ನಗೋಯಾ: ಏಷ್ಯನ್ ಗೇಮ್ಸ್-2026ರಲ್ಲಿ ಏಷ್ಯನ್ ಗೇಮ್ಸ್ನಲ್ಲಿ ಭಾರತೀಯ ಕಬಡ್ಡಿ ತಂಡಗಳು ತಮ್ಮ ಪ್ರಾಬಲ್ಯ ಮುಂದುವರಿಸಿದ್ದು, ಮಹಿಳಾ ತಂಡವು ಶನಿವಾರ ನಡೆದ ರೋಚಕ ಫೈನಲ್ನಲ್ಲಿ ಇರಾನ್ ತಂಡವನ್ನು 37-34 ಅಂತರದಿಂದ ಮಣಿಸಿ ಚಿನ್ನದ ಪದಕ ತನ್ನದಾಗಿಸಿಕೊಂಡಿದೆ.
ಪಂದ್ಯದ ಮೊದಲಾರ್ಧದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತ 22-16 ಅಂತರದ ಮುನ್ನಡೆ ಸಾಧಿಸಿತ್ತು. ಆದರೆ ಎರಡನೇಾರ್ಧದಲ್ಲಿ ಇರಾನ್ ತಂಡ ಉತ್ತಮ ಆಟ ಪ್ರದರ್ಶಿಸಿ 18-15 ಅಂತರದಿಂದ ಮೇಲುಗೈ ಸಾಧಿಸಿತು. ಆದಾಗ್ಯೂ ಮೊದಲಾರ್ಧದಲ್ಲಿ ಭಾರತ ಗಳಿಸಿದ್ದ ಮುನ್ನಡೆ ನಿರ್ಣಾಯಕವಾಗಿ ಪರಿಣಮಿಸಿತು, ಅಂತಿಮವಾಗಿ 37-34 ಅಂತರದ ಜಯದೊಂದಿಗೆ ಭಾರತದ ಮಹಿಳಾ ಕಬಡ್ಡಿ ತಂಡವು ಚಿನ್ನದ ಪದಕವನ್ನು ಗೆದ್ದುಕೊಂಡಿತು.
ವಿಜಯದ ಬಳಿಕ ಭಾರತೀಯ ಆಟಗಾರ್ತಿಯರು ಕ್ರೀಡಾಂಗಣದ ಸುತ್ತಲೂ ಗೌರವ ಸುತ್ತು (Victory Lap) ಹಾಕಿ ಸಂಭ್ರಮಿಸಿದರು. ಈ ವೇಳೆ ಅವರು ‘ವಂದೇ ಮಾತರಂ’ ಹಾಡನ್ನು ಹಾಡಿ ತಮ್ಮ ಸಂತಸವನ್ನು ವ್ಯಕ್ತಪಡಿಸಿದರು.
ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಭಾರತೀಯ ಮಹಿಳಾ ಕಬಡ್ಡಿ ತಂಡದ ಸಾಧನೆ ಮತ್ತಷ್ಟು ವಿಶೇಷವಾಗಿದೆ. 2018ರ ಜಕಾರ್ತಾ ಏಷ್ಯನ್ ಗೇಮ್ಸ್ ಹೊರತುಪಡಿಸಿ ಮಹಿಳಾ ಕಬಡ್ಡಿ ಸ್ಪರ್ಧೆ ನಡೆದ ಎಲ್ಲ ಆವೃತ್ತಿಗಳಲ್ಲೂ ಭಾರತ ಚಿನ್ನದ ಪದಕ ಗೆದ್ದಿದೆ. ಜಕಾರ್ತಾದಲ್ಲಿ ಭಾರತ ಫೈನಲ್ನಲ್ಲಿ ಇರಾನ್ಗೆ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿತ್ತು.
ಇದೀಗ ಭಾರತೀಯ ಪುರುಷರ ತಂಡವೂ ಶನಿವಾರವೇ ನಡೆಯಲಿರುವ ಫೈನಲ್ನಲ್ಲಿ ಇರಾನ್ ತಂಡವನ್ನು ಎದುರಿಸಲಿದ್ದು, ಜಯ ಸಾಧಿಸಿದರೆ ಭಾರತಕ್ಕೆ ಕಬಡ್ಡಿಯಲ್ಲಿ ‘ಗೋಲ್ಡನ್ ಡಬಲ್’ ಸಾಧನೆಯ ಅವಕಾಶ ಲಭಿಸಲಿದೆ.
ಏಷ್ಯನ್ ಗೇಮ್ಸ್ನಲ್ಲಿ ಕಬಡ್ಡಿ ಸ್ಪರ್ಧೆಯಲ್ಲಿ ಭಾರತ ದೀರ್ಘಕಾಲದಿಂದ ಪ್ರಾಬಲ್ಯ ಮೆರೆದಿದೆ. ಪುರುಷರ ಮತ್ತು ಮಹಿಳೆಯರ ತಂಡಗಳು ಬಹುತೇಕ ಎಲ್ಲ ಏಶಿಯನ್ ಗೇಮ್ಸ್ನಲ್ಲಿ ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡಿವೆ.
ಭಾರತದ ಪುರುಷರ ತಂಡವು ಸತತ ಏಳು ಏಷ್ಯನ್ ಗೇಮ್ಸ್ಗಳಲ್ಲಿ ಚಿನ್ನದ ಪದಕ ಗೆದ್ದು ದಾಖಲೆ ನಿರ್ಮಿಸಿತ್ತು. ಆದರೆ 2018ರ ಜಕಾರ್ತಾ ಗೇಮ್ಸ್ನಲ್ಲಿ ಆ ಸರಣಿ ಮುರಿದಿದ್ದು, ಆಗ ಇರಾನ್ ಚಾಂಪಿಯನ್ ಆಗಿದ್ದರೆ ಭಾರತ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ನಂತರ 2023ರ ಹ್ಯಾಂಗ್ಝೌ ಏಷ್ಯನ್ ಗೇಮ್ಸ್ನಲ್ಲಿ ಭಾರತೀಯ ಪುರುಷರ ತಂಡ ಪುನಃ ಚಾಂಪಿಯನ್ ಆಗಿ ಕಿರೀಟವನ್ನು ಮರಳಿ ತನ್ನದಾಗಿಸಿಕೊಂಡಿತ್ತು.
ಏಷ್ಯನ್ ಗೇಮ್ಸ್-2026ರಲ್ಲಿ 6ನೇ ದಿನದ ಅಂತ್ಯಕ್ಕೆ ಭಾರತವು 3 ಚಿನ್ನ, 11 ಬೆಳ್ಳಿ, 13 ಕಂಚುಗಳೊಂದಿಗೆ 27 ಪದಕಗಳನ್ನು ಗೆದ್ದಿದ್ದು ಪದಕಪಟ್ಟಿಯಲ್ಲಿ 12ನೇ ಸ್ಥಾನದಲ್ಲಿದೆ. 7ನೇ ದಿನ ಹಲವು ಮಹತ್ವದ ಸ್ಪರ್ಧೆಗಳು ನಡೆಯಲಿರುವುದರಿಂದ ಭಾರತೀಯ ಶಿಬಿರದಲ್ಲಿ ಭಾರಿ ನಿರೀಕ್ಷೆ ಇದೆ.
7ನೇ ದಿನ ಪುರುಷರ ಮತ್ತು ಮಹಿಳೆಯರ ಕಬಡ್ಡಿ ಫೈನಲ್ ಪಂದ್ಯ ಪ್ರಮುಖ ಆಕರ್ಷಣೆಯಾಗಿವೆ. ಇದರ ಜೊತೆಗೆ ಅಥ್ಲೆಟಿಕ್ಸ್ನಲ್ಲಿ ಆರು ವಿಭಾಗಗಳ ಫೈನಲ್ ಸ್ಪರ್ಧೆಗಳು ನಡೆಯಲಿದ್ದು, ಬ್ಯಾಡ್ಮಿಂಟನ್ನಲ್ಲೂ ಮಹತ್ವದ ಮುಖಾಮುಖಿಗಳು ಗಮನ ಸೆಳೆಯಲಿವೆ. ಈ ಸ್ಪರ್ಧೆಗಳಲ್ಲಿ ಭಾರತ ಮತ್ತಷ್ಟು ಪದಕಗಳನ್ನು ಗೆಲ್ಲುವ ನಿರೀಕ್ಷೆಯಿದೆ.
ಇದರ ಮಧ್ಯೆ 7ನೇ ದಿನದ ಆರಂಭವೇ ಭಾರತಕ್ಕೆ ಶುಭ ಸುದ್ದಿಯೊಂದಿಗೆ ಆರಂಭವಾಯಿತು. ಮ್ಯಾರಥಾನ್ ಸ್ಪರ್ಧೆಯಲ್ಲಿ ಸಾವನ್ ಬರ್ವಾಲ್ ಬೆಳ್ಳಿ ಪದಕ ಗೆದ್ದು ದೇಶದ ಪದಕ ಖಾತೆಗೆ ಮತ್ತೊಂದು ಸಾಧನೆ ಸೇರಿಸಿದರು. ಇನ್ನು ಮಿಶ್ರ ಡಬಲ್ಸ್ ಸ್ಕ್ವಾಷ್ ಸ್ಪರ್ಧೆಯಲ್ಲಿ ಭಾರತದ ಜೋಷ್ನಾ ಚಿನಪ್ಪ ಹಾಗೂ ವೇಲವನ್ ಸೆಂಥಿಲ್ಕುಮಾರ್ ಜೋಡಿ ಕಂಚಿನ ಪದಕ ಜಯಿಸಿತು.
ಒಟ್ಟಾರೆಯಾಗಿ 7ನೇ ದಿನ ಭಾರತಕ್ಕೆ ಅತ್ಯಂತ ಮಹತ್ವದ್ದಾಗಿದ್ದು, ಕಬಡ್ಡಿ, ಅಥ್ಲೆಟಿಕ್ಸ್ ಮತ್ತು ಬ್ಯಾಡ್ಮಿಂಟನ್ ಸೇರಿದಂತೆ ಹಲವು ವಿಭಾಗಗಳಲ್ಲಿ ಭಾರತೀಯ ಆಟಗಾರರು ಪದಕ ಬೇಟೆ ಮುಂದುವರಿಸಲಿದ್ದಾರೆ. ಪದಕಪಟ್ಟಿಯಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಉತ್ತಮಗೊಳಿಸುವತ್ತ ಭಾರತೀಯ ತಂಡದ ಗಮನ ನೆಟ್ಟಿದೆ.


ನಿಮ್ಮ ಕಾಮೆಂಟ್ ಬರೆಯಿರಿ