ಬೆಂಗಳೂರು: ನಗರದ ಅಮೆಜಾನ್ ಕಚೇರಿ ಹೊರಭಾಗದ ಫುಟ್‌ಪಾತ್‌ನಲ್ಲಿ ಅಳವಡಿಸಲಾಗಿದ್ದ ಟ್ರಾನ್ಸ್‌ಫಾರ್ಮರ್ ಬಾಕ್ಸ್ ಸ್ಫೋಟಗೊಂಡ ಪರಿಣಾಮ ಪಾದಚಾರಿಯೊಬ್ಬರು ಗಾಯಗೊಂಡಿರುವ ಘಟನೆ ಬುಧವಾರ (ಅ.7) ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಯಲಹಂಕ ಓಲ್ಡ್ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ಬಾಗಲೂರು ಕ್ರಾಸ್ ಸಮೀಪದಲ್ಲಿರುವ ಅಮೆಜಾನ್ ಕಚೇರಿಯ ಗೇಟ್ ನಂಬರ್ 3ರ ಹೊರಭಾಗದಲ್ಲಿ ಈ ಘಟನೆ ನಡೆದಿದ್ದು, ಗಾಯಗೊಂಡ ವ್ಯಕ್ತಿಯನ್ನು ಮೊಹಮ್ಮದ್ ಅಫ್ರೋಜ್ ಎಂದು ಗುರುತಿಸಲಾಗಿದೆ.
ಟ್ರಾನ್ಸ್‌ಫಾರ್ಮರ್ ಸ್ಫೋಟಗೊಂಡ ಕ್ಷಣದ ದೃಶ್ಯಗಳು ವಾಹನದ ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಯಾಗಿವೆ. ದೃಶ್ಯದಲ್ಲಿ ರಸ್ತೆಬದಿಯಿಂದ ವಾಹನಗಳು ಸಂಚರಿಸುತ್ತಿರುವಾಗ ಫುಟ್‌ಪಾತ್‌ನಲ್ಲಿದ್ದ ಟ್ರಾನ್ಸ್‌ಫಾರ್ಮರ್ ಬಾಕ್ಸ್ ಏಕಾಏಕಿ ಸ್ಫೋಟಗೊಂಡಿದೆ. ಆ ವೇಳೆ ಫುಟ್‌ಪಾತ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದ ಅಫ್ರೋಜ್ ಸ್ಫೋಟದ ಪರಿಣಾಮ ಕೆಳಗೆ ಬಿದ್ದಿದ್ದಾರೆ. ಅವರಿಗೆ ಸುಟ್ಟ ಗಾಯಗಳಾಗಿವೆ. ಮತ್ತೊಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಅವರ ಹಿಂದೆಯೇ ಫುಟ್‌ಪಾತ್‌ನಲ್ಲಿ ನಡೆದುಕೊಂಡು ಬರುತ್ತಿದ್ದ ಮಹಿಳೆಯೊಬ್ಬರು ಅಪಾಯದಿಂದ ಪಾರಾಗಿದ್ದು, ಯಾವುದೇ ಗಾಯವಾಗಿಲ್ಲ. ಅಫ್ರೋಜ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯನ್ನು ತಮ್ಮ ವಾಹನದ ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಹಿಡಿದಿರುವುದಾಗಿ ಪ್ರತ್ಯಕ್ಷದರ್ಶಿ ಅರುಣ ಜಿ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ತಿಳಿಸಿದ್ದಾರೆ. “ನನ್ನ ಡ್ಯಾಶ್‌ಕ್ಯಾಮ್‌ನಲ್ಲಿ ಈ ಘಟನೆ ಸೆರೆಯಾಗಿದೆ. ಸ್ಥಳದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿದ್ದರಿಂದ ನನಗೆ ಕಾರಿನಿಂದ ಹೊರಬರಲು ಸಾಧ್ಯವಾಗಲಿಲ್ಲ. ನನ್ನ ಮಕ್ಕಳು ಕಾರಿನಲ್ಲಿದ್ದರು” ಎಂದು ಅವರು ಹೇಳಿದ್ದಾರೆ.
ಟ್ರಾನ್ಸ್‌ಫಾರ್ಮರ್ ಬಾಕ್ಸ್ ಸ್ಫೋಟಗೊಳ್ಳಲು ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ತನಿಖೆ ನಡೆದಿದೆ.


ನಿಮ್ಮ ಕಾಮೆಂಟ್ ಬರೆಯಿರಿ