ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ಅವರನ್ನು ಅಮಾನತುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ಮೇರೆಗೆ ಮಧ್ಯಂತರ ಆದೇಶ ಹೊರಡಿಸಲು ಸುಪ್ರೀಂ ಕೋರ್ಟ್ ಸೋಮವಾರ (ಅಕ್ಟೋಬರ್ 5) ನಿರಾಕರಿಸಿತು. ಆದರೆ ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶಕುಮಾರ ಅವರು ಚುನಾವಣಾ ಆಯೋಗದ ಬಹುಸದಸ್ಯ ವ್ಯವಸ್ಥೆಗೆ ಸಂವಿಧಾನಾತ್ಮಕವಾಗಿ ವಹಿಸಲಾಗಿರುವ ಅಧಿಕಾರಗಳನ್ನು ಏಕಾಂಗಿಯಾಗಿ ಚಲಾಯಿಸಿದ್ದಾರೆಯೇ ಎಂಬ ಆರೋಪದ ಕುರಿತು ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ. ಈ ಬಗ್ಗೆ ಚುನಾವಣಾ ಆಯೋಗದ ಅಧಿಕೃತ ಪ್ರತಿಕ್ರಿಯೆ ಬಂದ ಬಳಿಕವೇ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ನ್ಯಾಯಾಲಯ ಸ್ಪಷ್ಟಪಡಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ ನೇತೃತ್ವದ, ನ್ಯಾಯಮೂರ್ತಿಗಳಾದ ಜಾಯ್‌ಮಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ಪೀಠವು, ಇತರ ಇಬ್ಬರು ಚುನಾವಣಾ ಆಯುಕ್ತರ ಒಪ್ಪಿಗೆಯಿಲ್ಲದೆ ಮುಖ್ಯ ಚುನಾವಣಾ ಆಯುಕ್ತರು ಏಕಪಕ್ಷೀಯವಾಗಿ ನಿರ್ಧಾರಗಳನ್ನು ಕೈಗೊಂಡಿದ್ದಾರೆ ಎಂಬ ಆರೋಪಗಳ ಕುರಿತು ಚುನಾವಣಾ ಆಯೋಗದಿಂದ ಉತ್ತರ ಕೇಳಿದೆ.
ಪಾಟ್ನಾ ನಿವಾಸಿ ರಾಕೇಶಕುಮಾರ ಸಿಂಗ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ, ಚುನಾವಣಾ ಆಯೋಗವೆಂಬ ಬಹುಸದಸ್ಯ ಸಂಸ್ಥೆಗೆ ಕಾನೂನುಬದ್ಧವಾಗಿ ಸೇರಿರುವ ಅಧಿಕಾರಗಳನ್ನು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ಅವರು ಏಕಪಕ್ಷೀಯವಾಗಿ ಚಲಾಯಿಸುತ್ತಿದ್ದಾರೆಯೇ ಎಂಬುದನ್ನು ಸುಪ್ರೀಂ ಕೋರ್ಟ್ ಪರಿಶೀಲಿಸಬೇಕು ಎಂದು ಮನವಿ ಮಾಡಲಾಗಿದೆ. ಅಂತಹ ಕ್ರಮಗಳು ನಡೆದಿರುವುದು ದೃಢಪಟ್ಟರೆ, ಅವುಗಳನ್ನು ಅಧಿಕಾರವಿಲ್ಲದ ಕ್ರಮಗಳೆಂದು ಘೋಷಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅರ್ಜಿಯಲ್ಲಿ ಕೋರಲಾಗಿದೆ.
ಚುನಾವಣಾ ಆಯೋಗದ ನಿರ್ಧಾರಗಳು ಸರ್ವಾನುಮತದಿಂದ ಅಥವಾ ಬಹುಮತದ ಆಧಾರದ ಮೇಲೆ ಇರಬೇಕು ಎಂದು ನ್ಯಾಯಪೀಠ ಹೇಳಿತು. ಆಯೋಗದ ಎಲ್ಲಾ ನಿರ್ಧಾರಗಳೂ ಇದೇ ರೀತಿಯಲ್ಲಿ ಕೈಗೊಳ್ಳಲಾಗಿದೆ ಎಂದು ನ್ಯಾಯಾಲಯ ಸದ್ಯಕ್ಕೆ ಊಹಿಸುತ್ತಿದೆ ಎಂದು ತಿಳಿಸಿತು.
ಒಂದು ವೇಳೆ ಯಾವುದೇ ನಿರ್ಧಾರವನ್ನು ಸರ್ವಾನುಮತದಿಂದ ಅಥವಾ ಬಹುಮತದ ಆಧಾರದಲ್ಲಿ ಕೈಗೊಳ್ಳಲಾಗಿಲ್ಲ ಎಂಬುದು ಪತ್ತೆಯಾದರೆ, ಅಂತಹ ನಿರ್ಧಾರಗಳನ್ನು ತಡೆಹಿಡಿಯಬಹುದಾಗಿದೆ ಎಂದು ನ್ಯಾಯಾಲಯ ಹೇಳಿತು. ಆದರೆ, ಎಲ್ಲ ನಿರ್ಧಾರಗಳನ್ನೂ ಮುಖ್ಯ ಚುನಾವಣಾ ಆಯುಕ್ತರು ಏಕಾಂಗಿಯಾಗಿ ಕೈಗೊಂಡಿದ್ದಾರೆ ಎಂದು ಈ ಹಂತದಲ್ಲೇ ತೀರ್ಮಾನಿಸಲು ಸಾಧ್ಯವಿಲ್ಲ ಎಂದು ಪೀಠ ಸ್ಪಷ್ಟಪಡಿಸಿತು.
ಈ ವಿವಾದಕ್ಕೆ ಹಿನ್ನೆಲೆಯಾಗಿರುವುದು ದಿ ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಟಿಸಿದ ವರದಿ. ಆ ವರದಿಯ ಪ್ರಕಾರ, ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ ಜೋಶಿ ಅವರು ಮತದಾರರ ಪಟ್ಟಿಗಳು, ಮತದಾರರ ನೋಂದಣಿ ಹಾಗೂ ಚುನಾವಣಾ ಆಯೋಗದ ತಂತ್ರಜ್ಞಾನ ವ್ಯವಸ್ಥೆಗಳಿಗೆ ಸಂಬಂಧಿಸಿದ ನಿರ್ಧಾರಗಳ ಕುರಿತು ಸುಮಾರು 10 ತಿಂಗಳ ಅವಧಿಯಲ್ಲಿ ಕನಿಷ್ಠ 14 ಬಾರಿ ಔಪಚಾರಿಕ ಆಕ್ಷೇಪಣೆಗಳನ್ನು ದಾಖಲಿಸಿದ್ದರು.
ಆದರೆ, ಈ ಆಕ್ಷೇಪಣೆಗಳು ಚುನಾವಣಾ ಆಯೋಗದ ಅಂತಿಮ ನಿರ್ಧಾರಗಳ ಕುರಿತು ಸಂಸ್ಥೆಯೊಳಗಿನ ಭಿನ್ನಾಭಿಪ್ರಾಯವನ್ನು ಸೂಚಿಸುವುದಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಕರಡು ಹಂತದಲ್ಲಿ ಅಧಿಕಾರಿಗಳು ಕಾರ್ಯಾಚರಣಾತ್ಮಕ ಪ್ರಶ್ನೆಗಳು, ಅಭಿಪ್ರಾಯಗಳು ಮತ್ತು ಸಲಹೆಗಳನ್ನು ನೀಡುವುದು ಚುನಾವಣಾ ಆಯೋಗದ ಸಾಮಾನ್ಯ ಆಡಳಿತಾತ್ಮಕ ಹಾಗೂ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯ ಭಾಗವಾಗಿದೆ ಎಂದು ಆಯೋಗ ಹೇಳಿದೆ.
ವಿಶೇಷವಾಗಿ, ಎಸ್‌ಐಆರ್ (Special Intensive Revision) ಪ್ರಕ್ರಿಯೆಯ ವೇಳಾಪಟ್ಟಿಗೆ ಸಂಬಂಧಿಸಿದ ನಿರ್ಧಾರಗಳನ್ನು ಸರ್ವಾನುಮತದಿಂದಲೇ ಕೈಗೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ಸಮರ್ಥಿಸಿಕೊಂಡಿದೆ.
ವಿಚಾರಣೆ ವೇಳೆ ನ್ಯಾಯಾಲಯವು ಅರ್ಜಿದಾರರನ್ನು ಉದ್ದೇಶಿಸಿ, “ನೀವು ಪತ್ರಿಕಾ ವರದಿಯನ್ನು ಆಧಾರವಾಗಿಟ್ಟುಕೊಂಡಿದ್ದೀರಾ?” ಎಂದು ಪ್ರಶ್ನಿಸಿತು. ಇದಕ್ಕೆ ಅರ್ಜಿದಾರರು, ಚುನಾವಣಾ ಆಯೋಗವು ಪತ್ರಿಕಾ ವರದಿಯಲ್ಲಿರುವ ಆರೋಪಗಳನ್ನು ನಿರಾಕರಿಸಿಲ್ಲ ಎಂದು ವಾದಿಸಿದರು.
ಆದರೆ, ಪತ್ರಿಕಾ ವರದಿ ಸಂಪೂರ್ಣವಾಗಿ ಸರಿಯಾಗಿರಬಹುದು, ಭಾಗಶಃ ಸರಿಯಾಗಿರಬಹುದು ಅಥವಾ ತಪ್ಪಾಗಿರಬಹುದು ಎಂದು ನ್ಯಾಯಾಲಯ ಹೇಳಿತು. ಆದ್ದರಿಂದ, ಕೇವಲ ಪತ್ರಿಕಾ ವರದಿಯ ಆಧಾರದ ಮೇಲೆ ತಕ್ಷಣವೇ ಆದೇಶ ಹೊರಡಿಸಲು ಸಾಧ್ಯವಿಲ್ಲ ಎಂದು ಪೀಠ ಸ್ಪಷ್ಟಪಡಿಸಿತು.
“ನಮಗೆ ಚುನಾವಣಾ ಆಯೋಗದ ಪ್ರತಿಕ್ರಿಯೆ ಖಂಡಿತವಾಗಿಯೂ ಬೇಕು. ಕಾನೂನು ಪಾಲನೆಯಾಗದಿರುವ ಪ್ರಕರಣಗಳಿವೆ ಎಂದು ಕಂಡುಬಂದರೆ, ಅಂತಹ ನಿರ್ಧಾರಗಳನ್ನು ನಾವು ರದ್ದುಗೊಳಿಸಬಹುದು” ಎಂದು ನ್ಯಾಯಾಲಯ ತಿಳಿಸಿತು.
ಹೀಗಾಗಿ, ಚುನಾವಣಾ ಆಯೋಗದ ನಿರ್ಧಾರಗಳು ನಿಜವಾಗಿಯೂ ಸರ್ವಾನುಮತದಿಂದ ಅಥವಾ ಬಹುಮತದ ಆಧಾರದ ಮೇಲೆ ಕೈಗೊಳ್ಳಲಾಗಿದೆಯೇ ಎಂಬುದನ್ನು ದೃಢೀಕರಿಸುವ ಅಧಿಕೃತ ಹಾಗೂ ಪ್ರಮಾಣೀಕೃತ ಮಾಹಿತಿಯನ್ನು ಪಡೆಯಲು ಸುಪ್ರೀಂ ಕೋರ್ಟ್ ಮುಂದಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ