ಬೆಂಗಳೂರು: ಕೃತಕ ಬುದ್ಧಿಮತ್ತೆ (AI) ಆಧಾರಿತ ಸಂಚಾರ ಕ್ಯಾಮೆರಾ ಗಿಟಾರ್ ಅನ್ನು ಹೆಲ್ಮೆಟ್ ಧರಿಸದ ಹಿಂಬದಿ ಸವಾರ ಎಂದು ತಪ್ಪಾಗಿ ಗ್ರಹಿಸಿ ವ್ಯಕ್ತಿಯೊಬ್ಬರಿಗೆ ₹500 ದಂಡ ವಿಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬರು ಆರೋಪಿಸಿದ್ದಾರೆ.
ಸೌವಿಕ್ ದತ್ತಾ ಎಂಬುವರು ತಮ್ಮ ಪತ್ನಿಯ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಒಬ್ಬರೇ ಪ್ರಯಾಣಿಸುತ್ತಿದ್ದರು. ಈ ವೇಳೆ ಅವರು ಹೆಲ್ಮೆಟ್ ಧರಿಸಿದ್ದು, ಗಿಟಾರ್ ಅನ್ನು ಬೆನ್ನಿಗೆ ಹಾಕಿಕೊಂಡಿದ್ದರು. ಆದರೆ, ಕೆಲ ದಿನಗಳ ಬಳಿಕ ಅವರ ಪತ್ನಿಗೆ ‘ಹೆಲ್ಮೆಟ್ ಇಲ್ಲದೆ ಹಿಂಬದಿ ಕುಳಿತವರು ಸವಾರಿ ಮಾಡಿದ್ದಾರೆ’ ಎಂದು ಉಲ್ಲೇಖಿಸಿರುವ ಸಂಚಾರ ಉಲ್ಲಂಘನೆ ನೋಟಿಸ್ ಬಂದಿದೆ.
ನೋಟಿಸ್‌ನಲ್ಲಿ ರಸ್ತೆ ಬದಿಯ ಕ್ಯಾಮೆರಾ ಸೆರೆಹಿಡಿದಿರುವ ಚಿತ್ರವನ್ನೂ ಸೇರಿಸಲಾಗಿತ್ತು. ಆ ಚಿತ್ರದಲ್ಲಿ ದತ್ತಾ ಅವರು ಸ್ಕೂಟರ್ ಅನ್ನು ಒಬ್ಬರೇ ಚಲಾಯಿಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು. ಅವರ ಬೆನ್ನಿಗೆ ಗಿಟಾರ್ ಕೇಸ್ ಇದ್ದರೂ, ಅದನ್ನೇ ಹಿಂಬದಿ ಸವಾರ ಎಂದು ಎಐ (AI) ಆಧಾರಿತ ಸಿಸ್ಟಂ ಗುರುತಿಸಿ ದಂಡ ವಿಧಿಸಿರುವುದು ಕಂಡುಬಂದಿದೆ ಎಂದು ಅವರು ತಿಳಿಸಿದ್ದಾರೆ.
ಈ ತಪ್ಪಿನ ಬಗ್ಗೆ ಗಮನ ಸೆಳೆಯಲು ದತ್ತಾ ಅವರು ದಂಡದ ವಿವರ ಹಾಗೂ ಕ್ಯಾಮೆರಾ ಸೆರೆಹಿಡಿದ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಬೆಂಗಳೂರು ಸಂಚಾರ ಪೊಲೀಸರನ್ನು ಟ್ಯಾಗ್ ಮಾಡಿ ಸ್ವಯಂಚಾಲಿತ ಸಂಚಾರ ಉಲ್ಲಂಘನೆ ಪತ್ತೆ ವ್ಯವಸ್ಥೆಯ ನಿಖರತೆಯನ್ನೂ ಪ್ರಶ್ನಿಸಿದ್ದಾರೆ. ಅಲ್ಲದೆ, ತಪ್ಪಾಗಿ ವಿಧಿಸಿರುವ ದಂಡವನ್ನು ರದ್ದುಪಡಿಸುವಂತೆ ಮನವಿ ಮಾಡಿದ್ದಾರೆ.
“ಬೆಂಗಳೂರಿನಲ್ಲಿ ನನ್ನ ಗಿಟಾರ್ ಅನ್ನು ಬೆನ್ನಿಗೆ ಹಾಕಿಕೊಂಡು, ನನ್ನ ಪತ್ನಿಯ ದ್ವಿಚಕ್ರ ವಾಹನದಲ್ಲಿ ಒಬ್ಬನೇ ಪ್ರಯಾಣಿಸುತ್ತಿದ್ದೆ. ‘ಹೆಲ್ಮೆಟ್ ಇಲ್ಲದೆ ಪಿಲಿಯನ್ ಸವಾರಿ’ ಮಾಡಿದ್ದಕ್ಕಾಗಿ ನನ್ನ ಪತ್ನಿಗೆ ಸಂಚಾರ ದಂಡದ ನೋಟಿಸ್ (ನೋಟಿಸ್ ಸಂಖ್ಯೆ 86202541) ಬಂದಿದೆ. ಎಐ (AI) ಆಧಾರಿತ ಸಂಚಾರ ಉಲ್ಲಂಘನೆ ಪತ್ತೆ ವ್ಯವಸ್ಥೆಯ ಸ್ಥಿತಿ ಹೀಗಿದೆ! ದಯವಿಟ್ಟು ದಂಡವನ್ನು ರದ್ದುಪಡಿಸಿ” ಎಂದು ದತ್ತಾ ಅವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ದತ್ತಾ ಅವರ ಪೋಸ್ಟ್‌ಗೆ ಬೆಂಗಳೂರು ಸಂಚಾರ ಪೊಲೀಸರ ಅಧಿಕೃತ ಖಾತೆಯಿಂದಲೂ ಪ್ರತಿಕ್ರಿಯೆ ಬಂದಿದೆ. ಉಲ್ಲಂಘನೆಯ ವಿವರವನ್ನು ಸರಿಪಡಿಸಲು [email protected]ಗೆ ಇ-ಮೇಲ್ ಮಾಡುವಂತೆ ಅಥವಾ 080-22943381, 22942883 ಸಂಖ್ಯೆಗೆ ಸಂಪರ್ಕಿಸುವಂತೆ ಪೊಲೀಸರು ಸೂಚಿಸಿದ್ದಾರೆ.
https://x.com/souvikonline/status/2103721509168812085/photo/1?ref_src=twsrc%5Etfw%7Ctwcamp%5Etweetembed%7Ctwterm%5E2103721509168812085%7Ctwgr%5Ef2d3d6154e8a6af2345709d8bb07cdedf4b65932%7Ctwcon%5Es1_&ref_url=https%3A%2F%2Fwww.ndtv.com%2Findia-news%2Fbengaluru-man-says-traffic-camera-mistook-guitar-for-helmetless-rider-image-goes-viral-12105498
ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೇಗವಾಗಿ ವೈರಲ್ ಆಗಿದ್ದು, ಹಲವರು ಎಐ ಆಧಾರಿತ ಸಂಚಾರ ಕ್ಯಾಮೆರಾಗಳ ಕಾರ್ಯವೈಖರಿ ಕುರಿತು ತಮ್ಮ ಅನುಭವ ಹಾಗೂ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
“ಯಾರೂ ದಂಡ ರದ್ದು ಮಾಡುವುದಿಲ್ಲ. ಸಂಚಾರ ಕ್ಯಾಮೆರಾಗಳು ಮಾಡುವ ಸಾಮಾನ್ಯ ತಪ್ಪು ಇದು. ನಂಬರ್ ಮಿಸ್‌ಮ್ಯಾಚ್ ಕೂಡ ಮತ್ತೊಂದು ಸಾಮಾನ್ಯ ಸಮಸ್ಯೆ. ನಾನು ಆ ರಸ್ತೆಯಲ್ಲೇ ಹೋಗಿರಲಿಲ್ಲ, ಆದರೂ ನನಗೆ ದಂಡ ಬಂದಿದೆ. ಒಂದೇ ಉತ್ತರ: ಇದರ ಬಗ್ಗೆ ತಲೆಕೆಡಿಸಿಕೊಳ್ಳದೆ ದಂಡ ಪಾವತಿಸಬೇಡಿ” ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, “ದಂಡ ರದ್ದುಪಡಿಸಿಕೊಳ್ಳಲು ಹೋದರೆ 4-5 ತಿಂಗಳು ಮಾನಸಿಕ ಒತ್ತಡದೊಂದಿಗೆ ಓಡಾಡಬೇಕಾಗುತ್ತದೆ. ಕೊನೆಗೆ ಯಾರೂ ಕೇಳಿಸಿಕೊಳ್ಳುವುದಿಲ್ಲ” ಎಂದು ಪ್ರತಿಕ್ರಿಯಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ