ನವದೆಹಲಿ : ಭಾರತೀಯ ಜನತಾ ಪಕ್ಷ (ಬಿಜೆಪಿ)ವು ದೇಶದ ಎಲ್ಲಾ 28 ರಾಜ್ಯಗಳು ಹಾಗೂ ಎಂಟು ಕೇಂದ್ರಾಡಳಿತ ಪ್ರದೇಶಗಳಿಗೆ ಉಸ್ತುವಾರಿಗಳು ಮತ್ತು ಸಹ-ಉಸ್ತುವಾರಿಗಳನ್ನು ನೇಮಿಸುವ ಮೂಲಕ ಮಹತ್ವದ ಸಂಘಟನಾ ಪುನರ್ರಚನೆಗೆ ಮುಂದಾಗಿದೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹರೀಶ ದ್ವಿವೇದಿ ಅವರಿಗೆ ಕರ್ನಾಟಕ ಹಾಗೂ ಬಿಹಾರ ರಾಜ್ಯಗಳ ಉಸ್ತುವಾರಿ ಜವಾಬ್ದಾರಿ ವಹಿಸಲಾಗಿದೆ. ಸಹ ಉಸ್ತುವಾರಿಯಾಗಿ ತೆಲಂಗಾಣ ಮೂಲದ ಕಸಂ ವೆಂಕಟೇಶ್ವರಲು ಅವರನ್ನು ನೇಮಕ ಮಾಡಲಾಗಿದೆ. ಹರಿಯಾಣ ಮತ್ತು ಛತ್ತೀಸ್‌ಗಢ ರಾಜ್ಯಗಳ ಉಸ್ತುವಾರಿಯಾಗಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಮೃತಿ ಇರಾನಿ ಅವರನ್ನು, ತಮಿಳುನಾಡು ಮತ್ತು ಉತ್ತರಾಖಂಡದ ರಾಜಕೀಯ ವ್ಯವಹಾರಗಳ ಉಸ್ತುವಾರಿಯಾಗಿ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ರಾಮ ಮಾಧವ ಅವರನ್ನು ನೇಮಿಸಲಾಗಿದೆ.
ಈ ಕುರಿತು ಪಕ್ಷ ಹೊರಡಿಸಿದ ಪ್ರಕಟಣೆಯಲ್ಲಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬೀನ್ ಅವರು ನೇಮಕಾತಿಗಳು ತಕ್ಷಣದಿಂದಲೇ ಜಾರಿಗೆ ಬರಲಿವೆ ಎಂದು ತಿಳಿಸಿದ್ದಾರೆ.
ಪಕ್ಷದ ಸಂವಹನ ವಿಭಾಗದಲ್ಲೂ ಮಹತ್ವದ ಬದಲಾವಣೆ ಮಾಡಲಾಗಿದ್ದು, ಅನೀಲ ಬಲುನಿ ಅವರನ್ನು ರಾಷ್ಟ್ರೀಯ ಮಾಧ್ಯಮ ಪ್ರಕೋಷ್ಠ ಮತ್ತು ಸಾಮಾಜಿಕ ಮಾಧ್ಯಮ ಘಟಕವನ್ನು ಒಳಗೊಂಡಿರುವ ಸಂವಹನ ವಿಭಾಗದ ಸಂಯೋಜಕರಾಗಿ (ಕೋಆರ್ಡಿನೇಟರ್) ಉನ್ನತೀಕರಿಸಲಾಗಿದೆ. ಇತ್ತೀಚೆಗೆ ರಾಷ್ಟ್ರೀಯ ಮಾಧ್ಯಮ ವಿಭಾಗದ ಸಹ-ಸಂಯೋಜಕರಾಗಿ ನೇಮಕಗೊಂಡಿದ್ದ ಆಶಿಷ್ ಉಷಾ ಅಗರ್ವಾಲ್ ಅವರನ್ನು ಆ ವಿಭಾಗದ ಸಂಯೋಜಕರಾಗಿ ನೇಮಿಸಲಾಗಿದೆ. ಈ ಹುದ್ದೆಯನ್ನು ಇದುವರೆಗೆ ಅನೀಲ ಬಲುನಿ ನಿರ್ವಹಿಸುತ್ತಿದ್ದರು.
ದೆಹಲಿಯ ಉಸ್ತುವಾರಿಯಾಗಿ ಹಿರಿಯ ಬಿಜೆಪಿ ನಾಯಕ ವಿನಯ ಸಹಸ್ರಬುದ್ಧೆ ಅವರನ್ನು ನೇಮಿಸಲಾಗಿದ್ದು, ಜಮ್ಯಾಂಗ್ ತ್ಸೆರಿಂಗ್ ನಾಮ್ಗ್ಯಾಲ್ ಮತ್ತು ದರ್ಶನಾ ಜರ್ದೋಶ್ ಸಹ-ಉಸ್ತುವಾರಿಗಳಾಗಿದ್ದಾರೆ.
ಮುಂದಿನ ವರ್ಷ ವಿಧಾನಸಭೆ ಚುನಾವಣೆ ಎದುರಿಸಲಿರುವ ಉತ್ತರ ಪ್ರದೇಶದ ಉಸ್ತುವಾರಿಯಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ ತಾವಡೆ ಅವರನ್ನು ನೇಮಿಸಲಾಗಿದೆ. ಜಗದೀಶ ಪಟೇಲ್, ಮೇಧಾ ಕುಲಕರ್ಣಿ, ಪ್ರದೀಪ ವರ್ಮಾ ಮತ್ತು ಆನಂದ ಓಜಾ ಸಹ-ಉಸ್ತುವಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.
ಮಹಾರಾಷ್ಟ್ರದ ಉಸ್ತುವಾರಿಯಾಗಿ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬೈಜಯಂತ ಜಯ್ ಪಾಂಡಾ ಅವರನ್ನು ನೇಮಿಸಲಾಗಿದ್ದು, ಅಮಿತ ಮಾಳವೀಯ, ಸದಾನಂದ ಶೇಟ್ ತನವಾಡೆ ಹಾಗೂ ಕಮಲ್ಜೀತ್ ಸೆಹ್ರಾವತ್ ಸಹ-ಉಸ್ತುವಾರಿಗಳಾಗಿದ್ದಾರೆ.
ಮುಂದಿನ ವರ್ಷ ಚುನಾವಣೆ ನಡೆಯಲಿರುವ ಗುಜರಾತ್ ರಾಜ್ಯದ ಉಸ್ತುವಾರಿಯಾಗಿ ರಾಜ್ಯಸಭಾ ಸದಸ್ಯ ತರುಣ ಚುಗ್ ಅವರನ್ನು ನೇಮಿಸಲಾಗಿದೆ.
ಮುಂದಿನ ವರ್ಷ ಚುನಾವಣೆಗೆ ಸಜ್ಜಾಗಿರುವ ಮತ್ತೊಂದು ರಾಜ್ಯವಾದ ಪಂಜಾಬ್‌ನ ಉಸ್ತುವಾರಿಯಾಗಿ ಸತೀಶ ಪೂನಿಯಾ ಅವರನ್ನು ನೇಮಿಸಲಾಗಿದೆ. ಮಾಜಿ ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ಹಾಗೂ ರಾಜ್ಯಸಭಾ ಸದಸ್ಯೆ ಅಲ್ಕಾ ಗುರ್ಜರ್ ಸಹ-ಉಸ್ತುವಾರಿಗಳಾಗಿದ್ದಾರೆ. ಸತೀಶ ಪೂನಿಯಾ ಅವರಿಗೆ ಜಮ್ಮು ಮತ್ತು ಕಾಶ್ಮೀರದ ಉಸ್ತುವಾರಿ ಜವಾಬ್ದಾರಿಯನ್ನೂ ನೀಡಲಾಗಿದೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುನೀಲ ಬನ್ಸಲ್ ಅವರನ್ನು ತೆಲಂಗಾಣ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ಉಸ್ತುವಾರಿಯಾಗಿ ನೇಮಿಸಲಾಗಿದೆ. ಅವರು ಈಗಾಗಲೇ ಕೈಲಾಶ ವಿಜಯವರ್ಗೀಯ ಅವರ ನಂತರ ಪಶ್ಚಿಮ ಬಂಗಾಳದ ಉಸ್ತುವಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ರಾಮ ಮಾಧವ ಅವರಿಗೆ ತಮಿಳುನಾಡು ಮತ್ತು ಉತ್ತರಾಖಂಡ ರಾಜ್ಯಗಳ ರಾಜಕೀಯ ವ್ಯವಹಾರಗಳ ಉಸ್ತುವಾರಿ ಜವಾಬ್ದಾರಿ ನೀಡಲಾಗಿದೆ.
ಲೋಕಸಭಾ ಸದಸ್ಯೆ ಡಿ. ಪುರಂದೇಶ್ವರಿ ಅವರಿಗೆ ಒಡಿಶಾ ರಾಜ್ಯದ ಉಸ್ತುವಾರಿ ನೀಡಲಾಗಿದ್ದು, ರಾಷ್ಟ್ರೀಯ ಕಾರ್ಯದರ್ಶಿ ಸ್ವದೇಶ ಸಿಂಗ್ ಸಹ-ಉಸ್ತುವಾರಿಯಾಗಿ ನೇಮಕಗೊಂಡಿದ್ದಾರೆ. ಮುಂದಿನ ವರ್ಷ ಚುನಾವಣೆ ನಡೆಯಲಿರುವ ಮಣಿಪುರ ರಾಜ್ಯದ ಉಸ್ತುವಾರಿಯಾಗಿ ಅಸ್ಸಾಂನ ಬಿಜೆಪಿ ಶಾಸಕ ರಾಜೀವ ರಾಯ್ ಅವರನ್ನು ನೇಮಿಸಲಾಗಿದೆ.
ತ್ರಿಪುರಾದ ಮಾಜಿ ಮುಖ್ಯಮಂತ್ರಿ ಬಿಪ್ಲವ್ ಕುಮಾರ ದೇವ್ ಅವರಿಗೆ ಮಧ್ಯಪ್ರದೇಶದ ಉಸ್ತುವಾರಿ ಜವಾಬ್ದಾರಿ ನೀಡಲಾಗಿದೆ. ಮಾಜಿ ಕೇಂದ್ರ ಸಚಿವೆ ಭಾರತೀ ಪ್ರವೀಣ ಪವಾರ್ ಅವರನ್ನು ಗೋವಾದ ಉಸ್ತುವಾರಿಯಾಗಿ ನೇಮಿಸಲಾಗಿದೆ. ಗೋವಾದಲ್ಲೂ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದೆ.


ನಿಮ್ಮ ಕಾಮೆಂಟ್ ಬರೆಯಿರಿ