ರಾಜ್ಯದ ಜನತೆಗೆ ಮತ್ತೊಂದು ಶಾಕ್‌ ? ನಂದಿನಿ ಹಾಲಿನ ದರ ಲೀಟರ್‌ಗೆ ₹8 ಹೆಚ್ಚಳಕ್ಕೆ ಸಚಿವ ಸಂಪುಟ ಒಪ್ಪಿಗೆ

ಬೆಂಗಳೂರು: ನಂದಿನಿ ಹಾಲಿನ ದರವನ್ನು ಲೀಟರ್‌ಗೆ ₹8 ಹೆಚ್ಚಿಸುವ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಮಂಗಳವಾರ (ಅಕ್ಟೋಬರ್ 6) ಅನುಮೋದನೆ ನೀಡಿದೆ. ಆದರೆ ವಿಧಾನ ಪರಿಷತ್ ಚುನಾವಣೆಗೆ ಮಾದರಿ ನೀತಿ ಸಂಹಿತೆ (ಎಂಸಿಸಿ) ಜಾರಿಯಲ್ಲಿರುವ ಕಾರಣ ದರ ಹೆಚ್ಚಳವನ್ನು ಪ್ರಕಟಿಸಿಲ್ಲ.
ದರ ಹೆಚ್ಚಳ ಜಾರಿಗೆ ತರುವ ಮೊದಲು ಸರ್ಕಾರವು ಚುನಾವಣಾ ಆಯೋಗದ ಅನುಮೋದನೆ ಪಡೆಯಲಿದೆ. ಈ ಕುರಿತು ಅಂತಿಮ ನಿರ್ಧಾರವನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳುವ ಸಾಧ್ಯತೆ ಇದೆ.
ಮೂಲಗಳ ಪ್ರಕಾರ, ದರ ಹೆಚ್ಚಳವು ನವೆಂಬರ್ 1ರಿಂದ ಜಾರಿಗೆ ಬರುವ ಸಾಧ್ಯತೆ ಇದ್ದು, ಗ್ರಾಹಕರಿಗೆ ಎಷ್ಟು ಪ್ರಮಾಣದ ಹೆಚ್ಚುವರಿ ವೆಚ್ಚವನ್ನು ವರ್ಗಾಯಿಸಬೇಕು ಎಂಬ ಅಂತಿಮ ನಿರ್ಧಾರವನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನೇತೃತ್ವದಲ್ಲಿ ಕೈಗೊಳ್ಳಲಾಗುತ್ತದೆ.
ಈ ಹಿಂದೆ 2023ರ ಜುಲೈನಲ್ಲಿ ನಂದಿನಿ ಹಾಲಿನ ದರವನ್ನು ಲೀಟರ್‌ಗೆ ₹3 ಹೆಚ್ಚಿಸಲಾಗಿತ್ತು. ಅದಕ್ಕೂ ಮೊದಲು 2022ರ ನವೆಂಬರ್‌ನಲ್ಲೂ ಲೀಟರ್‌ಗೆ ₹3ರಷ್ಟು ದರ ಏರಿಕೆ ಮಾಡಲಾಗಿತ್ತು.

ಪ್ರಸ್ತುತ ನೀಲಿ ಬಣ್ಣದ ಪ್ಯಾಕೆಟ್‌ನಲ್ಲಿ ಮಾರಾಟವಾಗುವ ನಂದಿನಿಯ ಮೂಲ ಟೋನ್ಡ್ ಹಾಲಿನ ದರ ಲೀಟರ್‌ಗೆ ₹46 ಇದೆ. ಸಚಿವ ಸಂಪುಟ ಅನುಮೋದಿಸಿದ ಸಂಪೂರ್ಣ ₹8 ಹೆಚ್ಚಳವನ್ನು ಗ್ರಾಹಕರ ಮೇಲೆ ವರ್ಗಾಯಿಸಿದರೆ, ಇದರ ದರ ಲೀಟರ್‌ಗೆ ₹54ಕ್ಕೆ ಏರಿಕೆಯಾಗಲಿದೆ.
ಇನ್ನೊಂದೆಡೆ, ಹಾಲು ಒಕ್ಕೂಟಗಳು ಲೀಟರ್‌ಗೆ ₹8ರಿಂದ ₹10ರವರೆಗೆ ದರ ಹೆಚ್ಚಳ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿವೆ. ಜಾನುವಾರು ಆಹಾರ, ಮೇವು ಹಾಗೂ ಔಷಧಿಗಳ ವೆಚ್ಚ ಹೆಚ್ಚಳ, ಸಾರಿಗೆ ಖರ್ಚು ಏರಿಕೆ, ಪ್ಲಾಸ್ಟಿಕ್ ಪ್ಯಾಕೇಜಿಂಗ್ ವೆಚ್ಚದ ಹೆಚ್ಚಳ ಹಾಗೂ ಬರ ಪರಿಸ್ಥಿತಿಯಿಂದ ಉಂಟಾಗಿರುವ ಮೇವಿನ ಕೊರತೆ ಮುಂತಾದ ಕಾರಣಗಳನ್ನು ಉಲ್ಲೇಖಿಸಿ ಹಾಲಿನ ದರ ಪರಿಷ್ಕರಣೆಗೆ ಒಕ್ಕೂಟಗಳು ಒತ್ತಾಯಿಸಿವೆ.
ಹಾಲು ಒಕ್ಕೂಟಗಳ ಪ್ರತಿನಿಧಿಗಳು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರನ್ನು ಭೇಟಿ ಮಾಡಿ, ಲೀಟರ್‌ಗೆ ₹8ರಿಂದ ₹10ರವರೆಗೆ ದರ ಹೆಚ್ಚಿಸುವಂತೆ ಮನವಿ ಸಲ್ಲಿಸಿದ್ದರು. ಕರ್ನಾಟಕದಲ್ಲಿ ಟೋನ್ಡ್ ಹಾಲನ್ನು ಲೀಟರ್‌ಗೆ ₹35 ದರದಲ್ಲಿ ಖರೀದಿಸಲಾಗುತ್ತಿದೆ. ಆದರೆ ಇದೇ ದರ ಆಂಧ್ರಪ್ರದೇಶದಲ್ಲಿ ₹41.50, ಕೇರಳದಲ್ಲಿ ₹41.80, ಮಹಾರಾಷ್ಟ್ರದಲ್ಲಿ ₹41 ಹಾಗೂ ತಮಿಳುನಾಡಿನಲ್ಲಿ ₹42.24 ಇದೆ ಎಂದು ಹಾಲು ಒಕ್ಕೂಟಗಳು ಸರ್ಕಾರದ ಗಮನಕ್ಕೆ ತಂದಿವೆ. ಈ ಹಿನ್ನೆಲೆಯಲ್ಲಿ ಉತ್ಪಾದಕರ ಹಿತಾಸಕ್ತಿ ಕಾಪಾಡಲು ಹಾಗೂ ಹೆಚ್ಚುತ್ತಿರುವ ಉತ್ಪಾದನಾ ವೆಚ್ಚವನ್ನು ಸಮತೋಲನಗೊಳಿಸಲು ಹಾಲಿನ ದರ ಹೆಚ್ಚಳ ಅಗತ್ಯವಾಗಿದೆ ಎಂದು ಒಕ್ಕೂಟಗಳು ವಾದಿಸಿವೆ.

ಪ್ರಮುಖ ಸುದ್ದಿ :-   ಕಲಬುರಗಿ : ಕೃಷಿ ಜಮೀನಿನಲ್ಲಿ ತುರ್ತು ಭೂಸ್ಪರ್ಶ ಮಾಡಿದ ಪೈಲಟ್ ತರಬೇತಿ ವಿಮಾನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement