ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಸಾಹುಕಾರನನ್ನು ಬಂಧಿಸಿದ ಇ.ಡಿ.

ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಮೂಲಕ 400 ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಸಂಬಂಧ ಜಾರಿ ನಿರ್ದೇಶನಾಲಯ (ಇಡಿ) ಮಂಗಳವಾರ ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ ನಿವಾಸದ ಮೇಲೆ ಎರಡನೇ ಬಾರಿ ಶೋಧ ಕಾರ್ಯಾಚರಣೆ ನಡೆಸಿ, ಅವರನ್ನು ವಶಕ್ಕೆ ಪಡೆದಿದೆ ಎಂದು ಮೂಲಗಳು ತಿಳಿಸಿವೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಎಸ್‌ಸಿ ಸದಸ್ಯೆ ಬಿ.ವಿ. ಗೀತಾ ಅವರನ್ನೂ ಇಡಿ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ಹಾಗೂ ಕಾನೂನು ಕ್ರಮಕ್ಕಾಗಿ ಕರೆದೊಯ್ದಿದೆ. ಇದೇ ಪ್ರಕರಣದಲ್ಲಿ ಕೆಪಿಎಸ್​ಸಿ ಸದಸ್ಯೆ ಬಿ.ವಿ.ಗೀತಾ ಅವರನ್ನು ಬೆಂಗಳೂರಿನ ಅವರ ಮನೆಯಲ್ಲೇ ಇಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ನೇಮಕಾತಿ ಅಕ್ರಮದಲ್ಲಿ ಅವರ ಪಾತ್ರವಿರುವ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಈ ಬೆಳವಣಿಗೆಗೆ ಮುನ್ನ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರಕುಮಾರನನ್ನು ಇ.ಡಿ. ಕಸ್ಟಡಿಯಲ್ಲಿ ವಿಚಾರಣೆ ನಡೆಸಿತ್ತು. ವಿಚಾರಣೆ ವೇಳೆ ಪಶುವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ಕೆಲ ಕೆಪಿಎಸ್‌ಸಿ ಸದಸ್ಯರು ಹಾಗೂ ಇತರರ ಪಾತ್ರದ ಬಗ್ಗೆ ಜ್ಞಾನೇಂದ್ರಕುಮಾರ ತನಿಖಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಮಂಗಳವಾರ ಮಧ್ಯಾಹ್ನದ ವೇಳೆ ಇ.ಡಿ. ಅಧಿಕಾರಿಗಳು ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಸಾಹುಕಾರ ನಿವಾಸಕ್ಕೆ ತೆರಳಿ, ಶೋಧ ವಾರಂಟ್ ಆಧಾರದಲ್ಲಿ ಪರಿಶೀಲನೆ ನಡೆಸಿ ಅವರನ್ನು ವಿಚಾರಣೆಗೊಳಪಡಿಸಿದರು. ನಂತರ ಅವರನ್ನು ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ. ಅವರನ್ನು ಔಪಚಾರಿಕವಾಗಿ ಬಂಧಿಸಿದಲ್ಲಿ ಬುಧವಾರ ನ್ಯಾಯಾಲಯದ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ.
ಸಾಹುಕಾರ ನಿವಾಸದ ಮೇಲೆ ಇಡಿ ನಡೆಸುತ್ತಿರುವುದು ಇದು ಎರಡನೇ ಶೋಧ ಕಾರ್ಯಾಚರಣೆಯಾಗಿದೆ. ಇದಕ್ಕೂ ಮೊದಲು ಆಗಸ್ಟ್‌ 18ರಂದು ಅವರ ನಿವಾಸದಲ್ಲಿ ಶೋಧ ನಡೆಸಲಾಗಿತ್ತು.
ಫೆಬ್ರುವರಿ 2024ರಿಂದ ಮಾರ್ಚ್‌ 2026ರವರೆಗೆ ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕರಾಗಿ ಕಾರ್ಯನಿರ್ವಹಿಸಿದ್ದ ಜ್ಞಾನೇಂದ್ರಕುಮಾರ, ಕಸ್ಟಡಿ ವಿಚಾರಣೆ ವೇಳೆ ಸಾಹುಕಾರ ಜೊತೆಗೆ ಕೆಲ ಕೆಪಿಎಸ್‌ಸಿ ಸದಸ್ಯರ ಹೆಸರನ್ನೂ ಉಲ್ಲೇಖಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಪಶುವೈದ್ಯಾಧಿಕಾರಿಗಳ ಅಂತಿಮ ಆಯ್ಕೆ ಪ್ರಕ್ರಿಯೆಯಲ್ಲಿ ಗಂಭೀರ ಅಕ್ರಮಗಳು ನಡೆದಿವೆ ಎಂಬ ಆರೋಪದಡಿ ಬೆಂಗಳೂರಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಹಲವು ಎಫ್‌ಐಆರ್‌ಗಳ ಆಧಾರದ ಮೇಲೆ ಇಡಿ ತನಿಖೆ ನಡೆಸುತ್ತಿದೆ. ಮತ್ತೊಂದೆಡೆ, ಈ ನೇಮಕಾತಿ ಅಕ್ರಮಗಳ ಕುರಿತು ಸಿಐಡಿಯೂ ಪ್ರತ್ಯೇಕ ತನಿಖೆ ಕೈಗೊಂಡಿದೆ. ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆಗೆ ಸಂಬಂಧಿಸಿದ ವಿಚಾರವು ಕರ್ನಾಟಕ ಹೈಕೋರ್ಟ್ ಆದೇಶವನ್ನು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದು, ಹೈಕೋರ್ಟ್‌ ಆದೇಶಕ್ಕೆ ಗುರುವಾರ (ಅಕ್ಟೋಬರ್‌ 1) ಸುಪ್ರೀಂ ಕೋರ್ಟ್‌ ತಡೆ ನೀಡಿದೆ.

ಪ್ರಮುಖ ಸುದ್ದಿ :-   ರಾಜ್ಯದ ಜನತೆಗೆ ಮತ್ತೊಂದು ಶಾಕ್‌ ? ನಂದಿನಿ ಹಾಲಿನ ದರ ಲೀಟರ್‌ಗೆ ₹8 ಹೆಚ್ಚಳಕ್ಕೆ ಸಚಿವ ಸಂಪುಟ ಒಪ್ಪಿಗೆ

ಈ ವರ್ಷದ ಜನವರಿಯಲ್ಲಿ ನಡೆದ ಪಶುವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆಯ ನಂತರ ಆಯ್ಕೆ ಅಥವಾ ನೇಮಕಾತಿ ಪಡೆಯಲು 29 ಅಭ್ಯರ್ಥಿಗಳು ಲಕ್ಷಾಂತರ ರೂಪಾಯಿ ಹಣ ಪಾವತಿಸಿದ್ದಾರೆ ಎಂಬ ಆರೋಪಗಳು ಪ್ರಕರಣದ ಕೇಂದ್ರಬಿಂದುವಾಗಿವೆ.
ಆರೋಪಿಗಳ ಪಟ್ಟಿಯಲ್ಲಿ ಸಾಹುಕಾರ ಸಂಬಂಧಿ ಎಂದು ಹೇಳಲಾಗುತ್ತಿರುವ ಸೂಗೂರೇಶ ಜಾಕಾ ಎಂಬಾತನ ಹೆಸರೂ ಇದೆ. ಎರಡು ಪದವಿ ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗಿದ್ದರೂ ಜಾಕಾ 456.75 ಅಂಕಗಳನ್ನು ಪಡೆದಿರುವ ಬಗ್ಗೆ ತನಿಖಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ನಂತರ ಅವರು ಪೂರಕ ಪರೀಕ್ಷೆಗಳ ಮೂಲಕ ಉತ್ತೀರ್ಣರಾಗಿದ್ದರೂ, ಅವರ ಒಟ್ಟು ಶೈಕ್ಷಣಿಕ ಸಾಧನೆ (ಸಿಜಿಪಿಎ) ಕಡಿಮೆಯಾಗಿತ್ತು ಎನ್ನಲಾಗಿದೆ.
ಮಂಗಳವಾರದ ಶೋಧ ಕಾರ್ಯಾಚರಣೆಯಲ್ಲಿ ವಶಪಡಿಸಿಕೊಳ್ಳಲಾದ ದಾಖಲೆಗಳು ಅಥವಾ ಇತರೆ ವಸ್ತುಗಳ ಬಗ್ಗೆ ಇಡಿ ಇನ್ನೂ ಯಾವುದೇ ಅಧಿಕೃತ ಮಾಹಿತಿ ಬಿಡುಗಡೆ ಮಾಡಿಲ್ಲ. ಆದರೆ, ಈಗಾಗಲೇ ಬಂಧಿಸಲ್ಪಟ್ಟಿರುವ ಶಂಕಿತರ ಹೇಳಿಕೆಗಳು ಹಾಗೂ ಪ್ರಾಥಮಿಕ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಈ ಶೋಧ ಕಾರ್ಯಾಚರಣೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದರ ನಡುವೆಯೇ, ಕಳೆದ ಜುಲೈ 10ರಂದು ಶಿವಶಂಕರಪ್ಪ ಸಾಹುಕಾರ ಪುತ್ರಿ ವಿರುದ್ಧವೂ ವಿಧಾನಸೌಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಸರ್ಕಾರಿ ಹುದ್ದೆಗೆ 3ಬಿ ಮೀಸಲಾತಿ ವರ್ಗದಡಿ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಸುಳ್ಳು ಆದಾಯ ಪ್ರಮಾಣಪತ್ರ ಸಲ್ಲಿಸಿದ್ದಾರೆ ಎಂಬ ಆರೋಪದಡಿ ಈ ಪ್ರಕರಣ ದಾಖಲಾಗಿತ್ತು. ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಹುಕಾರ ಅವರನ್ನು ಈ ಹಿಂದೆ ಸಿಐಡಿಯೂ ವಿಚಾರಣೆ ನಡೆಸಿತ್ತು.

ಪ್ರಮುಖ ಸುದ್ದಿ :-   ಬೆಂಗಳೂರು | ಜೊಮ್ಯಾಟೊ ಸಿಬ್ಬಂದಿಗೆ ಹಿಂದಿ ಕಲಿಯಲೇಬೇಕು ಎಂದು ತಾಕೀತು ಮಾಡಿ ನಂತರ ಕನ್ನಡದಲ್ಲಿ ಕ್ಷಮೆಯಾಚನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement