ಬೆಂಗಳೂರು : ಫೇಸ್‌ಬುಕ್‌ ಜಾಹೀರಾತು ನಂಬಿ ಬರೋಬ್ಬರಿ 1.9 ಕೋಟಿ ರೂ. ಕಳೆದುಕೊಂಡ ಟೆಕ್ಕಿ !

ಬೆಂಗಳೂರು: ಆನ್‌ಲೈನ್‌ ಟ್ರೇಡಿಂಗ್‌ ಮೂಲಕ ಹೆಚ್ಚಿನ ಲಾಭ ಗಳಿಸಬಹುದು ಎಂದು ಭರವಸೆ ನೀಡಿದ ಫೇಸ್‌ಬುಕ್‌ ಜಾಹೀರಾತಿಗೆ ಮರುಳಾಗಿ ಬೆಂಗಳೂರಿನ 47 ವರ್ಷದ ಟೆಕ್ಕಿಯೊಬ್ಬರು ಬರೋಬ್ಬರಿ ₹1.9 ಕೋಟಿ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ನಕಲಿ ಹೂಡಿಕೆ ಪ್ಲಾಟ್‌ಫಾರ್ಮ್‌ ಮೂಲಕ ವಂಚನೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಪೂರ್ವ ವಿಭಾಗದ ಸೈಬರ್‌ ಅಪರಾಧ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಪೂರ್ವ ಬೆಂಗಳೂರಿನ ನಿವಾಸಿಯೊಬ್ಬರು ನೀಡಿರುವ ದೂರಿನ ಪ್ರಕಾರ, ಫೆಬ್ರುವರಿ 27ರಿಂದ ಸೆಪ್ಟೆಂಬರ್‌ 9ರ ಅವಧಿಯಲ್ಲಿ ಈ ವಂಚನೆ ನಡೆದಿದೆ.
ಫೆಬ್ರುವರಿಯಲ್ಲಿ ಈ ಟೆಕ್ಕಿ ಫೇಸ್‌ಬುಕ್‌ನಲ್ಲಿ ಆನ್‌ಲೈನ್‌ ಟ್ರೇಡಿಂಗ್‌ಗೆ ಸಂಬಂಧಿಸಿದ ಜಾಹೀರಾತನ್ನು ಗಮನಿಸಿ ಅದನ್ನು ಕ್ಲಿಕ್‌ ಮಾಡಿದ್ದರು. ಬಳಿಕ ತಮ್ಮನ್ನು ಟ್ರೇಡಿಂಗ್‌ ಪ್ಲಾಟ್‌ಫಾರ್ಮ್‌ ಪ್ರತಿನಿಧಿಗಳು ಹಾಗೂ ಸಲಹೆಗಾರರು ಎಂದು ಪರಿಚಯಿಸಿಕೊಂಡ ಇಬ್ಬರು ವ್ಯಕ್ತಿಗಳು ಅವರನ್ನು ಸಂಪರ್ಕಿಸಿದ್ದಾರೆ. ಹೂಡಿಕೆಗೆ ಮಾರ್ಗದರ್ಶನ ನೀಡುವುದಾಗಿ ಹೇಳಿ ‘ಪ್ರಾಕ್ಸ್‌ಟ್ರೆಂಡ್‌’ (Proxtrend) ಎಂಬ ಹೂಡಿಕೆ ಪ್ಲಾಟ್‌ಫಾರ್ಮ್‌ ಸೇರಲು ಮನವೊಲಿಸಿದ್ದಾರೆ ಎನ್ನಲಾಗಿದೆ.

ಇದಾದ ನಂತರ ಟೆಕ್ಕಿ ಅವರು ಹೇಳಿದ ವೆಬ್‌ಸೈಟ್‌ನಲ್ಲಿ ಖಾತೆ ತೆರೆದಿದ್ದರು. ಈ ವೆಬ್‌ಸೈಟ್‌ ಕೊಮೊರೊಸ್‌ನ ಮ್ವಾಲಿ ದ್ವೀಪದಲ್ಲಿ ನೋಂದಾಯಿತ ಪ್ರಾಕ್ಸ್‌ಟ್ರೆಂಡ್‌ ಲಿಮಿಟೆಡ್‌ ಸಂಸ್ಥೆಯದ್ದಾಗಿದೆ ಎಂದು ಹೇಳಿಕೊಂಡಿತ್ತು. ಫೆಬ್ರುವರಿ 27ರಿಂದ ಅವರು ಟ್ರೇಡಿಂಗ್‌ ಆರಂಭಿಸಿದ್ದು, ಈ ವೇಳೆ ತನ್ನನ್ನು ಖಾತೆ ವ್ಯವಸ್ಥಾಪಕ (Account Manager) ಎಂದು ಪರಿಚಯಿಸಿಕೊಂಡ ರಾಜಾ ಎಸ್‌ ಎಂಬಾತನೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ಆತ ಟ್ರೇಡಿಂಗ್‌ ಹಾಗೂ ಹಣಕಾಸು ವ್ಯವಹಾರಗಳಿಗೆ ಮಾರ್ಗದರ್ಶನ ನೀಡುತ್ತಿದ್ದನೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮುಂದಿನ ಹಲವು ತಿಂಗಳುಗಳಲ್ಲಿ ಇವರು ಟ್ರೇಡಿಂಗ್‌ ಮತ್ತು ಹೂಡಿಕೆ ಉದ್ದೇಶಕ್ಕಾಗಿ ದೊಡ್ಡ ಮೊತ್ತದ ಹಣವನ್ನು ವಿವಿಧ ಹಂತಗಳಲ್ಲಿ ವರ್ಗಾಯಿಸಿದ್ದಾರೆ. ಆದರೆ ತಮ್ಮ ಹಣವನ್ನು ಹಿಂಪಡೆಯಲು ಯತ್ನಿಸಿದಾಗ ಅನುಮಾನಗಳು ಮೂಡತೊಡಗಿವೆ.
ದೂರಿನ ಪ್ರಕಾರ, ಅವರು ಸಲ್ಲಿಸಿದ ಹಣ ಹಿಂಪಡೆಯುವ (Withdrawal) ರಿಕ್ವೆಸ್ಟ್‌ ಅನ್ನು ಪ್ರಾಸೆಸ್‌ ಮಾಡಲಾಗಿಲ್ಲ. ಬದಲಾಗಿ ಇನ್ನಷ್ಟು ಟ್ರೇಡಿಂಗ್‌ ನಡೆಸುವಂತೆ ಅಥವಾ ಹೆಚ್ಚುವರಿ ಹಣ ವ್ಯವಸ್ಥೆ ಮಾಡುವಂತೆ ಸಂದೇಶಗಳು ಹಾಗೂ ಕರೆಗಳು ಬರುತ್ತಲೇ ಇದ್ದವು. ಆರಂಭದಲ್ಲಿ ಸೀಮಿತ ಪ್ರಮಾಣದಲ್ಲಿ ಮಾತ್ರ ಹಣವನ್ನು ಹಿಂಪಡೆಯಲು ಸಾಧ್ಯವಾಗಿದ್ದರೂ, ಸೆಪ್ಟೆಂಬರ್‌ 9ರಂದು ಉಳಿದ ಹಣವನ್ನು ಹಿಂಪಡೆಯಲು ಯತ್ನಿಸಿದ ಬಳಿಕ ಪರಿಸ್ಥಿತಿ ಬದಲಾಗಿದೆ.

ಪ್ರಮುಖ ಸುದ್ದಿ :-   ಕಾರು ಅಪಘಾತದ ಬಳಿಕ ಉತ್ತರಾಧಿಮಠ ಶ್ರೀಗಳಿಗೆ ಚಿಕಿತ್ಸೆ-ಚೇತರಿಕೆ, ಆಸ್ಪತ್ರೆಯಿಂದ ಬಿಡುಗಡೆ-ಭಕ್ತರಿಗೆ ವಿಡಿಯೋ ಸಂದೇಶ

ಹಣ ಹಿಂಪಡೆಯುವ ರಿಕ್ವೆಸ್ಟ್‌ ಸಲ್ಲಿಸಿ 48 ಗಂಟೆಗಳಿಗಿಂತ ಹೆಚ್ಚು ಕಾಲ ಕಳೆದರೂ ಅದನ್ನು ಪ್ರಕ್ರಿಯೆಗೊಳಿಸಲಾಗಿಲ್ಲ ಎಂದು ಅವರು ಆರೋಪಿಸಿದ್ದಾರೆ. ಹಣ ಹಿಂಪಡೆಯುವುದು ಅತ್ಯಂತ ಸಂಕೀರ್ಣ ಮತ್ತು ಸಮಯ ತೆಗೆದುಕೊಳ್ಳುವ ಪ್ರಕ್ರಿಯೆ ಎಂದು ತಿಳಿಸಲಾಗಿತ್ತು ಎನ್ನಲಾಗಿದೆ. ಅಲ್ಲದೆ, ಹಣ ಬಿಡುಗಡೆಗೊಳಿಸಲು ಹೆಚ್ಚುವರಿಯಾಗಿ ₹50 ಲಕ್ಷ ಹಾಗೂ ₹20 ಲಕ್ಷ ಸೇರಿದಂತೆ ಇನ್ನಷ್ಟು ಹಣವನ್ನು ವ್ಯವಸ್ಥೆ ಮಾಡುವಂತೆ ಒತ್ತಾಯಿಸಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಾ ರೆಸ್ಲಾನ್‌, ವಾಲ್ಟರ್‌ ಖಾನ್‌, ರೋನಿ ಎಸ್‌, ಅಲಿಶಾ ಅಗರ್ವಾಲ್‌, ಶಶಿಕಾಂತ ಶರ್ಮಾ, ಶಿವ ತಪ್ಪರ್‌ ಹಾಗೂ ರಾಯನ್‌ ಎಸ್‌ ಸೇರಿದಂತೆ ಹಲವು ವ್ಯಕ್ತಿಗಳು ತಮ್ಮನ್ನು ಸಂಪರ್ಕಿಸಿದ್ದರು ಎಂದು ಸಿದ್ಧಾರ್ಥ್‌ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಜಾರ್ಜ್‌ ಟೈಸನ್‌, ವಿಜಯ ಶರ್ಮಾ ಹಾಗೂ ಜೇ ಶ್ರಾಫ್‌ ಅವರ ಗುರುತು ಮತ್ತು ಪ್ಲಾಟ್‌ಫಾರ್ಮ್‌ ಸಂಬಂಧದ ಬಗ್ಗೆಯೂ ಪರಿಶೀಲನೆ ನಡೆಸುವಂತೆ ಮನವಿ ಮಾಡಿದ್ದಾರೆ.
ವಂಚನೆ ನಡೆದಿರುವುದು ತಿಳಿದ ಬಳಿಕ ಟೆಕ್ಕಿ ಸೈಬರ್‌ ಸಹಾಯವಾಣಿ 1930ಕ್ಕೂ ದೂರು ನೀಡಿದ್ದಾರೆ. ಫೆಬ್ರುವರಿ 27ರಿಂದ ಸೆಪ್ಟೆಂಬರ್‌ 9ರ ನಡುವೆ ನಡೆದ ವ್ಯವಹಾರಗಳಲ್ಲಿ ಒಟ್ಟು ₹1.9 ಕೋಟಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೂರ್ವ ವಿಭಾಗದ ಸೈಬರ್‌ ಅಪರಾಧ ಠಾಣೆ ಪೊಲೀಸರು, ಸಂತ್ರಸ್ತರಿಂದ ವರ್ಗಾಯಿಸಲ್ಪಟ್ಟಿರುವ ಹಣದ ಜಾಡು ಪತ್ತೆಹಚ್ಚಿ ಅದನ್ನು ಸ್ಥಗಿತಗೊಳಿಸುವ (Freeze) ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ತನಿಖೆ ಮುಂದುವರಿದಿದೆ.

ಪ್ರಮುಖ ಸುದ್ದಿ :-   ಬೆಂಗಳೂರು | ಸ್ಕೂಟರ್‌ ಸವಾರನ ಗಿಟಾರ್‌ ಬ್ಯಾಗನ್ನೇ ಹಿಂಬದಿ ಸವಾರ ಎಂದು ಭಾವಿಸಿದ ಟ್ರಾಫಿಕ್‌ ಕ್ಯಾಮೆರಾ : 500 ರೂಪಾಯಿ ದಂಡ !

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement