆ. ಅವರು ಶಾರ್ಜಾ ವಿಮಾನ ನಿಲ್ದಾಣದಲ್ಲಿ ಉದ್ಯೋಗದಲ್ಲಿದ್ದು, ಪತ್ನಿ ಹಾಗೂ ಹದಿಹರೆಯದ ಮಗನೊಂದಿಗೆ ಯುಎಇಯಲ್ಲೇ ವಾಸಿಸುತ್ತಿದ್ದರು.
‘ಇಂಡಿಯಾ ಟುಡೇ’ ವರದಿಯ ಪ್ರಕಾರ, ಪ್ರಕಾಶ ಅವರ ಮೃತದೇಹವು ಒಮಾನ್ ಕಡೆಗೆ ಸಾಗುವ ರಸ್ತೆಯೊಂದರ ಬಳಿ ನಿಲ್ಲಿಸಲಾಗಿದ್ದ ಕಾರಿನೊಳಗೆ ಪತ್ತೆಯಾಗಿದೆ. ಮೃತರ ಸಹೋದರ ಅನಿಲ ಪ್ರಶಾಂತ ಕುಂದರ ಪ್ರಕಾರ, ಮೃತದೇಹವನ್ನು ಒಂಬತ್ತು ತುಂಡುಗಳಾಗಿ ಕತ್ತರಿಸಿ ಎರಡು ಬ್ಯಾಗ್‌ಗಳಲ್ಲಿ ತುಂಬಲಾಗಿತ್ತು.
ಮೃತದೇಹವನ್ನು ಒಂಬತ್ತು ತುಂಡುಗಳಾಗಿ ಕತ್ತರಿಸಿ ಎರಡು ಬ್ಯಾಗ್‌ಗಳಲ್ಲಿ ತುಂಬಲಾಗಿತ್ತು.
ಪ್ರಕರಣದ ಹಿಂದಿನ ಉದ್ದೇಶವೇನು, ಹತ್ಯೆ ಎಲ್ಲಿ ನಡೆದಿದೆ ಹಾಗೂ ಯಾರು ಈ ಕೃತ್ಯ ಎಸಗಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹತ್ಯೆಯ ಸುತ್ತ ಹಲವು ಅನುಮಾನಗಳು ಮೂಡಿದ್ದು, ತನಿಖೆ ಮುಂದುವರಿದಿದೆ.

ಅನುಮಾನಕ್ಕೆ ಕಾರಣವಾದ ಮೊಬೈಲ್ ಸಂದೇಶ
ಅಲ್ವಿನ್‌ ಪ್ರಕಾಶ ಅವರ ಸಹೋದರ ಅನಿಲ ಅವರು ಜುಲೈ 20ರ ಸುಮಾರಿಗೆ ಸಹೋದರನನ್ನು ಸಂಪರ್ಕಿಸಲು ಪ್ರಯತ್ನಿಸಿದ್ದರು. ಆದರೆ ಪ್ರಕಾಶ ಕರೆ ಸ್ವೀಕರಿಸಿರಲಿಲ್ಲ. ಬದಲಿಗೆ ಅವರ ಮೊಬೈಲ್‌ನಿಂದ “ನಾನು ಚೆನ್ನಾಗಿದ್ದೇನೆ” ಎಂಬ ಸಂದೇಶವೊಂದು ಬಂದಿತ್ತು.
ಈ ಸಂದೇಶವೇ ಕುಟುಂಬದವರಿಗೆ ಅನುಮಾನ ಮೂಡಲು ಕಾರಣವಾಯಿತು. ಕಾರಣ, ಅಲ್ವಿನ್‌ ಪ್ರಕಾಶ ಸಾಮಾನ್ಯವಾಗಿ ತಮ್ಮ ಸಹೋದರರೊಂದಿಗೆ ಧ್ವನಿ ಸಂದೇಶಗಳ ಮೂಲಕವೇ ಸಂಪರ್ಕದಲ್ಲಿರುತ್ತಿದ್ದರು. ಸುಮಾರು ಒಂದು ವಾರದ ಬಳಿಕ ಮತ್ತೊಮ್ಮೆ ಕರೆ ಮಾಡಿದಾಗಲೂ ಯಾವುದೇ ಪ್ರತಿಕ್ರಿಯೆ ಸಿಗದಿದ್ದರಿಂದ ಕುಟುಂಬದ ಆತಂಕ ಮತ್ತಷ್ಟು ಹೆಚ್ಚಾಯಿತು. ಇದಾದ ಬಳಿಕ ಅನಿಲ ಅವರು ಶಾರ್ಜಾದಲ್ಲಿದ್ದ ಪ್ರಕಾಶ ಅವರ ಹಳೆಯ ಸಹಪಾಠಿಯನ್ನು ಸಂಪರ್ಕಿಸಿ, ತಮ್ಮ ಸಹೋದರನ ಬಗ್ಗೆ ಮಾಹಿತಿ ತಿಳಿದುಕೊಳ್ಳುವಂತೆ ಮನವಿ ಮಾಡಿದರು.
ಮನೋಹರ ಅವರು ಪ್ರಕಾಶ ಅವರಿಗೆ ಕಂಪನಿಯಿಂದ ಒದಗಿಸಲಾಗಿದ್ದ ವಸತಿ ಗೃಹಕ್ಕೆ ಭೇಟಿ ನೀಡಿದರು. ಅಲ್ಲಿ ಕಟ್ಟಡದ ಭದ್ರತಾ ಸಿಬ್ಬಂದಿ ಪ್ರಕಾಶ ಭಾರತಕ್ಕೆ ತೆರಳಿದ್ದಾರೆ ಎಂದು ತಿಳಿಸಿದರಂತೆ. ಇದೇ ವೇಳೆ ಕಂಪನಿಯ ಮಾನವ ಸಂಪನ್ಮೂಲ (HR) ವಿಭಾಗವೂ ಆರಂಭದಲ್ಲಿ ಪ್ರಕಾಶ ಭಾರತಕ್ಕೆ ಹೋಗಿದ್ದಾರೆ ಎಂಬ ಮಾಹಿತಿಯನ್ನೇ ಕುಟುಂಬಕ್ಕೆ ನೀಡಿತ್ತು.
ಆದರೆ ಪ್ರಕಾಶ ಭಾರತಕ್ಕೆ ಬಂದಿಲ್ಲ ಎಂಬುದನ್ನು ಅನಿಲ ಸ್ಪಷ್ಟಪಡಿಸಿ, ಕಂಪನಿಯು ಮತ್ತೊಮ್ಮೆ ಪರಿಶೀಲನೆ ನಡೆಸುವಂತೆ ಒತ್ತಾಯಿಸಿದರು. ನಂತರ ಅವರ ಪಾಸ್‌ಪೋರ್ಟ್ ದಾಖಲೆಗಳನ್ನು ಪರಿಶೀಲಿಸಿದಾಗ ಪ್ರಕಾಶ ಇನ್ನೂ ಶಾರ್ಜಾದಲ್ಲೇ ಇದ್ದರು ಎಂಬುದು ತಿಳಿದುಬಂದಿದೆ. ಇದಾದ ಬಳಿಕ ನಾಪತ್ತೆ ಪ್ರಕರಣ ದಾಖಲಿಸಲಾಯಿತು.

ಪ್ರಮುಖ ಸುದ್ದಿ :-   ಖ್ಯಾತ ಹಿಂದೂಸ್ತಾನಿ ಸಂಗೀತ ಗಾಯಕ ಪಂ.ಇಂದೂಧರ ನಿರೋಢಿ ನಿಧನ

ಒಮಾನ್ ಮಾರ್ಗದ ಕಾರಿನಲ್ಲಿ ಮೃತದೇಹ ಪತ್ತೆ
ಹುಡುಕಾಟದ ವೇಳೆ, ಓಮನ್ ಕಡೆಗೆ ಹೋಗುವ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಕಾರಿನೊಳಗೆ ಪ್ರಕಾಶ್ ಅವರ ಮೃತದೇಹ ಪತ್ತೆಯಾಗಿದೆ ಎಂದು ವರದಿಯಾಗಿದೆ.
ಅನಿಲ ಅವರ ಪ್ರಕಾರ, ಮೃತದೇಹವನ್ನು ಒಂಬತ್ತು ತುಂಡುಗಳಾಗಿ ಕತ್ತರಿಸಿ ಎರಡು ಚೀಲಗಳಲ್ಲಿ ಇರಿಸಲಾಗಿತ್ತು. ನಂತರ ಆ ಅವಶೇಷಗಳು ಪ್ರಕಾಶ್ ಅವರದ್ದೇ ಎಂದು ಗುರುತಿಸಲಾಯಿತು.. ಸೋಮವಾರ ಮರಣೋತ್ತರ ಪರೀಕ್ಷೆ ವರದಿ ಕುಟುಂಬಕ್ಕೆ ತಲುಪಿದ ಬಳಿಕ ಅನಿಲ ಅವರು ಉಡುಪಿ ಪೊಲೀಸರನ್ನು ಸಂಪರ್ಕಿಸಿ, ಪ್ರಕರಣದಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಪತ್ನಿ ಮತ್ತು ಪುತ್ರನ ಸುಳಿವೂ ಇಲ್ಲ
ಪ್ರಕಾಶ ಅವರ ಪತ್ನಿ ಟೀನಾ ಕುಂದರ ಕೂಡ ಉಡುಪಿ ಮೂಲದವರಾಗಿದ್ದು, ಶಾರ್ಜಾದಲ್ಲಿ ಶಾಲಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ದಂಪತಿಯ ಪುತ್ರ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ ಎಂದು ತಿಳಿದುಬಂದಿದೆ. ಆದರೆ ಪ್ರಕಾಶ ಅವರ ಸಾವಿನ ಬಳಿಕ ಟೀನಾ ಮತ್ತು ಅವರ ಹದಿಹರೆಯದ ಪುತ್ರನ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
14 ವರ್ಷಗಳಿಂದ ಶಾರ್ಜಾದಲ್ಲಿದ್ದ ಪ್ರಕಾಶ
ಪ್ರಕಾಶ ಅವರು ಕಳೆದ ಸುಮಾರು 14 ವರ್ಷಗಳಿಂದ ಶಾರ್ಜಾ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಡಿಸೆಂಬರ್‌ನಲ್ಲಿ ಅವರು ತಮ್ಮ ಊರಾದ ಕುಂದಾಪುರಕ್ಕೆ ಭೇಟಿ ನೀಡಿ, ಬಳಿಕ ಮತ್ತೆ ಶಾರ್ಜಾಕ್ಕೆ ಹಿಂದಿರುಗಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ.
ಪ್ರಕರಣದ ಕುರಿತು ಯುಎಇ ಅಧಿಕಾರಿಗಳು ತನಿಖೆ ಮುಂದುವರಿಸಿದ್ದು, ಹತ್ಯೆಯ ಹಿಂದಿನ ಕಾರಣ ಹಾಗೂ ಆರೋಪಿಗಳ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಂದಿಲ್ಲ.

ಪ್ರಮುಖ ಸುದ್ದಿ :-   ವಿಡಿಯೋ | ‘ಭಾರತ ನನ್ನ ಜನ್ಮಭೂಮಿ-ಧರ್ಮಭೂಮಿ, ಕರ್ನಾಟಕ ನನ್ನ ಕರ್ಮಭೂಮಿ’: ಫಾಲ್ಕೆ ಪ್ರಶಸ್ತಿ ಸ್ವೀಕರಿಸಿ ಅನಂತ ನಾಗ್ ಮಾತು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement