ಬೆಂಗಳೂರು: ಕರ್ನಾಟಕದಲ್ಲಿ ತೀವ್ರಗೊಂಡಿರುವ ಬರ ಪರಿಸ್ಥಿತಿಯ ಪರಿಶೀಲನೆಗಾಗಿ ಕೇಂದ್ರದ ಅಂತರ ಸಚಿವಾಲಯ ತಂಡ (IMCT) ಅಕ್ಟೋಬರ್ 3ರಿಂದ 7ರ ವರೆಗೆ ರಾಜ್ಯಕ್ಕೆ ಭೇಟಿ ನೀಡಲಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಕರ್ನಾಟಕಕ್ಕೆ ಕೇಂದ್ರದಿಂದ ತುರ್ತು ನೆರವು ನೀಡುವಂತೆ ಕೋರಿಕುಮಾರಸ್ವಾಮಿ ಅವರು ಸೆಪ್ಟೆಂಬರ್ 24ರಂದು ಕೇಂದ್ರ ಕೃಷಿ ಸಚಿವ ಶಿವರಾಜ ಸಿಂಗ್ ಚೌಹಾಣ ಅವರಿಗೆ ಕುಮಾರಸ್ವಾಮಿ ಪತ್ರ ಬರೆದಿದ್ದರು. ಈ ಪತ್ರಕ್ಕೆ ಚೌಹಾಣ ಮಂಗಳವಾರ ಪ್ರತಿಕ್ರಿಯೆ ನೀಡಿದ್ದು, ಅದರ ಪ್ರತಿಯನ್ನು ಕುಮಾರಸ್ವಾಮಿ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ.
ರಾಜ್ಯ ಸರ್ಕಾರವು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (NDRF) ಅಡಿ ಆರ್ಥಿಕ ನೆರವು ಕೋರಿ ಬರ ಪರಿಸ್ಥಿತಿಗೆ ಸಂಬಂಧಿಸಿದ ಮನವಿಯನ್ನು ಸಲ್ಲಿಸಿದೆ ಎಂದು ಚೌಹಾಣ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. ಮನವಿ ಸ್ವೀಕರಿಸಿದ ಬಳಿಕ ಸೆಪ್ಟೆಂಬರ್ 17ರಂದು ಅಂತರ ಸಚಿವಾಲಯದ ಕೇಂದ್ರ ತಂಡವನ್ನು ರಚಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.
“ಬರಪೀಡಿತ ಪ್ರದೇಶಗಳ ಸ್ಥಳ ಪರಿಶೀಲನೆ ನಡೆಸಿ, ನಿಯಮಗಳು ಮತ್ತು ಮಾರ್ಗಸೂಚಿಗಳಿಗೆ ಅನುಗುಣವಾಗಿ ವರದಿ ಸಲ್ಲಿಸುವ ಉದ್ದೇಶದಿಂದ ಕೇಂದ್ರದ ಅಂತರ ಸಚಿವಾಲಯ ತಂಡ (IMCT) ಅಕ್ಟೋಬರ್ 3ರಿಂದ 7ರವರೆಗೆ ರಾಜ್ಯಕ್ಕೆ ಭೇಟಿ ನೀಡಲಿದೆ” ಎಂದು ಶಿವರಾಜ ಸಿಂಗ್ ಚೌಹಾಣ ತಿಳಿಸಿದ್ದಾರೆ.
ಕೇಂದ್ರ ತಂಡವು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿ ಸಲ್ಲಿಸುವ ವರದಿಯನ್ನು ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ನೇತೃತ್ವದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಉಪಸಮಿತಿ (SC-NEC) ಪರಿಶೀಲಿಸಲಿದೆ. ನಂತದ ಅದು ಸಲ್ಲಿಸುವ ಅದರ ಶಿಫಾರಸುಗಳ ಆಧಾರದ ಮೇಲೆ ಎನ್ಡಿಆರ್ಎಫ್(NDRF)ನಿಂದ ನೆರವಿನ ಪ್ರಮಾಣವನ್ನು ಕೇಂದ್ರ ಗೃಹ ಸಚಿವರ ನೇತೃತ್ವದ ಉನ್ನತ ಮಟ್ಟದ ಸಮಿತಿ ಅಂತಿಮಗೊಳಿಸಲಿದೆ ಎಂದು ಅವರು ಹೇಳಿದ್ದಾರೆ.
ಕೇಂದ್ರ ಸಚಿವರ ತ್ವರಿತ ಸ್ಪಂದನೆಗೆ ಧನ್ಯವಾದ ಸಲ್ಲಿಸಿರುವ ಕುಮಾರಸ್ವಾಮಿ, “ರೈತರು ತೀವ್ರ ಸಂಕಷ್ಟವನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಸಾಧ್ಯವಿರುವ ಎಲ್ಲ ನೆರವನ್ನು ನೀಡಲಿದೆ ಎಂಬ ವಿಶ್ವಾಸವಿದೆ. ರೈತರ ಹಿತಾಸಕ್ತಿಯನ್ನು ಕಾಪಾಡುವುದು ಮತ್ತು ಅವರ ಬೆಂಬಲಕ್ಕೆ ದೃಢವಾಗಿ ನಿಲ್ಲುವುದು ನಮ್ಮೆಲ್ಲರ ಆದ್ಯತೆಯಾಗಿರಬೇಕು” ಎಂದು ಕುಮಾರಸ್ವಾಮಿ ಹೇಳಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ