ಪಾಕಿಸ್ತಾನದ ಏಜೆಂಟ್‌ಗೆ ರಹಸ್ಯ ರಕ್ಷಣಾ ಮಾಹಿತಿ ಸೋರಿಕೆ ಆರೋಪ: ನೌಕಾಪಡೆ ಸಿಬ್ಬಂದಿಯ ಬಂಧನ

ನವದೆಹಲಿ: ಪಾಕಿಸ್ತಾನದ ಗುಪ್ತಚರ ಏಜೆಂಟ್‌ಗೆ ಸೂಕ್ಷ್ಮ ರಕ್ಷಣಾ ಮಾಹಿತಿಯನ್ನು ಸೋರಿಕೆ ಮಾಡಿದ ಆರೋಪದ ಮೇಲೆ ಭಾರತೀಯ ನೌಕಾಪಡೆಯ 31 ವರ್ಷದ ಸಿಬ್ಬಂದಿಯೊಬ್ಬರನ್ನು ತಮಿಳುನಾಡಿನ ಕೊಯಮತ್ತೂರಿನಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಬಂಧಿತನನ್ನು ಪ್ರದೀಪ ಮುಖರ್ಜಿ ಎಂದು ಗುರುತಿಸಲಾಗಿದೆ. ಅಧಿಕಾರಿಗಳ ಪ್ರಕಾರ, ಪ್ರದೀಪ ಮುಖರ್ಜಿ ವಿಶಾಖಪಟ್ಟಣದಲ್ಲಿರುವ ಪೂರ್ವ ನೌಕಾ ಕಮಾಂಡ್ (Eastern Naval Command)ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ. ನಿರ್ವಹಣಾ ಅಭಿವೃದ್ಧಿ ತರಬೇತಿ (Management Development Course) ಪಡೆಯುತ್ತಿದ್ದ ಈತ, ಕೊಯಮತ್ತೂರಿನ ನೌಕಾಪಡೆಯ ನಾಯಕತ್ವ ತರಬೇತಿ ಕೇಂದ್ರವಾದ ಐಎನ್‌ಎಸ್ ಅಗ್ರಣಿ (INS Agrani)ಯಿಂದ ಶನಿವಾರ ಬಂಧಿಸಲ್ಪಟ್ಟಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ಪ್ರದೀಪ ಮುಖರ್ಜಿ 2014ರಲ್ಲಿ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಿದ್ದರು. ಕಳೆದ ಕೆಲವು ತಿಂಗಳಿನಿಂದ ಸಾಮಾಜಿಕ ಮಾಧ್ಯಮದ ಮೂಲಕ ಪಾಕಿಸ್ತಾನದ ಮಹಿಳಾ ಗುಪ್ತಚರ ಏಜೆಂಟ್‌ ಜೊತೆ ಸಂಪರ್ಕದಲ್ಲಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವೇಳೆ ಈತನನ್ನು ‘ಹನಿಟ್ರ್ಯಾಪ್’ ಮಾಡಲಾಗಿತ್ತು ಎನ್ನಲಾಗಿದೆ.

ಆ ಮಹಿಳಾ ಏಜೆಂಟ್‌ ಜೊತೆ ಸಂಪರ್ಕದಲ್ಲಿದ್ದ ಅವಧಿಯಲ್ಲಿ ಮುಖರ್ಜಿ ಕಾರ್ಯತಂತ್ರದ ಮಹತ್ವ ಹೊಂದಿರುವ ನೌಕಾ ಸಂಪನ್ಮೂಲಗಳು, ನೌಕಾಪಡೆಯ ಹಡಗುಗಳ ಚಲನವಲನ ಮತ್ತು ವಿಶಾಖಪಟ್ಟಣ ನೌಕಾನೆಲೆಯ ಕಾರ್ಯಾಚರಣಾ ವ್ಯವಸ್ಥೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಂಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಖರ್ಜಿ ಚಟುವಟಿಕೆಗಳ ಮೇಲೆ ಆಂಧ್ರಪ್ರದೇಶ ಪೊಲೀಸರ ಕೌಂಟರ್ ಇಂಟೆಲಿಜೆನ್ಸ್ (CI) ಸೆಲ್ ನಿಗಾ ಇರಿಸಿತ್ತು. ಗಡಿಯಾಚೆಗಿನ ಬೇಹುಗಾರಿಕೆ ಮತ್ತು ಭಯೋತ್ಪಾದಕ ಬೆದರಿಕೆಗಳನ್ನು ಎದುರಿಸುವ ವಿಶೇಷ ಘಟಕವಾಗಿರುವ ಈ ಸೆಲ್, ಪ್ರಕರಣಕ್ಕೆ ಸಂಬಂಧಿಸಿದ ಡಿಜಿಟಲ್ ಕುರುಹುಗಳನ್ನು ಪತ್ತೆಹಚ್ಚುತ್ತಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ವಿಡಿಯೋ | "ಪ್ರಾರ್ಥನೆ ಮಾಡಲು ಎದ್ದಿದ್ದ ಸಹ ಪೈಲಟ್‌ ಏಕಾಏಕಿ ದಾಳಿ ನಡೆಸಿದ..2 ಸಲ ಕಾಕ್‌ಪಿಟ್‌ ಬಾಗಿಲು ತೆರೆದಿದ್ದೆ : ವಿಮಾನದಲ್ಲಿ ಏನಾಯ್ತು ವಿವರಿಸಿದ ಮಚ್ಚಾರ್

ಕೊಚ್ಚಿಯಲ್ಲಿ ಮತ್ತೊಬ್ಬ ನೌಕಾಪಡೆ ಸಿಬ್ಬಂದಿ ಬಂಧನ
ಪ್ರದೀಪ ಮುಖರ್ಜಿ ಬಂಧನಕ್ಕೂ ಕೆಲ ತಿಂಗಳ ಮೊದಲು ಮತ್ತೊಬ್ಬ ಭಾರತೀಯ ನೌಕಾಪಡೆ ಸಿಬ್ಬಂದಿ ಲ್ಯಾನ್ಸ್ ನಾಯಕ್ ಆದರ್ಶಕುಮಾರ ಅಲಿಯಾಸ್ ಲಕ್ಕಿ ಎಂಬಾತನನ್ನು ಪಾಕಿಸ್ತಾನದ ಕುಖ್ಯಾತ ಗುಪ್ತಚರ ಸಂಸ್ಥೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ISI)ಗೆ ಮಾಹಿತಿ ಸೋರಿಕೆ ಮಾಡಿದ ಆರೋಪದ ಮೇಲೆ ಬಂಧಿಸಲಾಗಿತ್ತು.
ಉತ್ತರ ಪ್ರದೇಶದ ಆಗ್ರಾ ಮೂಲದ ಈತನನ್ನು ಈ ವರ್ಷದ ಮಾರ್ಚ್‌ನಲ್ಲಿ ಕೇರಳದ ಕೊಚ್ಚಿಯಲ್ಲಿ ಬಂಧಿಸಲಾಗಿತ್ತು. ಈತ ದಕ್ಷಿಣ ನೌಕಾ ಕಮಾಂಡ್ (Southern Naval Command)ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹಾಗೂ ಐಎಸ್‌ಐ ಏಜೆಂಟ್‌ ಜೊತೆ ಸಂಪರ್ಕದಲ್ಲಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಭಯೋತ್ಪಾದನೆ ನಿಗ್ರಹ ದಳ (ATS) ರಾಜ್ಯದಲ್ಲಿ ಬೇಹುಗಾರಿಕೆ ಜಾಲವೊಂದನ್ನು ಭೇದಿಸಿದ ಬಳಿಕ ಆದರ್ಶಕುಮಾರ ಸಿಕ್ಕಿಬಿದ್ದಿದ್ದ. ತನಿಖೆಯ ವೇಳೆ ಈತ ಐಎಸ್‌ಐ ಏಜೆಂಟ್‌ಗೆ ಸೂಕ್ಷ್ಮ ಮಾಹಿತಿಯನ್ನು ನೀಡಿದ್ದಲ್ಲದೆ, ಕಾರ್ಯತಂತ್ರದ ದೃಷ್ಟಿಯಿಂದ ಮಹತ್ವ ಹೊಂದಿರುವ ನೌಕಾ ಸಂಪನ್ಮೂಲಗಳು, ಯುದ್ಧನೌಕೆಗಳು ಸೇರಿದಂತೆ ಹಲವು ನೌಕಾ ಸ್ಥಾಪನೆಗಳ ಛಾಯಾಚಿತ್ರಗಳನ್ನು ಹಣದ ಆಮಿಷಕ್ಕೆ ಒಳಗಾಗಿ ಹಂಚಿಕೊಂಡಿದ್ದ ಎಂಬುದು ಪತ್ತೆಯಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಂಧನದ ಬಳಿಕ ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.

ಪ್ರಮುಖ ಸುದ್ದಿ :-   2006ರ ಪ್ರಕರಣ : ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ವಿರುದ್ಧ ತನಿಖೆಗೆ ಕೇರಳ ಗೃಹ ಸಚಿವರ ಆದೇಶ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement